ಕಗ್ಗಂಟಾದ ಕಸ ವಿಲೇವಾರಿ: ಸೂಕ್ತ ಕ್ರಮಕ್ಕೆ ಆಗ್ರಹ

7

ಕಗ್ಗಂಟಾದ ಕಸ ವಿಲೇವಾರಿ: ಸೂಕ್ತ ಕ್ರಮಕ್ಕೆ ಆಗ್ರಹ

Published:
Updated:

ಸೋಮವಾರಪೇಟೆ: ಪಟ್ಟಣದ ಕಸ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗುರುವಾರ ನಡೆದ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.ಇದಕ್ಕೆ ಉತ್ತರಿಸಿದ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಎನ್.ಎಸ್.ಮೂರ್ತಿ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ನಡೆದಿದ್ದು ನಿಗದಿಪಡಿಸಿರುವ ಸರ್ಕಾರಿ ಜಾಗದಲ್ಲಿ ತ್ಯಾಜ್ಯ ಹಾಕಲು ಮುಂದಾದಾಗ ಸ್ಥಳೀಯರು ಹೊಡೆಯಲು ಬರುತ್ತಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.ಪಂಚಾಯಿತಿ ಆಡಳಿತ ಮಂಡಳಿಯ ಅವಧಿ ಮುಗಿಯುತ್ತ ಬಂದಿದ್ದು ಕಳೆದ 5 ವರ್ಷಗಳಿಂದ ನಗರದ ಕಸ ವಿಲೇವಾರಿ ಸಮಸ್ಯೆ ಕಗ್ಗಂಟಾಗಿಯೇ ಉಳಿದಿದೆ. ಮುಂದೆ ಯಾವ ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಸದಸ್ಯೆ ವಿಜಯಲಕ್ಷ್ಮಿ ಸುರೇಶ್ ಪ್ರಶ್ನಿಸಿದರು.ಕಸ ವಿಲೇವಾರಿಗೆ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗಿದೆ. ಗುರುತಿಸಿರುವ ಸರ್ಕಾರಿ ಜಾಗದಲ್ಲಿ ತ್ಯಾಜ್ಯ ವಸ್ತುಗಳನ್ನು ಹಾಕಿ ಎಂದು ಜಿಲ್ಲಾಧಿಕಾರಿಗಳು ಹೇಳುತ್ತಾರೆ.ಆದರೆ ಕೆಲಸಗಾರರಿಗೆ ರಕ್ಷಣೆ ಇಲ್ಲವಾಗಿದೆ. ಸ್ಥಳೀಯರು ಬಡ ನೌಕರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರೆ ಏನು ಮಾಡುವುದು ಎಂದು ಅಧ್ಯಕ್ಷರು ಮರು ಪ್ರಶ್ನಿಸಿದರು.ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಅದೇಶ ನೀಡಿ ಕಸ ವಿಲೇವಾರಿ ಸಮಸ್ಯೆ ಬಗೆಹರಿಸಬೇಕು ಎಂದು ಉಪಾಧ್ಯಕ್ಷೆ ನಳಿನಿ ಗಣೇಶ್ ಹೇಳಿದರು.ಮರಮುಟ್ಟು ಲೆಕ್ಕ ಇಲ್ಲ

ಹೈಟೆಕ್ ಮಾರುಕಟ್ಟೆ ಕಟ್ಟುವ ಸಂದರ್ಭದಲ್ಲಿ ಹಳೆ ಕಟ್ಟಡಗಳನ್ನು ಕೆಡವಿದಾಗ ಸಂಗ್ರಹವಾದ ಕಲ್ಲು ಮತ್ತು ಮರಮುಟ್ಟುಗಳ ಲೆಕ್ಕ ಪಂಚಾಯಿತಿಯಲ್ಲಿ ಇಲ್ಲವೆಂದು ಸದಸ್ಯೆ ವಿಜಯಲಕ್ಷ್ಮಿ ಆರೋಪಿಸಿದರು.ಹಳೆ ಮರಮುಟ್ಟುಗಳ ಬಗ್ಗೆ ಲೆಕ್ಕಪತ್ರವನ್ನು ಹಿಂದಿನ ಮುಖ್ಯಾಧಿಕಾರಿಗಳು ನನಗೆ ಕೊಟ್ಟಿಲ್ಲ ಎಂದು ಮುಖ್ಯಾಧಿಕಾರಿ ಒಪ್ಪಿಕೊಂಡರು. ಸದಸ್ಯರೆಲ್ಲರ ಸಮ್ಮುಖದಲ್ಲೇ ಸಂಗ್ರಹಪಟ್ಟಿ ಮಾಡಲಾಗುವುದು ಎಂದು ಅಧ್ಯಕ್ಷ ಮೂರ್ತಿ ಭರವಸೆ ನೀಡಿದರು.ಗೋಲ್‌ಮಾಲ್

ಹರಾಜಾದ ಕುರಿ ಮಾಂಸದ ನಂ.5ರ ಮಳಿಗೆಯನ್ನು ದರ ಸಂಧಾನ ಮಾಡದೇ ವಿತರಿಸಲಾಗಿದೆ. ಇದೂ ಕೂಡ ಪಂಚಾಯಿತಿಯಲ್ಲಿ ನಡೆದ ಗೋಲ್‌ಮಾಲ್ ಎಂದು ಸದಸ್ಯೆ ವಿಜಯಲಕ್ಷ್ಮಿ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ನಿರ್ಣಯವಾದಂತೆ ದರ ಸಂಧಾನ ನಡೆದಿಲ್ಲ. ಮಳಿಗೆ ವಿತರಣೆ ಮಾಡಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ಮುಖ್ಯಾಧಿಕಾರಿ ಉತ್ತರಿಸಿದರು.ಮಳಿಗೆ ಕೊಟ್ಟಿಲ್ಲವೆಂದರೆ ಇಂದೇ ಅದಕ್ಕೆ ಬೀಗ ಹಾಕಿ. ಇದರ ಬಗ್ಗೆ ಮಾಹಿತಿ ನೀಡಬೇಕಾಗಿದ್ದ ಎಂಜಿನಿಯರ್ ಸಭೆಗೆ ಹಾಜರಾಗಿಲ್ಲ ಎಂದು ಸದಸ್ಯೆ ಜಯಂತಿ ಶಿವಕುಮಾರ್ ಹಾಗೂ ಶೀಲಾ ಡಿಸೋಜ ಅಸಮಾಧಾನ ವ್ಯಕ್ತಪಡಿಸಿದರು. ಇದರ ಪೂರ್ಣ ಮಾಹಿತಿ ರಾಜಸ್ವ ನಿರೀಕ್ಷಕ ಸುಜಿತ್‌ಗೆ ಗೊತ್ತು. ಅವರು ಕೂಡಾ ಇಂದಿನ ಸಭೆಗೆ ಬಂದಿಲ್ಲ. ಮುಂದಿನ ವಿಶೇಷ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ಮಾಡೋಣ ಎಂದು ಅಧ್ಯಕ್ಷರು ಮನವಿ ಮಾಡಿದರು.ಮಳಿಗೆಗಳ ಹರಾಜು ಹಾಗೂ ಇದರಿಂದ ಬರುವ ಆದಾಯದ ಬಗ್ಗೆ ಪೂರ್ಣ ಮಾಹಿತಿ ನೀಡುವಂತೆ ಈ ಹಿಂದೆ ಅರ್ಜಿ ಸಲ್ಲಿಸಲಾಗಿದೆ. ಇದುವರೆಗೂ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ ಎಂದು ಸದಸ್ಯರಾದ  ಬಿ.ಎಂ.ಸುರೇಶ್ ಹಾಗೂ ವಿಜಯಲಕ್ಷ್ಮಿ ಹೇಳಿದಾಗ ಇದರ ಕುರಿತು ಮಾಹಿತಿ ನೀಡುವುದಾಗಿ ಅಧಿಕಾರಿಗಳು ಹೇಳಿದರು.ಹಿಂದೆ ಬಿಲ್‌ಕಲೆಕ್ಟರ್‌ಗಳು ಗೋಲ್‌ಮಾಲ್ ಮಾಡಿರುವ ಬಗ್ಗೆ ದಾಖಲೆಯಿದೆ. ಈಗಿನವರು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸದಸ್ಯ ರಮೇಶ್ ಹೇಳಿದರು. ಸಭೆಯಲ್ಲಿ ದಾಕ್ಷಾಯಿಣಿ, ರವಿಚಂದ್ರ, ಗೀತಾ, ಫಯಾಜ್ ಖಾನ್, ವಸಂತ ರಮೇಶ್, ಸೋಮೇಶ್, ಸುಂದರ ಮೂರ್ತಿ, ಇಂಜಿನಿಯರ್ ವೀರೇಂದ್ರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry