ಕಂದವಾರ ಕೆರೆಗೆ ಬೇಕಿದೆ ಕಾಯಕಲ್ಪ

7

ಕಂದವಾರ ಕೆರೆಗೆ ಬೇಕಿದೆ ಕಾಯಕಲ್ಪ

Published:
Updated:

ಚಿಕ್ಕಬಳ್ಳಾಪುರ: ಹದಿನೈದು ವರ್ಷಗಳ ಹಿಂದೆ ಕಂದವಾರ ಕೆರೆ ಕೋಡಿ ಹರಿದರೆ, ಕಂದವಾರದ ಸುತ್ತಮುತ್ತಲೂ ಹಬ್ಬದ ವಾತಾವರಣ ಇರುತಿತ್ತು. ಕೋಡಿ ಹರಿದ ಕೂಡಲೇ ಭಾರಿ ಜಾತ್ರೆಯೇ ನಡೆದುಬಿಡೋದು.

 

ಕೆರೆಯನ್ನು ಜಲಮಾತೆಯೆಂದು ಪೂಜಿಸುತ್ತಿದ್ದ ನಗರದ ನಿವಾಸಿಗಳು ಮತ್ತು ಗ್ರಾಮಸ್ಥರು ಸಂಭ್ರಮದಿಂದ ದಿನಗಳನ್ನು ಕಳೆಯುತ್ತಿದ್ದರು. ಆದರೆ ಈಗ ಜಾತ್ರೆಯೂ ಇಲ್ಲ, ನೀರೂ ಇಲ್ಲ !

***

ಸರಿಸುಮಾರು ಆರು ತಿಂಗಳ ಹಿಂದೆ ತುರ್ತು ಸಭೆ ಕರೆದಿದ್ದ ನಗರಸಭೆಯು ಕಂದವಾರ ಕೆರೆಯಲ್ಲಿ ದೋಣಿ ವಿಹಾರ ಸೌಲಭ್ಯ ಕಲ್ಪಿಸುವ ಮತ್ತು ಉದ್ಯಾನ ನಿರ್ಮಿಸುವ ಬಗ್ಗೆ ಚಿಂತನೆ ನಡೆಸಿತ್ತು. ಅದಕ್ಕಾಗಿ ಅನುದಾನ ಬಿಡುಗಡೆ ಬಗ್ಗೆ ಆಸಕ್ತಿ ತೋರಿತ್ತು. ಆದರೆ ಈಗ ದೋಣಿ ವಿಹಾರಕ್ಕೆ ನೀರಿಲ್ಲ, ಉದ್ಯಾನವೂ ಇಲ್ಲ !

***



ಬಾಯಾರಿಕೆಯಾದಾಗಲೆಲ್ಲ ಪ್ರಾಣಿಪಕ್ಷಿಗಳು ಕಂದವಾರ ಕೆರೆಗೆ ಬರುತ್ತಿದ್ದವು. ಕೆರೆಯ ನೀರು ಬೇರೆ ಬೇರೆ ಕಾರಣಗಳಿಗೆ ಸದ್ಬಳಕೆಯೂ ಆಗುತಿತ್ತು. ಒಂದರ್ಥದಲ್ಲಿ ಜೀವಸೆಲೆಯಾಗಿತ್ತು. ಆದರೆ ಈಗ ಕೆರೆಯೇ ಸತ್ತುಹೋಗಿದೆ. ಒಂದು ಹನಿಯೂ ನೀರು ಸಿಗುತ್ತಿಲ್ಲ !

            ***   



ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 300 ಎಕರೆಗೂ ಹೆಚ್ಚು ಭೂಪ್ರದೇಶ ಹೊಂದಿರುವ ಕಂದವಾರ ಕೆರೆ ಬತ್ತಿಹೋಗಿದೆ. ನೀರನ್ನು ಹುಡುಕಿಕೊಂಡು ಬರುವ ಜಾನುವಾರುಗಳು, ಪ್ರಾಣಿ ಪಕ್ಷಿಗಳಿಗೆ ಹನಿ ನೀರು ಸಿಗುತ್ತಿಲ್ಲ. ಕೆರೆ ನೀರನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದ ಜನರಲ್ಲಿ ನಿರಾಸೆ ಆವರಿಸಿದೆ.



`ಕಂದವಾರ ಜಲಮಾತೆ ಮುನಿ ಸಿಕೊಂಡು ನಮ್ಮೆಲ್ಲರಿಂದ ದೂರ ವಾಗುತ್ತಿದ್ದಾಳೆ~ ಎಂದು ಜನರು ಬೇಸರ ಪಡುತ್ತಿದ್ದಾರೆ.ನಗರಪ್ರದೇಶ ಮತ್ತು ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಕೊಂಡಿಯಂತಿದ್ದ ಕಂದವಾರ ಕೆರೆಯು ಸಂಪೂರ್ಣವಾಗಿ ಬತ್ತಿ ಹೋಗಿರುವುದು ಕೆಲವರಿಗೆ ಆತಂಕ ಉಂಟು ಮಾಡಿದೆ.



`ಕೆರೆ ವರ್ಷಗಳ ಕಾಲ ಹೀಗೆ ಬತ್ತಿದರೆ, ಕುಡಿ ಯಲು ಸಿಹಿ ನೀರು ಕೂಡ ಸಿಗಲ್ಲ. ಅಂತರ್ಜಲದ ಪ್ರಮಾಣವು ಇನ್ನಷ್ಟು ಕುಸಿಯಲಿದೆ~ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು, `ಬತ್ತಿದ ಕೆರೆ ಪ್ರದೇಶ ರಿಯಲ್ ಎಸ್ಟೇಟ್‌ನವರ ಪಾಲಾದರೆ ಏನೂ ಗತಿ~ ಎಂದು ಭೀತಿ ವ್ಯಕ್ತಪಡಿಸುತ್ತಾರೆ.



`ಕೆರೆಯು ಬತ್ತಿಹೋಗಿರುವುದು ಕಂಡರೆ ಬೇಸರ ವಾಗುತ್ತೆ. ಕೆರೆಯ ಅಚ್ಚುಕಟ್ಟು ಪ್ರದೇಶ ಸೇರಿದಂತೆ ಎಲ್ಲವೂ ಒತ್ತುವರಿಯಾದರೆ, ನಮ್ಮ ಕೆರೆ ಉಳಿ ಯುವುದಾದರೂ ಹೇಗೆ ? ನೀರಿನಿಂದ ಮೈದುಂಬಿ ಕೋಡಿ ಹರಿಯುವುದಾದರೂ ಹೇಗೆ ? ಕೆರೆಗೆ ಯಾವುದೇ ಸ್ವರೂಪದಲ್ಲಿ ಧಕ್ಕೆಯಾದರೂ ನಮ್ಮ ಹಿರಿಯರು ಸಹಿಸುತ್ತಿರಲಿಲ್ಲ.



ಆದರೆ ಈಗಿನ ಸ್ಥಿತಿ ನೋಡಿದರೆ, ಮುಂದಿನ ಪೀಳಿಗೆಯವರಿಗಾದರೂ ಕೆರೆ ಇರುತ್ತೋ ಇಲ್ವೊ~ ಎಂದು ಕಂದವಾರದ ನಿವಾಸಿ ಚಂದ್ರಪ್ಪ `ಪ್ರಜಾವಾಣಿ~ಗೆ ತಿಳಿಸಿದರು.



`ಕೆರೆ ಸುತ್ತಮುತ್ತಲೂ ಹೆಚ್ಚು ಬೋರ್‌ವೆಲ್‌ಗಳನ್ನು ಕೊರೆಯಲಾಗಿದೆ. ಚಿಕ್ಕ ಬಳ್ಳಾಪುರಕ್ಕೆ ಇಲ್ಲಿಂ ದಲೇ ಸಿಹಿ ನೀರು ಪೂರೈಕೆ ಯಾಗುತ್ತದೆ. ಆದರೆ ಕೆರೆ ಬತ್ತುತ್ತಿರುವುದರಿಂದ ಮುಂದಿನ ವರ್ಷಗಳಲ್ಲಿ ಸಿಹಿ ನೀರು ಸಿಗುವುದು ಕೂಡ ಕಷ್ಟವಾಗಲಿದೆ. ಆಗ ಸಿಹಿನೀರು ಹುಡುಕಿ ಕೊಂಡು ನಾವೆಲ್ಲಿ ಹೋಗ ಬೇಕು~ ಎಂದು ಅವರು ಪ್ರಶ್ನಿಸಿದರು.



ಬತ್ತಲು ಕಾರಣ?: `ನಮ್ಮ ಜಿಲ್ಲೆಯು ಬಯಲುಸೀಮೆ ಪ್ರದೇಶವಾಗಿರುವ ಕಾರಣ ಹೆಚ್ಚು ಮಳೆಯಾಗಲ್ಲ. ಕಂದವಾರ ಕೆರೆಗೆ ನಂದಿ ಬೆಟ್ಟ, ಕಳವಾರ ಬೆಟ್ಟ ಮತ್ತು ರಂಗಸ್ಥಳ ಬಳಿಯಿರುವ ಕೆರೆಗಳಿಂದ ನೀರು ಹರಿದು ಬರುತಿತ್ತು. ಆದರೆ ನೀರು ಹರಿಯುವ ಸ್ಥಳಗಳೆಲ್ಲ ಈಗ ಒತ್ತುವರಿ ಯಾಗಿದೆ.



ನೀರು ಹರಿದುಕೊಂಡು ಬಾರದ ಹಾಗೆ ಚೆಕ್‌ಡ್ಯಾಮ್, ಕಾಲುವೆ, ಕಟ್ಟಡ ಮುಂತಾದವು ನಿರ್ಮಿಸಲಾಗಿದೆ. ನೀರು ಹರಿಯಲು ಜಾಗ ಇರ ದಿರುವಾಗ ಕೆರೆ ತುಂಬುವುದಾದರೂ ಹೇಗೆ~ ಎಂದು ನಗರದ ನಿವಾಸಿ ರಾಮೇಗೌಡ ಚಿಂತಿಸುತ್ತಾರೆ.



`ಕಂದವಾರ ಕೆರೆಪ್ರದೇಶ ದಿನದಿಂದ ದಿನಕ್ಕೆ ಒತ್ತುವರಿಯಾಗುತ್ತಿದೆ. 300 ಎಕರೆ ಪ್ರದೇಶವು ಒತ್ತುವರಿಯಾಗುವುದು ಹೀಗೆ ಮುಂದುವರೆದರೆ, ಕೆರೆಯು ತನ್ನ ಸಂಪೂರ್ಣ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ. ಈಗಾಗಲೇ ನೀರಿನ ಸಮಸ್ಯೆ ಎದುರಿಸುತ್ತಿರುವ ಚಿಕ್ಕಬಳ್ಳಾಪುರ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ~ ಎಂದು ಅವರು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry