ಕಜ್ಜಿ ತುರಿಕೆ- ಇಲ್ಲಿ ಬದುಕುವುದೇ ಹೇವರಿಕೆ...

7

ಕಜ್ಜಿ ತುರಿಕೆ- ಇಲ್ಲಿ ಬದುಕುವುದೇ ಹೇವರಿಕೆ...

Published:
Updated:

ರಾಮನಗರ: ಬಿಡದಿ ಹೋಬಳಿಯ ಕೊಡಿಯಾಲ ಕರೇನಹಳ್ಳಿ, ಬೈರಮಂಗಲ ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳ ಜನತೆ ಭೀಕರ ಬದುಕನ್ನು ಎದುರಿಸುತ್ತಿರುವ ಬೆನ್ನಲ್ಲೇ ಬಿಬಿಎಂಪಿ ಇಲ್ಲಿ ಕಸ ತಂದು ಸುರಿಯಲಿರುವ ನಿರ್ಧಾರ ಇವರ ಬದುಕನ್ನು ಪೂರಾ ಕಸಿದುಕೊಳ್ಳುವ ಭೀತಿ ಎದುರಾಗಿದೆ.ಈಗಾಗಲೇ ಈ ಪ್ರದೇಶದ ಜನರ ಪಾಲಿಗೆ ಇಲ್ಲಿ ಹರಿಯುವ ವೃಷಭಾವತಿಯ ಕೊಳದೆ ನೀರು ಶಾಪಗ್ರಸ್ತವಾಗಿದೆ. ಈ ಭಾಗದ ಬಹುತೇಕ ಜನರು ಕಜ್ಜಿ, ಕೈ, ಕಾಲುಗಳ ಉರಿತ, ಕೆರೆತ ಹಾಗೂ ಕಡಿತದಿಂದ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಚರ್ಮ ರೋಗಗಳು ಇವರನ್ನು ಬಿಟ್ಟೂ ಬಿಡದೆ ಕಾಡುತ್ತಲೇ ಇವೆ. ಚರ್ಮದ ಮೇಲೆ ದಪ್ಪದಪ್ಪನಾದ ಗುಳ್ಳೆಗಳು ಎದ್ದು, ಕಜ್ಜಿಯಾಗಿ ಮಾರ್ಪಾಟಾಗಿದ್ದು, ವಿಪರೀತ ನವೆಯನ್ನು ಉಂಟು ಮಾಡುತ್ತಿವೆ ಎಂದು ಬುಧವಾರ ಸ್ಥಳಕ್ಕೆ ಭೇಟಿ ನೀಡಿದ್ದ `ಪ್ರಜಾವಾಣಿ'ಗೆ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು.ಬೈರಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡಿಹಳ್ಳಿ, ಅಂಚಿಪುರ, ಚಿಕ್ಕ ಬೈರಮಂಗಲ, ಚಿಕ್ಕ ಕುಂಟನಹಳ್ಳಿ, ಜನತಾ ಕಾಲೋನಿ, ತೋರೆದೊಡ್ಡಿ, ಅಬ್ಬನಕುಪ್ಪೆ, ವೃಷಭಾವತಿಪುರ, ರಾಮನಹಳ್ಳಿ, ಆಶ್ರಮದೊಡ್ಡಿ, ತಿಮ್ಮೇಗೌಡನದೊಡ್ಡಿ, ಗೋಪಳ್ಳಿ, ಚೌಕಳ್ಳಿ, ಹೊಸೂರು, ಬನ್ನಿಗಿರಿ, ತಾಳಗುಪ್ಪೆ, ಅಂಗರಹಳ್ಳಿ, ಹೆಗ್ಗಡಗೆರೆ, ಬಾಣಂದೂರು, ಹುಚ್ಚಮ್ಮದೊಡ್ಡಿ, ನಾರಾಯಣಪುರ, ಜೋಗನಪಾಳ್ಯ, ಕೆಂಚಾಪುರದೊಡ್ಡಿ, ಕೆಂಚುಗಾರನಹಳ್ಳಿ, ಶಾನುಮಂಗಲ ಸೇರಿದಂತೆ ಹಲವು ಗ್ರಾಮಗಳಲ್ಲಿ ಜನರು ಚರ್ಮ ರೋಗ  ಸೇರಿದಂತೆ ಹಲವು ಬಗೆಯ ರೋಗ ರುಜಿನಗಳಿಂದ ನರಳುವಂತಾಗಿದೆ.ಕೊಳಚೆ ನೀರೇ ಕಾರಣ: `ರಾಜಧಾನಿ ಬೆಂಗಳೂರಿನಿಂದ ವೃಷಭಾವತಿ ನದಿ ಮೂಲಕ ಹರಿದು ಬರುವ ಕಲುಷಿತ ನೀರು ಈ ಭಾಗದ ಜನತೆಯಲ್ಲಿ ವಿವಿಧ ಬಗೆಯ ರೋಗಗಳಿಗೆ ಕಾರಣವಾಗಿದೆ ಎಂದು ಈ ಗ್ರಾಮಗಳ ಜನತೆ ಅಭಿಪ್ರಾಯಪಡುತ್ತಾರೆ. ಹದಿನೈದು ವರ್ಷಗಳ ಹಿಂದೆ ಆರೋಗ್ಯವಾಗಿದ್ದ ಈ ಗ್ರಾಮಗಳ ಜನತೆ ಆ ನಂತರ ಹಲವು ರೋಗಗಳಿಗೆ ಒಳಗಾಗಿ ದುಡಿದದ್ದನ್ನೆಲ್ಲಾ ಆಸ್ಪತ್ರೆಗೇ ಇಕ್ಕುವ ದುಃಸ್ಥಿತಿ ಬಂದಿದೆ' ಎಂದು ಕೊಡಿಯಾಲ ಕರೇನಹಳ್ಳಿಯ ಗ್ರಾಮಸ್ಥ ಭೂಪಾಲ್ ಪ್ರತಿಕ್ರಿಯಿಸುತ್ತಾರೆ. `ಬೆಂಗಳೂರಿನ ಕೊಳಚೆ ನೀರು ಈ ಭಾಗದ ಕೃಷಿಯನ್ನಷ್ಟೇ ಅಲ್ಲ ಜನತೆಯ ಆರೋಗ್ಯವನ್ನೂ ಹಾಳುಗೆಡವಿದ್ದು, ಅಕ್ಷರಶಃ ಶಾಪವಾಗಿ ಪರಿಣಮಿಸಿದೆ. ಈ ನೀರಿನ ಪ್ರಭಾವದಿಂದ ಸುತ್ತಮುತ್ತಲ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯಲೂ ಯೋಗ್ಯವಾದ ನೀರು ದೊರೆಯದಂತಾಗಿದೆ. ಅಲ್ಲದೆ ಕೊಳಚೆ ನೀರಿನಿಂದ ವಿಪರೀತ ಸೊಳ್ಳೆ ಸಂತಾನ ಉತ್ಪತ್ತಿಯಾಗುತ್ತಿದ್ದು, ಚಿಕುನ್ ಗುನ್ಯಾದಂತಹ ಕಾಯಿಲೆಗಳು ಆವರಿಸಿವೆ' ಎಂದು  ದೂರುತ್ತಾರೆ.ಚರ್ಮರೋಗದಿಂದ ನರಳುತ್ತಿರುವ ಜನತೆ: `ಕೊಳಚೆ ನೀರಿನ್ನೇ ಹೊಲಕ್ಕೆ ಹರಿಸಿ ಸಣ್ಣ ಪುಟ್ಟ ಕೃಷಿ ಮಾಡುವ ಜನತೆಯ ಸಂಕಷ್ಟವಂತೂ ಹೇಳತೀರದಾಗಿದೆ. ಕಲುಷಿತ ನೀರನ್ನು ಹೊಲಕ್ಕೆ ಹಾಯಿಸುವ ಸಂದರ್ಭದಲ್ಲಿ ನೀರಿನ ಸ್ಪರ್ಶದಿಂದಲೇ ಹಲವು ರೋಗಗಳು ರೈತರನ್ನು ಅಮರಿಕೊಳ್ಳುತ್ತಿವೆ. ಇದರಿಂದ ಕೆಲವರಿಗೆ ಚರ್ಮಗಳೇ ಸುಟ್ಟಂತಾಗಿ ಹೋಗಿದೆ. ಇನ್ನೂ ಕೆಲವರಿಗೆ ಕಜ್ಜಿ, ತುರಿಕೆ, ಅಲರ್ಜಿ ಕಾಯಿಲೆಗಳು ಆವರಿಸಿವೆ' ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಯಚಂದ್ರ ಇಲ್ಲಿನ ಪರಿಸ್ಥಿತಿಯನ್ನು ವಿವರಿಸಿದರು. `ರಾಗಿ ಕಟಾವಿಗೆ ಬಂದಿದ್ದರೂ ಅದನ್ನು ಕಟಾವು ಮಾಡಲು ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಇರುವ ಕೆಲ ಕೂಲಿ ಕಾರ್ಮಿಕರು ಚಿಕುನ್ ಗುನ್ಯದಿಂದ ನರಳುತ್ತಿದ್ದಾರೆ' ಎಂದು ಭೂಪಾಲ್ ತಿಳಿಸುತ್ತಾರೆ.ಯಾತನೆ ಅನುಭವಿಸುತ್ತಿರುವ ಎಲ್ಲಪ್ಪ: ಕೊಡಿಯಾಲ ಕರೇನಹಳ್ಳಿಯಲ್ಲಿ ಎಲ್ಲಪ್ಪ ಎಂಬ ವ್ಯಕ್ತಿಗೆ ಐದು-ಆರು ವರ್ಷದಿಂದೀಚೆಗೆ ಮೈ ತುಂಬಾ ಕಜ್ಜಿ ಆವರಿಸಿಕೊಂಡಿದೆ. ಕೂಲಿ ಕಾರ್ಮಿಕರಾದ ಅವರು ಬೇರೆಯವರ ಜಮೀನಿನಲ್ಲಿ ನೀರು ಕಟ್ಟಲು ಹೋಗಿ ರೋಗ ತಂದುಕೊಂಡಿದ್ದಾರೆ. ಇದರ ಜೊತೆಗೆ ಸೊಳ್ಳೆ ಕಡಿತ ಬೇರೆ. ದುಡ್ಡುಕಾಸು ಇಲ್ಲದ ಈ ಬಡವನಿಗೆ ಬಡತನಕ್ಕೇ ಬರೆ ಎಂಬಂತೆ ಈ ರೋಗ ಬೆನ್ನುಬಿದ್ದಿದೆ.`ಆರ್ಥಿಕವಾಗಿ ಶಕ್ತಿ ಇಲ್ಲದ ಕಾರಣ ನನಗೆ ಈ ರೋಗ ಗುಣಪಡಿಸಿಕೊಳ್ಳಲು ಆಗುತ್ತಿಲ್ಲ. ಆಸ್ಪತ್ರೆಗಳಿಗೆ ಸುತ್ತಿದ್ದೇನಾದರೂ ಯಾವುದೇ ಪ್ರಯೋಜನವೂ ಆಗುತ್ತಿಲ್ಲ' ಎಂದು ಎಲ್ಲಪ್ಪ ನೋವಿನಿಂದ ಹೇಳುತ್ತಾರೆ. `ಇಂತಹ ಸಾಕಷ್ಟು ಜನರು ಈ ಭಾಗದ ಗ್ರಾಮಗಳಲ್ಲಿ ಇದ್ದಾರೆ. ಆದರೆ ಬಹಿರಂಗವಾಗಿ ಹೇಳಿಕೊಳ್ಳಲು ಅವರಿಗೆ ಮುಜುಗರ ಇದೆ. ಹೆಣ್ಣುಮಕ್ಕಳ ಪಾಡಂತೂ ಹೇಳತೀರದು. ಒಳಗೊಳಗೆ ನೋವು ತಿನ್ನುತ್ತಾ ಬಳಲುತ್ತಿದ್ದಾರೆ' ಎಂದು ಅವರು  ತಿಳಿಸುತ್ತಾರೆ.ಶಾಪಗ್ರಸ್ತ ಗ್ರಾಮಗಳಿಗೆ ಮತ್ತೊಂದು ಶಾಪ: `ಬೆಂಗಳೂರಿನಿಂದಾಗಿ ಶಾಪಗ್ರಸ್ತವಾಗಿರುವ ನಮ್ಮ ಊರುಗಳ ಜನತೆಗೆ ಉತ್ತಮ ಆರೋಗ್ಯ, ಕೃಷಿ, ನೀರು, ಮೂಲ ಸೌಕರ್ಯ ಒದಗಿಸುವಲ್ಲಿ ವಿಫಲವಾಗಿರುವ ಸರ್ಕಾರ ಇದೀಗ ಇಲ್ಲಿಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಸ ವಿಲೇವಾರಿ ಘಟಕ ಸ್ಥಾಪಿಸಲು ಹೊರಟಿರುವುದು ಎಷ್ಟು ಸರಿ ? ಈ ಮೂಲಕ ಮತ್ತೊಂದು ಶಾಪಕ್ಕೆ ನಮ್ಮನ್ನು ತಳ್ಳತ್ತಿರುವುದು ನ್ಯಾಯವಲ್ಲ. ಕಲುಷಿತ ನೀರಿನಿಂದ ಅರ್ಧ ಜೀವ ಕಳೆದುಕೊಂಡಿರುವ ನಮ್ಮನ್ನು ಸಂಪೂರ್ಣವಾಗಿ ಸರ್ವನಾಶ ಮಾಡಲು ಸರ್ಕಾರ ಹುನ್ನಾರ ನಡೆಸಿರುವಂತೆ ಕಾಣುತ್ತಿದೆ' ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.`ಕಸ ಹಾಕುವ ನೆಪದಲ್ಲಿ ಭೂಗಳ್ಳರು ನಮ್ಮ ಜಮೀನು ಆಕ್ರಮಿಸಲು ಬರುತ್ತಿದ್ದಾರೆ ಎಂಬ ಶಂಕೆಯೂ ಇದೆ. ಭೂ ಮಾಫಿಯಾದಲ್ಲಿ ತೊಡಗಿರುವ ಈ ಭೂಗಳ್ಳರಿಗೆ ಭೂಮಿ ಬಿಟ್ಟುಕೊಡಲು ನಾವು ಸಿದ್ಧರಿಲ್ಲ. ನಮ್ಮ ಗ್ರಾಮಗಳ ಜನತೆಯ ಆರೋಗ್ಯದ ಬಗ್ಗೆ ಕಾಳಜಿ ಇಲ್ಲದ ಸರ್ಕಾರ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಂಡರೆ ಸಹಿಸಲು ಆಗುವುದಿಲ್ಲ. ಈ ಬಗ್ಗೆ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ' ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry