ಬುಧವಾರ, ಸೆಪ್ಟೆಂಬರ್ 30, 2020
26 °C

ಕಟ್ಟಡವಿಲ್ಲದ ಗ್ರಂಥಾಲಯ: ನಿರ್ಮಾಣ ವಿಳಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಟ್ಟಡವಿಲ್ಲದ ಗ್ರಂಥಾಲಯ: ನಿರ್ಮಾಣ ವಿಳಂಬ

ಬಸವಕಲ್ಯಾಣ: ಇಲ್ಲಿನ ಸಾರ್ವಜನಿಕ ಆಸ್ಪತ್ರೆ ರಸ್ತೆಯಲ್ಲಿನ ಸರ್ಕಾರಿ ಗ್ರಂಥಾಲಯದ ಕಟ್ಟಡ ಬೀಳುವ ಸ್ಥಿತಿಯಲ್ಲಿದೆ. ಆದ್ದರಿಂದ ಬೇರೆಕಡೆ ವಾಚನಾಲಯ ನಡೆಸುತ್ತಿದ್ದರೂ ಅದು ಸಹ ಮಳೆಯಿಂದ ಸೋರುತ್ತಿದೆ. ಹೀಗಾಗಿ ಅಮೂಲ್ಯ ಗ್ರಂಥಗಳಿಗೆ ಹಾನಿಆಗುತ್ತಿದೆ.ಗ್ರಂಥಾಲಯದ ಕಟ್ಟಡ ಸಾಕಷ್ಟು ಹಳೆಯದಾಗಿದೆ. ಹೀಗಾಗಿ ಅನೇಕ ವರ್ಷಗಳಿಂದ ಅದು ಸೋರುತ್ತಿದ್ದರೂ ಸಂಬಂಧಿತರು ಬೇರೆ ಕಟ್ಟಡದ ವ್ಯವಸ್ಥೆ ಮಾಡದ ಕಾರಣ ಗ್ರಂಥಗಳು ಮತ್ತು ಪೀಠೋಪಕರಣಗಳು ಹಾಳಾದವು. ಆದ್ದರಿಂದ ಈಚೆಗೆ ಗ್ರಂಥಗಳನ್ನು ಹಳೆಯ ತಹಸೀಲ ಕಚೇರಿಯ ಕೋಣೆಯಲ್ಲಿ ಇಡಲಾಗಿದೆ. ಆದರೂ ಅದು ಸಹ ಸೋರುತ್ತಿದೆ. ಆದ್ದರಿಂದ ವಾಚಕರು ತೊಂದರೆ ಅನುಭವಿಸುತ್ತಿದ್ದಾರೆ.ದೇಶ ನೋಡು, ಕೋಶ ಓದು ಎಂದು ಹೇಳಲಾಗುತ್ತದೆ. ಆದರೆ ಕಳೆದ ಹತ್ತು ವರ್ಷಗಳಿಂದ ಇಲ್ಲಿನ ಗ್ರಂಥಾಲಯದ ವ್ಯವಸ್ಥೆ ಹದಗೆಟ್ಟಿದ್ದರಿಂದ ಸಾಹಿತ್ಯಾಸಕ್ತರು ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪರದಾಡಬೇಕಾಗುತ್ತಿದೆ. ಮುಖ್ಯವೆಂದರೆ ಹಳೆಯ ಕಟ್ಟಡದ ಎದುರಿಗೆ ಹೊಸ ಗ್ರಂಥಾಲಯ ಕಟ್ಟಡ ಮತ್ತು ಮಳಿಗೆ ಸಂಕೀರ್ಣ ನಿರ್ಮಿಸಲಾಗುತ್ತಿದ್ದರೂ ಕಾಮಗಾರಿ ವಿಳಂಬ ಗತಿಯಲ್ಲಿ ನಡೆಯುತ್ತಿದೆ.ಒಂದಂತಸ್ತಿನ ಕಟ್ಟಡ ನಿರ್ಮಿಸಿ ಕೆಳಗಡೆ ಮಳಿಗೆಗಳು ಮತ್ತು ಮೇಲ್ಭಾಗದಲ್ಲಿ ಗ್ರಂಥಾಲಯ ನಿರ್ಮಾಣ ಮಾಡುವ ಯೋಜನೆ ಹಾಕಿಕೊಂಡು ಅಂದು ಇಲ್ಲಿ ಜಿಲ್ಲಾಧಿಕಾರಿ ಆಗಿದ್ದ ಮನೀಷ ಮೌದ್ಗಿಲ್ ಅವರು ಶಂಕುಸ್ಥಾಪನೆ ನೆರವೆರಿಸಿದ್ದರು. ಮಳಿಗೆಗಳಿಗೆ ಮುಂಗಡವಾಗಿ ಠೇವಣಿ ಇಡಲು ಸೂಚಿಸಿದ್ದರಿಂದ ಕೆಲವರು ಹಣ ಸಹ                ತುಂಬಿದ್ದರು.ಆದರೆ ನಂತರ ಯೋಜನೆಯಲ್ಲಿ ಬದಲಾವಣೆ ಮಾಡಲಾಯಿತು. ಹೀಗಾಗಿ ಕೆಲವರ್ಷ ಕಾಮಗಾರಿ ಅಡಿಪಾಯದ ಮಟ್ಟದಲ್ಲಿಯೇ ಉಳಿಯಿತು. ಆದ್ದರಿಂದ ಹಣ ಠೇವಣಿ ಇಟ್ಟವರು ಪದೇ ಪದೇ ವಿಚಾರಿಸುತ್ತಿದ್ದರಿಂದ ಆ ಹಣ ವಾಪಸ್ಸು ಮಾಡಲಾಯಿತು.ಮತ್ತೆ ಒಂದು ವರ್ಷದಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು 20 ಕ್ಕೂ ಹೆಚ್ಚಿನ ಅಂಗಡಿಗಳನ್ನು ನಿರ್ಮಿಸಲಾಗಿದೆ. ಆದರೆ ಆ ಕೆಲಸವೂ ಅಪೂರ್ಣ  ವಾಗಿದೆ. ಪ್ಲಾಸ್ಟರ್ ಮಾಡುವುದು, ಶೆಟರ್ ಹಚ್ಚುವುದು ಬಾಕಿ ಇದೆ. ಅನುದಾನದ ಕೊರತೆಯಿಂದಾಗಿ ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂದು ಸಂಬಂಧಿತರು ಹೇಳುತ್ತಾರೆ.ಈಚೆಗೆ ಗ್ರಂಥಾಲಯ ಇಲಾಖೆಯ ನಿರ್ದೇಶಕರು ಇಲ್ಲಿಗೆ ಭೇಟಿಕೊಟ್ಟು ಎದುರಿನ ಭಾಗದ ಅಂಗಡಿಗಳನ್ನಷ್ಟೇ ಬಾಡಿಗೆಗೆ ಕೊಡಬೇಕು. ಹಿಂದಿನ ಭಾಗದಲ್ಲಿ ಗ್ರಂಥಗಳ ಗೋದಾಮು ಮಾಡಬೇಕು ಎಂದು ಸೂಚಿಸಿದ್ದಾರೆ ಎಂದು ಸಂಬಂಧಿತರು ತಿಳಿಸಿದ್ದಾರೆ. ಏನಿದ್ದರೂ ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.