ಕಂದಕೂರಿನಲ್ಲಿ ಮಾರಾಮಾರಿ: ಡಿವೈಎಸ್ಪಿ ಭೇಟಿ
ಕುಷ್ಟಗಿ: ಸಾರ್ವಜನಿಕ ನಿವೇಶನ ಒಡೆತನಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರ ಮಧ್ಯೆ ತಾಲ್ಲೂಕಿನ ಕಂದಕೂರು ಗ್ರಾಮದಲ್ಲಿ ಬುಧವಾರ ಮಾರಾಮಾರಿ ನಡೆದಿದೆ.
ಗ್ರಾಮಕ್ಕೆ ಮಂಜೂರಾಗಿರುವ ಆರೋಗ್ಯ ಇಲಾಖೆ ಉಪಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗುರುತಿಸಲಾಗಿರುವ ನಿವೇಶನದಲ್ಲಿನ ಮುಳ್ಳುಕಂಟಿಗಳನ್ನು ತೆಗೆದು ಸ್ವಚ್ಛಗೊಳಿಸಲು ಮುಂದಾದಾಗ ಮುಸಲ್ಮಾನ ಸಮಾಜದವರು ಆಕ್ಷೇಪಿಸಿದಾಗ ಉಂಟಾದ ಮಾತಿನ ಚಕಮಕಿ ನಂತರ ಹೊಡೆದಾಡುವ ಮಟ್ಟಕ್ಕೆ ತಲುಪಿ ಕೆಲವರು ಗಾಯಗೊಂಡಿದ್ದಾರೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಸದರಿ ಘಟನೆಗೆ ಸಂಬಂಧಿಸಿದಂತೆ ಯಾರೂ ದೂರು ನೀಡಿಲ್ಲ, ಎರಡು ಗುಂಪುಗಳ ನಡುವೆ ಗೊಂದಲ ಉಂಟಾಗಿತ್ತು ಸದ್ಯ ಶಾಂತಿ ಇದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಸಿಪಿಐ ನೀಲಪ್ಪ ಓಲೇಕಾರ, ಪಿಎಸ್ಐ ಮಹಾದೇವ ಪಂಚಮುಖಿ ತಿಳಿಸಿದ್ದಾರೆ.
ಗ್ರಾಮಕ್ಕೆ ಭೇಟಿ ನೀಡಿದ ಡಿವೈಎಸ್ಪಿ ವಿಲ್ಸನ್ ಶಾಂತಕುಮಾರ ಪರಿಶೀಲನೆ ನಡೆಸಿ ನಿವೇಶನ ವಿವಾದ ಇತ್ಯರ್ಥವಾಗುವವರೆಗೂ ಸದರಿ ಸ್ಥಳದಲ್ಲಿ ಸದ್ಯಕ್ಕೆ ಯಾವುದೇ ರೀತಿಯ ಚಟುವಟಿಕೆ ಅಥವಾ ನಿರ್ಮಾಣಕಾರ್ಯ ನಡೆಸದಂತೆ ಆರೋಗ್ಯ ಇಲಾಖೆಗೆ ಮತ್ತು ಮುಸಲ್ಮಾನ ಸಮಾಜದವರಿಗೆ ಸೂಚಿಸಿದರು.
ಆರೋಗ್ಯ ಕಿರಿಯ ಸಹಾಯಕಿಯರ ವಸತಿ ಸಹಿತ ಕ್ಲಿನಿಕ್ಗಳನ್ನು ಹೊಂದುವ 4 ಉಪ ಕೇಂದ್ರಗಳು ತಾಲ್ಲೂಕಿಗೆ ಮಂಜೂರಾಗಿದ್ದು ಅವುಗಳಲ್ಲಿ ಕಂದಕೂರು ಸಹ ಒಂದು. ರೂ 24 ಲಕ್ಷ ರೂ ಮೊತ್ತದ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲು ಗುತ್ತಿಗೆದಾರರು ಬುಧವಾರ ಬೆಳಿಗ್ಗೆ ಮುಂದಾದಾಗ ಸದರಿ ಸ್ಥಳ ಮಸೀದಗೆ ಸೇರಿದೆ ಎಂದು ಆ ಸಮಾಜದವರು ತಕರಾರು ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಗ್ರಾಮದ ಕೆಲವರು ಮತ್ತು ಮುಸಲ್ಮಾನ ಸಮಾಜದವರ ಮಧ್ಯೆ ಮಾತಿನ ಚಕಮಕಿ ನಡೆದು ಗ್ರಾಮದಲ್ಲಿ ಕೆಲಹೊತ್ತು ಉದ್ವಿಗ್ನ ಸ್ಥಿತಿ ಉಂಟಾಗಿತ್ತು.
ಇಬ್ಬರ ಬಳಿಯೂ ದಾಖಲೆ: ಕಟ್ಟಡ ನಿರ್ಮಾಣಕ್ಕೆ ಕಂದಕೂರು ಪಂಚಾಯಿತಿ ಸದರಿ ಜಾಗೆ ನೀಡಿದೆ, ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಿರ್ಮಾಣ ಬೇಡ ಎಂದು ಡಿವೈಎಸ್ಪಿ ಹೇಳಿದ್ದಾರೆ. ಹಾಗಾಗಿ ಬೇರೆ ನಿವೇಶನ ನೀಡುವಂತೆ ಪಂಚಾಯಿತಿಗೆ ಪತ್ರ ಬರೆಯುವುದಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆನಂದ ಗೋಟೂರು ಹೇಳಿದರು.
ಆರೋಗ್ಯ ಇಲಾಖೆ ಮತ್ತು ಮುಸಲ್ಮಾನ ಸಮಾಜ ಇಬ್ಬರ ಬಳಿಯೂ ನಿವೇಶನ ನೀಡಿರುವ ಗ್ರಾ.ಪಂ ಕ್ರಮ ಅಚ್ಚರಿಗೆ ಕಾರಣವಾಗಿದೆ.
ಈ ವಿಷಯವನ್ನು ತಹಶೀಲ್ದಾರ ವೀರೇಶ ಬಿರಾದಾರ ಅವರ ಗಮನಕ್ಕೆ ತಂದಿದ್ದು ದಾಖಲೆಗಳನ್ನು ಪರಿಶೀಲಿಸಿ ಹದ್ದುಬಸ್ತು ಮಾಡುವವರೆಗೂ ಅಲ್ಲಿ ಯಾವುದೇ ಕೆಲಸ ನಡೆಸದಂತೆ ನೋಡಿಕೊಳ್ಳಲು ತಿಳಿಸಿದ್ದಾರೆ ಎಂಬುದನ್ನು ಸಿಪಿಐ ನೀಲಪ್ಪ ಸ್ಪಷ್ಟಪಡಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.