ಸೋಮವಾರ, ಮೇ 10, 2021
21 °C

ಕಂದಾಯ ಇಲಾಖೆ ಸಿದ್ಧತೆ: ನೋಂದಣಿ ದಾಖಲೆಗೆ ಏಕರೂಪ

ಪ್ರಜಾವಾಣಿ ವಾರ್ತೆ/ ಪಿ.ಎಂ.ರಘುನಂದನ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ಥಿರಾಸ್ತಿ ಮಾರಾಟ ಕರಾರು ಪತ್ರಗಳಲ್ಲಿ ಏಕರೂಪತೆ ತರಲು ರಾಜ್ಯ ಸರ್ಕಾರ ಮುಂದಾಗಿದ್ದು, ಕ್ರಯಪತ್ರ, ಅಡಮಾನ ಪತ್ರ, ದಾನಪತ್ರ ಮತ್ತಿತರ ಸ್ಥಿರಾಸ್ತಿ ವಹಿವಾಟಿಗೆ ಸಂಬಂಧಿಸಿದ ನೋಂದಣಿ ದಾಖಲೆಗಳು ಒಂದೇ ಮಾದರಿಯಲ್ಲಿ ಇರಬೇಕೆಂಬ ನಿಯಮ ಜಾರಿಗೆ ಸರ್ಕಾರ ಸಿದ್ಧತೆ ನಡೆಸಿದೆ.ಈಗ ರೂಪಿಸಿರುವ ಯೋಜನೆಯ ಪ್ರಕಾರ, ಸ್ಥಿರಾಸ್ತಿ ಕ್ರಯಪತ್ರ ಅಥವಾ ಇತರೆ ದಾಖಲೆಗಳ ಮುಖಪುಟ ಒಂದೇ ಮಾದರಿಯಲ್ಲಿರಲಿದೆ. ಆಸ್ತಿಯ ವಿಳಾಸ, ಮಾಲೀಕ, ಋಣಭಾರ ವಿವರ, ಒಡೆತನದಲ್ಲಿನ ಬದಲಾವಣೆಗಳು, ಖರೀದಿಸುವವರ ವಿಳಾಸ ಮತ್ತಿತರ ವಿವರಗಳ ಸಾರಾಂಶ ದಾಖಲೆಯ ಮೊದಲ ಪುಟದಲ್ಲೇ ಲಭ್ಯವಾಗಲಿದೆ.`ಏಕರೂಪ ಮಾದರಿ ಜಾರಿಗೆ ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ. ದಾಖಲೆಯ ಮುಖಪುಟದ ಮಾದರಿ ಸಿದ್ಧಪಡಿಸಲು ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ನೇಮಕ ಮಾಡಲಾಗುವುದು. ಎರಡು ತಿಂಗಳಲ್ಲಿ ಹೊಸ ಮಾದರಿ ಜಾರಿಗೆ ತರಲು ಯೋಚಿಸಲಾಗಿದೆ~ ಎಂದು ಕಂದಾಯ ಇಲಾಖೆಯ (ಭೂಮಿ ಮತ್ತು ಯುಪಿಒಆರ್) ಕಾರ್ಯದರ್ಶಿ ರಾಜೀವ್ ಚಾವ್ಲಾ ತಿಳಿಸಿದರು.ಪ್ರಸ್ತುತ ನೋಂದಣಿ ದಾಖಲೆಗಳನ್ನು ಸಿದ್ಧಪಡಿಸುವ ಸಂಬಂಧ ಏಕರೂಪ ಮಾದರಿ ಜಾರಿಯಲ್ಲಿ ಇಲ್ಲ. ವಕೀಲರು ಅಥವಾ ಪತ್ರ ಬರಹಗಾರರು ಮಾರಾಟವಾಗುವ ಆಸ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಆಧರಿಸಿ ದಾಖಲೆ ಸಿದ್ಧಪಡಿಸುತ್ತಾರೆ. ಉಪ ನೋಂದಣಿ ಕಚೇರಿಗಳಲ್ಲಿ ಈ ದಾಖಲೆಯನ್ನು ನೋಂದಣಿ ಮಾಡಲಾಗುತ್ತದೆ.`ಈಗ ಸಿದ್ಧವಾಗುತ್ತಿರುವ ನೋಂದಣಿ ಪತ್ರಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಕೆಲವೇ ಮಾಹಿತಿ ಪಡೆಯಲು ಹತ್ತಾರು ಪುಟಗಳನ್ನು ಓದಬೇಕಾಗುತ್ತದೆ.ಏಕರೂಪ ಮಾದರಿ ಇಲ್ಲದಿರುವುದೇ ಈ ಸಮಸ್ಯೆಗೆ ಕಾರಣ. ಹೊಸ ಮಾದರಿ ಅನುಷ್ಠಾನಕ್ಕೆ ಬಂದ ಬಳಿಕ ಕ್ರಯಪತ್ರಗಳನ್ನು ಓದಿ, ಅರ್ಥ ಮಾಡಿಕೊಳ್ಳುವುದು ಸುಲಭವಾಗಲಿದೆ~ ಎಂದು ಚಾವ್ಲಾ ಅಭಿಪ್ರಾಯಪಡುತ್ತಾರೆ.ಸ್ಥಿರಾಸ್ತಿ ಮಾರಾಟ, ಖರೀದಿ, ಅಡಮಾನ ಮತ್ತಿತರ ವಹಿವಾಟಿನಲ್ಲಿ ಪಾರದರ್ಶಕತೆ ತರುವ ಉದ್ದೇಶವೂ ಏಕರೂಪ ಮಾದರಿ ಜಾರಿಯ ಹಿಂದಿದೆ. ಈಗ ನೋಂದಣಿ ಸಮಯದಲ್ಲಿ ಆಸ್ತಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಮುಚ್ಚಿಡುವುದಕ್ಕೂ ಅವಕಾಶವಿದೆ. ಇದರಿಂದ ಖರೀದಿದಾರರು ವಂಚನೆಗೂ ಒಳಗಾಗುವ ಅಪಾಯವಿದೆ. ಹೊಸ ಮಾದರಿಯ ಮೂಲಕ ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶವೂ ಇದೆ.`ಸ್ಥಿರಾಸ್ತಿಗೆ ಸಂಬಂಧಿಸಿದ ಎಲ್ಲ ಬಗೆಯ ನೋಂದಣಿ ಪ್ರಕ್ರಿಯೆಗೂ ಏಕರೂಪ ಮಾದರಿಯ ದಾಖಲೆ ಸಿದ್ಧಪಡಿಸುವುದನ್ನು ಕಡ್ಡಾಯ ಮಾಡಲಾಗುವುದು. ಈ ಉದ್ದೇಶದಿಂದ ಹತ್ತು ಮಾದರಿಗಳನ್ನು ಸಿದ್ಧಪಡಿಸಲಾಗುವುದು. ಜನರು ಹತ್ತು ಮಾದರಿಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು~ ಎಂದು ಚಾವ್ಲಾ ವಿವರಿಸಿದರು.ಹೊಸ ಪದ್ಧತಿ: `ಮ್ಯುಟೇಷನ್~ ನೀಡುವ ಪ್ರಕ್ರಿಯೆ ಪೂರ್ಣಗೊಳಿಸುವುದರಲ್ಲೂ ಹೊಸ ಪದ್ಧತಿ ಜಾರಿಗೆ ತರಲು ಕಂದಾಯ ಇಲಾಖೆ ತೀರ್ಮಾನಿಸಿದೆ. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ 30 ದಿನಗಳ ಬಳಿಕ ಸ್ವಯಂಪ್ರೇರಿತವಾಗಿ `ಮ್ಯುಟೇಷನ್~ ನೀಡುವಂತಹ ಸಾಫ್ಟ್‌ವೇರ್ ಸಿದ್ಧಪಡಿಸಲಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.