ಕಗ್ಗಂಟಾಗಿಯೇ ಉಳಿದ ಸ್ಫೋಟ ಪ್ರಕರಣ

7

ಕಗ್ಗಂಟಾಗಿಯೇ ಉಳಿದ ಸ್ಫೋಟ ಪ್ರಕರಣ

Published:
Updated:
ಕಗ್ಗಂಟಾಗಿಯೇ ಉಳಿದ ಸ್ಫೋಟ ಪ್ರಕರಣ

ನವದೆಹಲಿ (ಪಿಟಿಐ): ಇಸ್ರೇಲ್ ರಾಯಭಾರ ಕಚೇರಿಗೆ ಸೇರಿದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ದೊರಕದೇ ಇರುವ ಹಿನ್ನೆಲೆಯಲ್ಲಿ ಪ್ರಕರಣ ಇನ್ನೂ ಕಗ್ಗಂಟಾಗಿಯೇ ಉಳಿದಿದೆ.ಇದೇ ವೇಳೆ ಇರಾನ್‌ನ ಪರಮಾಣು ವಿಜ್ಞಾನಿಯೊಬ್ಬರ ಮೇಲೆ ಕಳೆದ ತಿಂಗಳು ನಡೆದ ಇದೇ ರೀತಿಯ ದಾಳಿಯನ್ನು ಈ ಪ್ರಕರಣದೊಂದಿಗೆ ತಾಳೆ ಹಾಕುವ ಮೂಲಕ, ಏನಾದರೂ ಸುಳಿವು ಸಿಗಬಹುದೇ ಎಂಬುದರತ್ತಲೂ ತನಿಖಾಧಿಕಾರಿಗಳು ದೃಷ್ಟಿ ಹಾಯಿಸಿದ್ದಾರೆ.ಕಾರಿನ ಹಿಂಭಾಗದಲ್ಲಿ ಬಾಂಬ್ ಇರಿಸಲು ಬಳಸಲಾಗಿತ್ತು ಎನ್ನಲಾದ ಕೆಂಪು ಬಣ್ಣದ ಮೋಟಾರ್ ಸೈಕಲ್‌ಗಾಗಿ ತೀವ್ರ ಹುಡುಕಾಟ ಆರಂಭಿಸಿರುವ ಪೊಲೀಸರು, ದೆಹಲಿಯ ಲಾದೊ ಸರಾಯ್‌ನಲ್ಲಿ ಸಂಶಯಾಸ್ಪದ ರೀತಿಯಲ್ಲಿ ನಿಲ್ಲಿಸಿದ್ದ ಕೆಂಪು ಮೋಟಾರ್ ಸೈಕಲ್ ಒಂದನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇದು ಪ್ರಕರಣಕ್ಕೆ ಸಂಬಂಧಿಸಿದ ವಾಹನವೇ ಎಂಬುದನ್ನು ಇನ್ನಷ್ಟೇ ಖಚಿತಪಡಿಸಿಕೊಳ್ಳಬೇಕಿದೆ. ಘಟನೆ ನಡೆದ ಸಿಗ್ನಲ್ ಬಳಿಯ ಸಿಸಿಟಿವಿ ಕ್ಯಾಮೆರಾ ಕೂಡ ಮಹತ್ವದ ಸುಳಿವು ನೀಡಲು ವಿಫಲವಾಗಿದೆ.ಕೆಂಪು ಬಣ್ಣದ ಮೋಟಾರ್ ಸೈಕಲ್ ಹೊಂದಿರುವ ಐದು ಮಂದಿಯನ್ನು ಹಾಗೂ ಇಸ್ರೇಲ್ ರಾಯಭಾರ ಕಚೇರಿ ಮುಂದೆ ಕಾಣಿಸಿಕೊಂಡ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು. ಆದರೆ ಈ ವಿಧ್ವಂಸಕ ಕೃತ್ಯಕ್ಕೂ, ಅವರಿಗೂ ಸಂಬಂಧವಿಲ್ಲ ಎಂಬುದು ಮನವರಿಕೆಯಾದ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು. ದೆಹಲಿಯಲ್ಲಿ ವಾಸಿಸುತ್ತಿರುವ ಇರಾನ್ ಪ್ರಜೆಗಳ ಮಾಹಿತಿಯನ್ನೂ ಕಲೆಹಾಕಲಾಗುತ್ತಿದೆ. ಜೊತೆಗೆ ದೆಹಲಿಯಿಂದ ಇರಾನ್, ಇಸ್ರೇಲ್ ಮತ್ತು ಲೆಬನಾನ್‌ಗೆ ಮಾಡಲಾದ ಸುಮಾರು 115 ದೂರವಾಣಿ ಕರೆಗಳ ವಿವರ ಸಂಗ್ರಹಿಸಿ ಅವುಗಳ ಪರಿಶೀಲನೆ ನಡೆಸಲಾಗುತ್ತಿದೆ. ಘಟನೆ ನಡೆಯುವ ಸುಮಾರು 15 ದಿನಗಳ ಹಿಂದೆಯೇ ಈ ಕರೆಗಳನ್ನು ಮಾಡಲಾಗಿತ್ತು ಎನ್ನಲಾಗಿದೆ. ಪೊಟಾಷಿಯಂ ಕ್ಲೋರೇಟ್ ಮತ್ತು ನೈಟ್ರೇಟ್‌ಗಳನ್ನು ಬಳಸಿ ಸ್ಫೋಟ ನಡೆಸಿರುವುದು ಪ್ರಾಥಮಿಕ ವಿಧಿವಿಜ್ಞಾನ ಪರೀಕ್ಷೆಯಿಂದ ತಿಳಿದುಬಂದಿದೆ.ಭಾರತ ಉತ್ತರಿಸಲಿ: ದಾಳಿಯ ಹಿಂದೆ ಇರಾನ್ ಕೈವಾಡ ಇದೆ ಎಂಬ ಹೇಳಿಕೆಗಳನ್ನು ತಾವು ಸಮ್ಮತಿಸುವುದಾಗಲಿ ತಳ್ಳಿಹಾಕುವುದಾಗಲಿ ಮಾಡುವುದಿಲ್ಲ ಎಂದು ಭಾರತದಲ್ಲಿನ ಇರಾನ್ ರಾಯಭಾರಿ ಮೆಹದಿ ನಬಿಜದೇಹ್ ಹೇಳಿದ್ದಾರೆ.ಈ ರೀತಿ ಸುಮ್ಮನೆ ಆರೋಪಿಸುವುದಕ್ಕೆ ಆಧಾರವಾದರೂ ಏನು ಎಂದು ಪ್ರಶ್ನಿಸಿರುವ ಅವರು, ಭಾರತ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಸತ್ಯ ಬಹಿರಂಗಪಡಿಸಲಿ, ಅದು ಶೀಘ್ರದಲ್ಲೇ ಈ ಕೆಲಸ ಮಾಡುವ ಭರವಸೆ ಇದೆ ಎಂದಿದ್ದಾರೆ.ಅಧಿಕಾರಿ ಆರೋಗ್ಯ ಸ್ಥಿತಿ ಸ್ಥಿರ: ಈ ಮಧ್ಯೆ, ಬೆನ್ನುಹುರಿ ಶಸ್ತ್ರಚಿಕಿತ್ಸೆ ಬಳಿಕ ರಾಜತಾಂತ್ರಿಕ ಅಧಿಕಾರಿ ತಾಲ್ ಯೆಹೆಶುವಾ ಅವರು ಚೇತರಿಸಿಕೊಳ್ಳುತ್ತಿದ್ದು, ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ್ದಾರೆ ಎಂದು ಡಾ. ಅರುಣ್ ಭಾನೋಟ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry