ಮಂಗಳವಾರ, ಮೇ 11, 2021
24 °C

ಕಂಬಾರರು ಹುಟ್ಟು ಕವಿ

ಬಸವರಾಜ ಹವಾಲ್ದಾರ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: `ಲಾವಣಿ ಹಾಡಲಿಕ್ಕೆ ಶುರು ಮಾಡಿದ ಅಂದ್ರ ಸಾಕು. ಕೇಳುವವರು ಮೈಮರೆತು ಕುಳಿತುಕೊಳ್ಳುತ್ತಿದ್ದರು. ಹೊತ್ತು ಹೋಗಿದ್ದ.. ತಿಳೀತಿರಲಿಲ್ಲ~ ಎಂದು ಡಾ. ಚಂದ್ರಶೇಖರ ಕಂಬಾರ ಅವರ ಪ್ರೌಢಶಾಲೆಯ ಸಹಪಾಠಿಯಾಗಿದ್ದ ನಿವೃತ್ತ ಶಿಕ್ಷಕ ಶಂಕರ ಮುಂಗರವಾಡಿ ವಿದ್ಯಾರ್ಥಿ ಜೀವನದ ನೆನಪುಗಳನ್ನು ಹಂಚಿಕೊಂಡರು.`ಅವನೊಬ್ಬ ಹುಟ್ಟಾ ಕವಿ, 7ನೆಯ ತರಗತಿಯಲ್ಲಿ ಓದುತ್ತಿರುವಾಗಲೇ ಅವ ಕವನ ಬರೆಯುವುದು, ಲಾವಣಿ ಬರೆದು ಹಾಡುವುದನ್ನು ಮಾಡುತ್ತಿದ್ದ. ಅವನ ಹಾಡನ್ನ ಕೇಳುವುದೇ ನಮ್ಮೆಲ್ಲರಿಗೂ ಸಂಭ್ರಮ ಉಂಟು ಮಾಡುತ್ತಿತ್ತು~ ಎಂದು ಅವರು ಭಾವುಕರಾಗಿ ನುಡಿದರು.`ನಾಟಕ ಮಾಡುವುದು, ಹಾಡುವುದು ಅಂದ್ರ ಅವಗ ಭಾಳ ಪ್ರೀತಿ. ಮುಗ್ಧ ಸ್ವಭಾವದವನಾಗಿದ್ದ. ಕೃಷ್ಣಮೂರ್ತಿ ಪುರಾಣಿಕರು ನಮ್ಮ ಕನ್ನಡದ ಮಾಸ್ತರಾಗಿದ್ದರು. ಅವರ ಮೆಚ್ಚಿನ ಶಿಷ್ಯನಾಗಿದ್ದ~ ಎಂದು ಅವರು ಹೇಳಿದರು.`ಎರಡು ವರ್ಷದ ಹಿಂದೆ ಬೆಳಗಾವಿಯಲ್ಲಿ ನಡೆದಿದ್ದ ಸಮಾರಂಭವೊಂದರಲ್ಲಿ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಬೇಕು ಎಂದು ಹೇಳಿದ್ದೆ. ಸ್ನೇಹಿತನಿಗಾಗಿ ಅಂದು ಹೇಳಿದ್ದ ಮಾತು ಇಂದು ನಿಜವಾಗಿದೆ. ಅವರಿಗೆ ಮನ್ನಣೆ ಸಿಕ್ಕಿರುವುದು ನಮಗೆಲ್ಲ ಸಂತಸ ತಂದಿದೆ~ ಎಂದು ಅವರ ಕಾಲೇಜಿನ ಸಹಪಾಠಿ ಪ್ರೊ.ಎಂ.ಆರ್. ಉಳ್ಳಾಗಡ್ಡಿ ಹೇಳಿದರು.ಬಡತನಕ್ಕಾಗಿ ಶಾಲೆಯನ್ನೇ ಬಿಡಲು ಸಿದ್ಧನಾಗಿದ್ದ ಜಿಲ್ಲೆಯ ಹುಡಗನೊಬ್ಬ ಜ್ಞಾನಪೀಠ ಪ್ರಶಸ್ತಿಗೆ ಭಾಜನನಾಗುವ ಮಟ್ಟಿಗೆ ಸಾಧನೆ ಮಾಡಿರುವುದು ಜಿಲ್ಲೆಯ ಸಾಧನೆಗೆ ಅತಿ ದೊಡ್ಡ ಗರಿ ಸಿಕ್ಕಿಸಿದಂತಾಗಿದೆ. ಹುಕ್ಕೇರಿ ತಾಲ್ಲೂಕಿನ ಘೋಡಗೇರಿಯಲ್ಲಿ ಕಂಬಾರರು ಜನಿಸಿದರು. ಅವರ ತಂದೆ ಬಸವಣ್ಣೆಪ್ಪ ಮತ್ತು ತಾಯಿ ಚೆನ್ನಮ್ಮ. ಬಸವಣ್ಣೆಪ್ಪನವರು ವಿದ್ಯಾವಂತರಾಗಿದ್ದರು. ಸೋದರಮಾವ ರಾಮಪ್ಪ ಅವರ ಪ್ರಭಾವ ಕಂಬಾರ ಅವರ ಮೇಲೆ ಬಹುದೊಡ್ಡ ಪ್ರಮಾಣದಲ್ಲಿ ಆಗಿತ್ತು.ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ ಕಂಬಾರ ಅವರು, ಗೋಕಾಕ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿದರು. ಆ ಸಂದರ್ಭದಲ್ಲಿ ತಮ್ಮ ಖರ್ಚಿನಲ್ಲಿ ವಾಸ್ತವ್ಯ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಶಾಲೆಯನ್ನೇ ಬಿಟ್ಟಿದ್ದರು.ಇದರಿಂದ ಮನನೊಂದ ಅವರ ಶಿಕ್ಷಕರಾಗಿದ್ದ ಕೃಷ್ಣಮೂರ್ತಿ ಪುರಾಣಿಕರು, ತಮ್ಮ ಸಹ ಶಿಕ್ಷಕ ಮುಂಡಾಸರ ಮಾಸ್ತರರಿಗೆ ವಸತಿ ವ್ಯವಸ್ಥೆ ಮಾಡಿಕೊಂಡುವಂತೆ ದುಂಬಾಲು ಬಿದ್ದರು. ಆಗ ಅವರು ಸಾವಳಗಿಮಠದ ಶಾಖಾ ಮಠದಲ್ಲಿ ವಸತಿ ವ್ಯವಸ್ಥೆ ಮಾಡಿಕೊಟ್ಟ ನಂತರವಷ್ಟೇ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಯಿತು.ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಕಂಬಾರರು ಪದವಿ ಅಧ್ಯಯನ ಮಾಡಿದರು. ಆಗಲೂ ಅವರಿಗೆ ಆಶ್ರಯ ನೀಡಿದ್ದು ನಾಗನೂರು ಶಿವಬಸವ ಸ್ವಾಮೀಜಿ ಅವರ ಪ್ರಸಾದ ನಿಲಯ. ಅಲ್ಲಿದ್ದುಕೊಂಡೇ ಅಭ್ಯಾಸ ಮಾಡಿದ ಅವರು ನಂತರ ಕೆಲಕಾಲ ಅಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದರು.`ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ನಮ್ಮೂರಿನವರಿಗೆ ಸಿಕ್ಕಿರುವುದು ಹೆಮ್ಮೆಯ ವಿಷಯ. ನಮ್ಮೂರಿನ ಜತೆಗಿನ ಬಾಂಧವ್ಯ ಇಂದಿನವರೆಗೂ ಕಡಿದುಕೊಂಡಿಲ್ಲ. ಯಾವಾಗಲಾದರೂ ಒಮ್ಮೆ ಬಂದು ಹೋಗುತ್ತಿರುತ್ತಾರೆ~ ಎನ್ನುತ್ತಾರೆ ಘೋಡಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ ಬೂಸಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.