ಕಂಪ್ಯೂಟರ್‌ಗೆ ಮನುಷ್ಯ ಭಾಷೆ!

7
ಲಾಗಿನ್

ಕಂಪ್ಯೂಟರ್‌ಗೆ ಮನುಷ್ಯ ಭಾಷೆ!

Published:
Updated:

ಮನುಷ್ಯನ ಸ್ವಭಾವನ್ನೇ (ಹಾವ-ಭಾವ) ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವ `ಸ್ಮಾರ್ಟ್'ಫೋನ್‌ಗಳು ಈಗಾಗಲೇ ಮಾರುಕಟ್ಟೆಗೆ ಬಂದಿವೆ. ಇದೀಗ ಕಂಪ್ಯೂಟರ್‌ಗಳ ಸರದಿ. ಕಂಪ್ಯೂಟರ್‌ಗಳಿಗೆ ಮನುಷ್ಯನ ಭಾಷೆಯನ್ನು ಕಲಿಸಲು ವಿಜ್ಞಾನಿಗಳು ಮುಂದಾಗಿದ್ದಾರೆ. ಕಂಪ್ಯೂಟರ್‌ಗಳು ಮನುಷ್ಯನೊಂದಿಗೆ ಮಾತನಾಡಲು (ಸಂವಹನ ನಡೆಸಲು) ಸಾಧ್ಯವಾದರೆ ಈ ಜಗತ್ತಿನಲ್ಲಿ ತಾಂತ್ರಿಕ ಕ್ರಾಂತಿಯೇ ಆಗಲಿದೆ ಎನ್ನುವುದು ಈ ನಿಟ್ಟಿನಲ್ಲಿ ಪ್ರಯೋಗ ನಿರತ ಸಂಶೋಧಕರ ವಿಶ್ವಾಸದ ನುಡಿ.ಕಂಪ್ಯೂಟರ್‌ಗಳಿಗೆ ಭಾಷೆಯನ್ನು ಕಲಿಸುವುದು ಹೇಗೆ? ಕಳೆದ 50 ವರ್ಷಗಳಿಂದ ಭಾಷಾ ತಜ್ಞರು, ಕಂಪ್ಯೂಟರ್ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಅನೇಕ ಸಂಶೋಧನೆಗಳನ್ನು ನಡೆಸುತ್ತಲೇ ಬಂದಿದ್ದಾರೆ. ಮನುಷ್ಯನ ಭಾಷೆಯನ್ನು ಅರ್ಥಮಾಡಿಕೊಳ್ಳುವಂತಹ ಸಾಫ್ಟ್‌ವೇರ್ ಅಭಿವೃದ್ಧಿ ಕಾರ್ಯವೂ ನಿರಂತರವಾಗಿ ನಡೆದಿದೆ. ಮನುಷ್ಯನ ಧ್ವನಿ ಗುರುತಿಸುವ `ಡ್ರ್ಯಾಗನ್ ನ್ಯಾಚುರಲಿ ಸ್ಪೀಕಿಂಗ್'(ಡಿಎನ್‌ಎಸ್) ಎನ್ನುವ ಸಾಫ್ಟ್‌ವೇರ್ ಕುರಿತು ನೀವು ಕೇಳಿರಬಹುದು. ವಿಂಡೋಸ್ ಪರ್ಸನಲ್ ಕಂಪ್ಯೂಟರ್‌ಗಳಲ್ಲಿ  ಈ ತಂತ್ರಾಂಶ ಕಾರ್ಯನಿರ್ವಹಿಸುತ್ತದೆ. ಈ ರೀತಿ ಹಲವು ಪ್ರಯೋಗಗಳು ನಡೆದಿವೆ. ಆದರೆ, ಕಂಪ್ಯೂಟರ್‌ಗಳಿಗೆ ಮಾತ್ರ ಇದುವರೆಗೆ ಮನುಷ್ಯನ ಭಾಷೆ ಸಂಪೂರ್ಣವಾಗಿ ಅರ್ಥವಾಗಿಲ್ಲ.ಆಸ್ಟಿನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯ ಭಾಷಾಶಾಸ್ತ್ರ ಸಂಶೋಧಕಿ ಕತ್ರಿನ್ ಎರ್ಕ್ ಈ ನಿಟ್ಟಿನಲ್ಲಿ ವಿಭಿನ್ನ ಪ್ರಯೋಗವೊಂದರಲ್ಲಿ ತೊಡಗಿದ್ದಾರೆ. ಸೂಪರ್ ಕಂಪ್ಯೂಟರ್ ಬಳಸಿ ಕಂಪ್ಯೂಟರ್‌ಗಳಿಗೆ ಸಹಜ, ಸ್ವಾಭಾವಿಕ ಭಾಷೆ ಕಲಿಸುವ ಮಾದರಿಯೊಂದನ್ನು ಅವರು ಅಭಿವೃದ್ಧಿಪಡಿಸಿದ್ದಾರೆ. ಸಾಮಾನ್ಯವಾಗಿ ಹಾರ್ಡ್-ಕೋಡಿಂಗ್(ರಹಸ್ಯ ಲಿಪಿಯನ್ನು ಓದುವ ಅಥವಾ ಅರ್ಥ ಗ್ರಹಿಸುವ) ಸಾಫ್ಟ್‌ವೇರ್ ಮೂಲಕ ಕಂಪ್ಯೂಟರ್‌ಗಳಿಗೆ ಭಾಷೆ ಕಲಿಸಲಾಗುತ್ತದೆ.ಈ ಸಾಂಪ್ರದಾಯಿಕ ಸೂತ್ರ ಕೈಬಿಟ್ಟು ಅವರು ವಿಭಿನ್ನ ಹಾದಿ ಹಿಡಿದಿದ್ದಾರೆ. ಕಂಪ್ಯೂಟರ್‌ಗೆ ಬೃಹತ್ ಪ್ರಮಾಣದಲ್ಲಿ ಪಠ್ಯವನ್ನು(ಮನುಷ್ಯನ ಜ್ಞಾನವನ್ನು, ಚಿಂತನೆಯನ್ನು ಪ್ರತಿಬಿಂಬಿಸುವ) ತುಂಬುವುದು. ಆನಂತರ ಈ ಶಬ್ದಗಳ ಅರ್ಥ ಮತ್ತು ಸಂಬಂಧವನ್ನು ಕಂಪ್ಯೂಟರ್ ತಾನಾಗಿಯೇ ಅರ್ಥ ಮಾಡಿಕೊಳ್ಳುವ ವ್ಯವಸ್ಥೆ ಅಭಿವೃದ್ಧಿಪಡಿಸುವುದು ಅವರ ಯೋಜನೆ. ಈ ನಿಟ್ಟಿನಲ್ಲಿ ಕ್ಯಾಟ್ರಿನ್ ಸಾಕಷ್ಟು ಪ್ರಗತಿಯನ್ನೂ ಸಾಧಿಸಿದ್ದಾರೆ.  ಇದಕ್ಕೆ ಬೃಹತ್ ಪ್ರಮಾಣದಲ್ಲಿ ಪಠ್ಯ ಬೇಕಾಗುತ್ತದೆ. ಪ್ರತ್ಯಯಗಳಿಂದ ಕೂಡಿದ ಶಬ್ದಗಳ ಬದಲಿಗೆ ಪ್ರತ್ಯೇಕ ಶಬ್ದಗಳನ್ನೇ ಬಳಸುವ ವಿಭಜನಾ ಕೌಶಲವೂ ಇರಬೇಕಾಗುತ್ತದೆ ಎನ್ನುತ್ತಾರೆ ಅವರು.ಕನಿಷ್ಠ ಏನಿಲ್ಲವೆಂದರೂ 1 ಸಾವಿರ ಕೋಟಿ ಶಬ್ದಗಳಾದರೂ ಕಂಪ್ಯೂಟರ್‌ಗೆ ತುಂಬಬೇಕಾಗುತ್ತದೆ ಎನ್ನುವ ಅವರು, ಇದು ಅತ್ಯಂತ ಸವಾಲಿನ ಕೆಲಸ ಎಂಬುದನ್ನೂ ಒಪ್ಪುತ್ತಾರೆ.ಮೊದಲು ಕ್ಯಾಟ್ರಿನ್ ಅವರು, ಡೆಸ್ಕ್‌ಟಾಪ್ ಕಂಪ್ಯೂಟರ್ ಮೇಲೆ ತಮ್ಮ ಪ್ರಯೋಗ ನಡೆಸಿದ್ದರು. ನಂತರ ಇತರೆ ಮಾದರಿ ಗಣಕಯಂತ್ರಗಳ ಮೇಲೂ ಮುಂದುವರಿಸಿದ್ದಾರೆ. ಅವರ ಪ್ರಯೋಗ ಸಾಕಷ್ಟು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿದೆ. ಹಾಗಾಗಿ ಅವರು ತಮ್ಮ ಪ್ರಯೋಗದ ಕುರಿತು ಸಾಕಷ್ಟು ಭರವಸೆ ಉಳಿಸಿಕೊಂಡಿದ್ದಾರೆ.ಕಂಪ್ಯೂಟರ್‌ನಲ್ಲಿರುವ ಕಡತಗಳಿಂದ ಪಠ್ಯವನ್ನು ಓದಲು, ಅರ್ಥ ಗ್ರಹಿಸಲು ಸಾಧ್ಯವಾಗುವಂತಹ `ಹೆಡೂಪ್' (Hadoop)  ಎನ್ನುವ ಸಾಫ್ಟ್‌ವೇರನ್ನೂ ಅವರು ಅಭಿವೃದ್ಧಿಪಡಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನೆರಡು ವರ್ಷಗಳಲ್ಲಿ  ಕಂಪ್ಯೂಟರ್‌ಗಳಿಗೂ ಮಾತು ಬರಬಹುದು ಎನ್ನುವುದು ಅವರ ಲೆಕ್ಕಾಚಾರ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry