ಕಂಪೆನಿಗಳಿಗೆ ಕೃಷಿ ಭೂಮಿ; ನಿರ್ಧಾರ

7

ಕಂಪೆನಿಗಳಿಗೆ ಕೃಷಿ ಭೂಮಿ; ನಿರ್ಧಾರ

Published:
Updated:

ಬೆಂಗಳೂರು: ಭೂಮಿಯನ್ನು ಕೃಷಿ ಆಧಾರಿತ ಕಂಪೆನಿಗಳಿಗೆ ಗೇಣಿ ರೂಪದಲ್ಲಿ ನೀಡಲು ರೈತರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 1974ರ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿದೆ.

ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಸಚಿವ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿದೆ.

 

ತಿದ್ದುಪಡಿ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಕೃಷಿ ಭೂಮಿಯನ್ನು ಖಾಸಗಿ ಕಂಪೆನಿಗಳಿಗೆ ಗೇಣಿ ಆಧಾರದ ಅಡಿ (ನಿರ್ವಹಣಾ ಬೇಸಾಯ ಪದ್ಧತಿ) ನೀಡುವ ಚಿಂತನೆ ಕಳೆದ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ `ಜಾಗತಿಕ ಕೃಷಿ ವಾಣಿಜ್ಯ ಮತ್ತು ಆಹಾರ ಸಂಸ್ಕರಣಾ ಸಮ್ಮೇಳನ~ದಲ್ಲಿ ನಡೆದಿತ್ತು.ಪ್ರಸ್ತುತ ಜಾರಿಯಲ್ಲಿವ ಭೂಸುಧಾರಣಾ ಕಾಯ್ದೆ ಅನ್ವಯ ಕೃಷಿ ಭೂಮಿಯನ್ನು ಗೇಣಿ ಆಧಾರದಲ್ಲಿ ನೀಡುವಂತಿಲ್ಲ. ಕಾಯ್ದೆಗೆ ತಿದ್ದುಪಡಿ ತಂದ ನಂತರ ಕೃಷಿ ಆಧಾರಿತ ಕಂಪೆನಿಗಳಿಗೆ ತಮ್ಮ ಭೂಮಿಯನ್ನು ನಿರ್ದಿಷ್ಟ ಅವಧಿಗೆ ಗೇಣಿ ನೀಡಲು ರೈತರಿಗೆ ಸಾಧ್ಯವಾಗುತ್ತದೆ. ಕೃಷಿ ಭೂಮಿಯಲ್ಲಿ ಬೆಳೆ ಬೆಳೆಯುವ ಮತ್ತು ಕಟಾವು ಮಾಡುವ ಜವಾಬ್ದಾರಿ ಕಂಪೆನಿಯ ಹೆಗಲೇರುತ್ತದೆ. ಅಲ್ಲದೆ, ಕಂಪೆನಿಗಳು ಕೃಷಿ ಭೂಮಿಯ ಉತ್ಪಾದಕತೆ ಹೆಚ್ಚಿಸಲು ಉನ್ನತ ತಂತ್ರಜ್ಞಾನದ ಮೊರೆ ಹೋಗಬೇಕಾಗುತ್ತದೆ. ಭೂಮಿಯ ಮಾಲೀಕತ್ವ ರೈತರ ಬಳಿಯೇ ಇರುತ್ತದೆ. ಕಂಪೆನಿಯಿಂದ ನಿಗದಿತವಾಗಿ ಬಾಡಿಗೆ ಪಡೆಯುವ ಅಧಿಕಾರವೂ ಇದೆ.`ಭೂಸುಧಾರಣಾ ಕಾಯ್ದೆಯ 2 ಮತ್ತು 107ನೇ ಸೆಕ್ಷನ್‌ಗೆ ತಿದ್ದುಪಡಿ ತರಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಕೃಷಿ ಚಟುವಟಿಕೆಯನ್ನು ಮರುವ್ಯಾಖ್ಯಾನಿಸಲು ಮತ್ತು ಭೂಮಿಯನ್ನು ಗೇಣಿ ಆಧಾರದ ಮೇಲೆ ನೀಡಲು ಸಾಧ್ಯವಾಗುತ್ತದೆ~ ಎಂದು ಕೃಷಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಾ.ಜಿ.ಕೆ. ವಸಂತಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.ಕೃಷಿ ಆಧಾರಿತ ಕೈಗಾರಿಕೆಗಳು, ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕಗಳು ಮತ್ತು ಕೊಯ್ಲೋತ್ತರ ಕಾರ್ಯಗಳನ್ನು ಕೃಷಿ ಚಟುವಟಿಕೆಯ ಭಾಗ ಎಂದು ಪರಿಗಣಿಸಲು ಅನುವಾಗುವಂತೆ ಕಾಯ್ದೆಯಲ್ಲಿ ತಿದ್ದುಪಡಿ ತರಲಾಗುತ್ತದೆ. ಬೆಳೆ ಬೆಳೆಯುವುದು, ಹೈನುಗಾರಿಕೆ, ಕೋಳಿ ಸಾಕಣೆ ಮುಂತಾದವುಗಳು ಮಾತ್ರ ಕೃಷಿ ಚಟುವಟಿಕೆಗಳು ಎಂದು ಈಗ ಜಾರಿಯಲ್ಲಿರುವ ಕಾಯ್ದೆ ಹೇಳುತ್ತದೆ.ರೈತರಿಂದ ಪಡೆದುಕೊಂಡ ಭೂಮಿಯನ್ನು ಕೃಷಿ ಆಧಾರಿತ ಕೈಗಾರಿಕೆಯಲ್ಲಿ ಪಾಲು ಬಂಡವಾಳ ಎಂದು ಪರಿಗಣಿಸಲೂ ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ವಸಂತಕುಮಾರ್ ತಿಳಿಸಿದರು.

ನಿರ್ವಹಣಾ (ಮ್ಯಾನೇಜ್‌ಮೆಂಟ್) ಬೇಸಾಯ ಪದ್ಧತಿಯಲ್ಲಿ ಬೆಳೆ ಬೆಳೆಯುವ ಮತ್ತು ಕೊಯ್ಲು ಮಾಡುವ ಜವಾಬ್ದಾರಿ ಕಂಪೆನಿಯದ್ದಾಗಿರುತ್ತದೆ.

 

ಆದರೆ ಗುತ್ತಿಗೆ ಬೇಸಾಯ ಪದ್ಧತಿಯಲ್ಲಿ (ಕಾಂಟ್ರಾಕ್ಟ್ ಫಾರ್ಮಿಂಗ್) ರೈತರು ತಮ್ಮ ಜಮೀನಿನಲ್ಲಿ ನಿರ್ದಿಷ್ಟ ಬೆಳೆ ಬೆಳೆದು, ಒಪ್ಪಂದ ಮಾಡಿಕೊಂಡ ಕಂಪೆನಿಗೆ ಕಡ್ಡಾಯವಾಗಿ ಮಾರಾಟ ಮಾಡಬೇಕು.

ಕೃಷಿಯ ಆಧುನೀಕರಣದ ಹೆಸರಿನಲ್ಲಿ ಸರ್ಕಾರ ಖಾಸಗಿ ಕಂಪೆನಿಗಳಿಗೆ ಅನುಕೂಲವಾಗುವ ನೀತಿ ಅನುಸರಿಸುತ್ತಿದೆ ಎಂಬ ಕೂಗು ರೈತರಿಂದ ಕೇಳಿಬರುತ್ತಿರುವ ಸಂದರ್ಭದಲ್ಲೇ ಈ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry