ಕಂದಾಯ, ಅರಣ್ಯ ಭೂಮಿ ಜಂಟಿ ಸರ್ವೆ

7

ಕಂದಾಯ, ಅರಣ್ಯ ಭೂಮಿ ಜಂಟಿ ಸರ್ವೆ

Published:
Updated:

ಬೆಂಗಳೂರು: ರಾಜ್ಯದಾದ್ಯಂತ ಕಂದಾಯ ಮತ್ತು ಅರಣ್ಯ ಜಮೀನುಗಳ ಗಡಿಯನ್ನು ನಿಖರವಾಗಿ ಗುರುತಿಸಲು ತಕ್ಷಣವೇ ಜಂಟಿ ಸರ್ವೆ ಆರಂಭಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡೂ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.ಕಂದಾಯ ಮತ್ತು ಅರಣ್ಯ ಜಮೀನುಗಳ ಗಡಿಗೆ ಸಂಬಂಧಿಸಿದಂತೆ ಉದ್ಭವವಾಗಿರುವ ಗೊಂದಲ ಪರಿಹಾರದ ಕುರಿತು ಮುಖ್ಯಮಂತ್ರಿಯವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಉನ್ನತಮಟ್ಟದ ಸಭೆ ನಡೆಸಿದರು. ಅರಣ್ಯ ಸಚಿವ ಬಿ.ರಮಾನಾಥ ರೈ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜು, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಶಿವಶೈಲಂ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಕಂದಾಯ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿರುವುದು ಮತ್ತು ಹೊಸ ಮೀಸಲು ಅರಣ್ಯಗಳ ಘೋಷಣೆಯಿಂದ ಆಗಿರುವ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.

 

ಹೊಸದಾಗಿ ಘೋಷಣೆಯಾಗಿರುವ ಮೀಸಲು ಅರಣ್ಯ, ಡೀಮ್ಡ ಅರಣ್ಯ ಮತ್ತು ರಾಜ್ಯ ಅರಣ್ಯಗಳ ವ್ಯಾಪ್ತಿಯಲ್ಲಿರುವ ಜನವಸತಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವ ಕುರಿತು ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಚರ್ಚೆ ನಡೆದಿತ್ತು.ಮಲೆನಾಡಿನ ಜನರು ಒಕ್ಕಲೇಳುವ ಆತಂಕದಲ್ಲಿರುವ ಬಗ್ಗೆ ವಿಷಯ ಪ್ರಸ್ತಾಪಿಸಿದ್ದ ಆ ಭಾಗದ ಶಾಸಕರು, ಜಂಟಿ ಸರ್ವೆ ನಡೆಸಿ ಗೊಂದಲಕ್ಕೆ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದರು. ಸಮಸ್ಯೆಗೆ ತಕ್ಷಣವೇ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸರ್ಕಾರಕ್ಕೆ ನಿರ್ದೇಶನ ನೀಡಿದ್ದರು.ಜಮೀನಿನ ಗಡಿ ಗುರುತಿಗೆ ಸಂಬಂಧಿಸಿದಂತೆ ಸ್ಪಷ್ಟತೆ ಇಲ್ಲದಿರುವುದರಿಂದ ಜನಸಾಮಾನ್ಯರಿಗೆ ತೊಂದರೆ ಆಗಿದೆ ಎಂಬುದನ್ನು ಸಿಎಂ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಎರಡೂ ಇಲಾಖೆಗಳ ಬಳಿ ಇರುವ ಅಧಿಕೃತ ನಕ್ಷೆಗಳನ್ನು ಆಧಾರವಾಗಿ ಇಟ್ಟುಕೊಂಡು ಜಂಟಿ ಸರ್ವೆ ನಡೆಸಬೇಕು. ಕಂದಾಯ ಇಲಾಖೆಯ ನೇತೃತ್ವದಲ್ಲಿ ಸರ್ವೆ ನಡೆಯಬೇಕು. ಅರಣ್ಯ ಇಲಾಖೆ ಸಂಪೂರ್ಣ ಸಹಕಾರ ನೀಡಬೇಕು. ಖಚಿತವಾಗಿ ಗುರುತಿಸಲು ಸಾಧ್ಯವಾಗುವ ರೀತಿಯಲ್ಲಿ ಗಡಿ ಗುರುತುಗಳನ್ನು ಅಳವಡಿಸಬೇಕು ಎಂದು ನಿರ್ದೇಶನ ನೀಡಿರುವುದಾಗಿ ಮೂಲಗಳು ತಿಳಿಸಿವೆ.ಭದ್ರತೆ ಕೋರಿದ ಅಧಿಕಾರಿಗಳು: ಜಂಟಿ ಸರ್ವೆಗೆ ಹೋದಾಗ ಸ್ಥಳೀಯ ಜನರಿಂದ ಪ್ರತಿರೋಧ, ಆಕ್ರೋಶ ವ್ಯಕ್ತವಾಗುವ ಸಾಧ್ಯತೆ ಇದೆ ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಗೆ ತಿಳಿಸಿದ್ದಾರೆ. ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ನಡೆಯುವ ಜಂಟಿ ಸರ್ವೆಗೆ ಸೂಕ್ತ ರೀತಿಯ ಪೊಲೀಸ್ ಭದ್ರತೆಯನ್ನು ಒದಗಿಸಬೇಕು. ಪೊಲೀಸ್ ರಕ್ಷಣೆಯಲ್ಲೇ ಈ ಪ್ರಕ್ರಿಯೆ ನಡೆಯಬೇಕು. ಈ ಸಂಬಂಧ ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನವನ್ನೂ ನೀಡಬೇಕು ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.ಉಪಗ್ರಹ ಚಿತ್ರಗಳು, ಜಿಪಿಎಸ್ ಸರ್ವೆ ಸಾಧನಗಳ ಬಳಕೆಯೂ ಸೇರಿದಂತೆ ಜಂಟಿ ಸರ್ವೆಗೆ ಅನುಸರಿಸಬಹುದಾದ ಮಾದರಿಗಳ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದಿದೆ. ಅರಣ್ಯ ಎಂದು ಪರಿಗಣಿಸಬಹುದಾದ ಜಮೀನಿನ ಬಗ್ಗೆ ಸುಪ್ರೀಂ ಕೋರ್ಟ್ ವಿವಿಧ ಪ್ರಕರಣಗಳಲ್ಲಿ ನೀಡಿರುವ ತೀರ್ಪುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಭೆಗೆ ವಿವರಿಸಿದ್ದಾರೆ. ರಾಜ್ಯದ ವಿವಿಧೆಡೆ ನಡೆದಿರುವ ಅರಣ್ಯ ಒತ್ತುವರಿ ಪ್ರಕರಣಗಳ ಬಗ್ಗೆಯೂ ಚರ್ಚೆ ನಡೆದಿದೆ. ಜಂಟಿ ಸರ್ವೆಗೆ ಕಾಲಮಿತಿ ನಿಗದಿ ಮಾಡುವಂತೆ ರಮಾನಾಥ ರೈ ಅವರು ಮುಖ್ಯಮಂತ್ರಿಯವರನ್ನು ಕೋರಿದ್ದಾರೆ ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry