ಕಂದಾಯ ಇಲಾಖೆ ಸಿಬ್ಬಂದಿ ಪ್ರತಿಭಟನೆ

7

ಕಂದಾಯ ಇಲಾಖೆ ಸಿಬ್ಬಂದಿ ಪ್ರತಿಭಟನೆ

Published:
Updated:

ರಾಮನಗರ: ಬಿಡದಿ ಬಳಿಯ ಈಗಲ್ ಟನ್ ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಆರು ಸಿಬ್ಬಂದಿಯನ್ನು ಅಮಾನತು ಮಾಡಿರುವ ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿ ಜಿಲ್ಲೆಯ ಕಂದಾಯ ಇಲಾಖೆಯ ಸಿಬ್ಬಂದಿ ಮಂಗಳವಾರ ಕೆಲಸ ತ್ಯಜಿಸಿ ರಾಮನಗರದ ನೂತನ ಕಂದಾಯ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು.ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಯವರ ಫ್ಯಾಕ್ಸ್ ಸಂದೇಶದ ಮೇರೆಗೆ ಇಲಾಖೆಯ ಕೆಳವರ್ಗದ ನೌಕರರನ್ನು ಅಮಾನತು ಮಾಡಿರುವ ಜಿಲ್ಲಾಧಿಕಾರಿ ಕ್ರಮ ಖಂಡನೀಯ. ಸಂಬಂಧಿಸಿದ ಸಿಬ್ಬಂದಿಗೆ ತಿಳಿವಳಿಕೆ ನೀಡದೆ, ಕಾರಣ ಕೇಳದೆ ಏಕಾಏಕಿ ಅಮಾನತಿನಂತಹ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಏನಿತ್ತು ಎಂದು ಪ್ರತಿಭಟನಾಕಾರರು ಕೇಳಿದರು.

 

ಈಗಲ್‌ಟನ್ ಹೊಂದಿದ್ದ 509 ಎಕರೆ ಜಮೀನಿನಲ್ಲಿ 132 ಎಕರೆ ಸರ್ಕಾರಿ ಜಮೀನನ್ನು ಕಬಳಿಕೆ ಮಾಡಿತ್ತು. ನಂತರ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಹತ್ತಿತ್ತು. ಸುಪ್ರೀಂಕೋರ್ಟ್ 2003ರಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ದೇಶನ ನೀಡಿತ್ತು. ಇದರಲ್ಲಿ ಸರ್ಕಾರಿ ಜಮೀನು ಯಾವುದು ಎಂಬುದನ್ನು ತಿಳಿಸಿ, ಕಂದಾಯ ಇಲಾಖೆಯ ಸಿಬ್ಬಂದಿಗೆ ಯಾವ ಅಧಿಕಾರಿಗಳು ತಿಳಿಸಿಲ್ಲ. ಈ ನಡುವೆ ಈಗಲ್ ಟನ್ ಅಲ್ಲಿ ಕ್ರಮೇಣ ರೆಸಾರ್ಟ್, ಬಡಾವಣೆ, ಗಾಲ್ಫ್, ಈಜುಕೊಳ ಸೇರಿದಂತೆ ಇತರ ಕಟ್ಟಡಗಳನ್ನು ನಿರ್ಮಿಸಿ, ಕೆಲವನ್ನು ಮಾರಾಟ ಮಾಡಿದೆ.ಇದರಿಂದ ಈ ಭಾಗದಲ್ಲಿನ ಸರ್ಕಾರಿ ಜಮೀನು ಯಾವುದು ಎಂಬುದೇ ಗೊತ್ತಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ರಾಜ್ಯ ಕಂದಾಯ ಇಲಾಖೆಯ ನೌಕರರ ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣಯ್ಯ ಸುದ್ದಿಗಾರರಿಗೆ ತಿಳಿಸಿದರು. ಕೂಡಲೇ ಜಿಲ್ಲಾಧಿಕಾರಿ ಅವರು ಅಮಾನತು ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ಜಿಲ್ಲಾ ಮಟ್ಟದಲ್ಲಿ ಅನಿರ್ದಿಷ್ಟ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry