ಶುಕ್ರವಾರ, ಜೂನ್ 25, 2021
29 °C

ಕಂಬದಿಂದ ಬಯಲಿಗೆ...(ಚಿತ್ರ: ನರಸಿಂಹ)

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

ಕಂಬದಿಂದ ಬಯಲಿಗೆ...(ಚಿತ್ರ: ನರಸಿಂಹ)

ಚಿತ್ರದ ಶೀರ್ಷಿಕೆ ಹಾಗೂ ಕಥಾ ನಾಯಕನ ಹೆಸರು ನರಸಿಂಹ ಎಂದಾದರೂ, ಇಡೀ ಚಿತ್ರದಲ್ಲಿ ಒಮ್ಮೆಯೂ ಸಿಂಹ ಗರ್ಜನೆ ಕೇಳಿಸುವುದಿಲ್ಲ. ವಿಷ್ಣುವರ್ಧನ್ ಸಿನಿಮಾಗಳಂತೆ (ಈಚೆಗೆ ಸುದೀಪ್ ಸಿನಿಮಾಗಳಲ್ಲಿ) ಗ್ರಾಫಿಕ್ಸ್ ಸಿಂಹದ ಮುಖವೂ ಕಾಣಿಸುವುದಿಲ್ಲ. ಆ ಮಟ್ಟಿಗೆ `ನರಸಿಂಹ~ ಹೆಚ್ಚು ಅತಿರೇಕಗಳಿಲ್ಲದ ಒಳ್ಳೆಯ ಸಿನಿಮಾ.ಕಥೆಯ ಸಾಂದ್ರತೆ ಹಾಗೂ ನಿರೂಪಣೆಯ ಗಾಂಭೀರ್ಯದ ದೃಷ್ಟಿಯಲ್ಲಿ ನೋಡುವುದಾದರೆ, ಈಚಿನ ವರ್ಷಗಳಲ್ಲಿ ತೆರೆಕಂಡ ರವಿಚಂದ್ರನ್ ಚಿತ್ರಗಳಲ್ಲೇ ಇದು ಗಮನಾರ್ಹ.

ಅತಿರೇಕಗಳಿಲ್ಲದೆ ಹೋದರೂ ಭಾವುಕ ದೃಶ್ಯಗಳು ಚಿತ್ರದಲ್ಲಿ ಸಾಕಷ್ಟಿವೆ.ಕುಷ್ಠರೋಗ ಪೀಡಿತ ತಾಯಿ, ತನ್ನ ರೋಗ ಮಗುವಿಗೆ ತಗುಲಬಾರದೆಂದು ಸ್ವಯಂ ಬಂಧನ ವಿಧಿಸಿಕೊಳ್ಳುತ್ತಾಳೆ. ಕೊನೆಗೆ, ಕರುಳಿನ ಕೂಗು ಹತ್ತಿಕ್ಕಿಕೊಳ್ಳಲಾಗದೆ ಸಾವಿಗೆ ಶರಣಾಗುತ್ತಾಳೆ. ಇಂಥದೊಂದು ದಾರುಣ ಹಿನ್ನೆಲೆಯುಳ್ಳ ನರಸಿಂಹ, ತಾನು ನೆಚ್ಚಿದ ಮೌಲ್ಯಗಳನ್ನು ಬಾಳಿಯೂ ತೋರಿಸುವವನು.ನಾಲ್ಕು ಹಳ್ಳಿಗಳ ಜನರ ಪಾಲಿಗೆ ಆತ ದೇವರು. ಆದರೆ, ಈ ಸಿರಿವಂತ ದೇವರು ವಾಸಿಸುವುದು ಹಳೆಯ ಮನೆಯಲ್ಲಿ, ರಾಗಿ ಅಂಬಲಿ ಕುಡಿದುಕೊಂಡು. ಉಗ್ರಪ್ಪ ಎನ್ನುವ ರಾಜಕಾರಣಿ ಹಾಗೂ ವರ್ಷ ಎನ್ನುವ ಅಮೃತವರ್ಷಿಣಿ ಆಗಮನದ ನಂತರ ನರಸಿಂಹನ ಬದುಕು ಏನಾಗುತ್ತದೆ ಎನ್ನುವುದು ಚಿತ್ರದ ಕಥೆ.ಆರಂಭದಲ್ಲಿ, ಸಮಕಾಲೀನ ರಾಜಕಾರಣದ ವಿಡಂಬನೆಯಂತೆ `ನರಸಿಂಹ~ ಚಿತ್ರ ಕಾಣುತ್ತದಾದರೂ, ಚಿತ್ರದ ಚೌಕಟ್ಟು ಹಳ್ಳಿ ರಾಜಕೀಯದಿಂದಾಚೆಗೆ ಹೋಗುವುದಿಲ್ಲ. ತನ್ನಷ್ಟಕ್ಕೆ ತಾನೇ ಗೆರೆ ಎಳೆದುಕೊಂಡ ನರಸಿಂಹ ಆ ಗೆರೆಯನ್ನು ತಾನೂ ದಾಟಲಾರ, ದಾಟಿದವರನ್ನು ಸುಮ್ಮನೆಯೂ ಉಳಿಸಲಾರ. ಇಂಥ ನರಸಿಂಹನ ಸಂಕೀರ್ಣ ಪಾತ್ರವನ್ನು ರವಿಚಂದ್ರನ್ ಸರಾಗವಾಗಿ ಪೋಷಿಸಿದ್ದಾರೆ.ರವಿಚಂದ್ರನ್ ಪಾತ್ರ ಪೋಷಣೆ ಚೆನ್ನಾಗಿದೆಯಾದರೂ, ಅವರ ವಯಸ್ಸು ಹಾಗೂ ದೇಹ ಎರಡೂ ನೋಡುಗರಿಗೆ ಎದ್ದುಕಾಣುತ್ತದೆ. ಇದೇ ಮೊದಲ ಬಾರಿಗೆ ಸೌಂದರ್ಯದ ಬಗ್ಗೆ ಅವರು ಅನಾಸಕ್ತರಂತೆ ಕಾಣಿಸಿಕೊಂಡಿರುವುದು ಕುತೂಹಕಕಾರಿಯಾಗಿದೆ. ಈ ಅನಾಸಕ್ತಿ ಎಷ್ಟರಮಟ್ಟಿಗಿದೆಯೆಂದರೆ, ನಾಯಕಿ ಮಳೆ ಹಾಡಿನಲ್ಲಿ ತೊಪ್ಪೆಯಾಗಿ ಹಲವು ಭಂಗಿಗಳನ್ನು ಪ್ರದರ್ಶಿಸಿದರೂ ನಾಯಕನ ಸಾಕ್ಷಾತ್ಕಾರವಾಗುವುದಿಲ್ಲ. ಪಾಪ, ಆಕೆ ಸಹ ನರ್ತಕರೊಂದಿಗೆ ಕುಣಿದೇ ದಣಿಯುತ್ತಾಳೆ.ಸಿನಿಮಾದ ಕಥೆ ತಮಿಳಿನ `ಮಾಯಿ~ಗೆ (ತೆಲುಗಿನಲ್ಲಿ `ಸಿಂಹ ರಾಸಿ~) ಋಣಿಯಾಗಿದ್ದರೂ, ಕಥೆ ದಶಕಗಳಷ್ಟು ಹಳೆಯದಾಗಿದ್ದರೂ, ಅದನ್ನು ನಿರ್ದೇಶಕ ಮೋಹನ್ ಶ್ರದ್ಧೆಯಿಂದ ಕನ್ನಡಕ್ಕೆ ತಂದಿದ್ದಾರೆ. ಸಂಭಾಷಣೆಯಲ್ಲೂ ಅವರ ಶ್ರದ್ಧೆ ಎದ್ದುಕಾಣುತ್ತದೆ. ಹಳೆಯ ಕಥೆಯನ್ನು ವರ್ತಮಾನಕ್ಕೆ ಹೊಂದಿಸುವುದು ಅವರಿಗೆ ಸಾಧ್ಯವಾಗಿದ್ದಲ್ಲಿ ಸಿನಿಮಾ ಇನ್ನಷ್ಟು ಪರಿಣಾಮಕಾರಿ ಆಗಿರುತ್ತಿತ್ತು.ನಾಯಕಿ ನಿಕೇಶಾ ಪಟೇಲ್ ತಮ್ಮ ಚೆಲುವಿನಿಂದ ನೆನಪಿನಲ್ಲುಳಿಯುತ್ತಾರೆ. ಗೀತೆಯೊಂದರಲ್ಲಿ ಕುಣಿಯುವ ನಟಿ ಸಂಜನಾ `ನರಸಿಂಹ~ನ ಉಗ್ರಾವತಾರದ ನಡುವೆ ಒಂದು ತಣ್ಣನೆ ನಿಲುಗಡೆ. ಉಳಿದಂತೆ ಎದ್ದುಕಾಣುವುದು ಖಳನ ಪಾತ್ರದಲ್ಲಿನ ರವಿಶಂಕರ್.

ಅವರ ಪಾತ್ರ ಪೋಷಣೆಗೆ ನಿರ್ದೇಶಕರು ಅಷ್ಟೇನೂ ಮುತುವರ್ಜಿ ವಹಿಸದಿದ್ದರೂ, ಚಿಕ್ಕ ಅವಕಾಶದಲ್ಲೇ ಅವರು ಚಿತ್ರದ ಮೇಲೆ ತಮ್ಮ ಛಾಪು ಮೂಡಿಸುತ್ತಾರೆ.ಹಂಸಲೇಖಾ ಅವರ ಸಂಗೀತ `ನರಸಿಂಹ~ ಚಿತ್ರದ ವಿಶೇಷಗಳಲ್ಲೊಂದು.

 

ಆಧುನಿಕ ಜನಪದವನ್ನು ಪರಿಣಾಮಕಾರಿಯಾಗಿ ಗೀತೆಗಳಲ್ಲಿ ಹಿಡಿದಿಡುವುದು ಅವರಿಗೆ ಸಾಧ್ಯವಾಗಿದೆ. ಆದರೆ, ಇಡೀ ಚಿತ್ರಕ್ಕೆ ಹೊಸತೊಂದು ಆಯಾಮವನ್ನು ನೀಡುವುದು ಅವರ ಸಂಗೀತ-ಸಾಹಿತ್ಯಕ್ಕೆ ಸಾಧ್ಯವಾಗಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.