ಸೋಮವಾರ, ಅಕ್ಟೋಬರ್ 21, 2019
26 °C

ಕಂಪೆನಿಗಳ ವಿರುದ್ಧ ದೂರು ದಾಖಲು, ಎಚ್ಚರಿಕೆ

Published:
Updated:

ಬೆಂಗಳೂರು: `ಅಂಗವಿಕಲರಿಗೆ ಕನಿಷ್ಟ ವೇತನಕ್ಕಿಂತ ಕಡಿಮೆ ವೇತನ ನೀಡುತ್ತಿರುವ ಕಂಪೆನಿಗಳ ವಿರುದ್ಧ ದೂರು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು~ ಎಂದು ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಎಚ್ಚರಿಸಿದರು.ನಗರದಲ್ಲಿ ಬುಧವಾರ ನಡೆದ ಬೆಂಗಳೂರು ಕಿವುಡರ ಸಂಘದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, `ಅಂಗವಿಕಲ ಕಾರ್ಮಿಕರಿಗೆ ಸರಿಯಾದ ವೇತನ ನೀಡದೆ ಅಸಮಾನತೆ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಆ ಕಂಪೆನಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು~ ಎಂದು ಹೇಳಿದರು.`ರಾಜ್ಯದಲ್ಲಿ ಐದು ಲಕ್ಷ ಹಾಗೂ ದೇಶದಲ್ಲಿ ಒಂದು ಕೋಟಿ ಅಂಗವಿಕಲರು ಇರಬಹುದೆಂದು ಅಂದಾಜಿಸಲಾಗಿದೆ. ಇಷ್ಟೊಂದು ಸಂಖ್ಯೆಯಲ್ಲಿರುವ ಅಂಗವಿಕಲರಿಗೆ ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಶೇ ಮೂರರಷ್ಟು ಮೀಸಲಾತಿ ಕಲ್ಪಿಸಿರುವುದನ್ನು ಬಿಟ್ಟರೆ ಕೇಂದ್ರ ಸರ್ಕಾರದಿಂದ ಮತ್ತಾವುದೇ ಕಾರ್ಯಗಳು ಆಗುತ್ತಿಲ್ಲ. ಅಂಗವಿಕಲರಿಗೆ ರಾಜ್ಯ ಸರ್ಕಾರಗಳ ಬೊಕ್ಕಸದಿಂದಲೇ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರ ಅಂಗವಿಕಲರ ಕಲ್ಯಾಣಗಳಿಗೆ ಹೆಚ್ಚು ಗಮನ ನೀಡಬೇಕು~ ಎಂದು  ಒತ್ತಾಯಿಸಿದರು.`ಕಿವುಡರು ಬಹಳ ಬುದ್ಧಿವಂತರು ಮತ್ತು ಮುಗ್ಧರು. ಬದ್ಧತೆ, ಪ್ರಾಮಾಣಿಕತೆ, ಅರ್ಪಣಾ ಮನೋಭಾವದ ಮೂಲಕ ಸಾಧನೆಗೆ ಸದಾ ಉತ್ಸುಕರು. ಅವರ ಬಗ್ಗೆ ಸಮಾಜ ಅಸಡ್ಡೆ ಹೊಂದುವುದು ಸರಿಯಲ್ಲ. ಇತರೆ ದೈಹಿಕ ಅಂಗವಿಕಲರಿಗಿಂತ ಭಿನ್ನವಾದ ನೋವನ್ನು ಅನುಭವಿಸುವ ಕಿವುಡರ ನಿರುದ್ಯೋಗ ನಿವಾರಣೆಗೆ ಸರ್ಕಾರ ಸಿದ್ಧವಿದೆ. ರಾಜ್ಯ ಸರ್ಕಾರ ಸರ್ಕಾರಿ ಹುದ್ದೆಗಳಲ್ಲಿ ಈಗಾಗಲೇ ಅಂಗವಿಕಲರಿಗೆ ಶೇ 3 ರಷ್ಟು ಮೀಸಲಾತಿ ನೀಡಿದ್ದು, ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಲಾಗುವುದು~ ಎಂದು ಅವರು ನುಡಿದರು.ಕಿವುಡರ ಸಂಘದ ಮನವಿಯನ್ನು ಆಲಿಸಿದ ಅವರು, `ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕಿವುಡರ ಶಾಲೆಗಳನ್ನು ಆರಂಭಿಸಲಾಗುವುದು. ಬೆಂಗಳೂರಿನಲ್ಲಿ ಕಿವುಡರ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಜಿಲ್ಲಾ ಆಸ್ಪತ್ರೆಗಳಲ್ಲಿ ನುರಿತ ಕಿವಿ, ಮೂಗು, ಗಂಟಲು ತಜ್ಞರನ್ನು ಒಳಗೊಂಡ ಪ್ರತ್ಯೇಕ ಕೇಂದ್ರಗಳನ್ನು ತೆಗೆಯಲು ಕ್ರಮ ಕೈಗೊಳ್ಳಲಾಗುವುದು. ಸಂಕೇತ ಸಂಜ್ಞೆ ಭಾಷೆಯ ಶಿಕ್ಷಕರ ಕೊರತೆ ನೀಗಿಸಲು ಸಂಕೇತ ಸಂಜ್ಞೆ ಭಾಷೆಯ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು~ ಎಂದರು.`ಅಂಗವಿಕಲರ ಪ್ರಮಾಣ ಪತ್ರಗಳ ದುರ್ಬಳಕೆ ತಡೆಯಲು ಸುಧಾರಿತ ಪರೀಕ್ಷಾ ವಿಧಾನಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರತ್ಯೇಕವಾದ ಅಂಗವಿಕಲರ ಅಭಿವೃದ್ಧಿ ನಿಗಮ ಸ್ಥಾಪನೆಯ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು. ಕಿವುಡರ ಅಭಿವೃದ್ಧಿಗಾಗಿ ಕಳೆದ 50 ವರ್ಷಗಳಿಂದ ಶ್ರಮಿಸುತ್ತಿರುವ ಬೆಂಗಳೂರು ಕಿವುಡರ ಸಂಘಕ್ಕೆ ಒಂದು ಲಕ್ಷ ರೂಪಾಯಿಗಳನ್ನು ನೀಡಲಾಗುವುದು~ ಎಂದರು.ಸಮಾರಂಭದಲ್ಲಿ ಸಂಘದ 20 ಜನ ಹಿರಿಯ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ನಗರದ ವಿವಿಧ ಕಿವುಡರ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂಘದ ಅಧ್ಯಕ್ಷ ಟಿ.ವಿ.ಮನೋಹರ್, ಪ್ರಧಾನ ಕಾರ್ಯದರ್ಶಿ ಎ.ಗಣೇಶ್‌ರಾವ್, ಕನ್ನಡ ಸೇನೆಯ ಹೆಬ್ಬಾಳ ಘಟಕದ ಅಧ್ಯಕ್ಷ ಕೆ.ಮುನಿರಾಜು, ದಾವಣಗೆರೆಯ ಬಾಪೂಜಿ ದಂತ ವಿದ್ಯಾಲಯದ ಎನ್.ವಿರೂಪಾಕ್ಷ ಗೌಡರ್ ಮತ್ತಿತರರು ಉಪಸ್ಥಿತರಿದ್ದರು.

Post Comments (+)