ಮಂಗಳವಾರ, ಜನವರಿ 28, 2020
19 °C

ಕಟ್ಟಡದಿಂದ ಬಿದ್ದು ಮಹಿಳೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಟ್ಟಡದ ಮೂರನೇ ಅಂತಸ್ತಿನ ಮಹಡಿಯಲ್ಲಿ ಬಟ್ಟೆ ಒಣಗಲು ಹಾಕುತ್ತಿದ್ದ ಮಹಿಳೆ ಆಕಸ್ಮಿಕವಾಗಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಸಂಪಂಗಿರಾಮನಗರದಲ್ಲಿ ಮಂಗಳವಾರ ನಡೆದಿದೆ.ಸಂಪಂಗಿರಾಮನಗರ 8ನೇ ಅಡ್ಡರಸ್ತೆ ನಿವಾಸಿ ವಿಶ್ವನಾಥ್‌ ಎಂಬುವರ ಪತ್ನಿ ಸುಜಾತಾ (43) ಮೃತ­ಪಟ್ಟವರು.ಅವರು ಮನೆಯ ಮುಂದೆ ಮಹಡಿಯ ಅಂಚಿನಲ್ಲಿ ಕಟ್ಟಿದ್ದ ತಂತಿಗೆ ಬಟ್ಟೆಗಳನ್ನು ಒಣಗಲು ಹಾಕುತ್ತಿದ್ದಾಗ ನಿಯಂತ್ರಣ ತಪ್ಪಿ ಕಟ್ಟಡದ ಪಕ್ಕದಲ್ಲೇ ಹಾದು ಹೋಗಿರುವ ಕೇಬಲ್‌ಗಳ ಮೇಲೆ ಬಿದ್ದಿದ್ದಾರೆ. ನಂತರ ಕೇಬಲ್‌ಗಳು ತುಂಡಾಗಿ ಕೆಳಗೆ ಬಿದ್ದ ಅವರನ್ನು ಕುಟುಂಬ ಸದಸ್ಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಕಟ್ಟಡದಿಂದ ಕೆಳಗೆ ಬಿದ್ದಾಗ ಹೃದಯಾಘಾತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಅವರ ಮಗ ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟಿದ್ದ. ವಿಶ್ವನಾಥ್‌, ಮನೆಯ ಸಮೀಪವೇ ಗ್ಯಾರೇಜ್‌ ಇಟ್ಟು­ಕೊಂಡಿದ್ದಾರೆ. ಘಟನೆ ಸಂಬಂಧ ಸಂಪಂಗಿರಾಮನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ವಿದ್ಯಾರ್ಥಿ ಆತ್ಮಹತ್ಯೆ

ಕಮಲಾನಗರದಲ್ಲಿ ಆನಂದ್‌ (15) ಎಂಬ ವಿದ್ಯಾರ್ಥಿ ಇಲಿ ಪಾಷಾಣ ತಿಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಮಲಾನಗರ ಕುವೆಂಪು ರಸ್ತೆ ನಿವಾಸಿ ನರಸೇಗೌಡ ಎಂಬುವರ ಮಗನಾದ ಆನಂದ್‌, ಕಾಮಾಕ್ಷಿಪಾಳ್ಯದ ಸೇಂಟ್‌ ಮೇರಿಸ್‌ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ.ಸೋಮವಾರ (ಡಿ.9) ಸಂಜೆ ಮನೆಯಲ್ಲಿ ಇಲಿ ಪಾಷಾಣ ತಿಂದು ಆತ್ಮಹತ್ಯೆಗೆ ಯತ್ನಿಸಿದ್ದ ಆತ ಅಸ್ವಸ್ಥಗೊಂಡಿದ್ದ. ನಂತರ ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಆತ ಮಂಗಳವಾರ ರಾತ್ರಿ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.‘ಮಗ ಏಕೆ ಆತ್ಮಹತ್ಯೆ ಮಾಡಿಕೊಂಡ ಎಂಬುದು ಗೊತ್ತಿಲ್ಲ’ ಎಂದು ಪೋಷಕರು ಹೇಳಿಕೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಬಾರ್‌ ಬೆಂಡಿಂಗ್‌ ಕೆಲಸ ಮಾಡುವ ನರಸೇಗೌಡ ಅವರಿಗೆ ಇಬ್ಬರು ಮಕ್ಕಳು. ಆನಂದ್‌, ಅವರ ಹಿರಿಯ ಮಗ. ಬಸ­ವೇಶ್ವರ­ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಲಾರಿ ಮಗುಚಿ ಕಾರ್ಮಿಕ ಸಾವು

ವಸಂತನಗರದ ಮಿಲ್ಲರ್ಸ್‌ ಟ್ಯಾಂಕ್‌ ಬಂಡ್‌ ರಸ್ತೆಯಲ್ಲಿ ಮಂಗಳವಾರ ರಾತ್ರಿ ಕಾಂಕ್ರಿಟ್‌ ಮಿಕ್ಸರ್‌ ಲಾರಿ ಮಗುಚಿ ಬಿದ್ದು ಜಾಕೀರ್‌ ಉಲ್ಲಾ ಶೇಖ್‌ (21) ಎಂಬ ಕೂಲಿ ಕಾರ್ಮಿಕ ಸಾವನ್ನಪ್ಪಿದ್ದಾನೆ.ಪಶ್ಚಿಮ ಬಂಗಾಳ ಮೂಲದ ಆತ ಮಿಲ್ಲರ್ಸ್‌ ಟ್ಯಾಂಕ್‌ ಬಂಡ್‌ ರಸ್ತೆಯಲ್ಲಿನ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ.

ಕಾಂಕ್ರಿಟ್‌ ಮಿಕ್ಸರ್‌ ಲಾರಿಯ ಮೇಲೆ ನಿಂತಿದ್ದ ಜಾಕೀರ್‌, ವಾಹನವನ್ನು ಕಟ್ಟಡದ ಬಳಿಗೆ ಚಾಲನೆ ಮಾಡಿಕೊಂಡು ಹೋಗಲು ಚಾಲಕನಿಗೆ ದಾರಿಯ ಬಗ್ಗೆ ಸೂಚನೆ ನೀಡುತ್ತಿದ್ದ. ಲಾರಿ ಹಿಮ್ಮುಖವಾಗಿ ಚಲಿಸುತ್ತಿದ್ದಾಗ ಅದರ ಹಿಂದಿನ ಬಲ ಭಾಗದ ಟೈರ್‌, ನೀರಿನ ಪೈಪ್‌ ಅಳವಡಿಕೆಗಾಗಿ ರಸ್ತೆ ಬದಿಯಲ್ಲಿ  ತೆಗೆದಿದ್ದ ದೊಡ್ಡ ಗುಂಡಿಗೆ ಇಳಿದಿದೆ. ಇದರಿಂದ ವಾಹನ ಬಲ ಭಾಗಕ್ಕೆ ಮಗುಚಿ ಬಿದ್ದು, ಕೆಳಗೆ ಸಿಲುಕಿದ ಜಾಕೀರ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಚಾಲಕ ಪರಾರಿಯಾಗಿದ್ದು, ಹೈಗ್ರೌಂಡ್ಸ್‌ ಸಂಚಾರ ಠಾಣೆ ಪೊಲೀಸರು ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)