ಕಟ್ಟಡ ಒಪ್ಪಂದ ರದ್ದು: ಶಿಫಾರಸು

7

ಕಟ್ಟಡ ಒಪ್ಪಂದ ರದ್ದು: ಶಿಫಾರಸು

Published:
Updated:

ಬೆಂಗಳೂರು: ಮಗರತ್ ರಸ್ತೆಯಲ್ಲಿರುವ `ಗರುಡಾ ಮಾಲ್~ನಲ್ಲಿ ವಾಹನ ನಿಲುಗಡೆ ಪ್ರದೇಶವನ್ನು ಅಕ್ರಮವಾಗಿ ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಂಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮೇವರಿಕ್ ಹೋಲ್ಡಿಂಗ್ ಸಂಸ್ಥೆಯೊಂದಿಗಿನ ಒಪ್ಪಂದವನ್ನೇ ರದ್ದುಪಡಿಸುವಂತೆ ಟಿವಿಸಿಸಿ ಮುಖ್ಯ ಎಂಜಿನಿಯರ್ ಅಧ್ಯಕ್ಷತೆಯ ಸಮಿತಿ ಬಿಬಿಎಂಪಿಗೆ ಶಿಫಾರಸು ಮಾಡಿದೆ.ಆಯುಕ್ತರ ಸೂಚನೆ ಮೇರೆಗೆ ರಚನೆಯಾದ ಟಿವಿಸಿಸಿ ಮುಖ್ಯ ಎಂಜಿನಿಯರ್ ಅಧ್ಯಕ್ಷತೆಯ ಸಮಿತಿಯು ಇತ್ತೀಚೆಗೆ ವರದಿ ನೀಡಿದ್ದು, ಕಾರಣ ಕೇಳಿ ಈಗಾಗಲೇ ಮೇವರಿಕ್ ಹೋಲ್ಡಿಂಗ್ ಸಂಸ್ಥೆಗೆ ಜಾರಿಗೊಳಿಸಲಾದ ನೋಟಿಸ್ ಅನ್ನು ಪ್ರಾಥಮಿಕ ನೋಟಿಸ್ ಎಂದು ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದೆ.`ಗರುಡಾ ಮಾಲ್~ ವಾಣಿಜ್ಯ ಸಂಕೀರ್ಣದಲ್ಲಿ ನಿರ್ವಹಣಾ ಕರಾರು ಉಲ್ಲಂಘನೆ ಮಾಡಿರುವ ಬಗ್ಗೆ ಪೂರ್ವ ವಲಯದ ಜಂಟಿ ಆಯುಕ್ತರ ನೇತೃತ್ವದ ಸಮಿತಿಯು ಪರಿಶೀಲನೆ ನಡೆಸಿ 2011ರ ಆಗಸ್ಟ್‌ನಲ್ಲಿ ವರದಿ ನೀಡಿತ್ತು.

ಅದರಂತೆ ಕಟ್ಟಡದಲ್ಲಿ ವಾಹನ ನಿಲುಗಡೆಗೆ ಮೀಸಲಿಡಬೇಕಾದ ಒಟ್ಟು ಪ್ರದೇಶದಲ್ಲಿ 2728.05 ಚದರ ಮೀಟರ್ ವಿಸ್ತೀರ್ಣವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡಿರುವುದು ದೃಢಪಟ್ಟಿದೆ. ಈ ಅಕ್ರಮವನ್ನು ಸರಿಪಡಿಸುವಂತೆ ನಗರ ಯೋಜನೆ ವಿಭಾಗವು 2006ರ ಜುಲೈ ಹಾಗೂ ಆಗಸ್ಟ್‌ನಲ್ಲಿ ಸೂಚನೆ ನೀಡಿದ್ದರೂ ಸಂಸ್ಥೆ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಸಮಿತಿ ಖಾತ್ರಿ ಪಡಿಸಿದೆ.ಕಟ್ಟಡದ ಮೂರನೇ ಮಹಡಿಯಲ್ಲಿ 39 ವಾಹನಗಳ ನಿಲುಗಡೆ ಪ್ರದೇಶ (1272 ಚ.ಮೀ) ಹಾಗೂ ಐದನೇ ಮಹಡಿಯಲ್ಲಿ 45 ವಾಹನಗಳ ನಿಲುಗಡೆ ವಿಸ್ತೀರ್ಣವನ್ನು (1455 ಚ.ಮೀ) ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ. ಹಾಗೆಯೇ ಸ್ವತ್ತಿನ ದಕ್ಷಿಣ ಭಾಗದಲ್ಲಿ ಪಾಲಿಕೆಗೆ ಸೇರಿದ 34 ವಾಹನಗಳ ನಿಲುಗಡೆ ಪ್ರದೇಶದಲ್ಲಿ ಸಂಸ್ಥೆಯು ಅಕ್ರಮವಾಗಿ ಕೊಳಚೆ ನೀರು ಸಂಸ್ಕರಣೆ (ಎಸ್‌ಟಿಪಿ) ನಿರ್ಮಿಸಿದೆ ಎಂಬ ಅಂಶ ವರದಿಯಲ್ಲಿದೆ.ಈ ನಡುವೆ ಸಂಸ್ಥೆಯು 2006ರ ಡಿಸೆಂಬರ್ 21ರಂದು ಪರಿಷ್ಕೃತ ನಕ್ಷೆ ಮಂಜೂರಾತಿಗೆ ಕೋರಿ ಅರ್ಜಿ ಸಲ್ಲಿಸಿತ್ತು. ಆದರೆ ನಕ್ಷೆಯಲ್ಲಿನ ದೋಷಗಳನ್ನು ಸರಿಪಡಿಸುವಂತೆ ನಗರ ಯೋಜನೆ ವಿಭಾಗ ಸೂಚನೆ ನೀಡಿದ್ದರೂ ಮೇವರಿಕ್ ಸಂಸ್ಥೆ ಅದನ್ನು ಪಾಲಿಸಿಲ್ಲ.ಈಗಾಗಲೇ ಗುರುತಿಸಲಾಗಿರುವ 2728 ಚದರ ಮೀಟರ್ ವಿಸ್ತೀರ್ಣದಲ್ಲಿ ವಾಹನ ನಿಲುಗಡೆಯಿಂದ ಪಾಲಿಕೆಗೆ 33.46 ಲಕ್ಷ ರೂಪಾಯಿ (2005ರಿಂದ ಈವರೆಗೆ) ಆದಾಯ ಬರಬೇಕಿದೆ. ಹಾಗೆಯೇ ಪರಿವರ್ತನೆಯಾಗಿರುವ ವಾಣಿಜ್ಯ ಪ್ರದೇಶದಲ್ಲಿ ಸಂಸ್ಥೆಗೆ ಸಂದಾಯವಾಗಿರುವ ಆದಾಯದಲ್ಲಿ ಪಾಲಿಕೆಗೆ 1.78 ಕೋಟಿ ರೂಪಾಯಿ ಪಾಲು ಬರಬೇಕಿದೆ ಎಂದು ಸಮಿತಿ ತಿಳಿಸಿದೆ.ಕಟ್ಟಡದಲ್ಲಿ ಯಾವುದೇ ಬದಲಾವಣೆ ಮಾಡುವ ಸಂದರ್ಭದಲ್ಲಿ ಸಂಸ್ಥೆಯು ಬಿಬಿಎಂಪಿಯಿಂದ ಲಿಖಿತ ಅನುಮೋದನೆ ಪಡೆಯಬೇಕು ಎಂದು ಒಪ್ಪಂದದಲ್ಲಿ ಷರತ್ತು ವಿಧಿಸಲಾಗಿತ್ತು. ಆದರೆ ಈ ಷರತ್ತನ್ನು ಸಂಸ್ಥೆ ಉಲ್ಲಂಘಿಸಿದೆ. ಹಾಗಾಗಿ ಪಾಲಿಕೆಗೆ ಬರಬೇಕಾದ 1.78 ಕೋಟಿ ರೂಪಾಯಿ ಹಣವನ್ನು ಬಡ್ಡಿ ಸಮೇತ ವಸೂಲು ಮಾಡಬೇಕು ಹಾಗೂ ಸಂಸ್ಥೆಯೊಂದಿಗಿನ ಒಪ್ಪಂದವನ್ನು ರದ್ದುಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.ಕರ್ತವ್ಯ ಲೋಪ: ಸಮಿತಿಯ ವರದಿ ಹಿನ್ನೆಲೆಯಲ್ಲಿ ನಗರ ಯೋಜನೆ ವಿಭಾಗದ ಅಂದಿನ ಹೆಚ್ಚುವರಿ ನಿರ್ದೇಶಕರು (ಎಸ್.ಎಸ್. ಟೋಪಗಿ) ಕಟ್ಟಡದಲ್ಲಿ ನಿಯಮ ಉಲ್ಲಂಘನೆಯಾಗಿರುವುದರಿಂದ ಕರಾರನ್ನು ಏಕೆ ರದ್ದುಪಡಿಸಬಾರದು ಎಂದು ಪ್ರಶ್ನಿಸಿ ಕಾರಣ ಕೇಳಿ 2011ರ ಸೆಪ್ಟೆಂಬರ್ 8ರಂದು ಸಂಸ್ಥೆಗೆ ನೋಟಿಸ್ ನೀಡಿದ್ದರು.ಏಳು ದಿನದೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದರು. ಆದರೆ ಈ ಪ್ರಕರಣದಲ್ಲಿ ಪ್ರಾಥಮಿಕ ನೋಟಿಸ್ ಬದಲಿಗೆ, ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವ ಮೂಲಕ ಹೆಚ್ಚುವರಿ ನಿರ್ದೇಶಕರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಮಿತಿ ರಚನೆ: ಪಾಲಿಕೆಯ ಹಿಂದಿನ ಆಯುಕ್ತ ಸಿದ್ದಯ್ಯ ಅವರು ಟಿವಿಸಿಸಿ ಮುಖ್ಯ ಎಂಜಿನಿಯರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದರು. ಸದಸ್ಯರಾಗಿ ಪೂರ್ವ ವಲಯದ ಜಂಟಿ ಆಯುಕ್ತರು, ಆಡಳಿತ ಮತ್ತು ಮಾರುಕಟ್ಟೆ ವಿಭಾಗದ ಉಪ ಆಯುಕ್ತರು, ವಕೀಲ ನರಸಿಂಹನ್ ಹಾಗೂ ನಗರ ಯೋಜನೆ (ಉತ್ತರ) ವಿಭಾಗದ ಜಂಟಿ ನಿರ್ದೇಶಕರು ಸದಸ್ಯರಾಗಿದ್ದರು. ಗರುಡಾ ಮಾಲ್ ಕಟ್ಟಡಕ್ಕೆ ಸಂಬಂಧಪಟ್ಟ ಮೂಲ ಕಡತಗಳನ್ನು ಲೋಕಾಯುಕ್ತ ಕಚೇರಿಯಿಂದ ಹಿಂಪಡೆಯಲು ಕೈಗೊಳ್ಳಬೇಕಾದ ಕ್ರಮ.

 

ವಾಹನ ನಿಲುಗಡೆ ಪ್ರದೇಶವನ್ನು ವಾಣಿಜ್ಯ ಉದ್ದೇಶಕ್ಕೆ ಬದಲಾವಣೆ ಮಾಡಿರುವ ಹಿನ್ನೆಲೆಯಲ್ಲಿ ಒಪ್ಪಂದದ ಪ್ರಕಾರ ಮೇವರಿಕ್ ಹೋಲ್ಡಿಂಗ್ಸ್ ಸಂಸ್ಥೆ ವಿರುದ್ಧ ಜರುಗಿಸಬೇಕಾದ ಕ್ರಮ. ಸಂಸ್ಥೆ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಮುನ್ನ ನ್ಯಾಯಾಲಯದಲ್ಲಿ ಕೇವಿಯಟ್ ಸಲ್ಲಿಸುವ ಕುರಿತು ವರದಿ ನೀಡುವಂತೆ ಸಮಿತಿಗೆ ಸೂಚಿಸಿದ್ದರು.

 

ಅದರಂತೆ ಟಿವಿಸಿಸಿ ಮುಖ್ಯ ಎಂಜಿನಿಯರ್ ಅಧ್ಯಕ್ಷತೆಯ ಸಮಿತಿಯು ಜನವರಿಯಲ್ಲಿ ಆಯುಕ್ತರಿಗೆ ವರದಿ ನೀಡಿದೆ. ಈಗಾಗಲೇ ಮೇವರಿಕ್ ಹೋಲ್ಡಿಂಗ್ ಸಂಸ್ಥೆಗೆ ಕಾರಣ ಕೇಳಿ ನೀಡಲಾದ ನೋಟಿಸ್‌ಅನ್ನು ಪ್ರಾಥಮಿಕ ನೋಟಿಸ್ ಎಂದು ಭಾವಿಸಿ ಸಂಬಂಧಪಟ್ಟ ಅಧಿಕಾರಿಗಳು ಲಿಖಿತ ರೂಪದಲ್ಲಿ ತಿಳಿಸಬಹುದು.ಸಂಸ್ಥೆಯೊಂದಿಗಿನ ಒಪ್ಪಂದ ರದ್ದುಪಡಿಸುವ ಬಗ್ಗೆ ವರದಿ ಪಡೆದು ಸ್ಥಾಯಿ ಸಮಿತಿ ಮತ್ತು ಪಾಲಿಕೆ ಸಭೆಯ ಮೂಲಕ ಸರ್ಕಾರಕ್ಕೆ ಸಲ್ಲಿಸಬಹುದು. ಮೇಲಿನ ಪ್ರಕ್ರಿಯೆಗಳು ಮುಕ್ತಾಯದ ಹಂತಕ್ಕೆ ಬಂದಾಗ ಕಾನೂನಿನ ಅನ್ವಯ  ಕೋರ್ಟ್‌ಗೆ ಕೇವಿಯಟ್ ಸಲ್ಲಿಸಬೇಕು ಎಂದು ವರದಿ ಶಿಫಾರಸು ಮಾಡಿದೆ.ಕೌನ್ಸಿಲ್ ಸಭೆಯಲ್ಲಿ ಮಂಡನೆ


`ಗರುಡಾ ಮಾಲ್ ಕಟ್ಟಡದಲ್ಲಿ ನಿಯಮ ಉಲ್ಲಂಘನೆಗೆ ಸಂಬಂಧಪಟ್ಟಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಟಿವಿಸಿಸಿ ಮುಖ್ಯ ಎಂಜಿನಿಯರ್ ಅಧ್ಯಕ್ಷತೆಯ ಸಮಿತಿ ಸಲ್ಲಿಸಿರುವ ವರದಿಯನ್ನು ಕೌನ್ಸಿಲ್ ಸಭೆಯಲ್ಲಿ ಮಂಡಿಸಲಾಗುವುದು. ಕೌನ್ಸಿಲ್ ನಿರ್ಣಯದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು~ ಎಂದು ಪಾಲಿಕೆ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry