ಕಂದು ರೋಗ: ಇರಲಿ ಎಚ್ಚರ

7

ಕಂದು ರೋಗ: ಇರಲಿ ಎಚ್ಚರ

Published:
Updated:

ಪಶುಣಿಗಳಿಗೆ ಬರುವ ಕಾಯಿಲೆಗಳೇ ಬೇರೆ, ಮನುಷ್ಯರಿಗೆ ಬರುವ ಕಾಯಿಲೆಗಳೇ ಬೇರೆ. ಆದರೆ ಕೆಲವೊಂದು ಕಾಯಿಲೆಗಳು ಪ್ರಾಣಿಗಳಿಂದ ಮನುಷ್ಯನಿಗೆ ಹರಡಿ ಮನುಷ್ಯನ ಜೀವನವನ್ನು ನರಕ ಮಾಡಿಬಿಡುತ್ತವೆ. ಇದೇ ಪ್ರಾಣಿಜನ್ಯ ರೋಗ.

ನೂರಕ್ಕೂ ಹೆಚ್ಚು ಪ್ರಾಣಿಜನ್ಯ ರೋಗಗಳು ವನ್ಯ ಹಾಗೂ ಸಾಕು ಪ್ರಾಣಿಗಳಿಂದ ಮನುಷ್ಯನಿಗೆ ಹರಡುತ್ತವೆ. ಅವುಗಳಲ್ಲಿ ಒಂದು ಕಂದು ರೋಗ.

ಏನಿದು ರೋಗ

ಕಂದು ರೋಗಕ್ಕೆ ವೈಜ್ಞಾನಿಕ ಹೆಸರು ಬ್ರುಸೆಲ್ಲೋಸಿಸ್. ಬ್ರುಸೆಲ್ಲಾ ಅಬಾರ್ಟಸ್ ಎಂಬ ಬ್ಯಾಕ್ಟೀರಿಯಾ ಸೋಂಕಿನಿಂದ ಹರಡುತ್ತದೆ. ಪ್ರಾಣಿಗಳು ಒಮ್ಮೆ ಈ ರೋಗಕ್ಕೆ ತುತ್ತಾದರೆ ಜೀವನ ಪೂರ್ತಿ ನರಳುತ್ತವೆ. ಈ ರೋಗವಿದ್ದ ಹಸು, ಎಮ್ಮೆ, ಕುರಿ, ಮೇಕೆ, ಕುದುರೆ, ಹಂದಿ ಮತ್ತು ನಾಯಿ ಗರ್ಭದ ಕೊನೆಯ ತ್ರೈಮಾಸಿಕ ಹಂತದಲ್ಲಿ ಕಂದು ಹಾಕುತ್ತವೆ.ಮೇಲಿಂದ ಮೇಲೆ ಜ್ವರ ಬರುವುದು ಕಂದು ರೋಗದ ಮುಖ್ಯ ಲಕ್ಷಣ. ತಲೆನೋವು, ನಿರುತ್ಸಾಹ, ಮಾಂಸ ಖಂಡ ಹಾಗೂ ಸಂದುಗಳ ನೋವು, ನಿದ್ರಾಹೀನತೆ ಮತ್ತು ಹಸಿವಾಗದಿರುವುದು ಇದರ ಪ್ರಮುಖ ಲಕ್ಷಣ.ಇಂತಹ ಲಕ್ಷಣಗಳು ಕಾಣಿಸಿಕೊಂಡಾಗ ತಕ್ಷಣಕ್ಕೆ ವೈದ್ಯರನ್ನು ಸಂಪರ್ಕಿಸಿ ರಕ್ತ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ನಿರ್ಲಕ್ಷ್ಯ ಮಾಡಿದರೆ ರೋಗ ಲಕ್ಷಣಗಳು ಉಲ್ಬಣಗೊಂಡು ರಕ್ತನಾಳಗಳ ಉರಿಯೂತ, ವೃಷಣ ನಾಳಗಳ ಉರಿಯೂತ, ಮೊಣಕಾಲು, ಭುಜ, ಬೆನ್ನು ಮೊಳೆ ಮತ್ತು ಸೊಂಟದ ಸಂದುಗಳ ಉರಿಯೂತ ಕಾಣಿಸಿಕೊಳ್ಳುವುದು. ರೋಗಕ್ಕೆ ತುತ್ತಾದ ಪುರುಷರಲ್ಲಿ ವೃಷಣ ನಾಳಗಳ ಉರಿಯೂತ ಕಾಣಿಸಿಕೊಂಡು ಸಂತಾನಹೀನತೆಯಿಂದ ಬಳಲಿದರೆ, ಬಸಿರು ಹೆಂಗಸರಲ್ಲಿ ಅಕಾಲ ಜನನ ಅಥವಾ ಗರ್ಭಪಾತವಾಗುವುದು.ಹೀಗೆ ಹರಡುತ್ತವೆ

ಕಂದು ರೋಗ ಹರಡಲು ಮುಖ್ಯ ಕಾರಣ ಕಾಯಿಸದೆ ಕುಡಿಯುವ ಹಾಲು. ತಾಯಿಯ ಎದೆ ಹಾಲಿನಿಂದ ಮಗುವಿಗೂ ಈ ರೋಗ ಬರುವ ಸಾಧ್ಯತೆ ಇದೆ. ಇದರ ಜೊತೆ ಕಲುಷಿತ ಆಹಾರ, ನೀರು, ಗಾಳಿಯಿಂದ, ಉಸಿರಾಟ ಹಾಗೂ ಕಣ್ಣಿನ ಶ್ಲೇಷ್ಮ ಪೊರೆ ಮೂಲಕ ಮತ್ತು ಗಾಯದ ಮೂಲಕ ಕೂಡ ಸೋಂಕು ತಗುಲಿದ ಉದಾಹರಣೆಗಳಿವೆ.ರೈತರು, ಕುರಿಗಾರರು, ಪಶುವೈದ್ಯರು, ಕಸಾಯಿಖಾನೆ ಹಾಗೂ ಮಾಂಸದಂಗಡಿ ಕಾರ್ಮಿಕರು ನೇರವಾಗಿ ರೋಗಗ್ರಸ್ತ ಪ್ರಾಣಿಗಳ ಸಂಪರ್ಕಕ್ಕೆ ಬರುವುದರಿಂದ ಈ ವರ್ಗದ ಜನರಲ್ಲಿ ಕಂದು ರೋಗ ಸೋಂಕು ತಗಲುವ ಸಾಧ್ಯತೆ ಹೆಚ್ಚು.

ಮುನ್ನೆಚ್ಚರಿಕೆ ಹೀಗಿರಲಿ

ರೋಗ ತಡೆಗಟ್ಟಲು ಮತ್ತು ಹತೋಟಿಯಲ್ಲಿಡಲು ರೈತರು  ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜಾನುವಾರುಗಳ ರಕ್ತ ಪರೀಕ್ಷೆ ಮತ್ತು ರೋಗಗ್ರಸ್ತ ಜಾನುವಾರುವನ್ನು ಆರೋಗ್ಯವಂತ ಜಾನುವಾರುಗಳಿಂದ ಬೇರ್ಪಡಿಸುವುದು ಅತಿ ಮುಖ್ಯ.

ರೋಗಗ್ರಸ್ತ ಎಮ್ಮೆ, ಆಡು, ಕುರಿಗಳನ್ನು ದಯಾಮರಣಕ್ಕೆ ಒಳಪಡಿಸುವುದು ಸೂಕ್ತ. ಆರು ತಿಂಗಳ ಹಸು ಮತ್ತು ಎಮ್ಮೆ ಕರುಗಳಿಗೆ ಬ್ರುಸೆಲ್ಲಾ ಲಸಿಕೆ ಕಡ್ಡಾಯವಾಗಿ ಹಾಕಿಸಬೇಕು. ಕಸಾಯಿಖಾನೆ ಮತ್ತು ಮಾಂಸದಂಗಡಿಯಲ್ಲಿ ಕೆಲಸ ಮಾಡುವವರು ಸ್ವಚ್ಛತೆಯತ್ತ ಗಮನ ಹರಿಸಬೇಕು.ಇವೆಲ್ಲವುಗಳಿಗಿಂತ ಮುಖ್ಯವಾಗಿ ಪಟ್ಟಣಗಳಲ್ಲಿ ವಾಸಿಸುವ ಜನರ ಆರೋಗ್ಯ ಹಳ್ಳಿಗಳಲ್ಲಿ ರೈತರು ಬೆಳೆಯುವ ಆಹಾರ ಧಾನ್ಯ, ಹಣ್ಣು, ತರಕಾರಿ ಮತ್ತು ಜಾನುವಾರು ಹಾಗೂ ಅವುಗಳ ಉತ್ಪನ್ನಗಳ ಗುಣಮಟ್ಟ ಮತ್ತು ಸ್ವಚ್ಛತೆಯ ಮೇಲೆ ಅವಲಂಬಿಸಿದೆ ಎಂಬುದು ವಾಸ್ತವ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry