ಶನಿವಾರ, ಮೇ 8, 2021
19 °C

ಕಗ್ಗ ಬತ್ತ ಅಭಿವೃದ್ಧಿ ಯೋಜನೆಗೆ ನೀಲನಕ್ಷೆ: ಅಶೀಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮಟಾ: `ಕರಾವಳಿ ಪ್ರದೇಶದ ಕಗ್ಗ ಬತ್ತ, ಕಾಂಡ್ಲಾ, ಮೀನಿನ ಸಹಜ ಕೃಷಿ ಹಾಗೂ ಈರುಳ್ಳಿಯ ರಕ್ಷಣೆಗಾಗಿ ಯಾವ ಸಂಶೋಧನೆ ಗಳೇ ನಡೆದರೂ ಸ್ಥಳೀಯರೇ ಅದನ್ನು ಮುಂದೆ ಉಳಿಸಿ ಬೆಳೆಸಬೇಕು ಎನ್ನುವ ಮಹತ್ತರ ಯೋಜನೆಯ ಬಗ್ಗೆ ಸರಕಾರ ನೀಲನಕ್ಷೆಯನ್ನು ತಯಾರಿಸುತ್ತಿದೆ~ ಎಂದು ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.ಪಶ್ಚಿಮ ಘಟ್ಟ ಕಾರ್ಯಪಡೆ, ಅರಣ್ಯ ಇಲಾಖೆ ಹಾಗೂ ಬೆಂಗಳೂರಿನ `ಸಹಜ ಸಮೃದ್ಧಿ~ ಸಂಘಟನೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ `ಅಘನಾಶನಿ ನದಿ ಬಯಲಿನ ಜೀವ ವೈವಿಧ್ಯ ರಕ್ಷಣೆಗಾಗಿ ಜನ ಸಮಾವೇಶ~ ಉದ್ಘಾಟಿಸಿ ಮಾತನಾಡಿದ ಅವರು, `ಕಳೆದ ಮೂರು ವರ್ಷಗಳಿಂದ ಜಿಲ್ಲೆಯ ಕರಾವಳಿ ಪ್ರದೇಶ ರಕ್ಷಣೆಗೆ `ಹಸಿರು ಕವಚ~ ಯೋಜನೆ ಆರಂಭಿಸಲಾಗಿದೆ.ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಗುರಿಯನ್ನೂ ಹೊಂದಲಾಗಿದೆ. ಅಳ್ವೆಕೋಡಿ ಈರುಳ್ಳಿ ಅಭಿವೃದ್ಧಿಪಡಿಸುವ ಕೇಂದ್ರ ತೆರೆಯುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಕೊಳ್ಳಲಾಗುವುದು~ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ, `ಹೆಚ್ಚು ಅರಣ್ಯವಿರುವ ಈ ಭಾಗದಲ್ಲಿ ಇಂದು ಪಶ್ಚಿಮ ಘಟ್ಟ ಬೇಕೋ ಅಥವಾ ಜನರು ಬೇಕೋ ಎನ್ನುವುದನ್ನು ನಿರ್ಧರಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಜನರ ಬದಲು ಅವುಗಳೇ ಬೇಕಾಗಿದ್ದರೆ ಜನರನ್ನು ಬೇರೆ ಪ್ರದೇಶದೆಡೆ ವಲಸೆ ಕಳಿಸಿ. 1983ರಲ್ಲಿ ಬಂದ ಅರಣ್ಯ ಸಂರಕ್ಷಣಾ ಕಾಯಿದೆ ಪರಿಣಾಮ ಈ ಭಾಗದಲ್ಲಿ ಇಂದು ಕೆಂಪು ಕಲ್ಲು ತೆಗೆಯುವುದು ಅಸಾಧ್ಯವಾಗಿದೆ.ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಹೋರಾಟವೇ ಅನಿವಾರ್ಯವೇನೋ ಎನ್ನು ವಂಥ ಪರಿಸ್ಥಿತಿಯೂ ನಿರ್ಮಾಣವಾಗಬಹು ದಾಗಿದೆ. ತಾಲ್ಲೂಕಿನ ವಿವಿಧ ಸಿಗಡಿ ಗಜನಿ ಅಭಿವೃದ್ಧಿಗೆ 4 ಕೋಟಿ ರೂ. ಮಂಜೂರಿ ಮಾಡಿಸಲಾಗಿದೆ~ ಎಂದರು.ಬೆಂಗಳೂರಿನ `ಸಹಜ ಸಮೃದ್ಧಿ~ ನಿರ್ದೇಶಕ ಕೃಷ್ಣ ಪ್ರಸಾದ, ಈ ಪ್ರದೇಶದಲ್ಲಿ `ಯಾವ ಗೊಬ್ಬರ, ಔಷಧಿಯ ಹಂಗಿಲ್ಲದೆ ಸಹಜವಾಗಿ ಬೆಳೆಯುವುದು ಕಗ್ಗ ಬತ್ತದ ವಿಶೇಷ~ ಎಂದರು.ಮಾಣಿಕಟ್ಟಾ ಗಜನಿ ರೈತರ ಸಂಘದ ಅಧ್ಯಕ್ಷ ಸಿ.ಆರ್.ನಾಯ್ಕ, ಕಗ್ಗ ಬತ್ತದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಪ್ರಾಧ್ಯಾಪಕಿ ಡಾ.ಗೀತಾ ನಾಯಕ, ಕುಮಟಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆರ್.ಜಿ.ಭಟ್ಟ ಮಾತನಾಡಿದರು.ತಾ.ಪಂ. ಉಪಾಧ್ಯಕ್ಷ ಈಶ್ವರ ನಾಯ್ಕ, ಕೃಷಿ ಅಧಿಕಾರಿ ಆರ್.ಪಿ.ಭಟ್ಟ, ಕುಮಟಾ ಆರ್.ಎಫ್.ಒ. ವಿ.ಟಿ.ಕವರಿ, ಸ್ನೇಹಕುಂಜದ ಎಂ.ಆರ್.ಹೆಗಡೆ ಮೊದಲಾದವರು ಪಾಲ್ಗೊಂಡಿದ್ದರು. ಡಿ.ಬಿ.ಹರಿಕಂತ್ರ ನಿರೂಪಿಸಿದರು.

ಇದೇ ಸಂದರ್ಭದಲ್ಲಿ `ಗಜನಿಗೆ ಜೀವ ಕೊಟ್ಟ ಅಘನಾಶಿನಿ~ ಎಂಬ ಹೊತ್ತಿಗೆ ಬಿಡುಗಡೆ ಮಾಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.