ಶುಕ್ರವಾರ, ನವೆಂಬರ್ 15, 2019
21 °C
ದಾನ-ಧರ್ಮಕ್ಕೆ ಸಂಪತ್ತಿನ ಗರಿಷ್ಠ ಪಾಲು ಬಳಕೆ; ಟಾಟಾ

ಕಂಪೆನಿ ಸ್ವಾಧೀನ: ಬಲವಂತ ಇಲ್ಲ

Published:
Updated:

ವಾಷಿಂಗ್ಟನ್ (ಪಿಟಿಐ): `ವಿರೋಧಿ ಅಥವಾ ಪ್ರತಿಸ್ಪರ್ಧಿ ಕಂಪೆನಿಗಳನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಉದ್ದೇಶ ಟಾಟಾ ಸಮೂಹಕ್ಕೆ  ಯಾವತ್ತೂ ಇರಲಿಲ್ಲ, ಇರುವುದೂ ಇಲ್ಲ' ಎಂದು ವಿಶ್ರಾಂತ ಅಧ್ಯಕ್ಷ ರತನ್ ಟಾಟಾ ಸ್ಪಷ್ಟಪಡಿಸಿದ್ದಾರೆ.`ನಾವು ಯಾವುದೇ ಕಂಪೆನಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಬಯಸುವುದಿಲ್ಲ. ಯಾವ ಕಂಪೆನಿಗೆ ನಾವು ಬೇಕಾಗಿಲ್ಲವೋ ಅಂತಹ ಕಂಪೆನಿ ನಮಗೂ ಬೇಡ'  ಎಂದು ಅವರು ಇಲ್ಲಿ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.`ಕಂಪೆನಿಯೊಂದನ್ನು ಸ್ವಾಧೀನ ಪಡಿಸಿಕೊಳ್ಳುವ ಮುನ್ನ ಅಲ್ಲಿನ ಸಿಬ್ಬಂದಿ, ಅವರ ಮನಸ್ಥಿತಿ, ಕೆಲಸದ ವಿಧಾನ, ವೃತ್ತಿ ಬದ್ಧತೆ, ಆಡಳಿತ ಮಂಡಳಿ, ಒಟ್ಟಾರೆ ನಿರ್ವಹಣೆ ಮೊದಲಾದ ಹಲವು ಅಂಶಗಳಲ್ಲಿ ಪ್ರತಿಯೊಂದನ್ನೂ ನಾವು ಸೂಕ್ಷ್ಮವಾಗಿ ಗಮನಿಸುತ್ತೇವೆ. ಯಾವುದೇ ಒಂದು ವಿಷಯದಲ್ಲಿ ಸಮಸ್ಯೆ ಕಂಡು ಬಂದರೂ ಅಥವಾ ನಮ್ಮ ವ್ಯವಹಾರ ಸಿದ್ಧಾಂತಕ್ಕೆ ಅಲ್ಲಿನ ಸ್ಥಿತಿ ವಿರುದ್ಧವಾಗಿದೆ ಎಂದೆನಿಸಿದರೂ ಸ್ವಾಧೀನ ಪ್ರಕ್ರಿಯೆ ಕೈಬಿಡುತ್ತೇವೆ, ಆ ಕಂಪೆನಿಯಿಂದ ದೂರ ಉಳಿಯುತ್ತೇವೆ' ಎಂದು ಟಾಟಾ ಸ್ಪಷ್ಟವಾಗಿ ಹೇಳಿದ್ದಾರೆ.`ಹೊಸ ಕಂಪೆನಿಗಳ ಸ್ವಾಧೀನ ಪ್ರಕ್ರಿಯೆ, ಇತರೆ  ವ್ಯವಹಾರಗಳನ್ನು ಟಾಟಾ ಕುಟುಂಬ ವರ್ಗವೇ ನಿರ್ವಹಿಸುತ್ತಿದೆಯೆ?' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಇದು ಶುದ್ಧ ಸುಳ್ಳು. ಟಾಟಾ ಸನ್ಸ್‌ನಲ್ಲಿ ಕುಟುಂಬದ ಪಾಲು ಕೇವಲ ಶೇ 2ರಷ್ಟಿದೆ. ಶೇ 60ರಿಂದ ಶೇ 65ರಷ್ಟು ಪಾಲು ದಾನ-ಧರ್ಮಕ್ಕೆ ಮೀಸಲಾಗಿದೆ. ನಾವು ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೇ ಮರಳಿಸುತ್ತಿದ್ದೇವೆ. ಶಿಕ್ಷಣ, ವೈದ್ಯಕೀಯ, ಬಡತನ ನಿರ್ಮೂಲನೆ, ಗ್ರಾಮೀಣ ಅಭಿವೃದ್ಧಿಯಂತಹ ಒಳ್ಳೆಯ ಉದ್ದೇಶಗಳಿಗೆ ಸಂಪತ್ತಿನ ಗರಿಷ್ಠ ಪಾಲು ಬಳಕೆಯಾಗುತ್ತಿದೆ ಎಂದು ವಿವರಿಸಿದರು.  ಅಷ್ಟೇ ಅಲ್ಲ, ಟಾಟಾ ಸಮೂಹ ಭ್ರಷ್ಟಾಚಾರದ ವಿರುದ್ಧ ಕಠಿಣ ನಿಲುವು ತಳೆದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.`ಟಾಟಾ ಸಮೂಹದಲ್ಲಿ ಸದ್ಯ 4.5 ಲಕ್ಷ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರೂ ಪ್ರಾಮಾಣಿಕರು ಎಂದು ನಾನು ಹೇಳುತ್ತಿಲ್ಲ. ಆದರೆ, ಒಬ್ಬ ವ್ಯಕ್ತಿ  ನಿಯಮ ಉಲ್ಲಂಘಿಸಿದಾಗ ಅದನ್ನು ಕಂಪೆನಿ ಹೇಗೆ ನಿರ್ವಹಿಸುತ್ತದೆ ಎನ್ನುವುದು ಮುಖ್ಯ. ಆರೋಪ ಸಾಬೀತಾದರೆ ಆತ ನಿರ್ದೇಶಕನೇ ಆಗಿರಬಹುದು, ಸಾಮಾನ್ಯ ನೌಕರನೇ ಆಗಿರಬಹುದು ಅಂತಹವರನ್ನು ಮನೆಗೆ ಕಳುಹಿಸುತ್ತೇವೆ' ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)