ಮಂಗಳವಾರ, ಮೇ 18, 2021
31 °C

ಕಂಬಾರರಿಗೆ ಅಭಿನಂದನೆಗಳ ಮಹಾಪೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡಕ್ಕೆ ಎಂಟನೆಯ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರ ನಿವಾಸ `ಸಿರಿ ಸಂಪಿಗೆ~ಯಲ್ಲಿ ಮಂಗಳವಾರವೂ ಸಂಭ್ರಮದ ವಾತಾವರಣ ಮುಂದುವರಿದಿತ್ತು.ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಖಚಿತವಾದಾಗ ಅಸಂಖ್ಯ ಸಾಹಿತ್ಯಾಭಿಮಾನಿಗಳು, ಹಿತೈಷಿಗಳು ಮನೆಗೆ ತೆರಳಿ ಅಭಿನಂದನೆ ಸಲ್ಲಿಸಿದರೆ, ಮಂಗಳವಾರ ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು ಅವರ ನಿವಾಸಕ್ಕೆ ತೆರಳಿ ಶುಭಾಶಯ ಕೋರಿದರು.`ಸಿರಿ ಸಂಪಿಗೆ~ಗೆ ಮಂಗಳವಾರ ಬೆಳಿಗ್ಗೆ ತೆರಳಿದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು, `ನಿಮ್ಮ ಮೂಲಕ ಕನ್ನಡಕ್ಕೆ ಮತ್ತೊಮ್ಮೆ ಜ್ಞಾನಪೀಠ ಪ್ರಶಸ್ತಿ ದೊರೆತಿರುವುದು ಸಂತಸದ ಸಂಗತಿ~ ಎಂದು ಶುಭ ಕೋರಿದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಮುಖ್ಯಮಂತ್ರಿಗಳ ಜೊತೆಗಿದ್ದರು.`ನಿಮಗೆ ದೊರೆತ ಜ್ಞಾನಪೀಠ ಪ್ರಶಸ್ತಿ ನಾಡಿನ ಸಾಹಿತ್ಯ ಲೋಕದ ಪಾಲಿಗೆ ಮತ್ತೊಂದು ಕಿರೀಟ ದೊರೆತಂತೆ~ ಎಂದು ಸುರೇಶ್ ಕುಮಾರ್ ಕಂಬಾರರೊಂದಿಗೆ ಸಂತಸ ಹಂಚಿಕೊಂಡರು.ಮಹಾತ್ಮ ಗಾಂಧಿ ಅವರ ಮೊಮ್ಮಗಳು ಸುಮಿತ್ರಾ ಗಾಂಧಿ ಕೂಡ ಕಂಬಾರರ ನಿವಾಸಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೂ ಕಂಬಾರರಿಗೆ ಶುಭಾಶಯ ಕೋರಿದ್ದಾರೆ.ಚಿತ್ರ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಮತ್ತಿತರ ಗಣ್ಯರು ಕಂಬಾರರಿಗೆ ಶುಭ ಕೋರಿದರು.ಪಾಲ್ತಾಡಿ ಅಭಿನಂದನೆ:


ಡಾ. ಚಂದ್ರಶೇಖರ ಕಂಬಾರರು ಸಾಹಿತ್ಯದಲ್ಲಿ ಮಾತ್ರವಲ್ಲ ಬದುಕಿನಲ್ಲೂ ಅಪ್ಪಟ ದೇಸಿ ಪದ್ಧತಿಯನ್ನು ಅಳವಡಿಸಿಕೊಂಡವರು ಎಂದು ರಾಜ್ಯ ತುಳು ಅಕಾಡೆಮಿಯ ಅಧ್ಯಕ್ಷ ಪಾಲ್ತಾಡಿ ರಾಮಕೃಷ್ಣ ಆಚಾರ್ ಅಭಿನಂದನೆ ಸಲ್ಲಿಸಿದ್ದಾರೆ. ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರುವುದು ನಾಡಿನ ಸಮಸ್ತ ಜಾನಪದ ಪ್ರೇಮಿಗಳಿಗೆ ಸಂತಸ ತಂದಿದೆ ಎಂದರು.ಸೃಜನಾತ್ಮಕ ಬರಹಗಳ ಮೂಲಕ ಆಧುನಿಕತೆಗೆ ಅಪ್ಪಟ ದೇಸಿ ಸ್ಪರ್ಶ ನೀಡಿದ ಡಾ. ಚಂದ್ರಶೇಖರ ಕಂಬಾರರು ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರು ಚಲನಚಿತ್ರ ಜಗತ್ತಿಗೂ ಅಪಾರ ಕೊಡುಗೆ ನೀಡಿದ್ದಾರೆ ಎಂದು ರಾಜ್ಯ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಟಿ.ಎಸ್. ನಾಗಾಭರಣ ಪ್ರಶಂಸಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.