ಮಂಗಳವಾರ, ಜೂನ್ 15, 2021
23 °C

ಕಂಠೀರವ ಒಳಾಂಗಣ ಕ್ರೀಡಾಂಗಣದ ಅವ್ಯವಸ್ಥೆ

ಪ್ರಜಾವಾಣಿ ವಾರ್ತೆ ಕೆ. ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ಈ ಕ್ರೀಡಾಂಗಣದೊಳಗೆ ಹೋದರೆ ಯಾವುದೋ ಗುಹೆ ಪ್ರವೇಶಿಸಿದ ಅನುಭವ. ಎರಡು ವರ್ಷಗಳಿಂದ ಈ ಕ್ರೀಡಾಂಗಣದ ಕಾಮಗಾರಿ ನಡೆಯುತ್ತಲೇ ಇದೆ. ಆರು ತಿಂಗಳ ಹಿಂದೆಯೇ ಖರೀದಿಸಲಾಗಿರುವ ದುಬಾರಿ ವೆಚ್ಚದ `ಎಸಿ~ ಸಾಧನಗಳು ತುಕ್ಕು ಹಿಡಿಯುವ ಹಂತ ತಲುಪಿವೆ. ಕೆಲ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಬಿಚ್ಚಿಡಲಾಗಿರುವ ಹಳೆಯ `ಏರ್ ಬ್ಲೋವರ್~ ಗಳನ್ನು ಗುಜರಿಯವರೂ ಕೊಂಡುಕೊಳ್ಳುವುದು ಅನುಮಾನ.



ಇದು ಪ್ರತಿಷ್ಠಿತ ಕಂಠೀರವ ಒಳಾಂಗಣ ಕ್ರೀಡಾಂಗಣದ ಅವ್ಯವಸ್ಥೆ. ಕಾಮಗಾರಿ ನೆಪದಲ್ಲಿ ಇಲ್ಲಿ ಕ್ರೀಡಾಕೂಟ ಆಯೋಜಿಸಲು ಸಾಧ್ಯವಾಗುತ್ತಿಲ್ಲ. ಪ್ರಮುಖ ಟೂರ್ನಿ ನಡೆದು ತುಂಬಾ ವರ್ಷಗಳಾದವು. ಆದರೆ ವಸ್ತು ಪ್ರದರ್ಶನಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಈ ಬಗ್ಗೆ ಕೆಲ ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.



`ಕ್ರೀಡಾಂಗಣಕ್ಕೆ ಹೈಟೆಕ್ ಸ್ಪರ್ಶ ನೀಡಿ ಅಂತರರಾಷ್ಟ್ರೀಯ ದರ್ಜೆಗೇರಿಸುತ್ತೇವೆ~ ಎಂದು ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 2010ರ ಏಪ್ರಿಲ್‌ನಲ್ಲಿ ಕೈಗೆತ್ತಿಕೊಂಡ ಕಾಮಗಾರಿ ಇನ್ನೂ ಮುಗಿದಿಲ್ಲ. ಬಿಡಿಎ ಕ್ರೀಡಾಂಗಣ ಮೇಲ್ದರ್ಜೆಗೇರಿಸುವ ಕಾಮಗಾರಿ ನಡೆಸುತ್ತಿದೆ. ಹವಾನಿಯಂತ್ರಣ ವ್ಯವಸ್ಥೆ ಅಳವಡಿಸುವ ಕೆಲಸವನ್ನು ಕ್ರೀಡಾ ಇಲಾಖೆ ಮಾಡುತ್ತಿದೆ.



`2010ರ ಏಪ್ರಿಲ್‌ನಲ್ಲಿ ಕಾಮಗಾರಿ ಆರಂಭಿಸಿದ್ದೆವು. ನಾಲ್ಕು ತಿಂಗಳಲ್ಲಿ ಮುಗಿಯಬೇಕಿತ್ತು. ಆದರೆ ಕ್ರೀಡಾಂಗಣದೊಳಗೆ ಪಾರಿವಾಳಗಳು ನುಗ್ಗಿ ಗಲೀಜು ಮಾಡುತ್ತಿದ್ದವು. ಅದಕ್ಕಾಗಿ ಏರ್ ಬ್ಲೋವರ್‌ಗಳನ್ನು ತೆಗೆದು ಹಾಕಿ ದ್ವಾರಗಳನ್ನು ಪೂರ್ಣ ಮುಚ್ಚಲಾಯಿತು. ಈ ಕಾರಣ ಕಾಮಗಾರಿಯಲ್ಲಿ ತಡವಾಯಿತು. ಬಳಿಕ 2011ರ ಜನವರಿ ಗಡುವು ವಿಧಿಸಲಾಯಿತು. ಆದರೆ ಸಾಮಗ್ರಿ ಪೂರೈಕೆಯಲ್ಲಿ ವಿಳಂಬವಾಗಿದ್ದರಿಂದ ಈ ಪರಿಸ್ಥಿತಿ ಉದ್ಭವಿಸಿದೆ~ ಎಂದು ಕ್ರೀಡಾ ಇಲಾಖೆಯ ಸಹಾಯಕ ಎಂಜಿನಿಯರ್ ಹರೀಶ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.



ಕ್ರೀಡಾಂಗಣಕ್ಕೆ ಹೈಟೆಕ್ ಸ್ಪರ್ಶ ನೀಡುತ್ತಿರುವ ಬಗ್ಗೆ ಕಾಮಗಾರಿ ಆರಂಭವಾದಾಗ ಈ ಪತ್ರಿಕೆ ವರದಿ ಮಾಡಿತ್ತು. ಕ್ರೀಡಾ ಇಲಾಖೆಯು 2.63 ಕೋಟಿ ರೂ.ವೆಚ್ಚದಲ್ಲಿ ಕ್ರೀಡಾಂಗಣಕ್ಕೆ ಎಸಿ ಅಳವಡಿಸುತ್ತಿದೆ. ಅದಕ್ಕಾಗಿ ಈ ಹಿಂದೆ ಇದ್ದ ಏರ್ ಬ್ಲೋವರ್‌ಗಳನ್ನು ತೆಗೆದು ಹಾಕಲಾಗಿದೆ. ಇವುಗಳನ್ನು ಶಿವಮೊಗ್ಗದ ಕ್ರೀಡಾಂಗಣಕ್ಕೆ ಅಳವಡಿಸಲು ನಿರ್ಧರಿಸಲಾಗಿತ್ತು. ಆದರೆ ಇವುಗಳು ಕ್ರೀಡಾಂಗಣದ ಸುತ್ತಮುತ್ತ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ವರ್ಷಗಳೇ ಕಳೆದಿದ್ದರಿಂದ ತುಕ್ಕು ಹಿಡಿದ್ದ್ದಿದು ಕೆಲ ಸಾಮಗ್ರಿಗಳು ನಜ್ಜುಗುಜ್ಜಾಗಿವೆ. ಇವೆಲ್ಲಾ ಈಗ ಪಾರಿವಾಳಗಳ ವಾಸ ತಾಣವಾಗಿವೆ. ಹೊಸದಾಗಿ ಖರೀದಿಸಲಾಗಿರುವ ಸಾಮಗ್ರಿಗಳನ್ನೂ ಹೊರಗಿಡಲಾಗಿದೆ. ಇವು ಮಳೆ ನೀರು, ದೂಳು ಹಾಗೂ ಪಾರಿವಾಳಗಳ ಹಿಕ್ಕೆಯಿಂದ ಅಂದಗೆಟ್ಟಿವೆ.



`ಕಾಮಗಾರಿ ವಿಳಂಬವಾಗಿರುವುದು ನಿಜ. ಈ ಸಂಬಂಧ ನಾವು ಸಭೆ ಕೂಡ ನಡೆಸಿ ಚರ್ಚಿಸಿದ್ದೇವೆ. ಇಲಾಖೆಯ ನಿರ್ದೇಶಕರು ಮಾರ್ಚ್ 12ರಂದು ಕ್ರೀಡಾಂಗಣಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಈಗ ಕಾಮಗಾರಿ ನಡೆಯುತ್ತಿದ್ದು ಸದ್ಯದಲ್ಲೇ ಎಸಿ ಅಳವಡಿಕೆಯ ಕೆಲಸ ಮುಗಿಯಲಿದೆ. ಹಳೆ ಸಾಮಗ್ರಿಗಳನ್ನು ಹರಾಜಿ ಹಾಕುತ್ತೇವೆ~ ಎನ್ನುತ್ತಾರೆ ಹರೀಶ್. 



 ಬಿಡಿಎ ಕ್ರೀಡಾಂಗಣದ ನವೀಕರಣ ಕೆಲಸ ನಡೆಸುತ್ತಿದೆ. ಈ ಕಾಮಗಾರಿಯಲ್ಲಿ ಪತ್ರಿಕಾಗೋಷ್ಠಿ ಕೊಠಡಿ, ಡ್ರೆಸ್ಸಿಂಗ್ ಕೊಠಡಿ, ಗ್ಯಾಲರಿ, ಶೌಚಾಲಯ, ಫ್ಲೋರಿಂಗ್, ಸೀಲಿಂಗ್ ಕಾಮಗಾರಿ ಸೇರಿದೆ. ಅಷ್ಟು ಮಾತ್ರವಲ್ಲದೇ, ಟೇಕ್ವಾಂಡೊ ಹಾಗೂ ಫೆನ್ಸಿಂಗ್ ಕೊಠಡಿ ಅಭಿವೃದ್ಧಿ ಕೆಲಸವೂ ಇದೆ. ಈ ಕಾಮಗಾರಿ ಕೂಡ ಪೂರ್ಣವಾಗಿ ಮುಗಿದಿಲ್ಲ.

`ವಸ್ತು ಪ್ರದರ್ಶನಕ್ಕೆ ಅವಕಾಶ ಬೇಡ~

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ವಸ್ತು ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಅಧ್ಯಕ್ಷ ಕೆ.ಗೋವಿಂದರಾಜ್ ತಿಳಿಸಿದ್ದಾರೆ.



`ಕ್ರೀಡೆಗಳನ್ನು ಆಯೋಜಿಸಲು ಇರುವ ಕ್ರೀಡಾಂಗಣದಲ್ಲಿ ವಸ್ತು ಪ್ರದರ್ಶನಕ್ಕೆ ಅವಕಾಶ ಇರಬಾರದು. ಇಷ್ಟೆಲ್ಲಾ ಮನವಿಯ ನಡುವೆಯೂ ವಸ್ತು ಪ್ರದರ್ಶನ ನಡೆಸಲು ಕ್ರೀಡಾ ಇಲಾಖೆ ಮುಂದಾದರೆ 260 ದಿನಗಳನ್ನು ಕ್ರೀಡಾ ಕಾರ್ಯಕ್ರಮಗಳಿಗೆ ಮೀಸಲಿಡಬೇಕು. ಇದು ನಮ್ಮ ಒತ್ತಾಯ~ ಎಂದು ಗೋವಿಂದರಾಜ್ ನುಡಿದಿದ್ದಾರೆ.

ಪ್ರತಿಕ್ರಿಯೆಗೆ ಸಿಗದ ಅಪ್ಪಚ್ಚು

ಕ್ರೀಡಾಂಗಣದ ಕಾಮಗಾರಿ ಸಂಬಂಧ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದರೆ ಕ್ರೀಡಾ ಇಲಾಖೆಯ ಉಪ ನಿರ್ದೇಶಕ (ಕ್ರೀಡಾಂಗಣ ನಿರ್ವಾಹಣ ಸಮಿತಿ) ಜೆ.ಎಂ.ಅಪ್ಪಚ್ಚು ಮೊಬೈಲ್ ಕರೆ ರಿಸೀವ್ ಮಾಡಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.