ಗುರುವಾರ , ಅಕ್ಟೋಬರ್ 17, 2019
27 °C

ಕಟರ್ ಉಪಕರಣಕ್ಕೆ ಸಿಲುಕಿ ಕಾರ್ಮಿಕನ ಸಾವು

Published:
Updated:

ಬೆಂಗಳೂರು: ಗುಜರಿ ಗೋದಾಮಿನಲ್ಲಿ ಪ್ಲಾಸ್ಟಿಕ್ ಡ್ರಮ್ ಅನ್ನು ಎಲೆಕ್ಟ್ರಾನಿಕ್ ಕಟರ್‌ನಿಂದ ತುಂಡರಿಸುತ್ತಿದ್ದ ಕಾರ್ಮಿಕನೊಬ್ಬ ಆಕಸ್ಮಿಕವಾಗಿ ಕಟರ್ ಉಪಕರಣಕ್ಕೆ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ಸರ್ಜಾಪುರ ರಸ್ತೆ ಸಮೀಪದ ಆರ್.ಆರ್.ಲೇಔಟ್‌ನಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.ಬಿಹಾರ ಮೂಲದ ನಿರಂಜನ್ (31) ಮೃತಪಟ್ಟ ಕಾರ್ಮಿಕ. ಅವರು ಆರ್.ಆರ್.ಲೇಔಟ್‌ನಲ್ಲಿರುವ ಸೂರ್ಯ ಟ್ರೇಡಿಂಗ್ ಅಂಡ್ ರಿಸೈಕ್ಲಿಂಗ್ ಸೆಂಟರ್ ಹೆಸರಿನ ಗುಜರಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ನಿರಂಜನ್  ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾರ್ಖಾನೆಯ ಗೋದಾಮಿನಲ್ಲಿ ಪ್ಲಾಸ್ಟಿಕ್ ಡ್ರಮ್ ಒಂದನ್ನು ಎಲೆಕ್ಟ್ರಾನಿಕ್ ಕಟರ್‌ನಿಂದ ತುಂಡರಿಸುತ್ತಿದ್ದರು. ಈ ಸಂದರ್ಭದಲ್ಲಿ ಕಟರ್‌ನ ಕಿಡಿಯಿಂದ ಡ್ರಮ್‌ಗೆ ಬೆಂಕಿ ಹೊತ್ತಿಕೊಂಡಿತು. ಇದರಿಂದ ಆತಂಕಗೊಂಡ ಅವರು ಪಾರಾಗುವ ಯತ್ನದಲ್ಲಿ ಎಡವಿ ಕಟರ್‌ನ ಮೇಲೆ ಬಿದ್ದರು. ಈ ವೇಳೆ ಚಾಲನೆಯಲ್ಲಿದ್ದ ಕಟರ್ ಅವರ ಎದೆಯ ಭಾಗವನ್ನು ತುಂಡರಿಸಿತು. ಪರಿಣಾಮ ತೀವ್ರ ರಕ್ತ ಸ್ರಾವವಾಗಿ ಅಸ್ವಸ್ಥಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.ಆ ಡ್ರಮ್ ಅನ್ನು ಈ ಹಿಂದೆ ರಾಸಾಯನಿಕ ವಸ್ತುಗಳನ್ನು ತುಂಬಲು ಬಳಕೆ ಮಾಡಲಾಗಿತ್ತು. ಇದರಿಂದಾಗಿ ಕಟರ್‌ನ ಕಿಡಿಯಿಂದ ಡ್ರಮ್‌ಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ ಎಂದು ತನಿಖೆಯಿಂದ ಗೊತ್ತಾಗಿದೆ. ಬೆಂಕಿ ಅಕ್ಕಪಕ್ಕದಲ್ಲೇ ಇದ್ದ ಗುಜರಿ ವಸ್ತುಗಳಿಗೂ ವ್ಯಾಪಿಸಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.`ಘಟನೆ ಸಂಬಂಧ ಕಾರ್ಖಾನೆಯ ಮಾಲೀಕರ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ~ ಎಂದು ಮಡಿವಾಳ ಉಪ ವಿಭಾಗದ ಎಸಿಪಿ ಎಚ್.ಸುಬ್ಬಣ್ಣ `ಪ್ರಜಾವಾಣಿ~ಗೆ ತಿಳಿಸಿದರು.

Post Comments (+)