ಕಂಪನಿಗಳಿಗೆ ಭೂಮಿ ಹಸ್ತಾಂತರಕ್ಕೆ ರೈತರ ವಿರೋಧ

7

ಕಂಪನಿಗಳಿಗೆ ಭೂಮಿ ಹಸ್ತಾಂತರಕ್ಕೆ ರೈತರ ವಿರೋಧ

Published:
Updated:
ಕಂಪನಿಗಳಿಗೆ ಭೂಮಿ ಹಸ್ತಾಂತರಕ್ಕೆ ರೈತರ ವಿರೋಧ

ಬೆಂಗಳೂರು: `ಸರ್ಕಾರ, ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಕಂಪೆನಿಗಳಿಗೆ ಹಸ್ತಾಂತರಿಸುತ್ತಿದೆ~ ಎಂದು ಆರೋಪಿಸಿ ರೈತ ಸಂಘಟನೆಗಳು ನಗರದಲ್ಲಿ ಸೋಮವಾರ ಪ್ರತಿಭಟನಾ ಜಾಥಾ ನಡೆಸಿದರು.ಹಲವು ಜಿಲ್ಲೆಗಳ ರೈತರು, ಕೂಲಿಕಾರರು ಜಾಥಾದಲ್ಲಿ ಪಾಲ್ಗೊಂಡಿದ್ದರು. ನಗರ ರೈಲು ನಿಲ್ದಾಣದಿಂದ ಜಾಥಾ ಆರಂಭಿಸಿದ ಪ್ರತಿಭಟನಾಕಾರರು ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ಕುಳಿತರು. ರಾಜ್ಯ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, `ಕೃಷಿಯಿಂದ ಬೇಸತ್ತಿರುವ ರೈತರು ಇಂದು ಉದ್ಯೋಗ ಅರಸಿ ನಗರಕ್ಕೆ ಹೋಗುತ್ತಿದ್ದಾರೆ.ಇಂತಹ ಪರಿಸ್ಥಿತಿಗಾಗಿ ಕಾದು ಕುಳಿತಿದ್ದ ಬಹುರಾಷ್ಟ್ರೀಯ ಕಂಪೆನಿಗಳು ಸರ್ಕಾರದ ಮೇಲಿನ ತಮ್ಮ ಪ್ರಭಾವವನ್ನು ಬಳಸಿಕೊಂಡು ರೈತರ ಭೂಮಿಯನ್ನು ಕಿತ್ತುಕೊಳ್ಳಲು ಆರಂಭಿಸಿವೆ. ಕಂಪೆನಿಗಳ ಅನುಕೂಲಕ್ಕಾಗಿ ಭೂ ಸುಧಾರಣಾ ಕಾನೂನನ್ನೇ ತಿದ್ದುಪಡಿ ಮಾಡಿರುವ ಸರ್ಕಾರ, ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದೆ~ ಎಂದು ಆರೋಪಿಸಿದರು.`ರೈತರು ಹಾಗೂ ಕೃಷಿ ಕೂಲಿಕಾರರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ಸೌಜನ್ಯಕ್ಕಾದರೂ ಮುಖ್ಯಮಂತ್ರಿಗಳು ನಮ್ಮಡನೆ ಮಾತನಾಡಲಿಲ್ಲ. ಕೂಡಲೇ ಭೂ ಮಿತಿ ಕಾಯ್ದೆಯನ್ನು ಜಾರಿಗೆ ತಂದು ಭೂಮಾಲೀಕರ ವಶದಲ್ಲಿರುವ ಹೆಚ್ಚುವರಿ ಭೂಮಿಯನ್ನು ಭೂರಹಿತ ರೈತರಿಗೆ ನೀಡಬೇಕು~ ಎಂದರು.ರಾಜ್ಯ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ನಿತ್ಯಾನಂದಸ್ವಾಮಿ ಮಾತನಾಡಿ `ರಾಜ್ಯದ 150ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಆವರಿಸಿದ್ದು, ಬರನಿರ್ವಹಣೆಗೆ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೆಲವೆಡೆ ಅಲ್ಪಸ್ವಲ್ಪ ಮಳೆಯಾಗಿದ್ದರೂ ಶುದ್ಧ ಕುಡಿಯುವ ನೀರಿಲ್ಲದೆ ಗ್ರಾಮೀಣ ಜನತೆ ಪರದಾಡುತ್ತಿದ್ದಾರೆ.ಮೇವಿನ ಕೊರತೆ ಹಿನ್ನೆಲೆಯಲ್ಲಿ ರೈತರು ಅಗ್ಗದ ಬೆಲೆಗೆ ದನಕರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಬೆಳೆಹಾನಿ, ಬೆಲೆಕುಸಿತದಿಂದ ಈಗಾಗಲೇ ತತ್ತರಿಸಿರುವ ರೈತರು ಬಿತ್ತನೆ ಬೀಜ, ಗೊಬ್ಬರ, ಕ್ರಿಮಿನಾಶಕಗಳ ಬೆಲೆ ಏರಿಕೆಯಿಂದ ದಿಕ್ಕು ತೋಚದಂತಾಗಿದ್ದಾರೆ. ಮಾನವೀಯತೆ ದೃಷ್ಟಿಯಿಂದಾದರೂ ಸರ್ಕಾರ ಬರಪೀಡಿತ ಪ್ರದೇಶಗಳ ಕಡೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.ಮಿತಿ ತೆಗೆದು ಹಾಕಿ: `ಬೆಂಗಳೂರು ನಗರ ಪಾಲಿಕೆಯಿಂದ 18 ಕಿ.ಮೀ, ಇತರ ನಗರ ಪಾಲಿಕೆಗಳಿಂದ 10 ಕಿ.ಮೀ, ನಗರಸಭೆಗಳಿಂದ ಐದು ಕಿ.ಮೀ ಹಾಗೂ ಪುರಸಭೆಗಳಿಂದ ಮೂರು ಕಿ.ಮೀ ವ್ಯಾಪ್ತಿಯೊಳಗೆ ಬರುವ ಯಾವುದೇ ಬಗರ್‌ಹುಕ್ಕುಂ ಸಾಗುವಳಿಯನ್ನು ಸಕ್ರಮಗೊಳಿಸಲಾಗುವುದಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಬಡ ಕುಟುಂಬಗಳು ತಾವು ಅವಲಂಬಿಸಿಕೊಂಡಿರುವ ತುಂಡು ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿವೆ. ಆದ್ದರಿಂದ ಈ ಮಿತಿಯನ್ನು ತೆಗೆದು ಹಾಕಲು ಸರ್ಕಾರ ಕ್ರಮ ಕೈಗೊಳ್ಳಬೇಕು~ ಎಂದು ಆಗ್ರಹಿಸಿದರು.ನಿವೇಶನ ನೀಡಬೇಕು: `ರಾಜ್ಯದ ಎಲ್ಲಾ ವಸತಿರಹಿತ ಬಡ ಕುಟುಂಬಗಳ ಸಮೀಕ್ಷೆ ಮಾಡಿ ಅವರಿಗೆ ನಿವೇಶನ ನೀಡಬೇಕು ಹಾಗೂ ಮನೆ ಕಟ್ಟಲು ಸಬ್ಸಿಡಿ ಸಹಿತ ಸಾಲ ನೀಡುವಂತಹ ಸಮಗ್ರ ಯೋಜನೆ ಜಾರಿ ಮಾಡಬೇಕು. ಈಗಾಗಲೇ ಸಣ್ಣಪುಟ್ಟ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿರುವ ಬಡವರ ಅನಧಿಕೃತ ನಿವೇಶನಗಳನ್ನು ಸಕ್ರಮಗೊಳಿಸಿ ಅವರಿಗೆ ಹಕ್ಕುಪತ್ರ ನೀಡಬೇಕು~ ಎಂದು ಮನವಿ ಮಾಡಿದರು.`2006ರ ಅರಣ್ಯ ಹಕ್ಕುಗಳ ಕಾಯ್ದೆಯನ್ನು ಜಾರಿಗೆ ತರಲು ಸರ್ಕಾರ ಆಸಕ್ತಿ ತೋರುತ್ತಿಲ್ಲ. ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ, ಚಾಮರಾಜನಗರ, ಕೊಡಗು, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳ ಆದಿವಾಸಿ ಹಾಗೂ ಇತರ ಅರಣ್ಯ ವಾಸಿಗಳಿಂದ ಸರ್ಕಾರ 1.63 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದೆ. ಆದರೆ, ಕೇವಲ 6,073 ಅರ್ಜಿಗಳನ್ನು ಮಾತ್ರ ಅಂಗೀಕರಿಸಿ 8503 ಎಕರೆ ಅರಣ್ಯ ಭೂಮಿಯನ್ನು ವಿತರಿಸಲಾಗಿದ್ದು ಉಳಿದ ಅರ್ಜಿಗಳನ್ನು ತಿರಸ್ಕರಿಸಿದೆ~ ಎಂದರು.ಸಚಿವರ ಭೇಟಿ: ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಎ.ರಾಮದಾಸ್ ಅವರು ಸ್ಥಳಕ್ಕೆ ಭೇಟಿ ನೀಡಿ, ಜೂ.15ರಂದು ಸಭೆ ಕರೆದು ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಧರಣಿಯನ್ನು ಅಂತ್ಯಗೊಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry