ಕಟ್ಟಡದಿಂದ ಬಿದ್ದು ಯುವತಿ ಸಾವು

7

ಕಟ್ಟಡದಿಂದ ಬಿದ್ದು ಯುವತಿ ಸಾವು

Published:
Updated:

ಬೆಂಗಳೂರು: ಇನ್ಫೊಸಿಸ್ ಕಂಪೆನಿಯ ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಮೂರನೇ ಮಹಡಿಯಿಂದ ಆಕಸ್ಮಿಕವಾಗಿ ಜಾರಿ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಎಲೆಕ್ಟ್ರಾನಿಕ್‌ಸಿಟಿ ಸಮೀಪ ಸೋಮವಾರ ರಾತ್ರಿ ನಡೆದಿದೆ.ಸ್ವಾಗತಿಕ ದಾಸ್ (25) ಮೃತಪಟ್ಟವರು. ಜಿಗಣಿ ರಸ್ತೆಯಲ್ಲಿರುವ ಮೂರು ಮಹಡಿಯ ಕಟ್ಟಡದ ಮೊದಲನೇ ಮಹಡಿಯಲ್ಲಿ ಅವರು ವಾಸವಿದ್ದರು.

ಅದೇ ಕಟ್ಟಡದ ಮೊದಲನೇ ಮಹಡಿಯಲ್ಲಿ ವಾಸವಿದ್ದ ರಾಬಿನ್ ಮಂಡೇಲಾ ಎಂಬುವರ ಜತೆ ಸ್ವಾಗತಿಕ ಅವರು ಮೂರನೇ ಮಹಡಿಯಲ್ಲಿ ಕುಳಿತು ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಮಾತನಾಡುತ್ತಿದ್ದರು. ಮೂರನೇ ಮಹಡಿಯ ತಡೆಗೋಡೆಯ ಮೇಲೆ ಸ್ವಾಗತಿಕ ಕುಳಿತಿದ್ದರು. ಕುಡಿಯುವ ನೀರು ತರಲೆಂದು ಮಂಡೇಲಾ ಕೆಳಗೆ ಬಂದಾಗ ಅವರು ಆಕಸ್ಮಿಕವಾಗಿ ಜಾರಿ ಬಿದ್ದಿದ್ದಾರೆ.ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ.  ಅವರು ಮೃತಪಟ್ಟರು. ಜಾರ್ಖಂಡ್ ಮೂಲದ ಸ್ವಾಗತಿಕ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಬಿ.ಎಸ್ಸಿ ಪದವಿ ಪಡೆದಿದ್ದರು. ಒಂದು ವರ್ಷದ ಹಿಂದೆ ನಗರಕ್ಕೆ ಬಂದಿದ್ದ ಅವರು, ಇನ್ಫೊಸಿಸ್ ಕಂಪೆನಿಯಲ್ಲಿ ಎಂಜಿನಿಯರ್ ಆಗಿದ್ದರು. ಅವರ ತಂದೆ ಬಾಗೀರಥಿದಾಸ್ ಅವರು ಜಾರ್ಖಂಡ್‌ನ ಗ್ರಾಮೀಣ ಬ್ಯಾಂಕ್‌ವೊಂದರಲ್ಲಿ ವ್ಯವಸ್ಥಾಪಕರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಎಲೆಕ್ಟ್ರಿಕಲ್ ವಿಷಯದಲ್ಲಿ ಬಿ.ಇ ಮಾಡಿದ್ದ ಮಂಡೇಲಾ ‘ಅಮೆರಿಕನ್ ಪವರ್ ಕನ್‌ವರ್ಷನ್’ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಒಂದೇ ಕಟ್ಟಡದಲ್ಲಿದ್ದ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಕುಟುಂಬದವರನ್ನು ವಿವಾಹಕ್ಕೆ ಒಪ್ಪಿಸಿದ್ದರು. ಈ ತಿಂಗಳ ಅಂತ್ಯದಲ್ಲಿ ನಿಶ್ಚಿತಾರ್ಥ ಸಹ ಏರ್ಪಾಡಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಮಂಡೇಲಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು ‘ಇದೊಂದು ಆಕಸ್ಮಿಕ ಘಟನೆ’ ಎಂದು ಅವರು ಹೇಳಿಕೆ ಕೊಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ. ಎಲೆಕ್ಟ್ರಾನಿಕ್‌ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry