ಭಾನುವಾರ, ಜನವರಿ 26, 2020
22 °C

ಕಂದಾಯ ಅದಾಲತ್ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಮೀನು ಖಾತೆಗಳಿಗೆ ಸಂಬಂಧಿಸಿದ ಸಮಸ್ಯೆ, ವಿವಾದಗಳನ್ನು ಸ್ಥಳದಲ್ಲೇ ಪರಿಹರಿಸಲು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾಡಳಿತ ಕಂದಾಯ ಅದಾಲತ್ ಆಯೋಜಿ­ಸಿದ್ದು, ಸೋಮವಾರದಿಂದ ಆರಂಭವಾಗಲಿದೆ.ಖಾತೆಗಳ ಸಮಸ್ಯೆ ಪರಿಹರಿಸುವ ಸಲುವಾಗಿ ಕೋಲಾರ ತಾಲ್ಲೂಕಿನ ಪ್ರತಿ ಹಳ್ಳಿಯಲ್ಲೂ ಕಂದಾಯ ಅದಾಲತ್ ಆರಂಭವಾಗಲಿದೆ. ಮೊದಲಿಗೆ ನರಸಾ­ಪುರ ಹೋಬಳಿಯ ಬೆಳ್ಳೂರಿನಲ್ಲಿ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಡಿ.ಕೆ.ರವಿ ಅದಾಲತ್‌ಗೆ ಚಾಲನೆ ನೀಡಲಿದ್ದಾರೆ. ತಾಲ್ಲೂ­ಕಿನ ವಿವಿಧ ಹೋಬಳಿಗಳ ಗ್ರಾಮಗಳಿಗೆ ಹೆಚ್ಚುವರಿ ಜಿಲ್ಲಾಧಿ­ಕಾರಿಯೂ ಆಗಿರುವ ಉಪವಿಭಾಗಾ­ಧಿಕಾರಿ, ತಹಶೀಲ್ದಾರರು ಭೇಟಿ ನೀಡಿ ಅದಾಲತ್ ನಡೆಸಲಿದ್ದಾರೆ.ನಿವೇಶನ, ಮನೆ, ಜಮೀನು ಮೊದ­ಲಾದವುಗಳ ಖಾತೆ ವಿವಾದಗಳನ್ನು ಬಗೆಹರಿಸಿಕೊಳ್ಳಲು ಸಾರ್ವಜನಿಕರು ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿ ದಿನಗಟ್ಟಲೇ ಕಾಯಬೇಕು. ಊರಿಂದ ತಾಲ್ಲೂಕು ಕೇಂದ್ರಕ್ಕೆ ಅಲೆದಾಡಬೇಕು. ಅದು ಬಹುತೇಕ ಸಂದರ್ಭದಲ್ಲಿ ಕಷ್ಟಕರ. ಹೀಗಾಗಿ ಜನರ ಸಮಸ್ಯೆಯನ್ನು ಅವರಿದ್ದಲ್ಲಿಗೇ ತೆರಳಿ ಬಗೆಹರಿಸಲು ಕಂದಾಯ ಅದಾಲತ್ ಆಯೋಜಿಸ­ಲಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ.ಪ್ರಾಯೋಗಿಕ ಪ್ರಯತ್ನವಾಗಿ ಮೊದಲು ಕೋಲಾರ ತಾಲ್ಲೂಕನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, 8 ಹೋಬಳಿಗಳ ಎಲ್ಲ ಕಂದಾಯ ಗ್ರಾಮ­ಗಳಿಗೂ ತಾವು ಸೇರಿದಂತೆ ಅಧಿಕಾರಿಗಳು ಭೇಟಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.ನರಸಾಪುರ ಸೇರಿದಂತೆ ಎರಡು ಹೋಬಳಿಯ ಗ್ರಾಮಗಳಿಗೆ ಭೇಟಿ ನೀಡುವುದಾಗಿ ತಿಳಿಸಿದ ಅವರು, ಉಪವಿಭಾಗಾಧಿಕಾರಿ ಮತ್ತು ತಹ­ಶೀಲ್ದಾರರು ಸಿಬ್ಬಂದಿಯೊಡನೆ ಭೇಟಿ ನೀಡಲಿದ್ದಾರೆ ಎಂದು ಹೇಳಿದರು.ಕಂದಾಯ ವಿಭಾಗದ ಖಾತೆ ಸಮಸ್ಯೆ­ಗಳ ಕುರಿತು ಈಗಾಗಲೇ ಸಲ್ಲಿಸ­ಲಾಗಿ­ರುವ ಅರ್ಜಿಗಳ ವಿಲೇವಾರಿ ಅಲ್ಲದೆ, ಇತ್ಯರ್ಥವಾಗದೇ ಇರುವ ಖಾತೆ ಸಮಸ್ಯೆ­ಗಳನ್ನೂ ಗುರುತಿಸಿ ಪಟ್ಟಿ ಮಾಡಲು ಕಂದಾಯ ಇಲಾಖೆ ಸಿಬ್ಬಂದಿಗೆ ಈಗಾ­ಗಲೇ ಸೂಚಿಸಲಾಗಿತ್ತು. ಅದಾಲತ್ ಬಗ್ಗೆ ಪ್ರತಿ ಗ್ರಾಮದಲ್ಲೂ ಡಂಗೂರ ಸಾರಲಾಗಿದೆ ಎಂದು ಹೇಳಿದ್ದಾರೆ.ಗ್ರಾಮಸ್ಥರು ಅದಾಲತ್‌ಗೆ ಬರುವ ಸಂದರ್ಭದಲ್ಲಿ ನಿಖರ ವಂಶವೃಕ್ಷದ ದಾಖಲೆಗಳು, ನ್ಯಾಯಾಲಯದ ಆದೇಶ ಪ್ರತಿಗಳು, ಆಸ್ತಿ ನೋಂದಣಾಪತ್ರಗಳು ಸೇರಿದಂತೆ ಎಲ್ಲ ಪ್ರಮಾಣಪತ್ರಗಳನ್ನೂ ತರಬೇಕು. ಎಲ್ಲವನ್ನೂ ಅಲ್ಲಿಯೇ ಪರಿಶೀಲಿಸಿ ಆದೇಶ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)