ಕಂಠೀರವ ಕ್ರೀಡಾಂಗಣದಲ್ಲಿ ಬೆಚ್ಚಿ ಬೀಳಿಸಿದ ಬಾಂಬ್ ಸ್ಫೋಟ

7
20ಕ್ಕೂ ಹೆಚ್ಚು ಜನರಿಗೆ ಗಾಯ: ಗೃಹ ರಕ್ಷಕ ದಳದ ಅಣಕು ಪ್ರದರ್ಶನ

ಕಂಠೀರವ ಕ್ರೀಡಾಂಗಣದಲ್ಲಿ ಬೆಚ್ಚಿ ಬೀಳಿಸಿದ ಬಾಂಬ್ ಸ್ಫೋಟ

Published:
Updated:

ಬೆಂಗಳೂರು:  ನಗರದ ಹೃದಯ ಭಾಗದಲ್ಲಿರುವ ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ಎಂಟು ನಿಮಿಷಗಳ ಅಂತರದಲ್ಲಿ ನಾಲ್ಕು ಬಾಂಬ್‌ಗಳು ಸ್ಫೋಟಗೊಂಡು, 20ಕ್ಕೂ ಹೆಚ್ಚು  ಮಂದಿ ಗಾಯಗೊಂಡರು. ಸ್ಥಳದಲ್ಲಿ ಗಾಯಗೊಂಡವರ ಕಿರುಚಾಟ, ಆಕ್ರಂದನ ಮುಗಿಲು ಮುಟ್ಟಿತ್ತು.ಅಗ್ನಿಶಾಮಕ ಸಿಬ್ಬಂದಿ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಎಲ್ಲೆಂದರಲ್ಲಿ ಬಿದ್ದಿದ್ದ ಗಾಯಾಳುಗಳ ರಕ್ಷಣಾ ಕಾರ್ಯದಲ್ಲಿ ತೊಡಗಿದರು. 2009ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಫೋಟವಾಗಿದ್ದ ನಂತರ ಶಾಂತವಾಗಿದ್ದ ನಗರದಲ್ಲಿ ಮತ್ತೆ ಬಾಂಬ್ ಸ್ಫೋಟವಾಯಿತಾ? ಇಲ್ಲ. ಬಾಂಬ್ ಸ್ಫೋಟ, ಗಾಯಾಳು ಹಾಗೂ ರಕ್ಷಣಾ ಕಾರ್ಯವೆಲ್ಲವೂ `ರಾಷ್ಟ್ರೀಯ ವಿಪತ್ತು ಕಡಿತ' ದಿನಾಚರಣೆಯ ಅಂಗವಾಗಿ ನಡೆದ ಅಣಕು ಪ್ರದರ್ಶನದ ಒಂದು ಭಾಗ.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್, `ಪ್ರಾಣದ ಹಂಗು ತೊರೆದು ನೈಸರ್ಗಿಕ ವಿಕೋಪ ಹಾಗೂ ಬಾಂಬ್ ಸ್ಫೋಟದ ಸಂದರ್ಭದಲ್ಲಿ ಹೋರಾಡುವ  ಅಗ್ನಿಶಾಮಕ ರಕ್ಷಣಾಸಿಬ್ಬಂದಿ ಹಾಗೂ ಗೃಹ ರಕ್ಷಕ ದಳ ಸಿಬ್ಬಂದಿಗೆ ಅಗತ್ಯವಿರುವ ಸೌಲಭ್ಯವನ್ನು ಒದಗಿಸುವುದು ಸರ್ಕಾರದ ಕರ್ತವ್ಯ' ಎಂದು ತಿಳಿಸಿದರು.`ಭಾರತ ಮತ್ತು ಪಾಕ್ ನಡುವೆ ನಡೆದ ಮೊದಲ ಯುದ್ಧದ ಸಂದರ್ಭದಲ್ಲಿ ಸೈನಿಕರಿಗೆ ಆಹಾರ ಮತ್ತು ವಸ್ತ್ರ ಒದಗಿಸುವ ಸ್ವಯ ಸೇವಕನಾಗಿ ಕಾರ್ಯನಿರ್ವಹಿಸಿದ್ದೆ. ಈ ವೃತ್ತಿಯಲ್ಲಿರುವವರು ನೈಸರ್ಗಿಕ ವಿಕೋಪಗಳು ಹಾಗೂ ವಿಧ್ವಂಸಕ ಕೃತ್ಯ ನಡೆದಾಗ ಪ್ರಾಣರಕ್ಷಣೆ ಮಾಡುವುದರ ಬಗ್ಗೆ ಸ್ಪಷ್ಟ ಯೋಜನೆಯನ್ನು ಹಾಕಿಕೊಳ್ಳಬೇಕು' ಎಂದು ತಿಳಿಸಿದರು.ಅಗ್ನಿಶಾಮಕ ರಕ್ಷಣಾ ಸಿಬ್ಬಂದಿ, ಗೃಹ ರಕ್ಷಕ, ಪೌರ ರಕ್ಷಣಾ ಸಿಬ್ಬಂದಿ, ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸುಮಾರು ಎಂಟು ಸಾವಿರಕ್ಕೂ ಅಧಿಕ ಮಂದಿ ಅಣಕು ಪ್ರದರ್ಶನದಲ್ಲಿ ಭಾಗವಹಿಸಿದ್ದರು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರೋಕುಮ ಪಚಾವೊ, ಪೌರ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಜಿಪಿ ಓಂಪ್ರಕಾಶ್ ಇತರರು ಉಪಸ್ಥಿತರಿದ್ದರು.ಪತ್ರಕರ್ತನ ಬಂಧನ: ಕೈವಾಡ

`ಪತ್ರಕರ್ತ ನವೀನ್ ಸೂರಿಂಜೆ ಬಂಧನಕ್ಕೆ ಸಂಬಂಧಪಟ್ಟಂತೆ ಕಾರಣ ಕೇಳಿ ವರದಿ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ' ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಎಂದು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಪತ್ರಕರ್ತರ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಸದಾ ಬದ್ಧವಾಗಿದ್ದೇನೆ. ಈ ಪ್ರಕರಣದಲ್ಲಿ ಪೊಲೀಸರನ್ನು ನೇರವಾಗಿ ಹೊಣೆ ಮಾಡಲು ಸಾಧ್ಯವಿಲ್ಲ. ಪ್ರಕರಣದ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ವ್ಯಕ್ತಿಯೊಬ್ಬರ ಕೈಚಳಕವಿರುವುದು ಸ್ಪಷ್ಟವಾಗಿದೆ. ಆತ ಯಾರೆಂಬುದನ್ನು ಮಾಧ್ಯಮದವರೇ ಬಹಿರಂಗಪಡಿಸಬೇಕು' ಎಂದು ಕಿವಿ ಮಾತು ಹೇಳಿದರು.`ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಕುರಿತು ಮಾತನಾಡಿದ ಅವರು, `ಬೆಳಗಾವಿಯಲ್ಲಿ ವಿಧಾನಸಭೆಯ ಕಲಾಪಗಳು ನಡೆಯುತ್ತಿರುವುದರಿಂದ ಪ್ರಸ್ತುತ ಕಾವೇರಿರುವ ರಾಜಕೀಯ ಚಟುವಟಿಕೆಗಳ ಕುರಿತು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ನನ್ನದು ಸಾಂವಿಧಾನಿಕ ಕೆಲಸ. ಸಂವಿಧಾನ ಬಿಕ್ಕಟ್ಟು ಸೃಷ್ಟಿಯಾದರೆ ಮಾತ್ರ ಕ್ರಮ ಕೈಗೊಳ್ಳುತ್ತೇನೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry