ಕಂದಾಯ ಸಿಬ್ಬಂದಿ ಪ್ರತಿಭಟನೆ ನಿಲ್ಲಿಸಲು ಆಗ್ರಹ

7

ಕಂದಾಯ ಸಿಬ್ಬಂದಿ ಪ್ರತಿಭಟನೆ ನಿಲ್ಲಿಸಲು ಆಗ್ರಹ

Published:
Updated:

ರಾಮನಗರ: ಅಮಾನತುಗೊಂಡಿರುವ ಕಂದಾಯ ಇಲಾಖೆ ಸಿಬ್ಬಂದಿ ಪರವಾಗಿ ಪ್ರತಿಭಟನೆ ಮಾಡುತ್ತಾ ಸಾರ್ವಜನಿಕರ ಕೆಲಸಗಳಿಗೆ ಅಡಚಣೆ ಉಂಟು ಮಾಡುತ್ತಿರುವ ಕಂದಾಯ ಅಧಿಕಾರಿಗಳು ತಕ್ಷಣ ಪ್ರತಿಭಟನೆ ನಿಲ್ಲಿಸಿ ಕೆಲಸಕ್ಕೆ ಹಾಜರಾಗುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಬಿ.ಶ್ರೀಧರ್ ಹೊಸೂರು ಆಗ್ರಹಿಸಿದ್ದಾರೆ.ಈಗಲ್‌ಟನ್ ರೆಸಾರ್ಟ್ ಭೂಹಗರಣದಲ್ಲಿ ಸಿಲುಕಿರುವ ಆರು ಕಂದಾಯ ಅಧಿಕಾರಿಗಳನ್ನು ಸರ್ಕಾರದ ಆದೇಶದಂತೆ ಅಮಾನತುಗೊಳಿಸಲಾಗಿದೆ. ಇದನ್ನು ವಿರೋಧಿಸಿ ಜಿಲ್ಲಾ ಕಂದಾಯ ಇಲಾಖೆ ಸಿಬ್ಬಂದಿ ಎರಡು ದಿನ ನಿರಂತರವಾಗಿ ಕೆಲಸಕ್ಕೆ ಗೈರು ಹಾಜರಾಗಿ ಪ್ರತಿಭಟನೆ ನಡೆಸುತ್ತ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದು ಸರಿಯಲ್ಲ ಎಂದು ಅವರು ದೂರಿದ್ದಾರೆ. ಈ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿ ಅರ್ಚನಾ ಅವರಿಗೆ ಬುಧವಾರ ಮನವಿ ಪತ್ರವನ್ನೂ ನೀಡಿದ್ದಾರೆ.ಈ ಭೂ ಹಗರಣದಲ್ಲಿ ಅಮಾನತುಗೊಂಡಿರುವ ಅಧಿಕಾರಿಗಳು ತಮಗೆ ಅನ್ಯಾಯವಾಗಿದ್ದರೆ ಕೋರ್ಟ್‌ನಲ್ಲಿ ಪ್ರಶ್ನಿಸಿ ನ್ಯಾಯ ದೊರಕಿಸಿಕೊಳ್ಳಲಿ. ಅದನ್ನು ಬಿಟ್ಟು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತಡೆ ಉಂಟುಮಾಡಿ ವಿನಾಕಾರಣ ಪ್ರತಿಭಟನೆಗೆ ಕುಳಿತಿರುವುದು ಖಂಡನೀಯ ಎಂದು ಅವರು ಟೀಕಿಸಿದ್ದಾರೆ.ಅಮಾನತು ಗೊಂಡಿರುವ ಅಧಿಕಾರಿಗಳ ಪರವಾಗಿ ಇಲಾಖೆಯ ಎಲ್ಲಾ ಅಧಿಕಾರಿಗಳು ಕೆಲಸ ಕಾರ್ಯಗಳನ್ನು ಮಾಡದೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಪಾಲಿಸಿರುವ ರಾಜ್ಯ ಸರ್ಕಾರದ ವಿರುದ್ಧ ಧರಣಿ ನಡೆಸುತ್ತಿರುವ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು.

ಪ್ರತಿಭಟನೆಯ ಅವಧಿಯಲ್ಲಿ ಅವರಿಗೆ ವೇತನ ತಡೆಹಿಡಿಯಬೇಕು. ಪ್ರತಿಭಟನೆಯನ್ನು ಇನ್ನೂ ಮುಂದುವರಿಸಿದರೆ ಪಾಲ್ಗೊಂಡಿರುವ ಎಲ್ಲಾ ಅಧಿಕಾರಿಗಳನ್ನು ಅಮಾನತುಪಡಿಸಬೇಕು ಎಂದು ರಾಮನಗರ ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಮನವಿ ಪತ್ರದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry