ಕಚ್ಚಾ ತೈಲ:ಇರಾನ್ ಬೆದರಿಕೆ

7

ಕಚ್ಚಾ ತೈಲ:ಇರಾನ್ ಬೆದರಿಕೆ

Published:
Updated:
ಕಚ್ಚಾ ತೈಲ:ಇರಾನ್ ಬೆದರಿಕೆ

ಸಿಂಗಪುರ (ಎಪಿ): ಬ್ರಿಟನ್ ಮತ್ತು ಫ್ರಾನ್ಸ್‌ಗೆ ಕಚ್ಚಾ ತೈಲ ಪೂರೈಕೆಯನ್ನು ಇರಾನ್ ಸ್ಥಗಿತಗೊಳಿಸಿರುವುದರಿಂದ ಏಷ್ಯಾದ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್ ಕಚ್ಚಾ ತೈಲದ ಬೆಲೆ ಸೋಮವಾರ ಕಳೆದ ಒಂಬತ್ತು ತಿಂಗಳಲ್ಲೇ ಗರಿಷ್ಠ ಮಟ್ಟ 105 ಡಾಲರ್‌ಗಳಿಗೆ ಏರಿಕೆಯಾಗಿದೆ.

ಅಣುಶಕ್ತಿ ಅಭಿವೃದ್ಧಿ ವಿವಾದದ ಹಿನ್ನೆಲೆಯಲ್ಲಿ ಇರಾನ್, ತನ್ನ ವಿರುದ್ಧದ ಆರ್ಥಿಕ ದಿಗ್ಬಂಧನಕ್ಕೆ ಪ್ರತಿಯಾಗಿ ಈ ದೇಶಗಳಿಗೆ ತೈಲ ಪೂರೈಸುವುದನ್ನು ಸ್ಥಗಿತಗೊಳಿಸಿದೆ. ಬ್ರಿಟನ್ ಮತ್ತು ಫ್ರಾನ್ಸ್‌ನ ಕಂಪೆನಿಗಳಿಗೆ  ತೈಲ ರಫ್ತು ಮಾಡುವುದಿಲ್ಲ ಎಂದು ಇರಾನಿನ ತೈಲ ಸಚಿವಾಲಯ ಸ್ಪಷ್ಟಪಡಿಸಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಪ್ರತಿ ಬ್ಯಾರಲ್ ಕಚ್ಚಾ ತೈಲದ ಬೆಲೆ ಶೀಘ್ರದಲ್ಲಿಯೇ 150 ಡಾಲರ್ ದಾಟಲಿದೆ ಎಂದು ಇರಾನಿನ ರಾಷ್ಟ್ರೀಯ ತೈಲ ಕಂಪೆನಿಯ ಮುಖ್ಯಸ್ಥ ಕಲೆಬನಿ ಎಚ್ಚರಿಸಿದ್ದಾರೆ.

ಟೆಹರಾನ್ ಬೆದರಿಕೆ: ಪರಮಾಣು ಅಭಿವೃದ್ಧಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ದ್ವೇಷ ಮುಂದುವರೆಸಿದರೆ ಯೂರೋಪ್ ಒಕ್ಕೂಟದ ಇನ್ನಷ್ಟು ದೇಶಗಳಿಗೆ ತೈಲ ಪೂರೈಸುವುದು ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಟೆಹರಾನ್ ಬೆದರಿಕೆ ಒಡ್ಡಿದೆ.

ಇರಾನ್ ತನ್ನ `ಶತ್ರು ರಾಷ್ಟ್ರ~ಗಳಾದ ಯೂರೋಪ್ ಒಕ್ಕೂಟದ 27 ದೇಶಗಳಿಗೆ ತೈಲ ಪೂರೈಕೆ ಸ್ಥಗಿತಗೊಳಿಸಲಿದೆ ಎಂದು ಇರಾನಿನ ತೈಲ ಸಚಿವ ರೋಸ್ಟಮ್ ಕ್ಯಾಸೆಮಿ ಬೆದರಿಕೆ ಒಡ್ಡಿದ್ದಾರೆ. ಯೂರೋಪ್ ಒಕ್ಕೂಟ ಪ್ರತಿಕಾರ ಮನೋಭಾವವನ್ನು ಮುಂದುವರೆಸಿದರೆ, ಗ್ರೀಸ್, ಸ್ಪೇನ್, ಇಟಲಿ, ಪೋರ್ಚುಗಲ್, ಜರ್ಮನಿ, ನೆದರ್‌ಲೆಂಡ್ ದೇಶಗಳಿಗೂ ತೈಲ ಪೂರೈಕೆ ನಿಲ್ಲಿಸಬೇಕಾಗುತ್ತದೆ ಎಂದು  ಹೇಳಿದ್ದಾರೆ.  ಇರಾನ್ ಶೇ 18ರಷ್ಟು ಕಚ್ಚಾತೈಲವನ್ನು ಯೂರೋಪ್ ದೇಶಗಳಿಗೆ ಪೂರೈಕೆ ಮಾಡುತ್ತದೆ.

ಇರಾನ್, ಪರಮಾಣು ಶಕ್ತಿ ಅಭಿವೃದ್ಧಿಪಡಿಸುವ ಚಟುವಟಿಕೆಗಳ  ಮೂಲಕ ಅಣ್ವಸ್ತ್ರಗಳನ್ನು ತಯಾರಿಸುತ್ತಿದೆ ಎಂದು ಅಮೆರಿಕ  ಆರೋಪಿಸುತ್ತಿದೆ. ಆದರೆ, ಇರಾನ್ ಇದನ್ನು ಅಲ್ಲಗಳೆದಿದ್ದು, ಶಾಂತಿಯುತ  ಉದ್ದೇಶಗಳಿಗಾಗಿ ಮಾತ್ರ ಅಣುಶಕ್ತಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದೆ. 

ಚೀನಾದ ಸೆಂಟ್ರಲ್ ಬ್ಯಾಂಕ್, ಮಾರುಕಟ್ಟೆಗೆ ಬಂಡವಾಳ ಹರಿವು ಹೆಚ್ಚಿಸಲು `ನಗದು ಮೀಸಲು ಅನುಪಾತ~ ತಗ್ಗಿಸಿರುವ ಕ್ರಮ ಕೂಡ ಏಷ್ಯಾ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಳಕ್ಕೆ ಮತ್ತೊಂದು ಕಾರಣವಾಗಲಿದೆ ಎಂದೂ ತಜ್ಞರು ವಿಶ್ಲೇಷಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry