ಸೋಮವಾರ, ಜೂನ್ 14, 2021
26 °C

ಕಂಬಿ ಹಿಂದಿನ ಕಂಪಿನ ಕಥೆ

ಎಚ್. ಅನಿತಾ Updated:

ಅಕ್ಷರ ಗಾತ್ರ : | |

‘ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ನಾನು ಮತ್ತು ಪತಿ ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದೇವೆ. ಮಗು ಸಂಬಂಧಿಕರ ಮನೆಯಲ್ಲಿದೆ. ಆದದ್ದು ಆಗಿ ಹೋಗಿದೆ. ಮಗುವಿನ ಭವಿಷ್ಯ  ಇಲ್ಲಿಂದಲೇ ರೂಪಿಸುವ ಹೊಣೆ ಹೊತ್ತಿದ್ದೇನೆ. ಅದಕ್ಕಾಗಿಯೇ ಅಗರಬತ್ತಿ ಪ್ಯಾಕಿಂಗ್‌ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ದುಡಿದ ಹಣ ಮಗುವಿನ ಪಾಲನೆಗೆ ಕೊಟ್ಟು ಕಳುಹಿಸುತ್ತೇನೆ...’ಮೈಸೂರು ಕೇಂದ್ರ ಕಾರಾಗೃಹದಲ್ಲಿ  ಮಹಿಳಾ ಕೈದಿಯೊಬ್ಬರ ಮಾತಿದು. ಇದು ಇವರೊಬ್ಬರ ಕಥೆಯಲ್ಲ, ಅಪರಾಧಿಯಾಗಿಯೋ, ಆರೋಪಿಯಾಗಿಯೋ ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ ಅದೆಷ್ಟೋ ಕೈದಿಗಳೂ ಇದೇ ಹಾದಿಯಲ್ಲಿದ್ದಾರೆ. ಆದ ಘಟನೆಗಳ ಬಗ್ಗೆ ಚಿಂತಿಸುತ್ತ ಕುಳಿತುಕೊಳ್ಳದೇ ಜೈಲಿನಲ್ಲಿರುವ ಗುಡಿ ಕೈಗಾರಿಕೆಗಳಲ್ಲಿ  ಶ್ರಮಜೀವಿಗಳಾಗಿ ದುಡಿಯುತ್ತಿದ್ದಾರೆ. ಬಯಲು ಬಂದಿಖಾನೆ, ಬೇಕರಿ, ಹೊಲಿಗೆ, ಮರಗೆಲಸ, ನೇಯ್ಗೆ, ಜಮಖಾನ ತಯಾರಿಕೆ, ಸೋಪು ಮತ್ತು ಫಿನೈಲ್‌ ತಯಾರಿಕೆ, ತೆಂಗಿನ ನಾರಿನಿಂದ ಮ್ಯಾಟ್‌ಗಳ ತಯಾರಿಕೆ, ಅಗರಬತ್ತಿ ಹೊಸೆಯುವುದು... ಹೀಗೆ ಅನೇಕ ಕೆಲಸಗಳು ಜೈಲಿನೊಳಗೆ ನಡೆಯುತ್ತಿವೆ.ಪ್ರತ್ಯೇಕ ಭದ್ರತೆ

ಕಾರಾಗೃಹದ ನೀತಿ ನಿಯಮಗಳಿಗೆ ಅನುಸಾರವಾಗಿ ಮಹಿಳಾ ಕೈದಿಗಳಿಗೆ ಪ್ರತ್ಯೇಕ ವಿಭಾಗ, ವಿಶೇಷ ಭದ್ರತೆ ನೀಡಲಾಗಿದೆ. ಮಹಿಳೆಯರಿಗೂ ದುಡಿಮೆಗೆ ಅವಕಾಶ ನೀಡುವ ಸಲುವಾಗಿ ಮಹಿಳಾ ವಿಭಾಗದ ಒಳಗೆಯೇ ಅಗರಬತ್ತಿಯನ್ನು  ಪ್ಯಾಕ್‌ ಮಾಡುವ ಕೆಲಸವನ್ನು ಆರಂಭಿಸಿ ಮಹಿಳಾ ಕೈದಿಗಳ ಸ್ವಾವಲಂಬಿ ಬದುಕಿಗೆ ಅನುವು ಮಾಡಿಕೊಡಲಾಗಿದೆ.ಮೂರು ವರ್ಷಗಳ ಹಿಂದೆ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಆರಂಭಗೊಂಡ ಈ ಕೈಗಾರಿಕೆ ಕ್ರಮೇಣ ಬೆಂಗಳೂರು, ತುಮಕೂರು, ಹಾಸನ, ಮಂಡ್ಯ, ರಾಮನಗರ, ನಂಜನಗೂಡು ಜೈಲುಗಳಿಗೂ ವಿಸ್ತರಣೆಗೊಂಡಿದೆ. ಕೈದಿಗಳು ದಿನವಿಡೀ ಕೆಲಸದಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಹಿ ಅನುಭವಗಳನ್ನು ತಕ್ಕಮಟ್ಟಿಗೆ ಮರೆಯುವ ಅವಕಾಶ ತಂದುಕೊಟ್ಟಿದೆ.‘ಮಹಿಳಾ ವಿಭಾಗದಲ್ಲಿ ಅಗರಬತ್ತಿ ಹೊಸೆಯುವುದು, ಹೊಲಿಗೆ ಕೆಲಸ ಬಿಟ್ಟರೆ ನಿರಂತರವಾಗಿ ಮಾಡುವಂಥ  ಯಾವುದೇ ಕೆಲಸ ಇರಲಿಲ್ಲ. ದಿನದ 24 ಗಂಟೆಯೂ ಕೊಠಡಿಯೊಳಗೇ ಕುಳಿತಿರಬೇಕಿದ್ದ ಕಾರಣ, ಜೀವನದಲ್ಲಾದ ಕಹಿ ಘಟನೆ ಪದೇ ಪದೇ ನೆನಪಿಗೆ ಬರುತ್ತಿತ್ತು. ಆದರೀಗ  ಪ್ಯಾಕಿಂಗ್‌ ಕೆಲಸ ನಡೆಯುತ್ತಿರುವುದರಿಂದ ಬೆಳಿಗ್ಗೆಯಿಂದ ಸಂಜೆವರೆಗೆ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇವೆ. ಸ್ವಲ್ಪ ಹೊತ್ತಾದರೂ ನಮ್ಮ ಚಿಂತೆಗಳಿಂದ ದೂರವಿರಲು  ಸಾಧ್ಯವಾಗಿದೆ’ ಎನ್ನುತ್ತಾರೆ ಮಹಿಳಾ ಕೈದಿಗಳು.‘ಸ್ವಾವಲಂಬಿಯಾಗಿರುವ ಹೆಮ್ಮೆ ನಮಗೀಗ ಇದೆ. ಪರೋಲ್‌ ಮೇಲೆ ತೆರಳಲು ತಗಲುವ ಖರ್ಚು ವೆಚ್ಚವನ್ನೂ  ನಾವೇ ಭರಿಸುತ್ತೇವೆ. ಪರೋಲ್‌ ಮೇಲೆ ಮನೆಗೆ ತೆರಳಿದಾಗ ಮನೆಮಂದಿಗೆಲ್ಲಾ ಬಟ್ಟೆ, ಅಗತ್ಯ ವಸ್ತುಗಳನ್ನು ಈ ಹಣದಿಂದಲೇ ಖರೀದಿಸುತ್ತೇವೆ. ಮಕ್ಕಳ ಮದುವೆ ಕಾರ್ಯವನ್ನೂ ನೆರವೇರಿಸಿದ್ದೇವೆ’ ಎನ್ನುತ್ತಾರೆ ಅವರು.‘ಸಾಮಾನ್ಯವಾಗಿ 4ರಿಂದ 5 ದಿನ ಕೆಲಸ ಮಾಡುವಷ್ಟು ಕಚ್ಚಾ ಸಾಮಗ್ರಿಗಳನ್ನು ತಂದುಕೊಡಲಾಗುತ್ತದೆ.  ಇದು ಖಾಲಿಯಾಗುವುದಕ್ಕೆ ಮುನ್ನ ಹೊಸ ಸಾಮಗ್ರಿ  ಬಂದರೆ ನಮಗೆ ಸಮಾಧಾನ. ಇಲ್ಲದಿದ್ದಲ್ಲಿ ಸರಳುಗಳ ಹಿಂದಿನ ಬೇಗುದಿ ಹೇಳತೀರದು. ಜೈಲಿನ ನಿಯಮದಂತೆ ಮುಂಜಾನೆ ಸ್ವಚ್ಛತಾ ಕೆಲಸಕ್ಕೆಂದು ಒಂದು ಗಂಟೆ, ಪುನಃ ಬೆಳಿಗ್ಗೆ 10.30ರಿಂದ 3.30ರವರೆಗೆ  ಕೊಠಡಿಗಳಿಗೆ ಬೀಗ ಹಾಕಲಾಗುತ್ತದೆ. ಆ ವೇಳೆ ಟಿ.ವಿ ನೋಡುತ್ತಾ, ಪರಸ್ಪರರ ಕೇಸುಗಳ ಬಗ್ಗೆ ಮಾತಾಡಿಕೊಂಡು ಕಾಲ ಕಳೆಯಬೇಕಾಗುತ್ತದೆ. ಆದರೂ ಹೊತ್ತೇ ಸವೆಯುವುದಿಲ್ಲ. ಒಂದೊಂದು ಕ್ಷಣ  ಕಳೆಯುವುದೂ ಒಂದೊಂದು ಯುಗವೆನಿಸುತ್ತದೆ. ಆದರೆ ಕೆಲಸವಿದ್ದಾಗ ಹೊತ್ತು ಹುಟ್ಟಿ, ಹೊತ್ತು ಕಳೆಯುವುದೇ ತಿಳಿಯುವುದಿಲ್ಲ’ ಎಂಬ ಮನದಾಳದ ಮಾತು ಇವರದ್ದು.  ‘ಪ್ಯಾಕಿಂಗ್‌ ಕೆಲಸ ಆರಂಭವಾಗುವುದಕ್ಕೂ ಮುನ್ನ ಪ್ರೊ.ನಂಜರಾಜ ಅರಸ್‌ ಅವರ ‘ಅಂತಃಕರಣ’ ಸಂಸ್ಥೆಯಿಂದ  ರೇಷ್ಮೆಗೂಡಿನಲ್ಲಿ ವಿಭಿನ್ನ ಅಲಂಕಾರಿಕ ವಸ್ತುಗಳನ್ನು ತಯಾರಿಸುವ ತರಬೇತಿ ಪಡೆದಿದ್ದೇವೆ. ಜೆ.ಎಸ್‌.ಎಸ್‌ ಹಾಗೂ ಕೆಲ ಕ್ರೈಸ್ತ ಸಂಸ್ಥೆಗಳಿಂದ ಕೃತಕ ಆಭರಣಗಳ ತಯಾರಿಕೆ, ಹ್ಯಾಂಡ್‌ ಎಂಬ್ರಾಯ್ಡರಿ, ಮೆಷಿನ್‌ ಎಂಬ್ರಾಯ್ಡರಿ ಹೀಗೆ ಹತ್ತು ಹಲವು ತರಬೇತಿಗಳನ್ನು ಇಲಾಖೆಯ ಸಹಕಾರದಿಂದ ಪಡೆದಿದ್ದೇವೆ. ಕೇಸಿನ ಕಾರಣ ಸರ್ವಸ್ವ­ವನ್ನೂ ಕಳೆದುಕೊಂಡ ನಮಗೆ ಈ ತರಬೇತಿ­ಗಳು ಇಲ್ಲಿಂದ ಬಿಡುಗಡೆಯಾಗಿ ಹೋದ ನಂತರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಾಯವಾಗಲಿವೆ’ ಎಂಬ ಆತ್ಮವಿಶ್ವಾಸ ಅವರದ್ದು.ಅಗರಬತ್ತಿ ರೂವಾರಿ

ಮಹಿಳೆಯರಿಗೆ ಅಗರಬತ್ತಿ ಪ್ಯಾಕಿಂಗ್‌ ಕೆಲಸಕ್ಕೆ ಅವಕಾಶ ನೀಡಿದ ರೂವಾರಿ ರಂಗರಾವ್‌ ಅಂಡ್‌ ಸನ್ಸ್‌ ಸಂಸ್ಥೆ (ಸೈಕಲ್‌ ಬ್ರಾಂಡ್‌ ಅಗರಬತ್ತಿ)ಯ ಎನ್‌.ಎ.ಕ್ಲಾರಾ. ಮೂಲತಃ ಮಡಿಕೇರಿಯವರಾಗಿರುವ ಕ್ಲಾರಾ ಅವರು ಮೈಸೂರಿನಲ್ಲಿ ನೆಲೆಸಿದ್ದಾರೆ.ಜೈಲಿನ ಆಚೆ ಮಾತ್ರ ಅಗರಬತ್ತಿ ಹೊಸೆಯುವ, ಪ್ಯಾಕ್‌ ಮಾಡಿಸುವ ಕೆಲಸವನ್ನು ಮಾಡಿಸುತ್ತಿದ್ದ ಕ್ಲಾರಾ ಅವರು, ಆಪ್ತರೊಬ್ಬರು ನೀಡಿದ ಸಲಹೆ ಮೇರೆಗೆ ಕಂಪೆನಿ ಮುಖ್ಯಸ್ಥರ ನೆರವಿನಿಂದ ಇಲಾಖೆಯ ಅನುಮತಿ ಪಡೆದು ಕೈದಿಗಳಿಗೆ ಕೆಲಸ ನೀಡಿದ್ದಾರೆ. ಮೈಸೂರು, ಮಂಡ್ಯ, ಹಾಸನದ ಜೈಲುಗಳಲ್ಲಿ ನಡೆಯುತ್ತಿರುವ ಕೆಲಸದ ಉಸ್ತುವಾರಿ ವಹಿಸಿರುವ ಅವರು ಮಡಿಕೇರಿ ಜೈಲಿಗೂ ಕೆಲಸ ವಿಸ್ತರಿಸುವ ಯೋಜನೆ ಹೊಂದಿದ್ದಾರೆ.‘ಪುರುಷರಿಗಾದರೆ ಆಯ್ಕೆಗಳಿವೆ. ಆದರೆ ಮಹಿಳೆಯರಿಗೆ ಯಾವುದೇ ಆಯ್ಕೆಗಳಿರಲಿಲ್ಲ.  ಅಗರಬತ್ತಿ ಪ್ಯಾಕಿಂಗ್‌ ಆರಂಭಿಸಿದ್ದರಿಂದ ವಯಸ್ಸಾದವರಿಗೂ ಸಹಕಾರಿಯಾಗಿದೆ. ಕೈದಿಗಳ ಬಗ್ಗೆ ಹೊರಗಿನವರ ಅಭಿಪ್ರಾಯವೇ ಬೇರೆ. ಇಲ್ಲಿಗೆ ಬರುವುದಕ್ಕೆ ಮುನ್ನ ನನ್ನ ಅಭಿಪ್ರಾಯವೂ ಭಿನ್ನವಾಗಿಯೇನೂ ಇರಲಿಲ್ಲ. ಆದರೆ ಇಲ್ಲಿಗೆ ಬಂದು ಕೈದಿಗಳ ಜೊತೆ ಬೆರೆತ ನಂತರ ವಾಸ್ತವ ತಿಳಿಯಿತು. ಇಲ್ಲಿ ಕೆಲಸ ಆರಂಭಿಸಿದ್ದಕ್ಕೆ ನಾನಾ  ಟೀಕೆಗಳನ್ನೂ  ಕೇಳಬೇಕಾಯಿತು.ದುಡುಕಿನಿಂದಲೋ, ಅನಕ್ಷರತೆಯಿಂದಲೋ ಮಾಡಿದ ತಪ್ಪಿಗೆ  ಪಶ್ಚಾತ್ತಾಪ ಪಡುವವರು ಇದ್ದಾರೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಶಿಕ್ಷೆ ಎದುರಿಸುತ್ತಿರುವವರೂ  ಇದ್ದಾರೆ. ಬಹುತೇಕರು ಬಡ–ಮಧ್ಯಮ ಹಿನ್ನೆಲೆಯವರಾಗಿದ್ದು, ಜೀವನದಲ್ಲಿ ನಡೆದ ದುರ್ಘಟನೆಯಿಂದಾಗಿ ಆಘಾತಕ್ಕೆ ಒಳಗಾಗಿದ್ದಾರೆ. ಕೆಲಸದಲ್ಲಿ ತೊಡಗುವ ಮೂಲಕ ನೋವುಗಳನ್ನು ಮರೆಯಲು ಯತ್ನಿಸುತ್ತಾರೆ. ಕಂಪೆನಿ ಹಾಗೂ ಇಲಾಖೆಯ ಸಹಕಾರದಿಂದ ಇದೆಲ್ಲಾ ಸಾಧ್ಯವಾಗಿದೆ’ ಎನ್ನುತ್ತಾರೆ ಕ್ಲಾರಾ.‘ಕೈದಿಗಳು ಬಿಡುಗಡೆಯಾಗಿ ಮನೆಗೆ ತೆರಳಿದ ಮೇಲೆ ಸ್ವತಂತ್ರವಾಗಿ ಉದ್ಯೋಗ ಆರಂಭಿಸಲು ಸಹಕಾರಿಯಾಗುವ ಕೆಲಸ ಇದಾಗಿದೆ. ಅಲ್ಲದೇ ಕಡಿಮೆ ಶಿಕ್ಷೆ ಎದುರಿಸುತ್ತಿರುವವರು ವಿಶೇಷ ಮಾಫಿ ಪಡೆಯಲು ಅವಕಾಶ ಕಲ್ಪಿಸಿದೆ. ಇದೆಲ್ಲದರ ಕೀರ್ತಿ ಪೊಲೀಸ್‌ ಮಹಾ ನಿರ್ದೇಶಕರು ಮತ್ತು ಕರ್ನಾಟಕ ಕಾರಾಗೃಹಗಳ ನಿರೀಕ್ಷಕರಾದ ಕೆ.ವಿ.ಗಗನ್‌ದೀಪ್‌ ಅವರಿಗೆ ಸಲ್ಲಬೇಕಾದ್ದು’ ಎನ್ನುತ್ತಾರೆ ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎನ್‌.ಜಯಸಿಂಹ.ಪರೀಕ್ಷೆಗೆ ಅವಕಾಶ

ಅಂತಃಕರಣ ಸಂಸ್ಥೆ, ಮೈಸೂರು ಮುಕ್ತ ವಿಶ್ವವಿದ್ಯಾನಿಲಯ, ಕಾರಾಗೃಹ ಇಲಾಖೆಯ ಸಹಯೋಗದಲ್ಲಿ ಪರೀಕ್ಷಾ ಕೇಂದ್ರವೂ ಆರಂಭವಾಗಿದ್ದು, ಶಿಕ್ಷೆಗೆ ಒಳಗಾದ ಅಥವಾ ವಿಚಾರಣೆ ಎದುರಿಸುತ್ತಿರುವ ಕೈದಿಗಳಿಗೆ ವಿದ್ಯಾಭ್ಯಾಸ ನಡೆಸಲು ಅವಕಾಶ ಮಾಡಿಕೊಡಲಾಗಿದೆ.ಇದರ ಲಾಭ ಪಡೆದು ಪುರುಷರ ವಿಭಾಗದಲ್ಲಿ  15 ಮಂದಿ ಬಿ.ಎ ಪದವಿಯನ್ನೂ, 4 ಮಂದಿ ಎಂ.ಎ ಪದವಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಿ.ಎ, ಬಿ.ಕಾಂ ನಲ್ಲಿ ಹಾಲಿ  ಅಭ್ಯಸಿಸುತ್ತಿರುವ ಒಟ್ಟು 22 ಕೈದಿಗಳಲ್ಲಿ ಇಬ್ಬರು ಮಹಿಳೆಯರು. ಸ್ತ್ರೀಶಕ್ತಿ ಸಬಲೀಕರಣ ವಿಷಯದಲ್ಲಿ ಈಗಾಗಲೇ ಪರೀಕ್ಷೆ ಬರೆದಿರುವ ಮಹಿಳಾ ಕೈದಿಯೊಬ್ಬರು ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.

‘ಇಲ್ಲಿನ ಅನೇಕ ಯುವಕರು ಚೆನ್ನಾಗಿ ಓದಬೇಕೆನ್ನುವ ಕನಸು ಹೊತ್ತಿದ್ದವರು. ಆದರೆ  ತಮ್ಮ ಕುಟುಂಬದ ಆರ್ಥಿಕ ಸಂಕಷ್ಟದಿಂದಾಗಿ ಸಾಧ್ಯವಾಗಿರಲಿಲ್ಲ. ಅಂಥವರ ಆಸೆ ಇಲ್ಲಿ ಪೂರೈಸಲಿದೆ. ಅಧ್ಯಯನ ಕೇಂದ್ರದ ಪ್ರಯೋಜನ ಪಡೆದು ಉತ್ತಮ ಜೀವನ ರೂಪಿಸಿಕೊಂಡವರೂ ಇದ್ದಾರೆ’ ಎನ್ನುತ್ತಾರೆ ಅಧ್ಯಯನ ಕೇಂದ್ರದ ಆರಂಭಕ್ಕೆ ಇಲಾಖೆಯೊಂದಿಗೆ ಸಹಕರಿಸಿದ ಅಂತಃಕರಣ ಸಂಸ್ಥೆಯ ಪ್ರೊ.ಪಿ.ವಿ.ನಂಜರಾಜ ಅರಸ್‌.‘ಬಹುತೇಕ ಮಹಿಳೆಯರು ಕೊಲೆ ಪ್ರಕರಣದಡಿ ಶಿಕ್ಷೆಗೆ ಗುರಿಯಾಗಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿರುತ್ತಾರೆ. ಇದರಿಂದ ಅವರನ್ನು ಹೊರತರಲು ಗ್ರಂಥಾಲಯ ಸೌಲಭ್ಯ ಒದಗಿಸಲಾಗಿದೆ. ಅವರವರ ಆಸಕ್ತಿಗಳಿಗೆ ಅನುಗುಣವಾಗಿ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಹೊಲಿಗೆ, ಕಸೂತಿ ತರಬೇತಿಗಳನ್ನು ನೀಡಲಾಗಿದೆ. ಶಿಕ್ಷೆಗೆ ಗುರಿಯಾಗಿರುವ ಮಹಿಳೆಯರಿಗೆ ಮಕ್ಕಳಿದ್ದು, ಆರು ವರ್ಷದ ಒಳಗಿನವರಾಗಿದ್ದಲ್ಲಿ ತಾಯಿಯೊಂದಿಗಿರಲು ಅವಕಾಶವಿದೆ.  ಇಂತಹ ಮಕ್ಕಳನ್ನು ಜೈಲಿನ ಆವರಣದಲ್ಲಿರುವ  ಅಂಗನವಾಡಿ ಕೇಂದ್ರಗಳಿಗೆ ಸೇರಿಸಿ ಶಿಕ್ಷಣ ಕೊಡಿಸಲಾಗುತ್ತದೆ. ಮಹಿಳೆ ಮತ್ತು ಮಕ್ಕಳ ಸಂಪೂರ್ಣ ಉಸ್ತುವಾರಿ ಮಹಿಳಾ ಸಿಬ್ಬಂದಿಗೇ ಸಂಬಂಧಪಟ್ಟ­ದ್ದಾಗಿ­ರುತ್ತದೆ. ಗರ್ಭಿಣಿ­ಯರು ಮತ್ತು ಮಕ್ಕಳಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಕುಟುಂಬದ ಸದಸ್ಯರನ್ನು ಸಂಪರ್ಕಿಸಲು, ಈ ಮಾರ್ಚ್‌­ನಿಂದ ದೂರವಾಣಿ ವ್ಯವಸ್ಥೆ ಕಲ್ಪಿಸಿಕೊಡುವ ಯೋಜನೆ ಇದೆ. ಇದುವರೆಗೆ ಪ್ರತಿ ಕೈದಿಗೆ ದಿನವೊಂದಕ್ಕೆ ₨48 ಖರ್ಚು ನಿಗದಿ ಮಾಡಲಾಗಿತ್ತು. ಪ್ರಸಕ್ತ ಬಜೆಟ್‌ನಲ್ಲಿ ಸರ್ಕಾರ ಇದನ್ನು ₨75 ಕ್ಕೆ ಹೆಚ್ಚಿಸಿದೆ. ಇದರಿಂದ ಇನ್ನೂ ಗುಣಮಟ್ಟದ ಆಹಾರ ನೀಡಲು ಸಾಧ್ಯವಾಗಲಿದೆ’ ಎನ್ನುತ್ತಾರೆ ಪೊಲೀಸ್‌ ಮಹಾ ನಿರ್ದೇಶಕ ಕೆ.ವಿ.ಗಗನ್‌ದೀಪ್‌.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.