ಕಂಪ್ಲಿ ತಾಲ್ಲೂಕು ರಚನೆಗೆ ಆಗ್ರಹಿಸಿ 30ರಂದು ಪ್ರತಿಭಟನೆ

ಶನಿವಾರ, ಜೂಲೈ 20, 2019
28 °C

ಕಂಪ್ಲಿ ತಾಲ್ಲೂಕು ರಚನೆಗೆ ಆಗ್ರಹಿಸಿ 30ರಂದು ಪ್ರತಿಭಟನೆ

Published:
Updated:

ಕಂಪ್ಲಿ: ಕಂಪ್ಲಿ ತಾಲ್ಲೂಕು ರಚನೆಗಾಗಿ ಆಗ್ರಹಿಸಿ ಇದೇ 30ರಂದು ಜೆಡಿಎಸ್ ಪಕ್ಷದಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎನ್. ಸೂರ್ಯ ನಾರಾಯಣ ರೆಡ್ಡಿ ತಿಳಿಸಿದರು.ತಾಲ್ಲೂಕು ರಚನೆಗಾಗಿ ಈಗಾಗಲೇ ಈ ಭಾಗದಲ್ಲಿ ಹಲವಾರು ಹೋರಾಟಗಳು ನಡೆದಿದ್ದು, ವಿವಿಧ ಸಮಿತಿಗಳೂ ಕಂಪ್ಲಿ ತಾಲ್ಲೂಕು ರಚಿಸುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿವೆ. ಆದರೂ ಆಡಳಿತಾರೂಢ ಸರ್ಕಾರ, ಅಂದಿನ ಮಾಜಿ ಸಚಿವ ಕರುಣಾಕರ ರೆಡ್ಡಿ, ಶ್ರೀರಾಮುಲು ಕಡೆಗಣಿಸಿದರು. ಈ ಕಾರಣದಿಂದ ಹಲವಾರು ದಶಕಗಳ ನೂತನ ತಾಲ್ಲೂಕು ರಚನೆ ಕನಸು ಇಂದಿಗೂ ನೆನೆಗುದಿಯಲ್ಲಿದ್ದು, ಸರ್ಕಾರದ ಗಮನ ಸೆಳೆಯಲು ತಮ್ಮ ಪಕ್ಷ ಈ ಹೋರಾಟ ಹಮ್ಮಿಕೊಂಡಿದೆ ಎಂದು ಮಂಗಳವಾರ ತಿಳಿಸಿದರು.ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕರು ನಾಪತ್ತೆಯಾಗಿದ್ದು, ಹೆರಿಗೆಗೆ ಆಸ್ಪತ್ರೆಗೆ ಹೋಗಬೇಕಿಲ್ಲ. ರಸ್ತೆಗಳಲ್ಲಿ ಸಂಚರಿಸಿದರೆ ಸಾಕು ಸುಸೂತ್ರ ಹೆರಿಗೆಯಾಗುತ್ತದೆ. ಈ ಮಟ್ಟದಲ್ಲಿ ಕಂಪ್ಲಿ ಕ್ಷೇತ್ರದ ರಸ್ತೆಗಳು ತೋಪೆದ್ದು ಹೋಗಿದ್ದು, ಇದು ಕಳೆದ ನಾಲ್ಕು ವರ್ಷದ ಕಂಪ್ಲಿ ಶಾಸಕರ ಸಾಧನೆ ಎಂದು ವ್ಯಂಗ್ಯವಾಡಿದರು.ಜನಾರ್ದನ ರೆಡ್ಡಿ ಬೇಲ್ ಡೀಲ್ ಪ್ರಕರಣದಲ್ಲಿ ತಮ್ಮ ಪಾತ್ರವಿದ್ದರೆ ರಾಜಿನಾಮೆ ನೀಡುತ್ತೇನೆ ಎಂದಿದ್ದ ಶಾಸಕ ಜಿ. ಸೋಮಶೇಖರರೆಡ್ಡಿ ಬಣ್ಣ ಇದೀಗ ವಿಚಾರಣೆಯಿಂದ ಸಾಬೀತಾಗಿದ್ದು, ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.ತುಂಗಭದ್ರಾ ಹೂಳಿನ ಬಗ್ಗೆ ಈಗ ಹೋರಾಟ ಮಾಡುವ ಶಾಸಕ ಶ್ರೀರಾಮುಲು ಈ ಹಿಂದೆ ಅಧಿಕಾರದಲ್ಲಿದ್ದಾಗ ಏನು ಮಾಡುತ್ತಿದ್ದರು. ಆಗ ಇವರ ರೈತ ಪರ ಕಾಳಜಿ ಎಲ್ಲಿ ಹೋಗಿತ್ತು ಎಂದರು.ರಾಜ್ಯ ಬಿಜೆಪಿ ಸರ್ಕಾರದ ಬಗ್ಗೆ ಹಲವಾರು ಆರೋಪ ಗಳನ್ನು ಮಾಡಿದ ಸೂರ್ಯನಾರಾಯಣರೆಡ್ಡಿ, ಇದೀಗ ಮುಖ್ಯಮಂತ್ರಿ ಕುರ್ಚಿ ವಿಚಾರದಲ್ಲಿ ಜಾತಿ ಸಂಘರ್ಷ ತಲೆದೋರಿರುವ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದರು.ಜಗದೀಶ ಶೆಟ್ಟರ ಮುಖ್ಯಮಂತ್ರಿಯಾಗುವುದರಿಂದ ಉತ್ತರ ಕರ್ನಾಟಕ ಕಲ್ಯಾಣವಾಗುತ್ತದೆ ಎನ್ನುವ ನಂಬಿಕೆ ನನಗಿಲ್ಲ. ಈ ಕಾರಣದಿಂದ ತಾವು ಈಗಾಗಲೇ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಂತೆ ಪರಿಕಲ್ಪನೆ ಹೊಂದಿದ್ದು, ವಿವಿಧ ಮಠಾಧೀಶರನ್ನು ಸಂಪರ್ಕಿಸಿ ರೂಪುರೇಷೆ ಸಿದ್ಧತೆಯಲ್ಲಿ ತೊಡಗಿದ್ದೀನಿ.

 

ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಕುರಿತು ಗಮನಸೆಳೆಯಲು ಮಠಾಧೀಶರ ಮುಖಾಂತರ ಪಕ್ಷಾತೀತ ವಾಗಿ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಿರುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ರಾಜ್ಯದಲ್ಲಿ ಬರ ಆವರಿಸಿದ್ದರೂ ಕುರ್ಚಿಗಾಗಿ ಕಚ್ಚಾಡುವಲ್ಲಿ ನಿರತವಾಗಿರುವ ಬಿಜೆಪಿ ಸರ್ಕಾರ ಶೀಘ್ರ ಪತನವಾಗಲಿದೆ. ಮುಂದಿನ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಜೆಡಿಎಸ್ ಜಿಲ್ಲಾ ಹಿರಿಯ ಉಪಾಧ್ಯಕ್ಷ ಕೆ.ಎಂ. ಹೇಮಯ್ಯ ಸ್ವಾಮಿ, ಕಂಪ್ಲಿ ವಿಧಾನಸಭಾಕ್ಷೇತ್ರ ಜೆಡಿಎಸ್ ಅಧ್ಯಕ್ಷ ಎಚ್. ಶಿವಶಂಕರಗೌಡ, ಮುಖಂಡ ಟಿ. ನೀಲಕಂಠಯ್ಯ ಸ್ವಾಮಿ, ಪಿ.ಎಸ್. ಸೋಮಲಿಂಗನಗೌಡ, ಮಂಜುನಾಥ ಗೌಡ, ಎಚ್. ತಿಪ್ಪೇರುದ್ರಗೌಡ, ಅಯೋದಿ ವೆಂಕಟೇಶ್, ಬಿ. ನಾರಾಯಣಪ್ಪ, ತಾ.ಪಂ ಮಾಜಿ ಸದಸ್ಯ ಹುಲುಗಪ್ಪ, ಭಾಸ್ಕರರೆಡ್ಡಿ, ರಾಮಕೃಷ್ಣರೆಡ್ಡಿ ಇತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry