ಕಂದಾಯ ಸಚಿವರ ಮನೆ ಮುಂದೆ ಆಕ್ರೋಶ

7

ಕಂದಾಯ ಸಚಿವರ ಮನೆ ಮುಂದೆ ಆಕ್ರೋಶ

Published:
Updated:
ಕಂದಾಯ ಸಚಿವರ ಮನೆ ಮುಂದೆ ಆಕ್ರೋಶ

ಹರಪನಹಳ್ಳಿ (ದಾವಣಗೆರೆ ಜಿಲ್ಲೆ): ಕಂದಾಯ ಸಚಿವ ಜಿ.ಕರುಣಾಕರ ರೆಡ್ಡಿ ಅವರ ಸ್ಥಳೀಯ ಕಚೇರಿಯ ಆಪ್ತಸಹಾಯಕ ಓಂಕಾರಗೌಡ, ಗ್ರಾ.ಪಂ. ಸದಸ್ಯೆಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ ರೊಚ್ಚಿಗೆದ್ದ ಜನರು, ಸಚಿವರ ಮನೆ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಪಟ್ಟಣದಲ್ಲಿ ಶುಕ್ರವಾರ ನಡೆಯಿತು.ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ತೊಗರಿಕಟ್ಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಉದ್ಗಟ್ಟಿ ದೊಡ್ಡತಾಂಡಾದಲ್ಲಿ ಸ್ಪರ್ಧಿಸಿ ಗೆದ್ದ ದೇಮಿಬಾಯಿ ಎಂಬುವವರು, ‘ಗ್ರಾ.ಪಂ. ಚುನಾವಣೆಯಲ್ಲಿ ಲಕ್ಷಾಂತರ ರೂಗಳನ್ನು ಖರ್ಚು ಮಾಡಿ ಸಾಲ ಮಾಡಿಕೊಂಡಿದ್ದೇವೆ. ಅದನ್ನು ತೀರಿಸುವ ಸಲುವಾಗಿ ಬೇರೆ ಬೇರೆ ಯೋಜನೆಗಳಲ್ಲಿ ಕಾಮಗಾರಿಗೆ ಗುತ್ತಿಗೆ ನೀಡಲು ಸಹಕರಿಸಬೇಕು’ ಎಂದು ಕಂದಾಯ ಸಚಿವರ ಬಳಿ ಕೋರಿಸದರು ಎಂದು ಗ್ರಾಮಸ್ಥರು ತಿಳಿಸಿದರು.ಇದಕ್ಕೆ ಸಚಿವರು ಸಕಾರಾತ್ಮವಾಗಿ ಸ್ಪಂದಿಸಿ, ಆ ಸದಸ್ಯೆಗೆ ತಮ್ಮ ಆಪ್ತಸಹಾಯಕ ಓಂಕಾರಗೌಡ ಅವರನ್ನು ಕಾಣಲು ಸೂಚಿಸಿದರು. ಇವರ ಅಮಾಯಕತೆ ಹಾಗೂ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡ ಆಪ್ತಸಹಾಯಕ ದೂರವಾಣಿಯಲ್ಲಿ ಅಸಭ್ಯವಾಗಿ ವರ್ತಿಸಿದ ಎಂದು ಗ್ರಾಮಸ್ಥರು ಹಾಗೂ ಗ್ರಾ.ಪಂ. ಸದಸ್ಯೆ ಆರೋಪಿಸಿದರು. ಪತಿ ಲಿಂಗ್ಯಾನಾಯ್ಕ ಅವರಿಗೆ ದೇಮಿಬಾಯಿ, ಸಚಿವರ ಆಪ್ತಸಹಾಯಕನ ವರ್ತನೆ ಬಗ್ಗೆ ತಿಳಿಸಿದರು. ಅದಾದ ನಂತರ ದೇಮಿಬಾಯಿ ಮತ್ತು ಅವರ ಪತಿ ಮತ್ತೊಮ್ಮೆ ಓಂಕಾರಗೌಡಗೆ ದೂರವಾಣಿ ಕರೆ ಮಾಡಿ ಸಂಭಾಷಣೆಯನ್ನು ಧ್ವನಿಮುದ್ರಿಸಿಕೊಂಡರು. ಆಪ್ತಸಹಾಯಕನ ಅಸಭ್ಯ ವರ್ತನೆಗೆ ಬೇಸತ್ತ ಯುವಕರು ಹಾಗೂ ಮಹಿಳೆಯರು ಕಂದಾಯ ಸಚಿವರ ಸ್ಥಳೀಯ ಕಚೇರಿ ಮುಂದೆ ದಿಢೀರ್ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.  ಈ ಮಧ್ಯೆ ಪಿಎಸ್‌ಐ ಮಹಾಂತೇಶ್ ಸಜ್ಜನ್ ಮಧ್ಯಪ್ರವೇಶಿಸಿ  ಉದ್ರಿಕ್ತ ಗ್ರಾಮಸ್ಥರನ್ನು ಸಮಾಧಾನಗೊಳಿಸಲು ಮುಂದಾದರು.

 ಆಗ ಗ್ರಾಮಸ್ಥರು ಸಜ್ಜನ್ ಅವರೊಂದಿಗೆ ವಾಗ್ವಾದಕ್ಕಿಳಿದರು. ನಂತರ ಬಿಜೆಪಿಯ ಕೆಲ ಮುಖಂಡರ ರಾಜೀ ಸಂಧಾನಕ್ಕೆ ಮುಂದಾದ ಘಟನೆಯೂ ನಡೆಯಿತು. ಈ ಕುರಿತು ರಾತ್ರಿವರೆಗೆ ಪ್ರಕರಣ ದಾಖಲಾಗಿಲ್ಲ.ಬಂಧನಕ್ಕೆ ಎಡಪಕ್ಷಗಳ ಒತ್ತಾಯ: ಗ್ರಾ.ಪಂ. ಸದಸ್ಯೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಕಂದಾಯ ಸಚಿವರ ಆಪ್ತಸಹಾಯಕ ಓಂಕಾರಗೌಡ ಅವರನ್ನು ಕೂಡಲೇ ಬಂಧಿಸುವಂತೆ ಸಿಪಿಐ(ಎಂಎಲ್) ಹಾಗೂ ಅಖಿಲ ಭಾರತ ಕಿಸಾನ್ ಸಭಾ ಸಂಘಟನೆಗಳೂ ಒತ್ತಾಯಿಸಿವೆ.ಈ ಬಗ್ಗೆ ಹೇಳಿಕೆ ನೀಡಿರುವ ಸಂಘಟನೆ ಮುಖಂಡರು, ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ, ಅದರಲ್ಲೆಲ್ಲೂ ಗ್ರಾ.ಪಂ. ಸದಸ್ಯೆಗೆ ಲೈಂಗಿಕ ತೃಷೆ ತೀರಿಸಿಕೊಳ್ಳಲು ಒತ್ತಾಯಿಸಿದ್ದಾರೆ.ಈ ಹಿಂದೆ ತಾಲ್ಲೂಕಿನಾದ್ಯಂತ ಅನೇಕ ಹಗರಣಗಳಲ್ಲಿ ಭಾಗಿಯಾಗಿರುವುದಲ್ಲದೆ ಮಹಿಳೆಯರಿಗೆ ಈ ರೀತಿ ಕಿರುಕುಳ ನೀಡಿರುವ ಶಂಕೆ ಇರುವುದರಿಂದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸುವಂತೆ ಸಂಘಟನೆಯ ಮುಖಂಡರಾದ ಇದ್ಲಿ ರಾಮಪ್ಪ, ಹೊಸಳ್ಳಿ ಮಲ್ಲೇಶ್, ಸಂದೇರ್ ಪರಶುರಾಮ ಇತರರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry