ಶುಕ್ರವಾರ, ನವೆಂಬರ್ 15, 2019
26 °C

ಕಂಪಿಸಿದ ಉತ್ತರ ಭಾರತ, ಮಗು ಸಾವು

Published:
Updated:

ನವದೆಹಲಿ: ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮಂಗಳವಾರ ಭೂಮಿ ಲಘುವಾಗಿ ಕಂಪಿಸಿತು. ಅಸ್ಸಾಂನಲ್ಲಿ ಮಣ್ಣು ಕುಸಿದು ಎಂಟು ವರ್ಷದ ಮಗುವೊಂದು ಸಾವಿಗೀಡಾಯಿತು.ಗುಜರಾತ್, ಅಸ್ಸಾಂ, ಅರುಣಾಚಲ ಪ್ರದೇಶ, ಒಡಿಶಾ, ರಾಜಸ್ತಾನಗಳಲ್ಲಿ ಭೂಕಂಪನವಾಯಿತು. ಅರುಣಾಚಲ ಪ್ರದೇಶದಲ್ಲಿ ಮಧ್ಯಾಹ್ನ 2.04 ಗಂಟೆಗೆ ರಿಕ್ಟರ್‌ನಲ್ಲಿ 5ರಷ್ಟು ತೀವ್ರತೆಯ ಕಂಪನ ಸಂಭವಿಸಿತು. ಅಸ್ಸಾಂನಲ್ಲಿ ಎರಡು ಬಾರಿ ಭೂಮಿ ಕಂಪಿಸಿದ ನಂತರ ಮಣ್ಣು ಕುಸಿದು ಮಗು ಮೃತವಾಗಿರುವುದನ್ನು ಹೊರತುಪಡಿಸಿ ಬೇರಾವುದೇ ಸಾವು, ಆಸ್ತಿ ಹಾನಿಯ ವರದಿಯಾಗಿಲ್ಲ.ದೆಹಲಿ, ಗುಡಗಾಂವ್, ನೊಯಿಡಾ, ಜೈಪುರ, ಚಂಡೀಗಡ, ಪಂಜಾಬ್, ಹರಿಯಾಣ ಸೇರಿದಂತೆ ಹಲವೆಡೆ ಕಂಪನ ಅನುಭವಕ್ಕೆ ಬಂತು. ರಾಜಧಾನಿ ದೆಹಲಿಯಲ್ಲಿ ಗಗನಚುಂಬಿ ಕಟ್ಟಡಗಳಿಂದ ಜನ ಹೊರಕ್ಕೆ ದೌಡಾಯಿಸಿದರು. ಭೂಕಂಪ ವಲಯ ನಕ್ಷೆಯ ಪ್ರಕಾರ ದೆಹಲಿಯು ಸಂಭವನೀಯ ತೀವ್ರ ಭೂಕಂಪ ಪೀಡಿತ ಪ್ರದೇಶದ್ಲ್ಲಲಿದೆ. ಇಲ್ಲಿ ಹೋದ ಜೂನ್ 19ರಂದು 3.8ರಷ್ಟು ರಿಕ್ಟರ್ ತೀವ್ರತೆಯ ಭೂಕಂಪನವಾಗಿತ್ತು. ನೆರೆಯ ಹರಿಯಾಣದಲ್ಲಿ ಹೋದ ಮಾರ್ಚ್ 5ರಂದು 4.9ರಷ್ಟು ರಿಕ್ಟರ್ ತೀವ್ರತೆಯ ಭೂಕಂಪವಾಗಿತ್ತು.`ಅಣು ಸ್ಥಾವರ ಸುರಕ್ಷಿತ'

ಉತ್ತರ ಭಾರತದಲ್ಲಿನ ಲಘು ಭೂಕಂಪನ ಹಾಗೂ ಇರಾನ್- ಪಾಕಿಸ್ತಾನ ಗಡಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಿಂದ ರಾಷ್ಟ್ರದ ಪರಮಾಣು ಸ್ಥಾವರಗಳ ಮೇಲೆ ಯಾವ ದುಷ್ಪರಿಣಾಮವೂ ಆಗಿಲ್ಲ. ಗುಜರಾತ್, ಉತ್ತರ ಪ್ರದೇಶ, ರಾಜಸ್ತಾನ ಸೇರಿದಂತೆ ವಿವಿಧೆಡೆ ಇರುವ  ಸ್ಥಾವರಗಳು ಸುರಕ್ಷಿತವಾಗಿವೆ ಎಂದು ಭಾರತೀಯ ಪರಮಾಣು ವಿದ್ಯುತ್ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ನಳಿನೀಶ್ ನಗಾಯಿಚ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)