ಗುರುವಾರ , ಮೇ 13, 2021
17 °C

ಕಂಬಾರ ದೇಸಿ ಕಸುಬುದಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಮ್ಮ ಪ್ರಸಿದ್ಧ ಕವನವೊಂದರಲ್ಲಿ ಕಾಡು ಕುದುರೆಯನ್ನು ಕಂಬಾರರು ಹೀಗೆ ವರ್ಣಿಸುತ್ತಾರೆ: “ಮೂಡಬೆಟ್ಟ ಸೂರ್ಯಹುಟ್ಟಿ / ಹಸರಿನ ಗುಟ್ಟ ಒಡೆವಲ್ಲಿ/ ಮುಗಿವೇ ಇಲ್ಲದ / ಮುಗಿಲಿನಿಂದ... ಕಾಡುಕುದರಿ ಓಡಿಬಂದಿತ್ತ”. ಇಲ್ಲಿ ಆ ಕುದುರೆ ಅಪರಿಮಿತ ಲೈಂಗಿಕತೆಯ ಪ್ರತಿಮೆ ಅಹುದು; ಆದರೆ, ಅದಕ್ಕಿಂತ ಹೆಚ್ಚಿಗೆ ಸೂರ್ಯ ಹುಟ್ಟುವಲ್ಲಿಂದ, ಹಸಿರಿನ ಗುಟ್ಟನ್ನರಿತ, `ಕಾಡು~ ಕುದುರೆ ಅಸಾಧಾರಣ ಸೃಜನಶೀಲತೆಯ, ದೇಶಿ ಪ್ರಜ್ಞೆಯ ಅದ್ಭುತ ಪ್ರತಿಮೆ - ನವನವೋನ್ಮೇಶಶಾಲಿನಿಯಾದ ಕಂಬಾರರ ಪ್ರತಿಭೆಯ ಪ್ರತಿಮೆ.ಕವಿ- ನಾಟಕಕಾರ- ಕಾದಂಬರಿಕಾರ- ಸಂಸ್ಕೃತಿ ಚಿಂತಕ- ಸಮರ್ಥ ಆಡಳಿತಗಾರ - ಚಲನಚಿತ್ರ ನಿರ್ದೇಶಕ, ಪದ್ಮಶ್ರೀ ಡಾ. ಚಂದ್ರಶೇಖರ ಕಂಬಾರರು ಉತ್ತರ ಕರ್ನಾಟಕದ ಘೋಡಗೇರಿ ಎಂಬ ಚಿಕ್ಕ ಹಳ್ಳಿಯ ಬಡ ಕುಟುಂಬವೊಂದರಲ್ಲಿ 1937ರಲ್ಲಿ ಜನಿಸಿದರು.ಕಂಬಾರರು ಬಾಲ್ಯದಿಂದಲೂ ಬಡತನದೊಡನೆ ಹೋರಾಡುತ್ತಲೇ, ಹಾಗೂ `ಸಂಗ್ಯಾ ಬಾಳ್ಯಾ~, ಡಪ್ಪಿನಾಟ ಮುಂತಾದ ಪ್ರದರ್ಶನಗಳನ್ನು ನೋಡುತ್ತಲೇ, ಲಾವಣಿಗಳನ್ನು ಕೇಳುತ್ತಲೇ ಬೆಳೆದರು. ಈ ಬಗೆಯ ಸುಸಂಸ್ಕೃತ ಹಾಗೂ ಸಮೃದ್ಧ ಗ್ರಾಮೀಣ ಹಿನ್ನೆಲೆ ಕಂಬಾರರ ವಿಶಿಷ್ಟ ಪ್ರತಿಭೆಯನ್ನು ರೂಪಿಸಿತು. ಕಂಬಾರರ ಮೊದಲ ಕವನ ಸಂಕಲನ `ಮುಗುಳು~ 1958ರಲ್ಲಿ ಪ್ರಕಟವಾಯಿತು. ಅಂದಿನಿಂದ ಇಲ್ಲಿಯವರೆಗೆ ಕಂಬಾರರ ಬಹುಮುಖೀ ಪ್ರತಿಭೆಯ ಮೂಸೆಯಿಂದ ಎಂಟು ಕವನ ಸಂಕಲನಗಳು, 22 ನಾಟಕಗಳು, ಐದು ಕಥೆ- ಕಾದಂಬರಿಗಳು, ರಂಗಭೂಮಿ ಹಾಗೂ ಸಾಹಿತ್ಯವನ್ನು ಕುರಿತ ಸಂಶೋಧನಾ ಲೇಖನಗಳ 12 ಸಂಕಲನಗಳು, ಇತ್ಯಾದಿ ಒಟ್ಟು 47 ಕೃತಿಗಳು ಹೊರಬಂದಿವೆ. ಈ ಕಿರು ಲೇಖನದಲ್ಲಿ ಕಂಬಾರರ ಅಗಾಧ ವಾಙ್ಮಯದ ಕೆಲವು ಮೂಲಾಶಯಗಳನ್ನು ಗುರುತಿಸಲು ಪ್ರಯತ್ನಿಸಿದ್ದೇನೆ. ***

ಕಂಬಾರರ ಮೊದಲ ಸಂಕಲನ `ಮುಗುಳು~ ನವ್ಯ ಚಳವಳಿಯ ಉಚ್ಛ್ರಾಯದ ಕಾಲಘಟ್ಟದಲ್ಲಿ ಹೊರಬಂದರೂ ಆ ಸಂಕಲನದ ಕವನಗಳಲ್ಲಿ ಕಂಡು ಬಂದ ಜಾನಪದ ಗೀತೆಗಳ ಗೇಯತೆ ಮತ್ತು ಉತ್ತರ ಕರ್ನಾಟಕದ ಆಡುಭಾಷೆಯ ಕಸುವು ಕಂಬಾರರನ್ನು ನವ್ಯ ಕವಿಗಳಿಗಿಂತ ಭಿನ್ನರೆಂದು ದರ್ಶಿಸಿದುವು.  ಈ ಅಂಶಗಳೊಡನೆ ಪುರಾಣಪ್ರಜ್ಞೆಯೂ ಸೇರಿದ ಅವರ `ಹೇಳತೇನ ಕೇಳ~ ಎಂಬ ಎರಡನೆಯ ಕವನ ಸಂಕಲನ ಅಡಿಗರಿಗಿಂತ ಭಿನ್ನವಾದ ಕಂಬಾರರ ದೇಶೀ ಪ್ರಜ್ಞೆಯನ್ನು ಗಾಢವಾಗಿ ಕನ್ನಡ ಕಾವ್ಯಕ್ಷೇತ್ರದಲ್ಲಿ ಮೂಡಿಸಿತು.ಆ ಸಂಕಲನದಲ್ಲಿರುವ `ಹೇಳತೇನ ಕೇಳ~ ಎಂಬ `ಡಪ್ಪಿನ ಪದಗಳ~ ಆಕೃತಿಯಲ್ಲಿರುವ ದೀರ್ಘ ಕಥನ ಕವನ ಒಂದು ಕಾಲದಲ್ಲಿ ಶಾಂತಿ- ನೆಮ್ಮದಿಗಳಿಂದ ತುಂಬಿದ್ದ ಶಿವಾಪುರವೆಂಬ ಒಂದು ಗ್ರಾಮದಲ್ಲಿ ಕಾಲಕ್ರಮದಲ್ಲಿ ಆದ ಅಗಾಧ ಸಾಮಾಜಿಕ ಪರಿವರ್ತನೆಯನ್ನು ದಾಖಲಿಸುತ್ತದೆ. ಮಾಯಾವಿ ರಾಕ್ಷಸನೊಬ್ಬನು ಹುಲಿಯ ವೇಷದಲ್ಲಿ ಆ ಗ್ರಾಮದ ಬಳಿ ಬಂದು, ಅದನ್ನು ಬೇಟೆಯಾಡಲು ಬಂದ ಊರ ಗೌಡನನ್ನು ಕೊಂದು, ಅವನದೇ ರೂಪವನ್ನು ಧರಿಸಿ, ಮನೆಯಲ್ಲಿ ಮತ್ತು ಊರಿನಲ್ಲಿ ಗೌಡನ ಸ್ಥಾನಮಾನಗಳನ್ನು ಆಕ್ರಮಿಸಿಕೊಂಡು, ತನ್ನದೇ ಆದ ರೀತಿಯಲ್ಲಿ ಆ ಊರಿನ ಬದುಕನ್ನು ನಿಯಂತ್ರಿಸುವ ಹಾಗೂ ಪರಿವರ್ತಿಸುವ ಕಥೆಯನ್ನು ಈ ಕವನ ಕಟ್ಟಿಕೊಡುತ್ತದೆ. ಈ ಕವನದಲ್ಲಿ ಮುಂದೆ ಕಂಬಾರರ ಇಡೀ ವಾಙ್ಮಯ-ಪ್ರಪಂಚದಲ್ಲಿ ಕಂಡು ಬರುವ ಸರಿ ಸುಮಾರು ಎಲ್ಲಾ ಆಶಯಗಳೂ ಕಂಡು ಬರುತ್ತವೆ; ಸ್ಥೂಲವಾಗಿ ಆ ಆಶಯಗಳನ್ನು ಹೀಗೆ ಗುರುತಿಸಬಹುದು:ಲೈಂಗಿಕತೆ:  ಕಂಬಾರರ ಕಾವ್ಯ- ನಾಟಕ- ಕಾದಂಬರಿ ಇವೆಲ್ಲವುಗಳಲ್ಲಿಯೂ ಲೈಂಗಿಕತೆಯ ಆಶಯ ಹಾಸುಹೊಕ್ಕಾಗಿದೆ. ಜೀವಲೋಕದ ಅತ್ಯಂತ ಪ್ರಬಲ ಪ್ರವೃತ್ತಿಯಂತೆ ಲೈಂಗಿಕತೆಯನ್ನು ಪರಿಭಾವಿಸುವ ಕಂಬಾರರು ಆ ಪ್ರವೃತ್ತಿಯ ಸೃಜನಾತ್ಮಕ ಗುಣಗಳನ್ನು ನೇರವಾಗಿ, ಜಾನಪದ ಕಥೆಗಳ ರೂಪಕಗಳ ಮೂಲಕ, ಅನ್ಯೋಕ್ತಿಯ ರೀತಿಯಲ್ಲಿ, ಇನ್ನಿಲ್ಲದಂತೆ ಚಿತ್ರಿಸುತ್ತಾ, ಒಂದು ಪುರಾಣವನ್ನೇ ಕಟ್ಟುತ್ತಾರೆ.ಈ ಪುರಾಣದ ಚೌಕಟ್ಟೆಂದರೆ, ಸ್ತ್ರೀಯನ್ನು ಭೂಮಿಯೊಡನೆ ಸಮೀಕರಿಸಿ, ಅವರಿಬ್ಬರನ್ನೂ ಫಲವಂತಿಕೆಯ ಆಕರಗಳಂತೆ ಕಂಬಾರರು ಚಿತ್ರಿಸುವುದು; ಬಂಜೆ ಸ್ತ್ರೀ ಬಂಜರು ಭೂಮಿಯನ್ನು ಸಂಕೇತಿಸುತ್ತಾಳೆ. ಕೆಲ ಸಂದರ್ಭಗಳಲ್ಲಿ ಆ ಸ್ತ್ರೀಯನ್ನು ಕೂಡುವ ಪುರುಷನು ನಿರ್ವೀರ್ಯನಾಗಿದ್ದರೆ, ಸ್ತ್ರೀ (ನೈತಿಕ ತೀರ್ಮಾನಗಳ ಹಂಗಿಲ್ಲದೆ) ತನಗೊಪ್ಪುವ ಮತ್ತೊಬ್ಬ ಪುರುಷನನ್ನು ಕೂಡಿ ಗರ್ಭವತಿಯಾಗುತ್ತಾಳೆ; ಕೂಡಲೇ ಮಳೆ ಬಿದ್ದು ಭೂಮಿಯೂ ಫಲವಂತಿಕೆಯನ್ನು ಪಡೆಯುತ್ತದೆ. ಈ ಪುರಾಣದ ಅನೇಕ ವಿನ್ಯಾಸಗಳನ್ನು ನಾವು ಕಂಬಾರರ ಪ್ರಸಿದ್ಧ ಕೃತಿಗಳಲ್ಲಿ ಕಾಣುತ್ತೇವೆ: `ಹೇಳತೇನ ಕೇಳ~, `ನವಿಲೇ ನವಿಲೇ~, `ಹೋರಿ~, `ಕುದರಿ ಸಿದ್ದ~, `ಕಾಡು ಕುದುರೆ~, `ನಾ ಕುಣೀಬೇಕ~, `ಮೈಮುರೀ ಬೇಕಾ~ ಇತ್ಯಾದಿ ಕವನಗಳು; ಫಲವಂತಿಕೆ ಹಾಗೂ ಪ್ರತಿಷ್ಠಿತ ವ್ಯವಸ್ಥೆಗಳ ವಿರುದ್ಧ ಪ್ರತಿಭಟನೆ ಇವೆರಡು ಆಶಯಗಳನ್ನೂ ಸಮರ್ಥವಾಗಿ ದುಡಿಸಿಕೊಳ್ಳುವ `ಜೋಕುಮಾರಸ್ವಾಮಿ~ ನಾಟಕ; ಊಳಿಗಮಾನ್ಯ ವ್ಯವಸ್ಥೆಯ ಅಧಃಪತನವನ್ನು ನಾಟ್ಯೀಕರಿಸುವ `ಸಿಂಗಾರೆವ್ವ ಮತ್ತು ಅರಮನೆ~ ಕಾದಂಬರಿ ಇತ್ಯಾದಿ.ಪರಂಪರೆ ಮತ್ತು ಬದಲಾವಣೆ:  ಪರಂಪರೆಯನ್ನು ಕುರಿತು ಕಂಬಾರರಲ್ಲಿ ದ್ವಿಧಾ ಭಾವವಿದೆ. `ಹೇಳತೇನ ಕೇಳ~ ಕವನದಲ್ಲಿ ಸೋಗಿನ ಗೌಡ ಊರಿನಲ್ಲಿ ಮಕ್ಕಳಿಗಾಗಿ ಸ್ಕೂಲ್ ಕಟ್ಟಿಸುತ್ತಾನೆ; ಆದರೆ, ಅದನ್ನು ಕಟ್ಟಲು ಅಲ್ಲಿದ್ದ ಹಳ್ಳಿಯ ಗರಡಿ ಮನೆ, ಪುರಾತನ ಆಲದ ಮರ ಇತ್ಯಾದಿಗಳನ್ನು ನಾಶಮಾಡುತ್ತಾನೆ. ಪರಂಪರೆಯ ಪ್ರತಿಮೆಯಾಗಿ ಆಲದ ಮರ ಮತ್ತೆ ಮತ್ತೆ ಕಂಬಾರರ ಕವನಗಳಲ್ಲಿ ಕಂಡು ಬರುತ್ತದೆ: ಅನೇಕಾನೇಕ ಜೀವಿಗಳಿಗೆ ಆಶ್ರಯ ಕೊಡುವ ಪುರಾತನ ಆಲದ ಮರ ತನ್ನ ಅಡಿಯಲ್ಲಿ ಇತರ ಯಾವ ಮರಗಿಡಗಳೂ ಬೆಳೆಯದಂತೆ ಬೇರು ಚಾಚುತ್ತದೆ. ಈ ಬಗೆಯ ದ್ವಿಧಾ ಭಾವನೆಯನ್ನು ಸಮರ್ಥವಾಗಿ ದಾಖಲಿಸುವ ಇತರ ಕೃತಿಗಳೆಂದರೆ `ನಮ್ಮಜ್ಜ~, `ಗಂಗಾ ಮಾಯಿ~ ಇತ್ಯಾದಿ ಕವನಗಳು; `ತುಕ್ರನ ಕನಸು~, `ಹರಕೆಯ ಕುರಿ~ ಇತ್ಯಾದಿ ನಾಟಕಗಳು.ಸತ್ಯ-ಭ್ರಮೆಗಳ ಸಮಸ್ಯೆ:  ವಾಸ್ತವ ಸತ್ಯವನ್ನು ಭ್ರಮೆಯಿಂದ ಬೇರ್ಪಡಿಸುವ ಬಗೆ ಯಾವುದು?- ಎಂಬ ಪ್ರಶ್ನೆ ಮತ್ತೆ ಮತ್ತೆ ಕಂಬಾರರನ್ನು ಕಾಡಿದೆ. ಈ ಸಮಸ್ಯೆಯನ್ನು ಒಂದೇ ರೂಪದ ಭಿನ್ನ ವ್ಯಕ್ತಿಗಳು, ಬಿಂಬ- ಪ್ರತಿಬಿಂಬ ಇತ್ಯಾದಿ ರೂಪಕಗಳ ಮೂಲಕ ಕಂಬಾರರು ಅಭಿವ್ಯಕ್ತಿಗೊಳಿಸುತ್ತಾರೆ. `ಹೇಳತೇನ ಕೇಳ~ ಕವನದಲ್ಲಿ ಸೋಗಿನ ಗೌಡ ಬಂದು ಊರ ಆಡಳಿತವನ್ನು ವಹಿಸಿಕೊಂಡರೂ, ಮಗ ಬಾಳಗೊಂಡನನ್ನು ಬಿಟ್ಟು ಇತರರಿಗೆ, ಗೌಡ್ತಿಗೂ ಕೂಡಾ, ಯಾವ ಸಂಶಯವೂ ಬರುವುದಿಲ್ಲ. ಇದೇ ಕಥೆಯನ್ನು ಇನ್ನೂ ವ್ಯಾಪಕವಾಗಿ `ಋಷ್ಯಶೃಂಗ~ ಮತ್ತು `ಹುಲಿಯ ನೆರಳು~ ನಾಟಕಗಳು ಚಿತ್ರಿಸುತ್ತವೆ.`ಆ ಮರ ಈ ಮರ~ ಕವನದಲ್ಲಿ ನದಿಯ ದಂಡೆಯಲ್ಲಿರುವ ಮರದ ಪ್ರತಿಬಿಂಬ ನೀರಿನಲ್ಲಿ ಕಾಣುತ್ತದೆ; ಇವೆರಡರಲ್ಲಿ ಯಾವುದು ನಿಜ ಎಂದು ಹೇಗೆ ಹೇಳುವುದು? `ನಾಟಕದ ರಾಜನೂ ಕೋಡಂಗಿಯೂ~ ಕವನದಲ್ಲಿ, ನಾಟಕದ ಕೋಡಂಗಿಯು ರಾಜನ ವೇಷ ಧರಿಸಿ, ಎಲ್ಲರನ್ನೂ ತಾನೇ ರಾಜನೆಂದು ನಂಬಿಸುತ್ತಾನೆ; ನಿಜವಾದ ರಾಜನು ಬಂದಾಗ ಅವನನ್ನು ಕೋಡಂಗಿಯೆಂದು ನಂಬಿ ಪ್ರಜೆಗಳು ಹಾಸ್ಯಮಾಡುತ್ತಾರೆ. `ನಿಜ~ವಾದ `ನಾಟಕ~ದ ರಾಜನೆಂದರೆ ಏನು? `ಮರೆತೇನೆಂದರೆ ಮರೆಯಲಿ ಹ್ಯಾಂಗ~ ಕವನದಲ್ಲಿ ಮಾವೋ `ಸೊನ್ನಿಗಿ ಆಕಾರ ಬರೆದೇನೆಂದು~, `ಬೇರೊಬ್ಬ ಸೂರ್ಯನನ್ನು ತರುತ್ತೇನೆಂದು~ ಪ್ರಯತ್ನಿಸುತ್ತಾನೆ; ಆದರೆ, ಮಾವೋ ಕೊನೆಗೆ ಮಾಡುವುದು `ಬಣ್ಣದ ಹೆಸರ ಬದಲು~ ಮಾಡುವುದು, `ಕಣ್ಣ ಕಾಮಾಲೆ ತಿಳಿಯದೆ ಹೋದುದು~.ಇಲ್ಲಿ, ನಿಜವಾದ ಮಾವೋ (ಅಥವಾ ರಾಜ/ ಕೋಡಂಗಿ/ ಗೌಡ) ಯಾರು? ಈ ಪ್ರಶ್ನೆಯನ್ನು, ಇದಕ್ಕೆ ಯಾವ ಉತ್ತರವೂ ಇಲ್ಲ ಎಂಬಂತೆ, ವಾಸ್ತವ- ಭ್ರಮೆ ಎರಡೂ ಬೆರೆತುಕೊಂಡಿರುವುದೇ ಬದುಕಿನ ಸ್ವರೂಪ ಎಂಬಂತೆ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದ `ಸಿರಿ ಸಂಪಿಗೆ~ ನಾಟಕವು ಮೂರ್ತರೂಪದಲ್ಲಿ ದರ್ಶಿಸುತ್ತದೆ.ಶಿವಾಪುರದ ಕನಸು: `ಹೇಳತೇನ ಕೇಳ~ ಕವನದಿಂದ ಪ್ರಾರಂಭಿಸಿ, ಸರಿ ಸುಮಾರು ಕಂಬಾರರ ಎಲ್ಲಾ ಕವನಗಳ, ನಾಟಕಗಳ, ಕಾದಂಬರಿಗಳ ಕ್ರಿಯೆ ನಡೆಯುವ ಸ್ಥಳ `ಶಿವಾಪುರ~- ಆ ಭೌಗೋಳಿಕ ಪ್ರದೇಶದಲ್ಲಿ ಬದುಕುವ ಪ್ರಾಣಿ- ಪಶು- ಪಕ್ಷಿಗಳೂ ಸೇರಿದಂತೆ ಎಲ್ಲಾ ಜೀವ ವಿಶೇಷಗಳಿಗೂ ಮಂಗಳಕರವಾಗುವ ಸ್ಥಳ. ಪ್ಲೇಟೋವಿನ `ರಿಪಬ್ಲಿಕ್~ನಂತೆ, ಸರ್ ಟಾಮಸ್ ಮೋರನ `ಯುಟೋಪಿಯಾ~ದಂತೆ, ಕನ್ನಡದ ಸಾಹಿತಿಗಳ ಕನಸಿನ `ಕಲ್ಯಾಣ~ದಂತೆ, ಶಿವಾಪುರವೂ ಒಂದು ಕಾಲ್ಪನಿಕ ಆದರ್ಶ ಸಮಾಜ.

 

ಈ ಸಮಾಜದ ಲಕ್ಷಣಗಳನ್ನು ಹಾಗೂ ಇಲ್ಲಿಯ ಬದುಕಿನ ವಿಶಿಷ್ಟ ಗುಣಗಳನ್ನು ತಮ್ಮ ಪ್ರತಿಯೊಂದು ಕೃತಿಯಲ್ಲಿಯೂ ನೇರವಾಗಿ ಅಥವಾ ಪರೋಕ್ಷವಾಗಿ ಕಂಬಾರರು ಗುರುತಿಸುತ್ತಾ ಹೋಗುತ್ತಾರೆ. ಈ ಶಿವಾಪುರದ ಕನಸು ಕಂಬಾರರ ವಾಙ್ಮಯದ ಕೇಂದ್ರದಲ್ಲಿರುವುದರಿಂದ ಇದನ್ನು ಸ್ವಲ್ಪ ವಿವರವಾಗಿಯೇ ಗಮನಿಸಬೇಕು. ಈ `ಆದರ್ಶ ಸಮಾಜ~ವನ್ನು ವ್ಯಾಪಕ ನೆಲೆಯಲ್ಲಿ ಚಿತ್ರಿಸುವ ಕೃತಿಗಳೆಂದರೆ `ಶಿಖರಸೂರ್ಯ~ ಕಾದಂಬರಿ, `ಎಲ್ಲಿದೆ ಶಿವಾಪುರ~ ಕವನ ಸಂಕಲನ, ಮತ್ತು ಇತ್ತೀಚಿನ ನಾಟಕ `ಶಿವರಾತ್ರಿ~.ಶಿಖರಸೂರ್ಯ: ಕಂಬಾರರ ಮಹತ್ವಾಕಾಂಕ್ಷೆಯ ಕೃತಿಯಾದ ಈ ಕಾದಂಬರಿ ಅನೇಕ `ಕಥನ~ಗಳನ್ನು ಒಟ್ಟಿಗೆ ತರುತ್ತದೆ: ಭಾರತದ ಆರ್ಥಿಕ ವ್ಯವಸ್ಥೆ, ಅಮೆರಿಕಾದ ವಿದೇಶಾಂಗ ನೀತಿ ಇತ್ಯಾದಿಗಳನ್ನು ವಿಶ್ಲೇಷಿಸುವ ಇಂದಿನ ಕಥೆ; ರಸವಿದ್ಯೆಗಾಗಿ ಹಂಬಲಿಸಿದ ನಾಗಾರ್ಜುನ, ಪರಂಪರಾಗತ ನಂಬಿಕೆ-ಆಚರಣೆಗಳು, ವಸಾಹತುಶಾಹಿಯ ಜ್ಞಾನವೆಂಬ ಅಸ್ತ್ರ, ಇತ್ಯಾದಿಗಳನ್ನು ದಾಖಲಿಸುವ ಹಿಂದಿನ ಕಥೆ; ಮತ್ತು ಜಗತ್ತನ್ನು ಸೃಷ್ಟಿಸಿ, ಪೋಷಿಸುವ `ಅಮ್ಮ~ನ ಅನುಭಾವೀ `ಎಂದೆಂದಿನ ಕಥೆ~. ಈ ಬಗೆಯ ಬಹುಮುಖೀ ಕಥನ ಸಾಧ್ಯವಾಗಿರುವುದು `ಚರಿತ್ರೆ - ಪುರಾಣ~ ಎಂಬ ದ್ವಿಮಾನ ವೈರುಧ್ಯ ಕಟ್ಟಿಕೊಟ್ಟಿರುವ ಕಾದಂಬರಿಯ ಸಂವಿಧಾನ; ಈ ವೈರುಧ್ಯ ಅನೇಕ ಬಗೆಯ ಇತರ ದ್ವಿಮಾನ ವೈರುಧ್ಯಗಳನ್ನು ತನ್ನ ಒಡಲೊಳಗೆ ಒಳಗೊಳ್ಳುತ್ತದೆ: `ಕನಕಪುರ~ದ ಚರಿತ್ರೆಯಾಗಿ ಜ್ಞಾನ, ಅಧಿಕಾರ, ಹಿಂಸೆ, ಭೋಗ, ಇತ್ಯಾದಿಗಳನ್ನು; ಮತ್ತು `ಶಿವಾಪುರ~ದ ಪುರಾಣವಾಗಿ ಮೌಖಿಕತೆ, ಅನ್ನ, ಪ್ರೀತಿ, ಮತ್ತು ಸೃಷ್ಟಿ - ಇವುಗಳನ್ನು ಪರಿಣಾಮಕಾರಿಯಾಗಿ ಎದುರು ಬದುರಾಗಿಸುತ್ತದೆ. ಈ ಬಗೆಯ ವೈರುಧ್ಯದಲ್ಲಿ ಅಂತಿಮವಾಗಿ ಕಾದಂಬರಿಕಾರರು ಎತ್ತಿ ಹಿಡಿಯುವುದು `ಶಿವಾಪುರ~ದ ದರ್ಶನವನ್ನು: `ಈ ಜನಕ್ಕೆ (ಶಿವಾಪುರದವರಿಗೆ) ಕಾಲ ಅಂದರೆ ಒಂದು ಅಖಂಡ ಘಟಕ.ತಾವು ಬದುಕಿರುವಾಗ ತಮ್ಮಂದಿಗೆ ತಮ್ಮ ಹಿಂದಿನ ಎಲ್ಲಾ ಶತಮಾನಗಳ ಅನುಭವಗಳನ್ನು, ಇತಿಹಾಸದಲ್ಲಿದ್ದೂ ಬದುಕುತ್ತಾರೆ. ಅಂದರೆ ನೆನಪುಗಳೇ ಇಲ್ಲಿಯ ಕಾಲವನ್ನು ಹಿಂದೆ ಮುಂದೆ ತಳ್ಳುತ್ತವೆ~. ಎಲ್ಲವನ್ನೂ ಚಿನ್ನ ಮಾಡಲು ಪ್ರಯತ್ನಿಸುವ ನಾಗಾರ್ಜುನನ ಹಾಗೂ ವಿಷಕನ್ಯೆಯರ ರೋಚಕ ಕಥೆಯಾಗಿ; `ಕತ್ತಲೆಯ ಕಗ್ಗಾಡಿನಲ್ಲಿ ಬೆಳಕಿನ ಹೊಸ ಧರ್ಮ ಸ್ಥಾಪನೆಯೆ ನಮ್ಮ ಗುರಿ~ ಎಂದು ಪ್ರತಿಯೊಂದು ದೇಶಕ್ಕೂ ನುಸುಳಿ, ಅದನ್ನು ವಶಪಡಿಸಿ- ಕೊಳ್ಳುವ ವಸಾಹತುಶಾಹಿಯ ಅರ್ಥಪೂರ್ಣ ಚರಿತ್ರೆಯಾಗಿ; `ತಾಯಿಗೆ ಸ್ವಾರ್ಥವಿಲ್ಲ; ಅಹಂಕಾರವಿಲ್ಲ; ಪಕ್ಷಪಾತವಿಲ್ಲ. ಪ್ರಪಂಚದಲ್ಲಿರೋ ತಾಯಿ ಒಬ್ಬಳೇ- ಶಿವಾಪುರದಮ್ಮ~ ಎಂಬಂತಹ `ಅಮ್ಮ~ನ ಅನುಭಾವೀ ಕಥನವಾಗಿ; ಈ ಕಾದಂಬರಿ ಯಶಸ್ವಿಯಾಗುತ್ತದೆ.ಎಲ್ಲಿದೆ ಶಿವಾಪುರ: ಶಿವಾಪುರವೆಂಬ ಆದರ್ಶ ಸಮಾಜದ ರೂಪು- ರೇಷೆಗಳನ್ನು ಅನ್ಯೋಕ್ತಿಯ ನೆಲೆಯಲ್ಲಿ `ಶಿಖರಸೂರ್ಯ~ ಶೋಧಿಸಿದರೆ, ಅದೇ ರೂಪು- ರೇಷೆಗಳನ್ನು ಮತ್ತೊಂದು ನೆಲೆಯಲ್ಲಿ ವಿರುದ್ಧ ಮಾದರಿಗಳ ನೆಲೆಯಲ್ಲಿ- `ಎಲ್ಲಿದೆ ಶಿವಾಪುರ~ ಎಂಬ ಕವನ ಸಂಕಲನ ವಿಶ್ಲೇಷಿಸುತ್ತದೆ. ನಾಲ್ಕು ಭಾಗಗಳಲ್ಲಿ ಕವನಗಳನ್ನು ಜೋಡಿಸಿರುವ ಈ ಸಂಕಲನದಲ್ಲಿ, ಮೊದಲ `ಘೋಡಗೇರಿ~ ಎನ್ನುವ ಭಾಗ ಶಿವಾಪುರದ ಭೌಗೋಳಿಕ-ಸಾಂಸ್ಕೃತಿಕ ನಕಾಶೆಯನ್ನು ಅನೇಕ ಕವನಗಳ ಮೂಲಕ ಬಿಡಿಸುತ್ತದೆ; `ಹಂಪಿ~ ಮತ್ತು `ಅಮೆರಿಕಾ~ ಎಂಬ ಮುಂದಿನ ಭಾಗಗಳ ಕವನಗಳು ಹೇಗೆ ಹಂಪಿ- ಅಮೆರಿಕಾಗಳು ಆದರ್ಶಗಳಲ್ಲ ಎಂಬ ನಕಾರಾತ್ಮಕ ಮಾದರಿಗಳನ್ನು ದರ್ಶಿಸುತ್ತವೆ; ಈ ಬಗೆಯ ಎಲ್ಲಾ ಧನಾತ್ಮಕ- ಗುಣಾತ್ಮಕ ಮಾದರಿಗಳನ್ನು ಮೀರುವ ಬಗೆಯನ್ನು `ಬಯಲು~ ಭಾಗದ ಕವನಗಳು ಕಟ್ಟಿಕೊಡುತ್ತವೆ.ಮೊದಲಿಗೆ ಶಿವಾಪುರ: ಇದೊಂದು ಸಣ್ಣ ಆದರೆ ಸ್ವತಂತ್ರವಾಗಿರುವ ಹಳ್ಳಿ; ಇದರ ಸಣ್ಣ ಬೀದಿಗಳು ಊರು ಬಿಟ್ಟು/ ಬೇರೆಲ್ಲೂ ಹೋಗುವುದಿಲ್ಲ; ಕಾಲು ದಾರಿಯಲಿ ಒಳಗೆ ಬರಬೇಕು/ ಬೇರೆ ದಾರಿ ಇಲ್ಲ. ಈ ಹಳ್ಳಿಯ ಪಕ್ಕದಲ್ಲಿ ಹರಿಯುವ ಹೊಳೆಯಲ್ಲಿ `ಕವಿಸಮಯದ ಕಮಲಗಳಿರಲಿಲ್ಲ, ಈಜಾಡುತ್ತಿರಲಿಲ್ಲ ಹಂಸಗಳು~. ಆದರೆ, ಇಲ್ಲಿ `ಕಥೆ ಹುಟ್ಟತಾವು ದಿವಸ~ ಮತ್ತು ಇಲ್ಲಿ ಜಡೆಮುನಿಯಂತೆ ಕಾಣುವ ಪಾರಂಬಿ ಮರ ಮತ್ತು `ಹಾಡಿದರೆ ಚಿಕ್ಕೆ ಚಂದ್ರಾಮರು ಹೆಚ್ಚು ಹೊಳೆಯುವ~ ನಿಂಗವ್ವನಂತಹವರು ಇದ್ದಾರೆ.ಹಂಪಿ, ದೆಹಲಿ ಮುಂತಾದುವು ಅಧಿಕಾರ ಮದದ ಮತ್ತು ಹಿಂಸೆಯ ಮಾದರಿಗಳು; ಆದುದರಿಂದಲೇ ಅಲ್ಲಿ (ಹಂಪಿಯಲ್ಲಿ) `ನಡೆದವು ಹತ್ಯೆ ಕಗ್ಗೊಲೆಗಳು~, ಮತ್ತು ಕಾಲಗತಿಯಲ್ಲಿ ಎಲ್ಲವನ್ನೂ ಕಳೆದುಕೊಂಡು, ಅಲ್ಲಿಯ ದೇವರುಗಳು ಕೂಡಾ ಇಂದು `ಹಾದಿ ಬೀದಿಗಳಲ್ಲಿ ಚೆಲ್ಲಾಪಿಲ್ಲಿ ಚೆಲ್ಲಿ ಹೋಗಿದ್ದಾವೆ/ ಅವರವರ ಅವತಾರಗಳ ಅವಶೇಷಗಳನ್ನ~. ಇನ್ನು ದಿಲ್ಲಿಯಂತೂ `ದಿಲ್ಲಗಿ/ ಕಟ್ಟಿಸಿದ ಹಲ್ಲಿನಲ್ಲಿ ದಿಲ್ಲಗಿಯಾಡುವ ಮತಲಬಿ~; ನಿಜವಾಗಿಯೂ ಅವಳೊಂದು ಖೋಟಾ ನೋಟು. (ತಮ್ಮ ಹಿಂದಿನ ಸಂಕಲನದ ಕವನವೊಂದರಲ್ಲಿ ಕಂಬಾರರು ದೆಹಲಿಯನ್ನು `ಕುಣಿಯುವ ಕ್ಯಾಬರಿ~ ಎಂದು ಕರೆಯುತ್ತಾರೆ.)ಅಮೆರಿಕಾದಲ್ಲಿ `ಚಂದ್ರಾಮ ಸತ್ತಿದ್ದಾನೆ~ (ಎಂದರೆ, ಅಲ್ಲಿ ಕಾವ್ಯವೇ ಇಲ್ಲ); ಅದೊಂದು `ಕನಸು ಮಾರುವ ಮಾರ್ಕೆಟ್ಟು~, `ಐದೇ ನಿಮಿಷ ಸ್ವರ್ಗದ ಸ್ಯಾಂಪಲ್ ತೋರಿಸಿ, ಮಟಾ ಮಾಯವಾಗುವ~ ಮಾಯಾಂಗಿಣಿ.  ಅದೊಂದು `ಸ್ವರತಿಯ ಸಮಾಜ~: `ಅಮೆರಿಕಾದ ರಾಣಿಗೆ/ ಕನ್ನಡಿಯ ಹುಚ್ಚು./ ಕಣ್ಣೊಂದು ಬಿಟ್ಟು ಕನ್ನಡಿಗಿಲ್ಲ/ ಬೇರೆ ಇಂದ್ರಿಯ~.

`ಬಯಲು~ ಎಂಬ ಕೊನೆಯ ಭಾಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ದ್ವಿಮಾನ ವೈರುಧ್ಯಗಳನ್ನು ಮೀರುವ ಮಾದರಿಗಳನ್ನು, ಬಗೆಗಳನ್ನು, `ಬಾಹುಬಲಿ~, `ಬೆಳಕಿನ ಕೋಲಿನವರು~, `ಸೂರ್ಯನ ನೆರಳು~, `ಅಡಿಗರು~, ಇತ್ಯಾದಿ ಮಾದರಿಗಳಲ್ಲದ ಮಾದರಿಗಳ ಮೂಲಕ ಕಂಬಾರರು ಗುರುತಿಸುತ್ತಾರೆ. ಕೊನೆಗೆ ನಾವು ಅರಿಯಬೇಕಾದುದು `ಸೂರ್ಯನಿಗೆ ಬಿದ್ದ ನಮ್ಮೀ ನೆರಳು/ ನಮ್ಮ ಸತ್ಯದ ತಿರುಳು!/ಇಷ್ಟು ತಿಳಿದರೆ ಸಾಕು~. ಬಾಹುಬಲಿಯಾದರೋ `ಮಣ್ಣಿನಲ್ಲಿ ಹುಟ್ಟಿ ಮುಗಿಲಿನಲ್ಲಿ ತಲೆ/ಎತ್ತಿದವ... ಎರಡು ಲೋಕಗಳ ಗೂಢವರಿವ ಪರಿ ಹೇಳಿದವ~.`ಶಿವರಾತ್ರಿ~ ಇತ್ತೀಚೆಗೆ ಬಿಡುಗಡೆಯಾದ, ಕಂಬಾರರ  ನಾಟಕ. ಅವರ ಹಿಂದಿನ ಎಲ್ಲಾ ನಾಟಕಗಳಿಗಿಂತ ಭಿನ್ನವಾದ ನಾಟಕ. ಇದರಲ್ಲಿ, ಅಪರೂಪಕ್ಕೆಂಬಂತೆ ಕಂಬಾರರು ಕಾಲೈಕ್ಯ (ಇಡೀ ನಾಟಕದ ಸಮಯ ಒಂದು ರಾತ್ರಿ), ಸ್ಥಳೈಕ್ಯ (ನಾಟಕದ ಘಟನೆಗಳೆಲ್ಲವೂ 12ನೆಯ ಶತಮಾನದ ಕಲ್ಯಾಣದ ಒಂದು ದಲಿತರ ಕೇರಿಯಲ್ಲಿ ನಡೆಯುತ್ತವೆ), ಮತ್ತು ಕ್ರಿಯೈಕ್ಯ (ಉಪಕಥೆಗಳು-ಪ್ರಸಂಗಗಳು ಯಾವುವೂ ಇಲ್ಲ) ಈ ಮೂರನ್ನೂ ಸಾಧಿಸುತ್ತವೆ. ಇಷ್ಟೇ ಅಲ್ಲದೆ, ನಿಶ್ಚಿತ ಪ್ರಾರಂಭ-ಅಂತ್ಯಗಳಿರುವ ಸಂವಿಧಾನವೂ ಇಲ್ಲಿಲ್ಲ.  ಹರಳಯ್ಯ-ಮಧುವರಸರ ಘೋರ ಸಾವಿನ ನಂತರದ ರಾತ್ರಿ ಅಲ್ಲಲ್ಲಿ ನಡೆಯುವ ಕೆಲವು ದೃಶ್ಯಗಳು ಮಾತ್ರ ನಾಟಕದಲ್ಲಿವೆ.  ಈ ಬಗೆಯ ಸಂವಿಧಾನವುಳ್ಳ ನಾಟಕದ ಉದ್ದೇಶ. `ಸಮಾಜದ ಅತ್ಯಂತ ಕೆಳವರ್ಗಗಳ ದೃಷ್ಟಿಕೋನದಿಂದ ಬಸವಣ್ಣನವರ ನೇತತ್ವದಲ್ಲಿ ನಡೆದ ಕ್ರಾಂತಿಕಾರಿ ಶರಣ ಚಳವಳಿಯನ್ನು ಅಳೆಯುವುದು~.ಎಂದರೆ, ಬಸವಣ್ಣನವರ ಚಳವಳಿ ಎಷ್ಟರಮಟ್ಟಿಗೆ  ಸಮಾಜದ ಕೆಳವರ್ಗಗಳನ್ನು ತಲಪಿತ್ತು? ಪ್ರಭಾವಿಸಿತ್ತು?- ಎಂಬುದರ ಶೋಧ. ಈ ನೆಲೆಯಲ್ಲಿ ನಾಟಕವು ನಮಗೆ ತೋರಿಸುವುದೇನೆಂದರೆ ಶರಣ ಚಳವಳಿಯ ಅಮೂರ್ತ ಕಲ್ಪನೆಗಳಾದ `ಮಹಾಮನೆ~, `ಇಷ್ಟಲಿಂಗ~, `ಬಯಲು~ ಇತ್ಯಾದಿ ಕೆಳವರ್ಗಗಳಿಗೇನೂ ಅರ್ಥವಾಗಿರಲಿಲ್ಲ. (ಒಂದು ಸಂದರ್ಭದಲ್ಲಿ, ಲಿಂಗವು ಫುಕ್ಕಟ್ ಸಿಕ್ಕುವುದಾದರೆ ತನಗೂ ಒಂದೆರಡು ತರಬಹುದಿತ್ತು ಎಂದು ಕಲ್ಲಪ್ಪ ಎಂಬುವವನು ತುಂಗವ್ವ ಎನ್ನುವವಳೊಡನೆ ಹೇಳುತ್ತಾನೆ). ಆದರೆ, ಬಸವಣ್ಣನವರ ಮೂರ್ತ ಆದೇಶಗಳಾದ `ಕೊಲಬೇಡ, ಕಳಬೇಡ, ಪುಸಿಯ ನುಡಿಯಲು ಬೇಡ~ ಇತ್ಯಾದಿ ಜನಸಾಮಾನ್ಯರನ್ನೂ ತಲುಪಿ, ಅವರ ಬದುಕನ್ನು ಬದಲಾಯಿಸಿದ್ದವು. ಈ ಸತ್ಯವನ್ನು ನಾಟಕ ಅರಮನಿಯಿಂದ ಕಳವಾಗುವ ಚಂದ್ರಹಾರದ ಘಟನೆಯ ಮೂಲಕ ನಿದರ್ಶಿಸುತ್ತದೆ. ದುರಾಸೆಯಿಂದ ಆ ಹಾರವನ್ನು ಕದಿಯಲು ಅರಮನೆಯ ವಿದ್ವಾಂಸ ಹರಿಹರನು ತನ್ನ ಮಗನಿಗೆ ಪ್ರಚೋದಿಸುತ್ತಾನೆ; ಅವನು ಅದನ್ನು ಕದ್ದು ಮುದುಕನ ಮನೆಯಲ್ಲಿ ಬಚ್ಚಿಟ್ಟಾಗ, ಅದು `ಸತ್ತ ಹೆಗ್ಗಣಧಾಂಗ ನಾರುವ~ ನಾತ ಆ ಮುದುಕನಿಗೆ ಬಂದು ಅವನು ಅದನ್ನು ಬಿಸಾಡುತ್ತಾನೆ; ಅದು ಸಿಕ್ಕ ಸಂಗಯ್ಯ ಅದನ್ನು ಸೂಳೆ ಸಾವಂತ್ರಿಗೆ ಕೊಟ್ಟಾಗ, ಅವಳು ಅದು ತಾನು ದುಡಿದು ಗಳಿಸಿದ್ದಲ್ಲವೆಂದು ಮೂಲೆಗೆ ಬಿಸಾಡುತ್ತಾಳೆ; ಬಸವಣ್ಣನವರನ್ನು ಕೊಲ್ಲಲು ಕಾಶ್ಮೀರದಿಂದ ಬರುವ ಕಳ್ಳ ಚಿಕ್ಕಯ್ಯ ಶರಣನಾಗಿ ಪರಿವರ್ತನೆ ಹೊಂದುತ್ತಾನೆ. ಇದೊಂದು ಕಂಬಾರರಿಂದಾಗಿರುವ ಹೊಸ ಪ್ರಯೋಗ- ಕುವೆಂಪು ಅವರ `ಸ್ಮಶಾನ ಕುರುಕ್ಷೇತ್ರ~ದಂತೆ.`ಎಲ್ಲಿದೆ ಶಿವಾಪುರ~ ಸಂಕಲನದ `ಗೆಳತಿಗೆ~ ಎಂಬ ಕವನದ ಕೊನೆಯಲ್ಲಿ ಈ ಸಾಲುಗಳು ಬರುತ್ತವೆ: `ಬದುಕುವುದಕ್ಕೆ ಏನು ಬೇಕು?/ಒಂದಷ್ಟು ಭ್ರಮೆಗಳು, ಅಷ್ಟಿಷ್ಟು ಕನಸುಗಳು~. ನಾಲ್ಕೈದು ದಶಕಗಳ ಕ್ರಿಯಾಶೀಲತೆಯ ನಂತರವೂ ಚಂದ್ರಶೇಖರ ಕಂಬಾರರಲ್ಲಿ ಸಾಹಿತ್ಯ ಪ್ರಯೋಜನವನ್ನು ಕುರಿತ ಭ್ರಮೆಗಳಿವೆ, ಆದರ್ಶ ಸಮಾಜದ ಕನಸುಗಳಿವೆ.  ಈ ಭ್ರಮೆ- ಕನಸುಗಳಿರುವವರೆಗೆ ಅವರಿಂದ ಕನ್ನಡ ಸಾಹಿತ್ಯ- ಸಮಾಜಗಳು ಶ್ರೀಮಂತವಾಗುತ್ತಲೇ ಇರುತ್ತವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.