ಬುಧವಾರ, ನವೆಂಬರ್ 20, 2019
20 °C

ಕಗ್ಗಂಟಾದ ಕಾಂಗ್ರೆಸ್ ಟಿಕೆಟ್ ಹಂಚಿಕೆ

Published:
Updated:

ಶಿರಸಿ: ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಹಂಚಿಕೆಯ ಗೊಂದಲ ಇನ್ನಷ್ಟು ಕಗ್ಗಂಟಾಗಿದೆ. ಶಿರಸಿ-ಸಿದ್ದಾಪುರ ವಿಧಾನಸಭೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ನಾಲ್ಕಾರು ದಿನಗಳಿಂದ ಪಕ್ಷದ ವರಿಷ್ಠರ ನೆರಳಿನ ಹಿಂದೆ ಅಲೆದಾಡುತ್ತಿದ್ದರೂ ಪಕ್ಷ ಇನ್ನೂ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಆದರೆ ಪಕ್ಷದ ಟಿಕೆಟ್ ಖಚಿತವಾದ ನಂತರ ಬಿಜೆಪಿಯಿಂದ ಕಣಕ್ಕಿಳಿಯಲಿರುವ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಗ್ರಾಮೀಣ ಭಾಗದಲ್ಲಿ ಪ್ರಚಾರ ಶುರು ಹಚ್ಚಿಕೊಂಡಿದ್ದಾರೆ.ಟಿಕೆಟ್‌ಗಾಗಿ ಪೈಪೋಟಿ, ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟಿನಿಂದ ಪ್ರತಿ ಚುನಾವಣೆಯಂತೆ ಈ ಬಾರಿ ಸಹ ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಅಂತಿಮಗೊಳಿಸುವಲ್ಲಿ ಹಿಂದೆ ಬಿದ್ದಿದೆ. ಕೆಲ ದಿನಗಳ ಹಿಂದೆ ನವಮಂಗಳೂರು ಬಂದರಿನ ಮಾಜಿ ಟ್ರಸ್ಟಿ ದೀಪಕ ಹೊನ್ನಾವರ ಹೆಸರು ದಿಢೀರ್ ಆಗಿ ಕಾಂಗ್ರೆಸ್ ಪಕ್ಷದ ಒಂದು ಗುಂಪಿನ ಕಾರ್ಯಕರ್ತರ ಬಾಯಲ್ಲಿ ಹರಿದಾಡಿತ್ತಾದರೂ ಇನ್ನೊಂದು ಗುಂಪಿನವರು ಅದನ್ನು ಬಲವಾಗಿ ಅಲ್ಲಗಳೆದಿದ್ದರು.ಮೂರು ವರ್ಷಗಳ ಹಿಂದೆ ಪಕ್ಷದಿಂದ ಉಚ್ಚಾಟನೆಗೊಂಡು ಒಂದು ತಿಂಗಳ ಹಿಂದಷ್ಟೆ ಪುನಃ ಪಕ್ಷದ ಒಳಗೆ ಬಂದಿರುವ ದೀಪಕ ಹೊನ್ನಾವರ ಪ್ರಸ್ತುತ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾದರೆ ಹೇಗೆ ಅಭ್ಯರ್ಥಿ ಪರ ಪ್ರಚಾರ ನಡೆಸುವುದು ಎಂಬುದು ಉಚ್ಛಾಟನೆ ಮಾಡುವ ಸಂದರ್ಭದಲ್ಲಿ ಕೆಪಿಸಿಸಿಯ ಉನ್ನತ ಹುದ್ದೆಯಲ್ಲಿದ್ದ ಜಿಲ್ಲೆಯ ಮುಖಂಡರೊಬ್ಬರ ಆಂತರಿಕ ದುಗುಡ. ಮಾಜಿ ಸಂಸದೆ ಆಳ್ವಾ ಗುಂಪಿನವರು ಇದನ್ನು ಹೇಳಿಕೊಂಡು ತೆರೆಯಲ್ಲಿ ನಗುತ್ತಿದ್ದಾರೆ. ಕಳೆದ ಎರಡು ದಿನಗಳ ಬೆಳವಣಿಗೆಯಲ್ಲಿ ಟಿಕೆಟ್ ಯಾರಿಗೆ ಎಂಬ ಸಂಗತಿ ಮತ್ತೆ ಪಕ್ಷದಲ್ಲಿ ಚರ್ಚಿತವಾಗುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರು ಉಸಿರುಬಿಗಿಹಿಡಿದು ಕಾಯುತ್ತಿದ್ದಾರೆ!ಜಿಲ್ಲೆಯ ಕಾಂಗ್ರೆಸ್ ಮುಖಂಡ ಆರ್.ವಿ.ದೇಶಪಾಂಡೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಅಥವಾ ಮಾಜಿ ಅಧ್ಯಕ್ಷ ಅವರಿಗೆ ಟಿಕೆಟ್ ಕೊಡಿಸಲು ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ. ನಾಮಧಾರಿ ಸಮುದಾಯದ ಸ್ಥಳೀಯ ಕೆಲ ಪ್ರಮುಖರು ಭೀಮಣ್ಣ ನಾಯ್ಕ ಅವರಿಗೆ ಟಿಕೆಟ್ ನೀಡಬೇಕು ಎಂದು ಮೆರವಣಿಗೆ ನಡೆಸಿದ್ದಾರೆ.ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ, ವಕೀಲ ರವೀಂದ್ರ ನಾಯ್ಕ ಹೆಸರು ಇತ್ತು. ಇವರಲ್ಲಿ ಜಿ.ಎನ್.ಹೆಗಡೆ ಬಹುತೇಕ ತಟಸ್ಥರಾದರೂ ರವೀಂದ್ರ ನಾಯ್ಕ ನಡೆ ಸ್ಪಷ್ಟವಾಗಿಲ್ಲ. ಮಾಜಿ ಸಂಸದೆ ಆಳ್ವಾ ಅವರಿಗೆ ಆಪ್ತರಾಗಿರುವ ರವೀಂದ್ರ ನಾಯ್ಕ ಪಕ್ಷದ ಕೇಂದ್ರ ನಾಯಕರ ಪ್ರಭಾವದಿಂದ ಟಿಕೆಟ್‌ಗೆ ಪ್ರಯತ್ನಿಸುತ್ತಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದ್ದರೆ ಬಿಜೆಪಿ ಟಿಕೆಟ್ ಖಾತ್ರಿ ಮಾಡಿಕೊಂಡು ಬಂದಿರುವ ಸಚಿವ ಕಾಗೇರಿ ಒಂದು ವಾರದಿಂದ ಶಿರಸಿ, ಸಿದ್ದಾಪುರ ತಾಲ್ಲೂಕುಗಳ ಗ್ರಾಮೀಣ ಭಾಗಗಳಿಗೆ ಭೇಟಿ ನೀಡಿ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರು, ಪ್ರಮುಖರನ್ನು ಭೇಟಿ ಮಾಡಿ ಮೊದಲ ಹಂತದ ಪ್ರಚಾರ ಪ್ರಾರಂಭಿಸಿದ್ದಾರೆ. ಗುರುವಾರ ಶಿರಸಿಯಲ್ಲಿ ಪಕ್ಷದ ಅನೇಕ ಪ್ರಮುಖರನ್ನು ಭೇಟಿ ಮಾಡಿ ಸಂಘಟನೆ ಕುರಿತು ಚರ್ಚಿಸಿದರು.ಜೆಡಿಎಸ್ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಶಶಿಭೂಷಣ ಹೆಗಡೆ ತಿಂಗಳ ಹಿಂದೆ ಗ್ರಾಮೀಣ ಭೇಟಿ ಶುರುವಿಟ್ಟುಕೊಂಡಿದ್ದರೂ ಯಾಕೋ ಕೆಲ ದಿನಗಳಿಂದ ತಟಸ್ಥರಾಗಿದ್ದಾರೆ ಎಂದು ಪಕ್ಷದ ಕಾರ್ಯಕರ್ತರೇ ಹೇಳುತ್ತಿದ್ದಾರೆ. ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಘೋಷಣೆ ಮಾಡಿದ್ದರೂ ಸ್ಥಳೀಯ ಮುಖಂಡರು `ಇದು ಸೂಕ್ತ ಆಯ್ಕೆಯಲ್ಲ, ಈ ಆಯ್ಕೆಯನ್ನು ನಾವು ತಡೆ ಹಿಡಿಯುತ್ತೇವೆ' ಎಂಬ ಅಪಸ್ವರ ಎತ್ತಿದ್ದಾರೆ. ಬಿಜೆಪಿ ಬಿಟ್ಟು ಇನ್ಯಾವ ಪಕ್ಷಗಳೂ ಅಧಿಕೃತ ಪ್ರಚಾರ ಪ್ರಾರಂಭಿಸಿದಂತಿಲ್ಲ.

ಪ್ರತಿಕ್ರಿಯಿಸಿ (+)