ಕಂಸಾಳೆ ಪಟ್ಟು-ಪೆಟ್ಟು

7

ಕಂಸಾಳೆ ಪಟ್ಟು-ಪೆಟ್ಟು

Published:
Updated:
ಕಂಸಾಳೆ ಪಟ್ಟು-ಪೆಟ್ಟು

ಅಮಾವಾಸ್ಯೆಯ ಜಾತ್ರೆ. ಕಂಸಾಳೆ ಹಿಡಿದು ಅನೇಕ ಮಕ್ಕಳು ಕುಣಿಯುತ್ತಿದ್ದರು. ನಡುವೆ ಬಾಗುತ್ತಾ ಜಿಗಿಯುತ್ತಾ ಕಸರತ್ತು ಮಾಡುತ್ತಾ ಚಿತ್ತಾಪಹರಣ ಮಾಡುತ್ತಿದ್ದ ಅವರೆಲ್ಲರನ್ನು ಕಂಡು ಉತ್ಸಾಹ ಮೈತುಂಬಿಕೊಂಡ ನಟ ಶ್ರೀಧರ್ ತಾವೂ ಕುಣಿಯತೊಡಗಿದರು.ಶೂಟಿಂಗ್ ನಡೆಯುತ್ತಿದೆ ಎಂಬುದನ್ನೂ ಮರೆತವರಂತೆ ಕುಣಿದದ್ದೇ ಕುಣಿದದ್ದು. ನಿರ್ದೇಶಕ ನಾಗಾಭರಣ `ಕಟ್~ ಎಂದಿರಲಿಲ್ಲ; ಅಷ್ಟು ಹೊತ್ತಿಗೆ ಕಂಸಾಳೆಯ ಅಂಚು ತಲೆಗೆ ಬಡಿದು ರಕ್ತಸ್ರಾವ ಶುರುವಾಯಿತು. ವೈದ್ಯರು ಹೊಲಿಗೆ ಹಾಕುವಷ್ಟು ಪೆಟ್ಟು ಬಿದ್ದಿತ್ತು. ಚಿಕಿತ್ಸೆಯ ನಂತರ ಮತ್ತೆ ಚಿತ್ರೀಕರಣ. ಅದೇ ಉತ್ಸಾಹ.ಬಹಳ ದಿನಗಳ ನಂತರ ಮತ್ತೆ ಚಿತ್ರದಲ್ಲಿ ಅಭಿನಯಿಸಿದ ಸಂತೃಪ್ತ ಕ್ಷಣಗಳನ್ನು ಹಂಚಿಕೊಳ್ಳುವಾಗ ಶ್ರೀಧರ್ ಭಾವುಕರಾಗಿದ್ದರು. `ಕಂಸಾಳೆ ಕೈಸಾಳೆ~ ಚಿತ್ರದಲ್ಲಿ ಅವರದ್ದು ಗುರುವಿನ ಪಾತ್ರ. ಬದುಕಿನ ಪಾಠವನ್ನೇ ಅಡಗಿಸಿಕೊಂಡ ಕಂಸಾಳೆಯ ತತ್ತ್ವವನ್ನು ದಾಟಿಸುವ ಸಂಕೀರ್ಣ ಭಾವಗಳ ಪಾತ್ರ. ಅಂಥ ಪಾತ್ರ ಕೊಟ್ಟ ನಿರ್ದೇಶಕ ನಾಗಾಭರಣ ಅವರನ್ನು ಶ್ರೀಧರ್ ಅಗ್ರಮಾನ್ಯ ನಿರ್ದೇಶಕ ಎಂದು ಬಾಯಿತುಂಬಾ ಹೊಗಳಿದರು.ಚಿತ್ರದಲ್ಲಿ ಶ್ರೀಧರ್ ಕೇವಲ ನಟರಷ್ಟೇ ಅಲ್ಲ. ಚಿತ್ರ ಹರಳುಗಟ್ಟುವ ಹಂತದಿಂದ ನಾಗಾಭರಣ ಅವರ ಜೊತೆಯಲ್ಲಿ ಅನೇಕ ಮಹತ್ವದ ಕ್ಷಣಗಳಿಗೆ ಅವರು ಸಾಕ್ಷಿಯಾಗಿದ್ದಾರೆ. ಗುರು-ಶಿಷ್ಯರ ಸಂಬಂಧ, ಮಾನವೀಯತೆ, ದೈವಿಕ ಗುಣಗಳನ್ನು ಹೆಣೆದು ಮಾಡಿರುವ ಚಿತ್ರಕತೆಯು ನಿಜವಾದ ಶಿಕ್ಷಣ ಎಂದರೇನು ಎಂದು ಪ್ರತಿಪಾದಿಸುತ್ತದಂತೆ. ಕಂಸಾಳೆ ಚಿತ್ರದ ರೂಪಕವಾಗಿದ್ದು, ಅದನ್ನು ನಾಗಾಭರಣ ಸೊಗಸಾಸಿ ದುಡಿಸಿಕೊಂಡಿದ್ದಾರೆ ಅಂತಾರೆ ಅವರು.ನಾಗಾಭರಣ ಅವರ `ಶ್ರುತಾಲಯ~ ಸಂಸ್ಥೆಯ ಬ್ಯಾನರ್ 19 ವರ್ಷಗಳ ಹಿಂದೆ `ಚಿನ್ನಾರಿಮುತ್ತ~ ಮಕ್ಕಳ ಚಿತ್ರ ನಿರ್ಮಿಸಿತ್ತು. ಈಗ `ಕಂಸಾಳೆ ಕೈಸಾಳೆ~ಗೆ ಮಹೇಶ್ ಎಂಬುವರು ಹಣ ಹೂಡಿದ್ದಾರೆ. ಅದೇ ಬ್ಯಾನರ್‌ನಲ್ಲಿ ಮೂಡಿರುವ ಇನ್ನೊಂದು ಮಕ್ಕಳ ಚಿತ್ರವಿದು ಎಂಬುದು ಅಗ್ಗಳಿಕೆ.`ಶಿಶುನಾಳ ಷರೀಫ ಚಿತ್ರದಲ್ಲಿ ನನಗೆ ನಾಗಾಭರಣ ಒಳ್ಳೆಯ ಪಾತ್ರ ಕೊಟ್ಟರು. ಅಂದಿನಿಂದ ನಾನು ಅವರ ಆಪ್ತ. ಅವರು ನನಗೆ ಹತ್ತಿರದವರು. ಸಿನಿಮಾ ಮಾಡಹೊರಟರೆ ನನ್ನನ್ನು ಕರೆಯುತ್ತಾರೆ. ನಾನು ಪ್ರೀತಿಯಿಂದ ಅಭಿನಯಿಸುತ್ತೇನೆ. ತಲೆಗೆ ಪೆಟ್ಟು ಬಿದ್ದದ್ದನ್ನು ಮಕ್ಕಳು ನೋಡಿ ಗಾಬರಿಗೊಂಡರಷ್ಟೆ. ಅದೇನು ಮಹಾ ಗಾಯವಲ್ಲ.ನಾನು ಅಭಿನಯಿಸುತ್ತಿದ್ದೇನೆ ಎಂಬುದನ್ನೂ ಮರೆತು ಕುಣಿಯುತ್ತಿದ್ದೆ. ಈ ಚಿತ್ರದಲ್ಲಿ ನನ್ನೊಳಗಿನ ಕಲಾವಿದ, ನೃತ್ಯಪಟು ಇಬ್ಬರನ್ನೂ ಕಾಣುವ ಅವಕಾಶವಿದೆ. ಇಂಥ ಪಾತ್ರ ಸಿಕ್ಕಿದ್ದು ನನ್ನ ಸೌಭಾಗ್ಯ~ ಎನ್ನುವ ಶ್ರೀಧರ್ ಚಿತ್ರತಂಡದ ಎಲ್ಲರೂ ಆಡಬಹುದಾದ ಮಾತುಗಳನ್ನು ಒಬ್ಬರೇ ಆಡುವಷ್ಟು ಉತ್ಸಾಹದಲ್ಲಿದ್ದರು.`ಕಂಸಾಳೆ ಗೊತ್ತಿಲ್ಲದ ಮಕ್ಕಳನ್ನು ಆರಿಸಿ, ಅವರಿಗೆ ಎರಡು ತಿಂಗಳು ತರಬೇತಿ ಕೊಟ್ಟು ನಾಗಾರಭರಣ ಈ ಚಿತ್ರ ಮಾಡಿದ್ದಾರೆ. ಈ ಪೂರ್ವ ತಯಾರಿಯೇ ಅದ್ಭುತ. ಒಟ್ಟಿನಲ್ಲಿ ಕಂಸಾಳೆ ಕೈಸಾಳೆ ಸುಂದರ ಅನುಭವ~ ಎನ್ನುವ ಶ್ರೀಧರ್ ಮಕ್ಕಳ ಅಭಿನಯ ಕಂಡು ಬೆಕ್ಕಸ ಬೆರಗಾಗಿದ್ದಾರೆ.ಎಲ್ಲವೂ ಅಂದುಕೊಂಡಂತೆ ಆದರೆ ಈ ಸಲದ ಬೇಸಿಗೆ ರಜೆಯಲ್ಲಿ ಮಕ್ಕಳು `ಕಂಸಾಳೆ ಕೈಸಾಳೆ~ಯನ್ನು ನೋಡಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry