ಕಂಪ್ಯೂಟರ್ ಶಿಕ್ಷಣ ಯೋಜನೆ ನೆನೆಗುದಿಗೆ

7

ಕಂಪ್ಯೂಟರ್ ಶಿಕ್ಷಣ ಯೋಜನೆ ನೆನೆಗುದಿಗೆ

Published:
Updated:

ತುಮಕೂರು: ರಾಜ್ಯದ ಗ್ರಾಮಾಂತರ ಮಕ್ಕಳಿಗೆ ಕಂಪ್ಯೂಟರ್ ಕಲಿಸುವ ಕೇಂದ್ರ, ರಾಜ್ಯ ಸರ್ಕಾರಗಳ ಮಹತ್ವಕಾಂಕ್ಷೆ ಯೋಜನೆ ಐಸಿಟಿ (ಮಾಹಿತಿ, ಸಂವಹನ ಮತ್ತು ತಂತ್ರಜ್ಞಾನ) ರಾಜ್ಯ ಸರ್ಕಾರದ ನಿರಾಸಕ್ತಿ ಕಾರಣ ನೆನೆಗುದಿಗೆ ಬಿದ್ದಿದ್ದೆ. ಯೋಜನೆಗಾಗಿ ಸರ್ಕಾರ ಪ್ರತಿ ಶಾಲೆಗೆ ಮಾಸಿಕ ರೂ 16 ಸಾವಿರ ಹಣ ವೆಚ್ಚ ಮಾಡುತ್ತಿದ್ದರೂ ಹೊಳೆಯಲ್ಲಿ ಹುಣುಸೆ ಹಣ್ಣು ತೊಳೆದಂತಾಗಿದೆ.ಶಾಲೆ-ಕಾಲೇಜುಗಳಲ್ಲಿ ಕಂಪ್ಯೂಟರ್ ಇದ್ದರೂ ಅವುಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಪ್ರಮುಖವಾಗಿ ಬೇಕಾದ ಇಂಟರ್‌ನೆಟ್ ಸಂಪರ್ಕವೂ ಇಲ್ಲ. ಅನೇಕ ಶಾಲೆಗಳಲ್ಲಿ ಬಿಲ್ ಪಾವತಿಸದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಇನ್ನು ಹಲವು ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ !.ಯೋಜನೆ 2009ರಿಂದ ಜಾರಿಯಲ್ಲಿದೆ. ಗ್ರಾಮೀಣ ಪ್ರದೇಶದ ಮಕ್ಕಳನ್ನು ಸರ್ಕಾರಿ ಶಾಲೆ, ಕಾಲೇಜುಗಳಿಗೆ ಆಕರ್ಷಿಸುವುದರ ಜೊತೆಗೆ ಗ್ರಾಮೀಣ ಮಕ್ಕಳಲ್ಲಿನ ಸಂವಹನದ ಕೊರತೆ ನೀಗಿಸಿ  ನಗರ ಪ್ರದೇಶದ ಮಕ್ಕಳಿಗೆ ಸರಿಸಮಾನವಾದ ಅವಕಾಶ ಒದಗಿಸುವ ಮಹತ್ವಕಾಂಕ್ಷೆ ಈ ಯೋಜನೆ ಜಾರಿಯಲ್ಲಿ ಅಡಗಿತ್ತು.ರಾಜ್ಯದಲ್ಲಿ 1571 ಪ್ರೌಢಶಾಲೆ ಹಾಗೂ 708 ಪಿಯು ಕಾಲೇಜುಗಳ 6,17,702 ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ಕಲಿಸಬೇಕಾಗಿದೆ. ಇದಕ್ಕಾಗಿ 2,279 ಕಂಪ್ಯೂಟರ್ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಯೋಜನೆ ಸಮರ್ಪಕ ನಿರ್ವಹಣೆಯ ಕುರಿತು ಒಂದಿನಿತೂ ಮೇಲ್ವಿಚಾರಣೆ ನಡೆಸದ ರಾಜ್ಯ ಸರ್ಕಾರ ಯೋಜನೆ ನಿರ್ವಹಣೆಯನ್ನು ಹರಿಯಾಣದ  `ಎಜು ಕಾಂ' ಎಂಬ ಕಂಪೆನಿಗೆ ನೀಡಿ  ಕೈತೊಳೆದುಕೊಂಡಿದೆ.`ಯೋಜನೆ ಜಾರಿಗೊಂಡು ಮೂರು ವರ್ಷ ಕಳೆಯುತ್ತಾ ಬಂದಿದೆ. ಇದೀಗ ಪುಸ್ತಕ ವಿತರಣೆ ನಡೆದಿದೆ. ಇಲ್ಲಿಯವರೆಗೂ ಶೇ 60ಕ್ಕೂ ಹೆಚ್ಚು ಶಾಲಾ -ಕಾಲೇಜುಗಳಿಗೆ ಇಂಟರ್‌ನೆಟ್ ಸಂಪರ್ಕ ಒದಗಿಸಿಲ್ಲ. ವಿದ್ಯುತ್  ಬಿಲ್ ಕಟ್ಟದ ಕಾರಣ ಸಾಕಷ್ಟು ಶಾಲೆಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಕಂಪ್ಯೂಟರ್ ಶಿಕ್ಷಕರು ಇಲ್ಲದೆ ಕಂಪ್ಯೂಟರ್‌ಗಳು ದೂಳು ಹಿಡಿದು ಕುಳಿತಿವೆ. ಯೋಜನೆಯಡಿ ಶಾಲೆಗಳಿಗೆ ಜೆರಾಕ್ಸ್ ಯಂತ್ರ ಕೊಟ್ಟರೂ ಅದರ ಬಳಕೆ ಕೂಡ ಆಗುತ್ತಿಲ್ಲ' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು `ಪ್ರಜಾವಾಣಿ'ಯೊಂದಿಗೆ ನೋವು ತೋಡಿಕೊಂಡರು.`ಕಂಪೆನಿ ಮಾಸಿಕ ಕೇವಲ ರೂ 3332 ವೇತನ ನೀಡುತ್ತಿರುವ ಕಾರಣ ಶಿಕ್ಷಕರು ಕೆಲಸಕ್ಕೆ ಬರುವುದಿಲ್ಲ. ವೇತನ ಕೂಡ ಮೂರು-ನಾಲ್ಕು ತಿಂಗಳಿಗೊಮ್ಮೆ ನೀಡಲಾಗುತ್ತಿದೆ. ಆದ್ದರಿಂದ ಸರ್ಕಾರವೇ ಕಂಪ್ಯೂಟರ್ ಶಿಕ್ಷಣದ ಜವಾಬ್ದಾರಿ ಹೊರಬೇಕು. ಕೂಡಲೇ ಕನಿಷ್ಠ ವೇತನ ರೂ 10 ಸಾವಿರ ನೀಡಬೇಕು.  ಕಂಪ್ಯೂಟರ್ ಶಿಕ್ಷಣವನ್ನು ಮೂಲ ಶಿಕ್ಷಣವೆಂದು ಪರಿಗಣಿಸಬೇಕು' ಎಂದು ರಾಜ್ಯ ಕಂಪ್ಯೂಟರ್ ಶಿಕ್ಷಕರ ಒಕ್ಕೂಟ ಜಿಲ್ಲಾ ಘಟಕದ ಅಧ್ಯಕ್ಷರೂ ಆದ ಕೆ. ಕಲ್ಲಹಳ್ಳಿ ಪ್ರೌಢಶಾಲೆಯ ಕಂಪ್ಯೂಟರ್ ಶಿಕ್ಷಕ  ಕೆ.ಕಲ್ಲೇಶ್ `ಪ್ರಜಾವಾಣಿ'ಗೆ ತಿಳಿಸಿದರು.`ಕೇಂದ್ರ ಸರ್ಕಾರದ ಶೇ 75 ರಾಜ್ಯ ಸರ್ಕಾರದ ಶೇ 25 ಪಾಲಿನಲ್ಲಿ ಒಟ್ಟು ಮೂರು ಹಂತದಲ್ಲಿ ಯೋಜನೆ ಜಾರಿಗೊಳಿಸಲಾಗಿದೆ. ಯೋಜನೆ ಐದು ವರ್ಷ ಎಂದು ಹೇಳುತ್ತಾ ಕಂಪ್ಯೂಟರ್ ಶಿಕ್ಷಕರನ್ನು ಗುತ್ತಿಗೆ ಮೇಲೆ ಪಡೆಯಲಾಗಿದೆ. 2009ರಿಂದಲೂ ಶಿಕ್ಷಕರಿಗೆ ಒಂದೇ ಸಂಬಳ ನೀಡಲಾಗುತ್ತಿದೆ. ಈ ಶಿಕ್ಷಣಕ್ಕೆ ಬಜೆಟ್ ಹೆಚ್ಚು ಮಾಡುತ್ತೇವೆ ಎಂದು ಹೇಳಿದ್ದ ಸರ್ಕಾರ,  ಇದೂವರೆಗೂ ಅದನ್ನು ಕಾರ್ಯಗತಗೊಳಿಸಿಲ್ಲ.ಯೋಜನೆ ಖಾಸಗಿ ಕಂಪೆನಿಗೆ ಗುತ್ತಿಗೆ ನೀಡಿದ ಕಾರಣ ಸರ್ಕಾರದ ಉದ್ದೇಶವೂ ಈಡೇರಿಲ್ಲ, ಮಕ್ಕಳಿಗೂ ಉಪಯೋಗಕ್ಕೆ ಬರುತ್ತಿಲ್ಲ. ಗುತ್ತಿಗೆ ಆಧಾರದಲ್ಲಿ ನಡೆಸಿದರೂ ಸರ್ಕಾರವೇ ಯೋಜನೆಯನ್ನು ಯಾಕೆ ನಡೆಸಬಾರದು' ಎಂದು ರಾಜ್ಯ ಕಂಪ್ಯೂಟರ್ ಶಿಕ್ಷಕರ ಒಕ್ಕೂಟ ರಾಜ್ಯ ಘಟಕದ ಅಧ್ಯಕ್ಷೆ ವರಲಕ್ಷ್ಮೀ ಪ್ರಶ್ನಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry