ಕಂದಾಯ ನೌಕರನ ಅಮಾನತಿಗೆ ಒತ್ತಾಯ

7
ಹೊನ್ನಾಳಿ ಪಟ್ಟಣ ಪಂಚಾಯ್ತಿ ಸಾಮಾನ್ಯ ಸಭೆ

ಕಂದಾಯ ನೌಕರನ ಅಮಾನತಿಗೆ ಒತ್ತಾಯ

Published:
Updated:

ಹೊನ್ನಾಳಿ: ಪಟ್ಟಣ ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳು–ಅಧಿಕಾರಿಗಳ ಸೂಚನೆ ಧಿಕ್ಕರಿಸಿ ಅಕ್ರಮವಾಗಿ ಪಟ್ಟಣದ ಅಗಳ ಪ್ರದೇಶದಲ್ಲಿ ಕಂದಾಯ ವಸೂಲಿ ಮಾಡಿರುವ ವೀರಭದ್ರಪ್ಪ ಅವರನ್ನು ಸಸ್ಪೆಂಡ್‌ ಮಾಡಬೇಕು ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಹೊಸಕೇರಿ ಸುರೇಶ್‌ ಒತ್ತಾಯಿಸಿದರು.ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ‘ಹಲವಾರು ವರ್ಷಗಳಿಂದ ಒತ್ತುವರಿಯಾಗಿದ್ದ ಪಟ್ಟಣದ ಅಗಳ ಪ್ರದೇಶವನ್ನು ತೆರವುಗೊಳಿಸಲು ಪಕ್ಷಭೇದ ಮರೆತು ಎಲ್ಲಾ ಸದಸ್ಯರೂ ತೆರಳಿದಾಗ, ಪಟ್ಟಣ ಪಂಚಾಯ್ತಿಯ ಯಾರೂ ತಮಗೆ ಸಹಕಾರ ನೀಡಲಿಲ್ಲ. ತೆರವು ಕಾರ್ಯಾಚರಣೆ ವೇಳೆ ಅಲ್ಲಿನ ನಿವಾಸಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಲು ಮುಂದಾಗಿದ್ದರು.

ಇಂತಹ ವಿಷಮ ಪರಿಸ್ಥಿತಿ ಮಧ್ಯೆ ಕೂಡ ನಾವೆಲ್ಲರೂ ಯಶಸ್ವಿಯಾಗಿ ಆ ಪ್ರದೇಶವನ್ನು ತೆರವುಗೊಳಿಸಿದೆವು. ಆ ಸಂದರ್ಭದಲ್ಲಿ, ಸ್ವತ್ತನ್ನು ಪಟ್ಟಣ ಪಂಚಾಯ್ತಿ ಕಾನೂನು ಬದ್ಧವಾಗಿ ತನ್ನ ವಶಕ್ಕೆ ಪಡೆದುಕೊಂಡು, ಹದ್ದುಬಸ್ತು ಮಾಡುವವರೆಗೆ ಅಲ್ಲಿನ ನಿವಾಸಿಗಳಿಂದ ಕಂದಾಯ ವಸೂಲು ಮಾಡಬಾರದು ಎಂದು ಚುನಾಯಿತ ಪ್ರತಿನಿಧಿಗಳು– ಅಧಿಕಾರಿಗಳು ಸೂಚಿಸಿದ್ದರು.ಇದನ್ನು ಧಿಕ್ಕರಿಸಿ, ವೀರಭದ್ರಪ್ಪ ಎಂಬುವವರು ಕಂದಾಯ ವಸೂಲಿ ಮಾಡಿದ್ದಾರೆ. ಹಾಗಾದರೆ, ನಮ್ಮ ಮಾತಿಗೆ ಬೆಲೆ ಇಲ್ಲವೇನು? ಮಾನ–ಪ್ರಾಣ ಪಣಕ್ಕಿಟ್ಟು ನಿವೇಶನ ತೆರವುಗೊಳಿಸಿದ ನಮಗೆ ಇವರು ನೀಡುವ ಬೆಲೆ ಇದೇ ಏನು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಚ್‌.ಬಿ.ಅಣ್ಣಪ್ಪ, ಕೆ.ಪಿ.ಕುಬೇಂದ್ರಪ್ಪ, ಎಚ್‌.ಡಿ.ವಿಜೇಂದ್ರಪ್ಪ, ಚಂದ್ರಶೇಖರ ಪಾಟೀಲ್‌, ಮಲ್ಲೇಶ್‌, ಎಚ್‌.ಡಿ. ಪ್ರಶಾಂತ್‌, ಗುಲ್ಶಿರಾ ಖಾನಂ, ಮಂಜಪ್ಪ ಸರಳಿನಮನೆ, ನಸೀಮಾ ಬಾನು, ಎಸ್‌.ಎನ್‌.ಗಿರೀಶ್‌ ಸೇರಿದಂತೆ ಪಟ್ಟಣ ಪಂಚಾಯ್ತಿಯ ಎಲ್ಲಾ ಸದಸ್ಯರೂ ಇದಕ್ಕೆ ದನಿಗೂಡಿಸಿದರು.ಸದಸ್ಯ ಕೆ.ಪಿ.ಕುಬೇಂದ್ರಪ್ಪ ಮಾತನಾಡಿ, ಅಗಳ ಪ್ರದೇಶದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಿಸಬೇಕು ಎಂದರು. ಸದಸ್ಯ ಎಚ್‌.ಬಿ.ಅಣ್ಣಪ್ಪ ಅವರು ಅಗಳ ಪ್ರದೇಶದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಸಲಹೆ ನೀಡಿದರು. ಸದಸ್ಯ ಮಂಜಪ್ಪ ಸರಳಿನಮನೆ ಮಾತನಾಡಿ, ಎಲ್ಲಕ್ಕೂ ಮೊದಲು ಅಗಳ ಪ್ರದೇಶವನ್ನು ಪಟ್ಟಣ ಪಂಚಾಯ್ತಿ ತನ್ನ ವಶಕ್ಕೆ ಪಡೆದುಕೊಳ್ಳಬೇಕು. ನಂತರ ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚಿಸ ಬಹುದು ಎಂದರು.ಪಟ್ಟಣದ ಅಭಿವೃದ್ಧಿ ಕಾಮಗಾರಿ, ಕುಡಿಯುವ ನೀರಿನ ಪೂರೈಕೆ, ಸ್ವಚ್ಛತೆ ಇತ್ಯಾದಿ ಬಗ್ಗೆ ಸದಸ್ಯರು ವಿಸ್ತೃತ ಚರ್ಚೆ ನಡೆಸಿದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸುಶೀಲಮ್ಮ ದುರುಗಪ್ಪ ಅಧ್ಯಕ್ಷತೆ ವಹಿಸಿದ್ದರು. ಸದಸ್ಯೆಯರಾದ ವಿಜಯಮ್ಮ, ಎಚ್‌.ಬಿ.ವೀಣಾ, ಪಟ್ಟಣ ಪಂಚಾಯ್ತಿ ಸಿಬ್ಬಂದಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry