ಭಾನುವಾರ, ಅಕ್ಟೋಬರ್ 20, 2019
22 °C

ಕಕ್ಕಹೊಳೆಗೆ ಕಾಫಿ ಪಲ್ಪಿಂಗ್ ಘಟಕದ ನೀರು

Published:
Updated:

ಸೋಮವಾರಪೇಟೆ: ಬಳಗುಂದ ಗ್ರಾಮದಲ್ಲಿರುವ ಕಾಫಿ ಪಲ್ಪಿಂಗ್ ಘಟಕದಿಂದ ಜಲಮೂಲ ಮಾಲಿನ್ಯಗೊಳ್ಳುತ್ತಿದೆ ಎಂದು ಆರೋಪಿಸಿರುವ ಗ್ರಾಮಸ್ಥರು, ತಕ್ಷಣ ಈ ಬಗ್ಗೆ ಸಂಬಂಧಿಸಿದ ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.ಬಳಗುಂದ ಗ್ರಾಮದಲ್ಲಿರುವ ರವೀಂದ್ರ ಎಂಬುವವರ ಮಾಲೀಕತ್ವದ ಕಾಫಿ ಪಲ್ಪಿಂಗ್ ಘಟಕದಿಂದ ಹೊರಬರುವ ತ್ಯಾಜ್ಯ ಹಾಗೂ ಕಲುಷಿತ ನೀರನ್ನು ತೋಡಿನ ಮೂಲಕ ಪ್ರಮುಖ ಜಲಮೂಲವಾದ ಕಕ್ಕೆಹೊಳೆಗೆ ನೇರವಾಗಿ ಹರಿಯಬಿಡುತ್ತಿದ್ದು, ಜಲಚರಗಳು ನಾಶವಾಗುತ್ತಿವೆ. ಸುತ್ತಮುತ್ತಲ ಪ್ರದೇಶ ದುರ್ನಾತದಿಂದ ಕೂಡಿದ್ದು, ಈ  ಬಗ್ಗೆ ಪರಿಸರ ಮಾಲಿನ್ಯ ಇಲಾಖಾಧಿಕಾರಿಗಳು ಶೀಘ್ರ ಗಮನ ಹರಿಸಬೇಕೆಂದು ಅಲ್ಲಿನ ಗ್ರಾಮಸ್ಥರುಗಳು ಆಗ್ರಹಿಸಿದ್ದಾರೆ.ಸಾರ್ವಜನಿಕರ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವರಾಮ್ ಭೇಟಿ ನೀಡಿದರು. ಕಾಫಿ ಪಲ್ಪಿಂಗ್ ಘಟಕದಿಂದ ಪರಿಸರಕ್ಕೆ ಹಾನಿಯಾಗುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಈ ಬಗ್ಗೆ ಪಂಚಾಯಿತಿ ಮೂಲಕ ಸಂಬಂಧಿಸಿದ ಘಟಕದ ಮಾಲೀಕರಿಗೆ ನೋಟೀಸ್ ಜಾರಿಮಾಡಲಾಗುವುದು ಹಾಗೂ ಸಂಬಂಧಿಸಿದ ಇಲಾಖೆಗೂ ದೂರು ನೀಡಲಾಗುವುದು ಎಂದವರು ತಿಳಿಸಿದ್ದಾರೆ.ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೇಟಿ ಸಂದರ್ಭ ಗ್ರಾಮಾಧ್ಯಕ್ಷ ಬಿ.ಸಿ.ಸುರೇಂದ್ರ, ಗ್ರಾಮದ ಪ್ರಮುಖ ಹೆಚ್.ಕೆ.ಮಾದಪ್ಪ, ಗ್ರಾ.ಪಂ.ಸದಸ್ಯ ಬಿ.ಎಸ್.ಮಂಜುನಾಥ್ ಉಪಸ್ಥಿತರಿದ್ದರು.

Post Comments (+)