ಗುರುವಾರ , ಮೇ 6, 2021
32 °C

ಕಂಪ್ಯೂಟರ್ ಆಪರೇಟರ್‌ಗಳ ಮುಷ್ಕರ ಹಿಂದಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉಪನೋಂದಣಿ ಕಚೇರಿಗಳ ಕಂಪ್ಯೂಟರ್ ಆಪರೇಟರ್‌ಗಳ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ರಾಜೀವ್ ಚಾವ್ಲಾ ಅವರು ಸರ್ಕಾರದ ಪರವಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಂಪ್ಯೂಟರ್ ಆಪರೇಟರ್‌ಗಳು ಮುಷ್ಕರ ಕೈಬಿಟ್ಟಿದ್ದಾರೆ.ಉದ್ಯೋಗ ಕಾಯಂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ವಿವಿಧ ಉಪನೋಂದಣಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 700ಕ್ಕೂ ಅಧಿಕ ಕಂಪ್ಯೂಟರ್ ಆಪರೇಟರ್‌ಗಳು ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸುತ್ತಿದ್ದರು.ಸಿಬ್ಬಂದಿಯ ಗೈರುಹಾಜರಿ ಹಿನ್ನೆಲೆಯಲ್ಲಿ ಕಚೇರಿಯ ದಿನನಿತ್ಯದ ಕಾರ್ಯಗಳು ಭಾಗಶಃ ಸ್ಥಗಿತಗೊಂಡು ಜನರು ಪರದಾಟ ಅನುಭವಿಸಿದ್ದರು. ಇದೀಗ ಬೇಡಿಕೆ ಈಡೇರಿಕೆಯ ಭರವಸೆ ದೊರಕಿದ ಹಿನ್ನೆಲೆಯಲ್ಲಿ ಕಂಪ್ಯೂಟರ್ ಆಪರೇಟರ್‌ಗಳು ಗುರುವಾರದಿಂದಲೇ ಉದ್ಯೋಗಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರೆ.`ಶಿವಮೊಗ್ಗದ ಕಂಪ್ಯೂಟರ್ ಆಪರೇಟರ್‌ಗಳು ನಗರದಲ್ಲಿ ಬುಧವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡರು. ಬಿಎಸ್‌ವೈ ಅವರು ಕೂಡಲೇ ಮುದ್ರಾಂಕ ಹಾಗೂ ನೋಂದಣಿ ಇಲಾಖೆಯ ಇನ್ಸ್‌ಪೆಕ್ಟರ್ ಜನರಲ್ (ಐಜಿಆರ್) ಚಂದ್ರಶೇಖರ್ ಹಾಗೂ ರಾಜೀವ್ ಚಾವ್ಲಾ ಅವರನ್ನು ಸಂಪರ್ಕಿಸಿ ಮುಷ್ಕರ ನಿರತರ ಸಮಸ್ಯೆ ಈಡೇರಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು. ಅಧಿಕಾರಿಗಳು ಮುಷ್ಕರನಿರತರಿಗೆ ಅಗತ್ಯ ಬೆಂಬಲದ ಭರವಸೆ ನೀಡಿದರು~ ಎಂದು ಶ್ರಮಜೀವಿಗಳ ವೇದಿಕೆಯ ಮುಖ್ಯಸ್ಥ ಚಂದ್ರಶೇಖರ್ ಎಸ್. ಹಿರೇಮಠ್ `ಪ್ರಜಾವಾಣಿ~ಗೆ ಬುಧವಾರ ತಿಳಿಸಿದರು.ಇದಾದ ನಂತರ ರಾಜೀವ್ ಚಾವ್ಲಾ ಹಾಗೂ ಚಂದ್ರಶೇಖರ್ ಅವರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಂಪ್ಯೂಟರ್ ಆಪರೇಟರ್‌ಗಳನ್ನು ಭೇಟಿ ಮಾಡಿ, `ಸಿಬ್ಬಂದಿಯ ಅರ್ಹತೆಗೆ ತಕ್ಕಂತೆ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಸರ್ಕಾರದಿಂದ ಅಗತ್ಯ ಬೆಂಬಲ ನೀಡಲಾಗುವುದು~ ಎಂದು ಭರವಸೆ ನೀಡಿದರು.`ಹೊರಗುತ್ತಿಗೆ ಸಂಸ್ಥೆಗಳಿಂದ ಆಗುತ್ತಿರುವ ಸಮಸ್ಯೆಗಳ ವಿಚಾರವೂ ಗಮನಕ್ಕೆ ಬಂದಿದ್ದು, ಸಿಬ್ಬಂದಿಯ ಕನಿಷ್ಠ ವೇತನಕ್ಕೆ ಕ್ರಮ ಕೈಗೊಳ್ಳಲಾಗುವುದು~ ಎಂದು ಅಧಿಕಾರಿಗಳು ತಿಳಿಸಿದರು.ಈ ಸಂದರ್ಭ ಆಪರೇಟರ್‌ಗಳ ಉದ್ಯೋಗ ಕಾಯಂಗೊಳಿಸಬೇಕು ಎಂದು ಮುಷ್ಕರನಿರತರು ಆಗ್ರಹಿಸಿದರು. `ಕಾಯಂಗೊಳಿಸಲು ಕೆಲವು ಕಾನೂನು ತೊಡಕುಗಳಿವೆ. ಈ ತೊಡಕುಗಳ ನಿವಾರಣೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ~ ಎಂದು ಅಧಿಕಾರಿಗಳು ಭರವಸೆ ನೀಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.