ಕಂಠೀರವ ಕ್ರೀಡಾಂಗಣದಲ್ಲಿ ಬಾಂಬ್ ಸ್ಫೋಟ, ಆತಂಕ!

7

ಕಂಠೀರವ ಕ್ರೀಡಾಂಗಣದಲ್ಲಿ ಬಾಂಬ್ ಸ್ಫೋಟ, ಆತಂಕ!

Published:
Updated:
ಕಂಠೀರವ ಕ್ರೀಡಾಂಗಣದಲ್ಲಿ ಬಾಂಬ್ ಸ್ಫೋಟ, ಆತಂಕ!

ಬೆಂಗಳೂರು: ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಎರಡು ಶಕ್ತಿಶಾಲಿ ಬಾಂಬ್‌ಗಳು ಕೆಲವೇ ನಿಮಿಷಗಳ ಅಂತರದಲ್ಲಿ ಸ್ಫೋಟಗೊಳ್ಳುತ್ತಿದ್ದಂತೆ ಹತ್ತಾರು ಮಂದಿ ತೀವ್ರವಾಗಿ ಗಾಯಗೊಂಡರು. ನೂರಾರು ಮಂದಿ ಪ್ರಾಣ ಭಯದಿಂದ ದಿಕ್ಕಾಪಾಲಾಗಿ ಓಡಿದರು. ಎಲ್ಲೆಡೆ ಭಯದ ವಾತಾವರಣ ಆವರಿಸಿತು.ಈ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿದರು. ಸಿಬ್ಬಂದಿಯ ಜತೆಗೇ ಹತ್ತಾರು ಅಂಬುಲೆನ್ಸ್‌ಗಳೂ ಸ್ಥಳಕ್ಕೆ ದೌಡಾಯಿಸಿದವು. ಗೃಹರಕ್ಷಕರು, ನಾಗರಿಕ ರಕ್ಷಣೆ ವಿಭಾಗದ ಸದಸ್ಯರು ಜನರ ಸಹಾಯಕ್ಕೆ ಬಂದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು.ಇದು ನಿಜವಾದ ಬಾಂಬ್ ಸ್ಫೋಟ ಪ್ರಕರಣವಲ್ಲ. ವಿಪತ್ತು ನಿರ್ವಹಣೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಅಗ್ನಿಶಾಮಕ- ತುರ್ತು ಸೇವೆ, ಗೃಹ ರಕ್ಷಕ ಮತ್ತು ನಾಗರಿಕ ರಕ್ಷಣಾ ನಿರ್ದೇಶನಾಲಯ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಅಣಕು ಪ್ರದರ್ಶನ. ರಾಷ್ಟ್ರೀಯ ವಿಪತ್ತು ಕಡಿತ ದಿನಾಚರಣೆಯ ಅಂಗವಾಗಿ ಈ ಅಣಕು ಪ್ರದರ್ಶನ ಏರ್ಪಡಿಸಲಾಗಿತ್ತು.ಬಾಂಬ್ ದಾಳಿಯಂತಹ ಕೃತ್ಯಗಳು ನಡೆದಾಗ ಸಿಬ್ಬಂದಿ ಹೇಗೆ ಕೆಲಸ ನಿರ್ವಹಿಸುತ್ತಾರೆ. ಸಾರ್ವಜನಿಕರು, ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಜತೆ ಹೇಗೆ ಸಹಕರಿಸಬೇಕು ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರದರ್ಶನ ನಡೆಯಿತು.ಬೆಂಕಿ ನಂದಿಸಲು ಅಗ್ನಿಶಾಮಕ ಇಲಾಖೆ ಹೊಂದಿರುವ ಅತ್ಯಾಧುನಿಕ ಏರಿಯಲ್ ಲ್ಯಾಡರ್ ಅನ್ನು ಇಲ್ಲಿ ಪ್ರದರ್ಶಿಸಲಾಯಿತು.ಐದಾರು ಮಂದಿ ಅಗ್ನಿಶಾಮಕ ಸಿಬ್ಬಂದಿಯನ್ನು ಹೊತ್ತು ಐವತ್ತೈದು ಮೀಟರ್ ಎತ್ತರಕ್ಕೇರಿದ ಈ ಸಾಧನ ಜನರ ಗಮನ ಸೆಳೆಯಿತು. ಐವತ್ತೈದು ಮೀಟರ್ ಎತ್ತರದಿಂದ ಸಿಬ್ಬಂದಿ ನೀರು ಹಾರಿಸುವ ಮೂಲಕ ಬಹು ಮಹಡಿ ಕಟ್ಟಡಗಳಲ್ಲಿ ಅನಾಹುತ ಸಂಭವಿಸಿದರೆ ರಕ್ಷಣಾ ಕಾರ್ಯ ಮಾಡಲು ಸನ್ನದ್ಧವಾಗಿದ್ದೇವೆ ಎಂಬ ಸಂದೇಶ ನೀಡಿದರು.ಅಣಕು ಪ್ರದರ್ಶನವಾದರೂ ಸಹಜವಾಗಿಯೇ ಇದೆ ಎನಿಸುವಷ್ಟರ ಮಟ್ಟಿಗೆ ಅಣುಕು ಪ್ರದರ್ಶನವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು. ಪುಟ್ಟ ಓಣಿಯೊಂದರ ಸೆಟ್ ಹಾಕಲಾಗಿತ್ತು. ಐವತ್ತಕ್ಕೂ ಹೆಚ್ಚು ಮಂದಿಯನ್ನು ಬಳಸಿಕೊಂಡು ಪ್ರದರ್ಶನ ನೀಡಿದ ಸಿಬ್ಬಂದಿ ಎಲ್ಲರ ಗಮನ ಸೆಳೆದರು.ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡವರ ಅಭಿನಯವೂ ಚೆನ್ನಾಗಿತ್ತು. ನಗರದ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಈ ಅಣಕು ಪ್ರದರ್ಶನ ವೀಕ್ಷಿಸಿದರು.ಮೈದಾನದಲ್ಲಿ ನಡೆದ ಸ್ಫೋಟ ಸಹಜ ಎನ್ನುವ ಹಾಗಿತ್ತು. ಬಾಂಬ್ ಸಿಡಿದಾಗ ಭಾರಿ ಸ್ಫೋಟದ ಶಬ್ಧ ಕೇಳಿತು ಮತ್ತು ಜ್ವಾಲೆಗಳು ಮುಗಿಲೆತ್ತರಕ್ಕೆ ಆವರಿಸಿ ಒಂದು ಕ್ಷಣ ಎಲ್ಲರೂ ದಂಗಾಗುವಂತಾಯಿತು.ರಾಜ್ಯಪಾಲ ಎಚ್.ಆರ್. ಭಾರದ್ವಾಜ್, ಸಚಿವ ಆರ್. ಅಶೋಕ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಎ.ಆರ್. ಇನ್ಫೆಂಟ್, ಐಜಿಪಿ ಪ್ರತಾಪ್ ರೆಡ್ಡಿ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry