ಕಕ್ಷಿದಾರರಿಗೆ ಕಿಯೋನಿಕ್ಸ್ ಸೌಲಭ್ಯ

7

ಕಕ್ಷಿದಾರರಿಗೆ ಕಿಯೋನಿಕ್ಸ್ ಸೌಲಭ್ಯ

Published:
Updated:

ಕೋಲಾರ: ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ದಾಖಲಿಸಿರುವ ಕಕ್ಷಿದಾರರು ಅವುಗಳು ಯಾವ ಹಂತದಲ್ಲಿವೆ ಎಂಬುದೂ ಸೇರಿದಂತೆ ಹಲವು ಮಾಹಿತಿಗಳನ್ನು ನಿಂತಲ್ಲೇ ಪಡೆಯುವ ಸೌಲಭ್ಯವು ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಅನಾವರಣಗೊಂಡಿದೆ.ಪ್ರಕರಣಗಳ ಮಾಹಿತಿಗಾಗಿ ಕಕ್ಷಿದಾರರು ವಕೀಲರನ್ನು ಮತ್ತು ನ್ಯಾಯಾಲಯದ ಸಿಬ್ಬಂದಿಯನ್ನು ಅವಲಂಬಿಸ ಬೇಕಾಗಿತ್ತು. ಕೆಲವೊಮ್ಮೆ ಮಾಹಿತಿಯು ದೊರಕದ ಸನ್ನಿವೇಶವೂ ನಿರ್ಮಾಣವಾಗಿ ಪೇಚಾಟಕ್ಕೆ ಸಿಲುಕುತ್ತಿದ್ದರು. ಇನ್ನು ಮುಂದೆ ಅಂಥ ಕಷ್ಟ ಕಕ್ಷಿದಾರರಿಗಿಲ್ಲ.10 ವರ್ಷಗಳ ಅವಧಿಯ ಪ್ರಕರಣಗಳ ಎಲ್ಲ ಮಾಹಿತಿಗಳನ್ನೂ ಅಡಕಗೊಳಿಸಿರುವ ವಿದ್ಯುನ್ಮಾನ ಪ್ರಕರಣ ಮಾಹಿತಿ ಕೇಂದ್ರವನ್ನು ಪ್ರಧಾನ ಜಿಲ್ಲಾ ಮತ್ತು ಸೆಶೆನ್ಸ್ ನ್ಯಾಯಾಧೀಶ ಎಸ್.ರೇಣುಕಾ ಪ್ರಸಾದ್ ಸೋಮವಾರ ಉದ್ಘಾಟಿಸಿದ್ದಾರೆ.ಪ್ರತಿ ದಿನ ಸಂಜೆ 4.30 ಬಳಿಕ ಆಯಾ ದಿನದ ಪ್ರಕರಣದ ಮಾಹಿತಿಯನ್ನೂ ಕೇಂದ್ರದಲ್ಲಿ ಅಳವಡಿಸಲಾಗುವುದರಿಂದ ಕಕ್ಷಿದಾರರಿಗೆ ಮಾಹಿತಿ ಪಡೆಯುವುದು ಸುಲಭವಾಗಲಿದೆ. ಮಾಹಿತಿ ಅಳವಡಿಸುವ ಸಲುವಾಗಿಯೇ ಪ್ರಕರಣ ಮಾಹಿತಿ ವ್ಯವಸ್ಥೆಯನ್ನು (ಸಿಐಎಸ್- ಕೇಸ್ ಇನ್‌ಫರ್ಮೇಶನ್ ಸಿಸ್ಟಂ) ರೂಪಿಸಲಾಗಿದ್ದು, ತಜ್ಞ ಸಿಬ್ಬಂದಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.ಇ-ಕೋರ್ಟ್ ಯೋಜನೆ ಅಡಿಯಲ್ಲಿ ರಾಜ್ಯದ ಎಲ್ಲ ಜಿಲ್ಲಾ ನ್ಯಾಯಾಲಯಗಳಲ್ಲೂ ಮಾಹಿತಿ ಕೇಂದ್ರವನ್ನು ಸ್ಥಾಪಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಜಿಲ್ಲೆಯ ಎಲ್ಲ ಐದು ತಾಲ್ಲೂಕಿನ ನ್ಯಾಯಾಲಯಗಳಲ್ಲಿರುವ ಪ್ರಕರಣಗಳ ಮಾಹಿತಿ ಮತ್ತು ಹೈಕೋರ್ಟಿನಲ್ಲಿರುವ ಪ್ರಕರಣಗಳ ಮಾಹಿತಿಯನ್ನೂ ಮಾಹಿತಿ ಕೇಂದ್ರದಲ್ಲಿ ಪಡೆಯಬಹುದಾಗಿದೆ ಎಂದು ತಿಳಿಸಿದರು.ಕಕ್ಷಿದಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇದು ಮೊದಲ ಹಂತದ ಸೌಲಭ್ಯ. ಮುಂದಿನ ಐದಾರು ತಿಂಗಳಲ್ಲಿ ತಾಲ್ಲೂಕು ನ್ಯಾಯಾಲಯಗಳಲ್ಲೂ ಈ ಸೌಲಭ್ಯವನ್ನೂ ಒದಗಿಸಲಾಗುವುದು ಎಂದರು.ತೀರ್ಪಿನ ಪ್ರತಿ: ಪ್ರಕರಣಗಳ ತೀರ್ಪಿನ ಪ್ರತಿಗಳಿಗಾಗಿ ಅರ್ಜಿ ಸಲ್ಲಿಸಿ ಕಾಯುವ ಕಷ್ಟವನ್ನೂ ಕಕ್ಷಿದಾರರಿಗೆ ಕಡಿಮೆ ಮಾಡುವ ಪ್ರಯತ್ನವೂ ನಡೆಯುತ್ತಿದೆ. ಕಿಯೋನಿಕ್ಸ್ ಸೌಲಭ್ಯದ ಜೊತೆಗೆ, ತೀರ್ಪಿನ ಪ್ರತಿಯನ್ನು ನೀಡುವ ವ್ಯವಸ್ಥೆಯೂ ಆರು ತಿಂಗಳಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು.ಬಹಳಷ್ಟು ಸಂದರ್ಭಗಳಲ್ಲಿ ತೀರ್ಪಿನ ಪ್ರತಿಯನ್ನು ಪಡೆಯುವುದು ಕಕ್ಷಿದಾರರಿಗೆ ಕಷ್ಟವಾಗುತ್ತದೆ. ಕೆಲವೊಮ್ಮ ಕೆಲವು ವಕೀಲರು ಕಕ್ಷಿದಾರರಿಗೆ ಪ್ರತಿ ನೀಡದೆ ಸತಾಯಿಸಬಹುದು.ಅಥವಾ ಹಲವು ಬಾರಿ ಕಕ್ಷಿದಾರರನ್ನು ಅಲೆದಾಡಿಸಬಹುದು. ಇಂಥ ಸಮಸ್ಯೆಯನ್ನು ನಿವಾರಿಸುವ ಸಲುವಾಗಿಯೇ ತೀರ್ಪಿನ ಪ್ರತಿಯನ್ನು ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದರು.ಸ್ವಂತ ಅನುಭವ: ತೀರ್ಪಿನ ಪ್ರತಿ ದೊರಕದೆ ತೊಂದರೆಗೆ ಸಿಲುಕಿದ ತಮ್ಮ ಅನುಭವವೊಂದನ್ನು ನ್ಯಾಯಾಧೀಶರು ಸ್ಮರಿಸಿಕೊಂಡರು. ಹೈಕೋರ್ಟ್‌ನಲ್ಲಿ ದಾಖಲಿಸಿದ್ದ ತಮ್ಮ ಮಿತ್ರರೊಬ್ಬರ ಪ್ರಕರಣದ ತೀರ್ಪಿನ ಪ್ರತಿಯನ್ನು ಪಡೆಯುವ ಹೊತ್ತಿಗೆ ನಿರ್ಧಾರ ಕೈಗೊಳ್ಳಲು ಬೇಕಾಗಿದ್ದ ಸಮಯಾವಕಾಶವೂ ಕಳೆದುಹೋಗಿತ್ತು ಎಂದು  ವಿಷಾದಿಸಿದರು.ಪೂಜೆ: ನ್ಯಾಯಾಧೀಶರು ಕಿಯೋನಿಕ್ಸ್ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಕೇಂದ್ರಕ್ಕೆ ಮತ್ತು ಮಾಹಿತಿ ಕಂಪ್ಯೂಟರ್‌ಗೆ ಪೂಜೆ, ಮಂಗಳಾರತಿ ಮಾಡಲಾಯಿತು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಎಂ.ಶಿವಣ್ಣ, ಕಕ್ಷಿದಾರರು ಪ್ರಕರಣದ ವಿವರಗಳನ್ನು ಕೇಂದ್ರದಲ್ಲಿ ಪಡೆಯುವ ಸೌಲಭ್ಯವನ್ನು ನ್ಯಾಯಾಲಯದ ಆವರಣದಲ್ಲಿ ಕಲ್ಪಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಆದರೆ ಕಕ್ಷಿದಾರರು ಯಾವತ್ತಿಗೂ ವಕೀಲರನ್ನು ಅವಲಂಬಿಸಲೇಬೇಕಾಗುತ್ತದೆ ಎಂದು ಪ್ರತಿಪಾದಿಸಿದರು.ಮೊದಲ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸಂಗಣ್ಣ ಪಾಟೀಲ್, ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಕಿಣಿಕೇರಿ, ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಪ್ರೇಮಾವತಿ ಮನಗೋಳಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಜಿ.ಕುಮಾರ್, ಮೊದಲನೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಆರ್. ನಟೇಶ್, ಮೊದಲ ಹೆಚ್ಚುವರಿ ಪ್ರಧಾನ ನ್ಯಾಯಾಧೀಶ ಕೆಂಗಬಾಲಯ್ಯ ಮೊದಲಾದವರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry