ಕಂದಹಳ್ಳಿ: ಚರಂಡಿ ಪಕ್ಕದಲ್ಲಿ ಬದುಕು ನರಕ

7

ಕಂದಹಳ್ಳಿ: ಚರಂಡಿ ಪಕ್ಕದಲ್ಲಿ ಬದುಕು ನರಕ

Published:
Updated:
ಕಂದಹಳ್ಳಿ: ಚರಂಡಿ ಪಕ್ಕದಲ್ಲಿ ಬದುಕು ನರಕ

ಯಳಂದೂರು: ವಾಸದ ಮನೆಗಳ ಸುತ್ತ ದುರ್ವಾಸನೆ ಬೀರುವ ಚರಂಡಿ ನೀರು, ಹಾವು ಚೇಳು, ಹುಳ ಹುಪ್ಪಟೆಗಳ ಕಾಟದ ನಡುವೆ ಬದುಕು ಕಟ್ಟಿಕೊಳ್ಳುವ ಜನ. ಮಕ್ಕಳು, ಮಹಿಳೆಯರು ಜೀವ ಹಿಡಿದು ಓಡಾಡುವ ದುಃಸ್ಥಿತಿ. ಇದು ತಾಲ್ಲೂಕಿನ ಕಂದಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 209ರ ಎಡಬಲ ಭಾಗದ ಚರಂಡಿ ಪಕ್ಕ ವಾಸಿಸುವ ಜನರ ಸ್ಥಿತಿ.ವರ್ಷಗಳಿಂದ ಚರಂಡಿಯಲ್ಲಿ ಹೂಳು ತುಂಬಿದೆ. ನಿಂತ ನೀರು ಚಲಿಸುವುದಿಲ್ಲ, ಬಂದ ನೀರು ರಸ್ತೆಗೆ ಚೆಲ್ಲುತ್ತದೆ. ಹೀಗಾಗಿ ಕ್ರಿಮಿ ಕೀಟಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಪರಿಣಾಮ ಬೇಸಿಗೆಯಲ್ಲಿ ದುರ್ವಾಸನೆಯ ಜತೆಗೆ ರೋಗಗಳನ್ನು ಸಹಿಸಿಕೊಳ್ಳುವ ಪಾಡು ಇಲ್ಲಿನ ನಿವಾಸಿಗಳದು.ಉಪ್ಪಾರ ಹಾಗೂ ನಾಯಕ ಜನಾಂಗದವರೇ ಹೆಚ್ಚಾಗಿ ವಾಸ ಮಾಡುವ ಈ ಗ್ರಾಮ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದೆ. ದಿನನಿತ್ಯ ಜನಪ್ರತಿನಿಧಿಗಳು, ಅಧಿಕಾರಿಗಳು ಇಲ್ಲಿಂದಲೇ ಓಡಾಡುತ್ತಾರೆ. ಆದರೆ ಇಲ್ಲಿನ ಸಮಸ್ಯೆಗಳ ಬಗ್ಗೆ ಮುತುವರ್ಜಿ ಮಾತ್ರ ವಹಿಸಿಲ್ಲ. ಇಲ್ಲಿರುವ ಕುಡಿಯುವ ನೀರಿನ ಕೊಳವೆ ಬಾವಿಯೂ ಈ ಗಲ್ಲಿಯ ಜತೆ ಸೇರಿ ಹೋಗಿದೆ. ಹಾಗಾಗಿ ಕಲುಷಿತ ನೀರೂ ಸೇರುವ ಅಪಾಯವಿದೆ. ಇದೇ ನೀರು ಕುಡಿದು ತಮ್ಮ ಆರೋಗ್ಯವೂ ಕೆಡಬಹುದಾದ ಭೀತಿ ಹೆಚ್ಚಾಗಿದೆ ಎಂಬುದಾಗಿ ಗ್ರಾಮದ ಶಾಂತನಾಯಕ, ಮಾದೇವನಾಯಕ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.ನೂರಾರು ಮೀಟರ್ ಉದ್ದದ ಈ ಮೋರಿಯ ನೀರು ಊರ ಸನಿಹದಲ್ಲೇ ನಿಂತು ಮಡುಗಟ್ಟಿದೆ. ಈ ಬಗ್ಗೆ ಪಂಚಾಯಿತಿಗೆ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತಿಳಿಸಿದರೂ ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬುದಾಗಿ ಇಲ್ಲವೆ ಸರಿಪಡಿಸುವ ಹಾರಿಕೆಯ ಉತ್ತರ ನೀಡುತ್ತಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.ಮಳೆ ಬಂದಾಗ ಮಳೆ ನೀರಿನ ಜತೆ ಕೊಳಕು ನೀರೂ ಸಹ ಮನೆಗೆ ನುಗ್ಗುತ್ತದೆ. ವಿಷ ಜಂತುಗಳೂ ಮನೆಯೊಳಗೆ ನುಸುಳುತ್ತವೆ. ರಾತ್ರಿ ವೇಳೆ ಮಲಗಲೂ ಭಯವಾಗುತ್ತದೆ. ಎಂಬುದು ಇಲ್ಲಿನ ಮಹಿಳೆಯರ ದೂರು. ಹೀಗಿರುವಾಗ ಇಲ್ಲೇ ಬದುಕು ಕಟ್ಟಿಕೊಂಡಿರುವ ಹತ್ತಾರು ಕುಟುಂಬಗಳಿಗೆ ದಿನನಿತ್ಯ ಸಮಸ್ಯೆಗಳ ವಿರುದ್ಧ ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ಸಂಬಂಧಪಟ್ಟವರು ಇದರ ಬಗ್ಗೆ ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry