ಕಂಠೀರವದಲ್ಲಿ ಉಪ್ಪೇರಿ

ಕಂಠೀರವ ಸ್ಟುಡಿಯೊ ತುಂಬ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳ ಕೈಯಲ್ಲಿ ಅವರೇಕಾಳು ಉಪ್ಪಿಟ್ಟು, ಸಬ್ಬಸಿಗೆ ಉಪ್ಪಿಟ್ಟು, ಖಾಲಿ ಉಪ್ಪಿಟ್ಟು ಹೀಗೆ ನಾಲ್ಕೈದು ಬಗೆಯ ಉಪ್ಪಿಟ್ಟು. ಉಪ್ಪಿ ಹುಟ್ಟುಹಬ್ಬದ ಸಂಭ್ರಮದ ಜತೆಗೆ ‘ಉಪ್ಪಿ2’ ಚಿತ್ರದ ಮುಹೂರ್ತವೂ ಇದ್ದದ್ದರಿಂದ ಅಲ್ಲಿಗೆ ಬಂದವರಿಗೆಲ್ಲಾ ಉಪ್ಪಿಟ್ಟನ್ನೇ ಕೊಟ್ಟಿದ್ದರು.
ಉಪೇಂದ್ರ ಅಭಿನಯಿಸಿರುವ ಚಿತ್ರಗೀತೆ ಕೇಳುತ್ತಲೇ ಉಪ್ಪಿಟ್ಟು ಸವಿಯುತ್ತಿದ್ದರು.
ಅಷ್ಟರಲ್ಲಿ ವೇದಿಕೆಯ ಮೇಲಿದ್ದ ದೊಡ್ಡ ಪರದೆಯ ಮೇಲೆ ಆಡಿಯೊ ವಿಷುವಲ್ಗಳ ಪ್ರದರ್ಶನ ಆರಂಭವಾಯಿತು.
ದೊಡ್ಡಪರದೆಯ ಮೇಲೆ ಅವರ ಅಭಿಮಾನಿ ಕಲಾವಿದರು ರಚಿಸಿದ ವಿಶಿಷ್ಟ ಫೋಸ್ಟರ್ಗಳನ್ನು ಪ್ರದರ್ಶಿಸಲಾಯ್ತು. ಈ ಪೋಸ್ಟರ್ಗಳೆಲ್ಲವೂ ‘ಎ’ ಮತ್ತು ‘ಉಪೇಂದ್ರ’ ಚಿತ್ರಗಳು ಬಿಡುಗಡೆಗೊಂಡ ವೇಳೆ ಗಮನಸೆಳೆದಿದ್ದ ಪೋಸ್ಟರ್ನಂತೇ ಇದ್ದುದು ವಿಶೇಷ. ಉಪ್ಪಿ ಬರ್ತ್ಡೆಗೆ ಅವರ ಅಭಿಮಾನಿಗಳು ನೀಡಿದ ಕೊಡುಗೆ ಇದು.
‘ಗಂಗ್ನಂ ಸ್ಟೈಲ್’ ಮತ್ತು ಬರಿ ಓಳು
‘ಓಪನ್ ಗಂಗ್ನಂ ಸ್ಟೈಲ್’ ನೃತ್ಯ ವಿಶ್ವದೆಲ್ಲೆಡೆ ಜನಪ್ರಿಯವಾಗಿದೆ. ಆದರೆ, ಈ ಮಾದರಿಯ ನೃತ್ಯವನ್ನು ನಮ್ಮ ಉಪ್ಪಿ 14 ವರ್ಷಗಳ ಮುಂಚೆಯೇ ಮಾಡಿದ್ದರು ಎನ್ನುತ್ತಾ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ ನಿರೂಪಕರು ಪರದೆಯ ಮೇಲೆ ‘ಗಂಗ್ನಂ ಸ್ಟೈಲ್’ ಹಾಡಿನ ವಿಡಿಯೊ ಪ್ರದರ್ಶಿಸಿ ಅದಕ್ಕೆ ‘ಬರೀ ಓಳು’ ಹಾಡು ಹಿನ್ನೆಲೆಯಲ್ಲಿ ಬರುವಂತೆ ಮಾಡಿದ್ದರು. ಅಚ್ಚರಿ ಅಂದ್ರೆ, ‘ಗಂಗ್ನಂ’ ವಿಡಿಯೊ ತುಣುಕಿಗೂ ‘ಬರಿ ಓಳು’ ಗೀತೆಗೂ ಸಖತ್ ಸಿಂಕ್ ಆಯ್ತು. ಉಪ್ಪಿ ಹಾಡಿಗೂ ಗಂಗ್ನಂ ನೃತ್ಯಕ್ಕೂ ಹತ್ತಿರದ ಹೋಲಿಕೆ ಕಂಡು ಅಭಿಮಾನಿಗಳೆಲ್ಲಾ ಹೌದಲ್ವಾ? ಎಂದು ಚಕಿತರಾದರು!
ಶುಭಾಶಯದ ಗಿಮಿಕ್
ಉಪ್ಪಿಯ ಗಂಗ್ನಂ ಡಾನ್ಸ್ ನೋಡಿ ಮೋಡಿಗೊಳಗಾಗಿದ್ದ ಅಭಿಮಾನಿಗಳಿಗೆ ಮತ್ತೊಂದು ಅಚ್ಚರಿ ಕಾದಿತ್ತು. ಪರದೆಯ ಮೇಲೆ ರಜನಿಕಾಂತ್ ಬಂದರು. ‘‘ಇಡೀ ಇಂಡಿಯಾದಲ್ಲೇ ಉಪೇಂದ್ರ ಅವರಂಥ ನಿರ್ದೇಶಕರು ಯಾರೂ ಇಲ್ಲ. ಅವರ ಎಲ್ಲ ಚಿತ್ರಗಳನ್ನು ನಾನು ವೀಕ್ಷಿಸಿದ್ದೇನೆ. ‘ಉಪ್ಪಿ2’ ಚಿತ್ರ ಸೂಪರ್ಹಿಟ್ ಆಗಲಿ’ ಎಂಬ ಶುಭಾಶಯ ಮುಗಿಯುವ ಮುನ್ನವೇ ಪರದೆ ಮೇಲೆ ಅಣ್ಣಾ ಹಜಾರೆ!
ಅವರು ಸಹ ‘ಉಪ್ಪಿ ಸೃಜನಶೀಲ ನಿರ್ದೇಶಕ, ಇಂಡಿಯಾದಲ್ಲೇ ಇಂಥ ನಿರ್ದೇಶಕರು ಮತ್ತೊಬ್ಬರಿಲ್ಲ, ಅವರ ಎಲ್ಲ ಚಿತ್ರಗಳನ್ನು ನೋಡಿದ್ದೇನೆ, ಉಪ್ಪಿಗೆ ಹುಟ್ಟುಹಬ್ಬದ ಶುಭಾಶಯಗಳು’ ಅಂದರು.
ನಂತರದ ಸರದಿ ನರೇಂದ್ರ ಮೋದಿ ಅವರದ್ದು. ‘ನಾನು ಉಪ್ಪಿ ನಿರ್ದೇಶನದ ‘ಸೂಪರ್’ ಚಿತ್ರ ನೋಡಿದ್ದೇನೆ. ಮೂವತ್ತು ನಲವತ್ತು ವರ್ಷಗಳ ನಂತರ ಇಂಡಿಯಾ ಹೇಗಿರುತ್ತದೆ ಎಂಬುದನ್ನು ‘ಸೂಪರ್’ ಚಿತ್ರದಲ್ಲಿ ಫೆಂಟಾಸ್ಟಿಕ್ ಆಗಿ ತೋರಿಸಿದ್ದಾರೆ. ಅವರ ಈ ಕ್ರಿಯೇಟಿವಿಟಿ ದೂರದೃಷ್ಟಿ ನಂಗೆ ಇಷ್ಟ ಆಯ್ತು. ನಾನು ಇದುವರೆಗೂ ಇಂಥ ಕ್ರಿಯೇಟಿವ್ ಡೈರೆಕ್ಟರ್ ನೋಡಿಯೇ ಇಲ್ಲ. ‘ಉಪ್ಪಿ2’ ಚಿತ್ರ ಯಶಸ್ವಿಯಾಗಲಿ’ ಅಂದರು.
ಅದುವರೆಗೂ ಎ.ವಿ.ಯಲ್ಲಿ ಬರುತ್ತಿದ್ದ ಗಣ್ಯರ ಶುಭಾಶಯಗಳನ್ನು ಉಸಿರು ಬಿಗಿ ಹಿಡಿದು ನೋಡುತ್ತಿದ್ದ ಅಭಿಮಾನಿಗಳು ಇದ್ದಕ್ಕಿದ್ದಂತೆ ಪರದೆ ಮೇಲೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಬಂದಾಗ ತುಸು ಬೆಚ್ಚಿದರು. ‘ನಾನೂ ಉಪ್ಪಿ ಅಭಿಮಾನಿ, ಅವರ ನಿರ್ದೇಶನದ ಎಲ್ಲ ಚಿತ್ರಗಳನ್ನು ವೀಕ್ಷಿಸಿದ್ದೇನೆ. ಉಪ್ಪಿ ವಿಭಿನ್ನ ಚಿಂತಕ. ಹಾಲಿವುಡ್ನಲ್ಲಿರುವ ಎಲ್ಲ ನಿರ್ದೇಶಕರು ‘ಉಪ್ಪಿ2’ ಚಿತ್ರಕ್ಕೆ ಸಹಾಯಕರಾಗಿ ದುಡಿದು ಅವರಿಂದ ನಿರ್ದೇಶನದ ಮಟ್ಟುಗಳನ್ನು ಕಲಿತುಕೊಂಡು ಬರಬೇಕು’ ಅಂತೆಲ್ಲಾ ಹೇಳುವುದನ್ನು ಕೇಳಿ ಒಂದು ಕ್ಷಣ ಅಭಿಮಾನಿಗಳು ಗಾಬರಿಯಾದರು. ಇನ್ನೂ ಒಬಾಮ ನಂತರ, ಜಾಕಿ ಚಾನ್, ರಾಹುಲ್ ಗಾಂಧಿ, ಮನಮೋಹನ್ ಸಿಂಗ್, ಬಾಬಾ ರಾಮ್ ದೇವ್, ಗಂಗ್ನಂ ಸ್ಟೈಲ್ ಹಾಡಿಗೆ ಸ್ಟೆಪ್ ಹಾಕಿರುವ ಪಿಎಸ್ವೈ ಎಲ್ಲರೂ ಉಪ್ಪಿಗೆ ಶುಭಾಶಯ ಕೋರಿದಾಗ ಓಹೋ ಇದೆಲ್ಲಾ ಉಪ್ಪಿ ಗಿಮಿಕ್ ಅಂಥ ಅರ್ಥಮಾಡಿಕೊಂಡರು. ಬೆಪ್ಪರಾಗಿದ್ದಕ್ಕೆ ಪೆಕರು ಪೆಕರಾಗಿ ನಕ್ಕು ಸುಮ್ಮನಾದರು.
ದೇಶ ವಿದೇಶಗಳ ಗಣ್ಯರ ಕೆಲವು ಕ್ಲಿಪ್ಲಿಂಗ್ಗಳನ್ನು ಯೂ ಟ್ಯೂಬ್ನಿಂದ ಎತ್ತಿಕೊಂಡು ಅವಕ್ಕೆ ಹಿಂದಿ, ಇಂಗ್ಲಿಷ್ನಲ್ಲಿ ಸಂಭಾಷಣೆ ಜೋಡಿಸಿ ಎ.ವಿ. ಮಾಡಿದ್ದು ‘ಉಪ್ಪಿ2’ ಚಿತ್ರತಂಡದ ಸದಸ್ಯರಲ್ಲೊಬ್ಬರಾದ ಶ್ರೀ. ಆತನ ಕ್ರಿಯಾಶೀಲತೆಯನ್ನು ಉಪ್ಪಿ ಕೂಡ ಮೆಚ್ಚಿಕೊಂಡರು. ಅಂದಹಾಗೆ, ಉಪ್ಪಿ ಚಿತ್ರರಂಗಕ್ಕೆ ಬಂದು 24 ವರ್ಷವಾಯ್ತು. ಆ ನೆನಪುಗಳನ್ನು ಅವರು ಹಂಚಿಕೊಂಡದ್ದು ಹೀಗೆ:
‘ನಂಗೆ ಇನ್ನೂ 24ರ ಹರೆಯ. ಬೆಳ್ಳಿ ಮಹೋತ್ಸವಕ್ಕೆ ಇನ್ನೂ ಒಂದು ವರ್ಷ ಬಾಕಿಯಿದೆ. ಬೇಜಾರಿನ ಸಂಗತಿ ಏನಂದರೆ, ನಾನು ನಟಿಸುವ ಚಿತ್ರಗಳ ನಾಯಕಿಯರೆಲ್ಲಾ 30,32 ದಾಟಿದವರು. ಅವರನ್ನು ಸೆಟ್ನಲ್ಲಿ ಆಂಟಿ... ಆಂಟಿ ಅಂತ ರೇಗಿಸುತ್ತೇನೆ. ಅದಕ್ಕೆ ಅವರೆಲ್ಲಾ, ಥೂ, ಹಂಗೆಲ್ಲಾ ಕರೀಬೇಡಪ್ಪ ಅಂತಾರೆ’ ಎಂದು ನಗೆ ಚಟಾಕಿ ಸಿಡಿಸಿದರು.
ಅಭಿಮಾನಿಗಳ ನಗುವಿನೊಂದಿಗೆ ತಾವೂ ನಗುವಾದರು.
z