ಕಂಪೆನಿಗೆ ಬೀಗಮುದ್ರೆ: ಕಾರ್ಮಿಕರ ಪ್ರತಿಭಟನೆ

ಮಂಗಳವಾರ, ಜೂಲೈ 16, 2019
25 °C
ಮೈಸೂರು ಪೆಟ್ರೋ ಕೆಮಿಕಲ್ಸ್: ಅತಂತ್ರ ಸ್ಥಿತಿಯಲ್ಲಿ ನೌಕರರು

ಕಂಪೆನಿಗೆ ಬೀಗಮುದ್ರೆ: ಕಾರ್ಮಿಕರ ಪ್ರತಿಭಟನೆ

Published:
Updated:

ರಾಯಚೂರು: ಇಲ್ಲಿನ ಹೈದರಾಬಾದ್ ರಸ್ತೆಯ ಹತ್ತಿರ ಇರುವ ಮೈಸೂರು ಪೆಟ್ರೋ ಕೆಮಿಕಲ್ಸ್ ಕೈಗಾರಿಕಾ ಘಟಕ ಮಂಗಳವಾರ ದಿಢೀರ್ ಬಾಗಿಲು ಮುಚ್ಚಿದೆ.  ಕಂಪೆನಿ ಆಡಳಿತ ಮಂಡಳಿಯು ರಾತ್ರೋ ರಾತ್ರಿ ಕೈಗಾರಿಕಾ ಘಟಕಕ್ಕೆ ಬೀಗ ಮುದ್ರೆ ಹಾಕಿ ಪರಾರಿಯಾಗಿದೆ. ಇದರಿಂದ ಸುಮಾರು 100ಕ್ಕೂ ಹೆಚ್ಚಿನ ಸಿಬ್ಬಂದಿ ಬೀದಿಗೆ ಬಿದ್ದಿದ್ದು, ಬೀಗ ಮುದ್ರೆ  ಹಾಕಿದ ಕಾರಣ ನೀಡಿಲ್ಲ. ಕಾರ್ಮಿಕರಿಗೆ ನೋಟಿಸ್ ನೀಡಿಲ್ಲ.ಮಂಗಳವಾರ ಎಂದಿನಂತೆ ಮೈಸೂರು ಪೆಟ್ರೋ  ಕೆಮಿಕಲ್ಸ್‌ಗೆ ಕೆಲಸಕ್ಕೆ ತೆರಳಲು ಕಂಪೆನಿ ಕೆಲಸಗಾರರು ತಯಾರಾಗಿದ್ದರು. ಆದರೆ ಕರೆದೊಯ್ಯಲು ಬರಬೇಕಾದ ಕಂಪೆನಿ ವಾಹನಗಳು ಬರಲಿಲ್ಲ. ಗಾಬರಿಗೊಂಡ ಕಾರ್ಮಿಕರು ಕೈಗಾರಿಕಾ ಘಟಕದತ್ತ ಧಾವಿಸಿ ಬಂದು ನೋಡಿದಾಗ ಬಾಗಿಲು ಮುಚ್ಚಿದ್ದು ಕಂಡು ಬಂದಿದೆ.ಕಂಪೆನಿ ಆಡಳಿತ ಮಂಡಳಿ ವರ್ತನೆಗೆ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಕೈಗಾರಿಕಾ ಘಟಕದ ಎದುರು ಕಂಪೆನಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವ ಮಾಹಿತಿ ತಿಳಿದ ಗ್ರಾಮೀಣ ಠಾಣೆ ಸಿಪಿಐ ರಮೇಶ, ಪಿಎಸ್‌ಐ ಹಾಗೂ ಸಿಬ್ಬಂದಿ ಧಾವಿಸಿ ಬಂದರು. ಕಾರ್ಮಿಕರ ಮನವೊಲಿಸುವ ಪ್ರಯತ್ನ ಮಾಡಿದರು.ಕಾರ್ಮಿಕರ ಅಳಲು: ದಶಕಗಳ ಕಾಲ ಈ ಕೈಗಾರಿಕಾ ಘಟಕದಲ್ಲಿ ಸೇವೆ ಸಲ್ಲಿಸಿಕೊಂಡು ಬಂದ ತಮ್ಮ ಭವಿಷ್ಯ ಮತ್ತು ತಮ್ಮನ್ನೇ ನೆಚ್ಚಿಕೊಂಡಿರುವ ಕುಟುಂಬ ವರ್ಗದವರ ಗತಿ ಏನು ಎಂದು ಕಾರ್ಮಿಕರು ಆತಂಕ ವ್ಯಕ್ತಪಡಿಸಿದರು. ಕಂಪೆನಿ ಆಡಳಿತ ಮಂಡಳಿ ಕೂಡಲೇ ಸಮಸ್ಯೆ ಪರಿಹರಿಸಬೇಕು. ಅತಂತ್ರ ಸ್ಥಿತಿಗೆ ತಮ್ಮನ್ನು ತಳ್ಳಬಾರದು. ಈ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.ನೋಟಿಸ್ ಇಲ್ಲ: ಕೈಗಾರಿಕ ಘಟಕ ಮುಚ್ಚುವ ಬಗ್ಗೆ ಕಂಪೆನಿ ಆಡಳಿತ ಮಂಡಳಿ ಯಾವುದೇ ನೋಟಿಸ್ ಕೊಟ್ಟಿಲ್ಲ. ಹಠಾತ್ ಕೈಗಾರಿಕಾ ಘಟಕ ಬಾಗಿಲು ಮುಚ್ಚಿದೆ ಎಂಬುದು ಕಾರ್ಮಿಕರ ದೂರು.50 ನೌಕರರಿಗೆ ಸೆಟ್ಲ್‌ಮೆಂಟ್: ಕಂಪೆನಿ ಆಡಳಿತ ವರ್ಗದ ವ್ಯಾಪ್ತಿಗೆ ಬರುವ 50 ನೌಕರರಿಗೆ ಮುಂದಿನ ಮೂರು ತಿಂಗಳ ವೇತನ ಪಾವತಿ ಮಾಡುವ ಮೂಲಕ ಸೆಟ್ಲ್‌ಮೆಂಟ್ ಮಾಡಿದೆ. ಈ ನೌಕರರಿಗೆ ನೇಮಕಾತಿ ಸಂದರ್ಭದಲ್ಲಿ ನೇಮಕಾತಿ ಪತ್ರದಲ್ಲಿ ಉಲ್ಲೇಖಿಸಿದ ಶರತ್ತುಗಳನ್ವಯ ಕಂಪೆನಿ ಕೆಲಸದಿಂದ ತೆಗೆದು ಹಾಕಿದರೆ ಮೂರು ತಿಂಗಳ ವೇತನ ನೀಡಬೇಕು.ಆ ಶರತ್ತು ಉಲ್ಲೇಖಿಸಿ ನೌಕರರನ್ನು ತೆಗೆದು ಹಾಕಿದೆ. ವಿಶೇಷವೆಂದರೆ ಮಂಗಳವಾರ ದಿನವೇ ನಗರದಲ್ಲಿ ಕಂಪೆನಿ ಮಾಲೀಕ ಎಂ.ಎಂ ಧನುಕ್ ಅವರ ಆದೇಶದಂತೆ ಆಡಳಿತ ಮಂಡಳಿ ಸೆಟ್ಲ್‌ಮೆಂಟ್ ಮಾಡಿದೆ ಎಂದು ವಿಶ್ವಸನೀಯ ಮೂಲಗಳು ಹೇಳಿವೆ.90 ಜನ ಕಾರ್ಮಿಕರ ಕೆಲಸ, ಅವರಿಗೆ ಪಾವತಿ ಮಾಡಬೇಕಾದ ವೇತನದ ಬಗ್ಗೆ ಕಂಪೆನಿ ಆಡಳಿತ ಮಂಡಳಿ ತಲೆ ಕೆಡಿಸಿಕೊಂಡಿಲ್ಲ. ಕೈಗಾರಿಕ ಘಟಕ ಮುಚ್ಚಲು ಕಾರಣವನ್ನೂ ಕೊಟ್ಟಲ್ಲ. ಹೀಗಾಗಿ ಕಾರ್ಮಿಕರು ಆತಂಕಗೊಂಡಿದ್ದಾರೆ.ಹಿನ್ನೆಲೆ: 1973ರಲ್ಲಿ ದೇವರಾಜು ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಈ ಕಂಪೆನಿ ಆರಂಭಗೊಂಡಿತು. ಮೂಲತಃ ಕೊಲ್ಕೊತ್ತಾ ಮೂಲದವರಾದ ಧನುಕ್ ಎಂಬವವರು ಈ ಕಂಪೆನಿ ಆರಂಭಿಸಿದ್ದರು. 2013ರ ನವೆಂಬರ್ 12ಕ್ಕೆ ಈ ಕಂಪೆನಿ ಸ್ಥಾಪನೆಗೊಂಡು 40 ವರ್ಷ ಆಗಿದೆ.ಕೈಗಾರಿಕ ಘಟಕ ಸ್ವರೂಪ: `ಪ್ಯಾಥಲಿಕ್ ಆ್ಯಂಡ್ ಹೈಡ್ರೇಡ್'(ಪಿಎ) ರಾಸಾಯನಿಕ ಉತ್ಪಾದನೆ ಮಾಡುವ ಸಂಸ್ಥೆ. ಪೇಂಟ್, ಪ್ಲಾಸ್ಟಿಕ್ ಕುರ್ಚಿ, ಟೇಬಲ್ ಸೇರಿದಂತೆ ಬೇರೆ ಬೇರೆ ವಸ್ತು ತಯಾರಿಕೆಯಲ್ಲಿ ಪೂರಕವಾಗಿ ಪ್ಯಾಥಲಿಕ್ ಆ್ಯಂಡ್ ಹೈಡ್ರೇಡ್(ಪಿಎ) ರಾಸಾಯನಿಕ ಬಳಸಲಾಗುತ್ತದೆ. ಈ ರಾಸಾಯನಿಕ ಉತ್ಪಾದನೆ ಮಾಡುತ್ತಿದ್ದ ಮೈಸೂರು ಪೆಟ್ರೋ  ಕೆಮಿಕಲ್ಸ್ ದೇಶವ್ಯಾಪಿ ಉತ್ಪಾದನೆ ಪೂರೈಕೆ ಮಾಡುತ್ತಿತ್ತು. ಆದರೆ ಸೋಮವಾರ ರಾತ್ರೋರಾತ್ರಿ ಕೈಗಾರಿಕಾ ಘಟಕಕ್ಕೆ ಬೀಗ ಮುದ್ರೆ  ಕಾಕಿದೆ.ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಎಂ.ಎಂ ಧನುಕ್ ಪುಣೆಯಲ್ಲಿದ್ದಾರೆ. ಅಲ್ಲಿ ಕ್ಲೋಗ್ ಹೆಸರಿನಡಿ ಇದೇ ರಾಸಾಯನಿಕ ಉತ್ಪಾದನೆ ಎರಡು ಘಟಕ ಆರಂಭಿಸಿದ್ದು, ಇಲ್ಲಿನ ಕೈಗಾರಿಕಾ ಘಟಕ ಮುಚ್ಚುವ ಪ್ರಯತ್ನ ಮಾಡಿದ್ದಾರೆ ಎಂದು ಕಂಪೆನಿ ಕಾರ್ಮಿಕರ ವಲಯದ ಮೂಲಗಳು ಹೇಳಿವೆ. ಕಂಪೆನಿ ಆಡಳಿತ ಮಂಡಳಿ ವರ್ಗದವರನ್ನು ಮೊಬೈಲ್ ಮೂಲಕ ಪ್ರಜಾವಾಣಿ ಸಂಪರ್ಕಿಸಿದರೂ ಸಂಪರ್ಕ ಸಾಧ್ಯವಾಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry