ಕಂಠ ಸುಧೆ

7

ಕಂಠ ಸುಧೆ

Published:
Updated:
ಕಂಠ ಸುಧೆ

ಉನ್ನತಿ ಕೇಂದ್ರದಲ್ಲಿ ನಡೆದ ಶ್ರೀ ಗುರುವಾಯೂರಪ್ಪನ್ ಭಜನ ಸಭೆಯ 34ನೇ ವರ್ಷದ ಗೋಕುಲಾಷ್ಟಮಿ ಉತ್ಸವದಲ್ಲಿ ಹಿರಿಯ ಗಾಯಕಿ ಸುಧಾ ರಘುನಾಥನ್ ಶ್ರೋತೃಗಳ ಅಭಿರುಚಿಗೆ ತಕ್ಕಂತೆ ಸುಮಾರು ಮೂರುವರೆ ಗಂಟೆಗಳ ಅವಧಿಯ ಕಛೇರಿ ಯೋಜಿಸಿಕೊಂಡಿದ್ದರು.ಅವರದು ಶ್ರೀಮಂತ ಕಂಠ. ಈ ಬಾರಿ ಕೆಲವು ಮಾಮೂಲಿನ ರಾಗಗಳು ಮತ್ತು ರಚನೆಗಳನ್ನು ಹಾಡದೆ ಹೊಸ ವಸ್ತುವನ್ನು ನೀಡಿದ್ದು ಗಮನಾರ್ಹ. ಜತೆಗೆ ಶ್ರೋತೃಗಳ ಬೇಡಿಕೆಗಳ ರಚನೆಗಳನ್ನೂ ಹಾಡಿ ತಣಿಸಿದರು.ರಾಘವೇಂದ್ರರಾವ್ (ಪಿಟೀಲು), ಪಲ್ಲಡಂರವಿ (ಮೃದಂಗ) ಮತ್ತು ಓಂಕಾರ್(ಘಟ) ಅವರ ಸೂಕ್ತ ಸಹಕಾರದೊಂದಿಗೆ ನಡೆಸಿದ ಕಛೇರಿಯಲ್ಲಿ ವೇಗವಾಹಿನಿ (ವಿನಾಯಕ ವಿಘ್ನನಾಶಕ, ದೀಕ್ಷಿತರು), ನೀಲಾಂಬರಿ (ಮಣಿನೂಪುರಧಾರಿ, ಊತ್ತುಕ್ಕಾಡು), ಕರ್ಣರಂಜನಿ (ಓಂನಮೋ ನಾರಾಯಣಾಯ), ದರ್ಬಾರಿಕಾನಡಾ (ಹರಿ ತುಮ್ಹರೋ, ಮೀರಾಬಾಯಿ) ಮುಂತಾದ ಅಪೂರ್ವ ರಾಗಗಳನ್ನು ಸುಮಧುರವಾಗಿ ಹಾಡಿದರು. ನೃತ್ಯ ಕ್ಷೇತ್ರದಲ್ಲಿ ಹೆಚ್ಚಾಗಿ ಕೇಳಿಬರುವ ಲಾಲ್ಗುಡಿ ಅವರ ಚಾರುಕೇಶಿ ವರ್ಣದ (ಇನ್ನುಂ ಎನ್ಮನಂ) ಆರಂಭವೇ ಸೊಗಸಾಗಿತ್ತು. ವತ್ತಂನೊಂದಿಗೆ ಹಾಡಲಾದ ಸಾಮಜವರಗಮನ (ಹಿಂದೋಳ, ನೆರವಲ್ ಮತ್ತು ಸ್ವರಗಳೊಂದಿಗೆ, ಅದರಲ್ಲಿ ಮಧ್ಯಮದ ಗಂಧ ಒಂದೆರಡು ಬಾರಿ ಸೂಸಿದ್ದು ಅಚ್ಚರಿಗೊಳಿಸಿತು), ದಯರಾನಿ (ಸುಧಾ ಅವರ ಗುರು ಎಂ.ಎಲ್. ವಸಂತಕುಮಾರಿ ಅವರನ್ನು ನೆನಪಿಸಿದ ಮೋಹನ ರಾಗಾಲಾಪನೆ ಮತ್ತು ಕಲ್ಪನಾಸ್ವರಗಳು) ಮುಂತಾದವು ಕೇಳುಗರೊಡನೆ ಆತ್ಮೀಯ ಸಂಬಂಧವನ್ನು ಸ್ಥಾಪಿಸಿಕೊಂಡವು.ಕಛೇರಿಯ ಪ್ರಮುಖ ಘಟ್ಟವಾಗಿದ್ದ ಭೈರವಿ (ಬಾಲಗೋಪಾಲ) ಅವರ ಕಲ್ಪನಾಶಕ್ತಿ ಮತ್ತು ಭಾವನಾಶಕ್ತಿಗಳ ದ್ಯೋತಕವಾಗಿತ್ತು. ಈ ಗಾಯನದ ಮೂಲಕ ಹಿತವಾದ ಹೊಸ ಗಾಳಿಯನ್ನು ಆಘ್ರಾಣಿಸಿದ ಅನುಭವವಾಯಿತು.  ಕೌಶಲ್ಯಪೂರ್ಣ ಗಾಯನ

ಕಾರ್ಯಕ್ರಮ ನೀಡುವಾಗ ಅನಪೇಕ್ಷಿತವಾಗಿ ಉಂಟಾಗುವ ಎಡರುತೊಡರುಗಳನ್ನು ಲೆಕ್ಕಿಸದೆ ತಮ್ಮ ಪ್ರತಿಭೆ ಮತ್ತು ಪರಿಣತಿಗಳನ್ನು ಪ್ರದರ್ಶಿಸಬೇಕಾದರೆ ಸಾಕಷ್ಟು ಅನುಭವ ಮತ್ತು ತನ್ಮಯತೆ ಆವಶ್ಯಕತೆ ಇರುತ್ತದೆ.

 

ಹಾಗೆ ಆದಾಗ ಕಲೆಯ ಪ್ರವಾಹ ನಿರಂತರವಾಗಿ ಸಾಗುವುದು ಸಹಜ.  ಇದೇ ಉತ್ಸವದ ಸರಣಿಯಲ್ಲಿ ಹಾಡಿದ ಸಂಜಯ್ ಸುಬ್ರಹ್ಮಣ್ಯಂ ಅವರು ಅಂತಹ ಜಾಣ್ಮೆಯನ್ನೂ ಕೌಶಲ್ಯವನ್ನೂ ಪ್ರದರ್ಶಿಸಿ ಅಭಿಮಾನಿಗಳಿಗೆ ಮುದ ನೀಡಿದರು. ಅವರು ಹಾಡಿದ ನಾಯಕಿ (ಕೊನುಗೊನು ಸೌಖ್ಯಮು), ನವರಸಕನ್ನಡ (ವಂದೇ ಸದಾ ಪದ್ಮನಾಭಂ, ಸ್ವರಗಳೊಂದಿಗೆ), ಮುಖಾರಿ (ಕಾರುಬಾರು, ಆಲಾಪನೆಯ ಮುನ್ನುಡಿಯೊಂದಿಗೆ), ರಾಮಪ್ರಿಯ (ಶಂಗಾರ ಶಕ್ತ್ಯಾಯುಧ, ದೀಕ್ಷಿತರ ಕೃತಿ, ರಾಗ, ಸಾಹಿತ್ಯ ಮತ್ತು ಸ್ವರವಿಸ್ತರಣೆಗಳ ಸಹಿತ) ಮತ್ತು ಶಹನ (ವಂದನಮು) ರಾಗಗಳು ಮತ್ತು ರಚನೆಗಳು ಕರ್ನಾಟಕ ಸಂಗೀತದ ಮೌಲ್ಯಗಳಿಂದ ಸಮದ್ಧವಾಗಿದ್ದವು.ಅವುಗಳನ್ನು ರಂಗಸತ್ವವನ್ನಾಗಿ ಪರಿವರ್ತಿಸಲು ಸಂಜಯ್ ಅವರು ಮೌಲಿಕವಾಗಿದ್ದ ತಮ್ಮ ಎಲ್ಲ ತಂತ್ರಗಳನ್ನೂ ಬಳಸಿದರು.

 

ವರದರಾಜನ್ (ಪಿಟೀಲು), ನೈವೇಲಿ ವೆಂಕಟೇಶ್ (ಮೃದಂಗ) ಮತ್ತು ರಾಜಶೇಖರ್ (ಮೋರ್ಸಿಂಗ್) ಅವರ ನುರಿತ ಮತ್ತು ವಿವೇಕದ ಪ್ರತಿಕ್ರಿಯೆಗಳ ಸದುಪಯೋಗ ಮಾಡಿಕೊಂಡು ಅವರ ತಮ್ಮ ಮಾಧ್ಯಮದ ಶುದ್ಧತೆಯನ್ನು ಸಂರಕ್ಷಿಸಿದರು. ಕನಕಾಂಗಿ ಅಟತಾಳದ ಬಿಕ್ಕಟ್ಟಿನ ವರ್ಣದೊಂದಿಗೆ ಕಛೇರಿಯನ್ನು ಆರಂಭಿಸಿದ ಅವರು ಅಪರೂಪದ ರಾಮಪ್ರಿಯ ರಾಗದ ವಿಶ್ಲೇಷಣೆಯಲ್ಲಿ ಯಶ ಗಳಿಸಿದರು.ಮೋಹನ (ನಾರಾಯಣ), ದಾಸರ `ನಿನ್ನೆ ನಮ್ಮಿದೆ ಸುಖ ನೀಡಿದರೆ~ ಪ್ರಧಾನ ಅಂಶವಾಗಿದ್ದ ಕರ್ನಾಟಕ ದೇವಗಾಂಧಾರಿ ರಾಗ, ತಾನ ಮತ್ತು ಪಲ್ಲವಿ ರಂಜಿಸಿತು. ಭೈರವಿ, ಬೇಗಡೆ, ಶ್ರೀರಂಜನಿ, ಕೇದಾರಗೌಳ ಮತ್ತು ಖಮಾಚ್ ರಾಗಗಳ ಮಾಲಿಕೆ ಆಕರ್ಷಿಸಿತು. ಅವರ ವತ್ತಂ, ತಿರುಪ್ಪುಗಳ್ ಮತ್ತು ಬೇಹಾಗ್, ಸುರುಟಿ, ಹಂಸಧ್ವನಿ ಮುಂತಾದ ರಾಗಗಳು ಆಕರ್ಷಿಸಿದವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry