ಬುಧವಾರ, ಏಪ್ರಿಲ್ 21, 2021
30 °C

ಕಂದಾಯ ವಸೂಲಿ: ಚಿಂತಾಮಣಿ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ನಗರಸಭೆ ಮತ್ತು ಪುರಸಭೆಗಳಲ್ಲಿ ಮನೆ ಕಂದಾಯ ಮತ್ತು ನೀರಿನ ಕಂದಾಯ ವಸೂಲಿಯಲ್ಲಿ ಚಿಂತಾಮಣಿ ನಗರಸಭೆ ಪ್ರಥಮ ಸ್ಥಾನದಲ್ಲಿದೆ ಎಂದು ಶಾಸಕ ಡಾ.ಎಂ.ಸಿ.ಸುಧಾಕರ್ ನಗರಸಭೆಯ ಅಧಿಕಾರಿಗಳನ್ನು ಅಭಿನಂದಿಸಿದರು.ನಗರಸಭೆಯ ಸಾಮಾನ್ಯ ಅಧಿವೇಶನದಲ್ಲಿ ಶಾಸಕರು ಮಾತನಾಡಿ, ಈಚೆಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ನಗರಸಭೆಯ ವಾತಾವರಣ ಬದಲಾಗುತ್ತಿದ್ದು ಅಧಿಕಾರಿಗಳು ತಮ್ಮ ಜಡತ್ವ ತೊರೆದು, ಉತ್ಸಾಹದಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಜನತೆಗೆ ಮೂಲಸೌಲಭ್ಯ ಒದಗಿಸುವಂತೆ ಅವರು ಸೂಚಿಸಿದರು.

 

ಕುಡಿಯುವ ನೀರಿನ ನಿರ್ವಹಣೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ, ಸಭೆಯಲ್ಲಿ ಪ್ರಸ್ತಾಪವಾದ ವಿಷಯಗಳು ಕೇವಲ ದಾಖಲೆಯಲ್ಲಿ ಇರುತ್ತವೆಯೇ  ಹೊರತು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಸದಸ್ಯ ಅಬ್ಬುಗುಂಡು ಶ್ರೀನಿವಾಸರೆಡ್ಡಿ ಮತ್ತಿತರರು ಆರೋಪಿಸಿದರು. ನಗರಸಭೆಯ ಎಲ್ಲ ಅಧಿಕಾರಿಗಳು ಸಭೆಯಲ್ಲಿದ್ದು, ಸದಸ್ಯರು ಪ್ರಸ್ತಾಪಿಸುವ ವಿಷಯಗಳನ್ನು ದಾಖಲಿಸಿಕೊಂಡು, ಮುಂದಿನ ಸಭೆಗಳಲ್ಲಿ ವಿವರ ನೀಡಬೇಕೆಂದು ಶಾಸಕರು ಆದೇಶ ನೀಡಿದರು.

 

ಹೋಟೆಲ್, ಕಲ್ಯಾಣ ಮಂಟಪಗಳು, ನರ್ಸಿಂಗ್‌ಹೋಂ ಮುಂತಾದ ವಾಣಿಜ್ಯ ಸಂಸ್ಥೆಗಳಿಗೆ ಹೆಚ್ಚಿನ ಕರ ವಿಧಿಸುವುದು, ಮೂರು ನಾಲ್ಕು ಮನೆಗಳಿರುವವರು  ಕಾನೂನು ಬದ್ದವಾಗಿ ಎರಡು ಮೂರು ಸಂಪರ್ಕ ಪಡೆಯುವಂತೆ ಸೂಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸ್ವಯಂಘೋಷಿತ ಆಸ್ತಿ ತೆರಿಗೆ ಸಲ್ಲಿಸಲು ಮೇ ಕೊನೆಯವರೆಗೂ ಕಾಲಾವಕಾಶವಿರುತ್ತದೆ ಎಂದು ಪೌರಾಯುಕ್ತರು ತಿಳಿಸಿದರು.

 

ಏಪ್ರಿಲ್‌ನಲ್ಲಿ ಸ್ವಯಂಘೋಷಿತ ಆಸ್ತಿತೆರಿಗೆ ಸಲ್ಲಿಸಿದರೆ ಶೇ.5ರಷ್ಟು ರಿಯಾಯಿತಿ ದೊರೆಯುತ್ತದೆ. ಯಾವುದೇ ದಂಡವಿಲ್ಲದೆ ಮೇನಲ್ಲೂ ಸಲ್ಲಿಸಬಹುದು. ಜೂನ್‌ನಿಂದ ಯಾರೂ ಸ್ವತ: ಫಾರಂ ತುಂಬಿಸುವಂತಿಲ್ಲ, ನಗರಸಭೆ ವತಿಯಿಂದಲೇ ಫಾರಂ ತುಂಬಿಸಿ ನೋಟೀಸ್ ನೀಡಲಾಗುವುದು. ಜತೆಗೆ ಪ್ರತಿ ತಿಂಗಳು ಶೇ.2 ರಷ್ಟು ದಂಡ ವಿಧಿಸಲಾಗುತ್ತದೆ. ಆಸ್ತಿಗಳ ಮಾಲೀಕರು ತೆರಿಗೆ ಪಾವತಿ ಮಾಡಬೇಕು ಎಂದು ಪೌರಾಯುಕ್ತ ರಾಮೇಗೌಡ ಮನವಿ ಮಾಡಿದರು.

 

ಕಂದಾಯ ಜಮೀನುಗಳಲ್ಲಿ ಮನೆ ಕಟ್ಟಿಕೊಂಡಿರುವವರು ಬಡವರಾಗಿದ್ದು ಯಾವುದಾದರೂ ರೀತಿಯಲ್ಲಿ ಕ್ರಮಬದ್ಧ ಮಾಡಿಕೊಡಲು ಅವಕಾಶಇದೆಯೇ ಎಂದು ಸದಸ್ಯ ಪ್ರಕಾಶ್ ಪ್ರಶ್ನಿಸಿದರು.ಅಕ್ರಮ-ಸಕ್ರಮ ಕಾಯಿದೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಸರ್ಕಾರ ನಿರ್ಧಾರ ತೆಗೆದುಕೊಳ್ಳುವವರೆಗೂ ಏನೂ ಮಾಡಲು ಅವಕಾಶಇಲ್ಲ, ಹೆಚ್ಚಿನ ತೆರಿಗೆ ಕಟ್ಟಿಸಿಕೊಳ್ಳಲು ಮಾತ್ರ ಅವಕಾಶವಿದೆ ಎಂದು ಪೌರಾಯುಕ್ತರು ಉತ್ತರ ನೀಡಿದರು.

 

 ನಗರಸಭೆಯ ಅಧ್ಯಕ್ಷೆ ನಾಗರತ್ನಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಚೌಡರೆಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಯ್ಯ ಇದ್ದರು.ಇದೇ ಪ್ರಥಮ ಬಾರಿಗೆ ನಗರಸಭೆಯ ಎಲ್ಲ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದದ್ದು ವಿಶೇಷವಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.