ಕಟ್ಟಡ ಕಟ್ಟುವ ಕಷ್ಟ-ಸುಖ

7

ಕಟ್ಟಡ ಕಟ್ಟುವ ಕಷ್ಟ-ಸುಖ

Published:
Updated:

ಕೃಷಿ ಹೊರತುಪಡಿಸಿದರೆ ದೇಶದಲ್ಲಿ ಅತಿ ಹೆಚ್ಚು ಜನರಿಗೆ ಉದ್ಯೋಗಾವಕಾಶ ಒದಗಿಸಿರುವ ಕ್ಷೇತ್ರ ರಿಯಲ್ ಎಸ್ಟೇಟ್. 2010-11ನೇ ಸಾಲಿನ ಆರ್ಥಿಕ ಸಮೀಕ್ಷಾ ವರದಿ ಪ್ರಕಾರ `ಒಟ್ಟಾರೆ ರಾಷ್ಟ್ರೀಯ ಉತ್ಪನ್ನ'ಕ್ಕೆ(ಜಿಡಿಪಿ) ನಿರ್ಮಾಣ ಕ್ಷೇತ್ರದ ಕೊಡುಗೆ ಶೇ 9.3ರಷ್ಟಿದೆ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಪ್ರಮುಖವಾದ 250ಕ್ಕೂ ಅಧಿಕ ಉದ್ಯಮಗಳ ಜತೆಗೇ ರಿಯಲ್ ಎಸ್ಟೇಟ್ ನೇರ ಸಂಬಂಧ ಹೊಂದಿದೆ ಎನ್ನುತ್ತದೆ ಗೃಹ ಮತ್ತು ನಗರಾಭಿವೃದ್ಧಿ ಸಂಸ್ಥೆ (ಹುಡ್ಕೊ) ವರದಿ.ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ `ರಿಯಲ್ ಎಸ್ಟೇಟ್ ವಲಯದಲ್ಲಿ ಒಂದು ರೂಪಾಯಿ ಹೂಡಿಕೆ ಮಾಡಿದರೆ 75 ಪೈಸೆ ದೇಶದ `ಜಿಡಿಪಿ'ಗೆ ಸೇರ್ಪಡೆಯಾಗುತ್ತದೆ. ಅಂದರೆ `ಜಿಡಿಪಿ' ಪ್ರಗತಿ ಶೇ 10ರಷ್ಟಿದ್ದರೆ ನಿರ್ಮಾಣ ಕ್ಷೇತ್ರ ಶೇ 14ರಷ್ಟು ಬೆಳವಣಿಗೆ ಕಾಣುವ ಸಾಮರ್ಥ್ಯ ಹೊಂದಿದೆ' ಎಂಬ ಅಂಶ ತಿಳಿದುಬಂದಿದೆ.ಉಳಿದ ಕ್ಷೇತ್ರಗಳಿಗಿಂತ ರಿಯಲ್ ಎಸ್ಟೇಟ್ ವಲಯದ ವರಮಾನ ಐದು ಪಟ್ಟು ಅಧಿಕವಾದುದಾಗಿದೆ. ಕಳೆದ ಐದು ವರ್ಷಗಳಲ್ಲಿ ಈ ವಲಯದಲ್ಲಿ 32 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ.  ಮುಂದಿನ ಐದು ವರ್ಷಗಳಲ್ಲಿ ಶೇ 30ರಷ್ಟು ಪ್ರಗತಿ ದಾಖಲಿಸುವ ಸಾಧ್ಯತೆಯೂ ಇದೆ. ಆರ್ಥಿಕ ಸಮೀಕ್ಷಾ ವರದಿಯಂತೆ 2020ರ ವೇಳೆಗೆ ದೇಶದ ರಿಯಲ್ ಎಸ್ಟೇಟ್ ವಲಯದ ಮಾರುಕಟ್ಟೆಯ ಒಟ್ಟು ಮೌಲ್ಯ 18000 ಕೋಟಿ ಡಾಲರ್ (ರೂ. 9.90 ಲಕ್ಷ ಕೋಟಿ) ದಾಟುವ ನಿರೀಕ್ಷೆ ಇದೆ,ಸುಸ್ಥಿರ ಪ್ರಗತಿ

`ರಾಜ್ಯದ ರಿಯಲ್ ಎಸ್ಟೇಟ್ ವಲಯದ ಪ್ರಗತಿ ಕಳೆದ ಐದು ವರ್ಷಗಳಿಂದ ಹೆಚ್ಚು ಸುಸ್ಥಿರವಾಗಿದೆ. ಬೇಡಿಕೆ-ಪೂರೈಕೆ ಸಮತೋಲನದಲ್ಲಿದೆ' ಎನ್ನುತ್ತಾರೆ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ) ದಕ್ಷಿಣ ವಲಯದ ಅಧ್ಯಕ್ಷ ಜೆ.ಕ್ರಾಸ್ತಾ.2005-06ಕ್ಕಿಂತ ಮೊದಲು  ಇದ್ದಷ್ಟು ಬೃಹತ್ ಅಲೆ ಈಗ ಇಲ್ಲ. ಆಗ ರಿಯಲ್ ಎಸ್ಟೇಟ್ ಎಂದರೆ ಕಪ್ಪು ಹಣವನ್ನು ಬಿಳಿಯದಾಗಿಸಿಕೊಳ್ಳುವ ದಾರಿಯಾಗಿತ್ತು. ಭೂ ಮಾಫಿಯಾ ಪ್ರಬಲವಾಗಿತ್ತು. ಇದೀಗ ಸರ್ಕಾರ  ಹಲವು ನಿಯಂತ್ರಣಗಳನ್ನು ವಿಧಿಸಿದೆ. ಕೇಂದ್ರ ಸರ್ಕಾರವೂ ಈ ನಿಟ್ಟಿನಲ್ಲಿ `ರಿಯಲ್ ಎಸ್ಟೇಟ್ ನಿಯಂತ್ರಣ ಮಸೂದೆ'ಯನ್ನು ಜಾರಿಗೆ ತಂದರೆ ಗೃಹ, ನಿವೇಶನ ದರ ಇನ್ನಷ್ಟು ತಗ್ಗಲಿದೆ ಎನ್ನುತ್ತಾರೆ ಅವರು.ರಾಜ್ಯದ ರಿಯಲ್ ಎಸ್ಟೇಟ್ ವಲಯ ಸುಮಾರು 10 ಲಕ್ಷ ಜನರಿಗೆ ಉದ್ಯೋಗಾವಕಾಶ ಒದಗಿಸಿದೆ. ಸ್ಥಳೀಯರು ಅಷ್ಟು ಶ್ರಮಪಟ್ಟು ಕೆಲಸ ಮಾಡುವುದಿಲ್ಲ ಎನ್ನುವ ಕಾರಣಕ್ಕೆ ಹೊರ ರಾಜ್ಯದವರಿಗೆ ಹೆಚ್ಚು ಅವಕಾಶ ಲಭಿಸುತ್ತಿದೆ. ಇದೇ ಕಾರಣಕ್ಕೆ ರಾಜ್ಯದ ನಿರ್ಮಾಣ ಕ್ಷೇತ್ರದಲ್ಲಿ ಬಾಂಗ್ಲಾ ದೇಶದವರು, ಪಶ್ಚಿಮ ಬಂಗಾಳದವರು ಗರಿಷ್ಠ ಸಂಖ್ಯೆಯಲ್ಲಿದ್ದಾರೆ.  ಉತ್ತರ ಪ್ರದೇಶ, ಬಿಹಾರದವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.ಬೆಂಗಳೂರಿನಲ್ಲಿ ಇತ್ತೀಚೆಗೆ ಜರುಗಿದ 2ನೇ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ (ಜಿಮ್-2) ಆಗಿರುವ ಹಲವು ಒಪ್ಪಂದಗಳು ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಜಾರಿಗೆ ಬರುವುದರಿಂದ ಅಲ್ಲಿನ ಮೂಲಸೌಕರ್ಯ ಮತ್ತು ಕಾಮಗಾರಿ ವಲಯದಲ್ಲಿ ಸ್ಥಳೀಯರಿಗೆ ಉದ್ಯೋಗ ಲಭಿಸಲಿದೆ. ಆದರೆ, ಕೌಶಲ ಹೊಂದಿದ ಮಾನವ ಸಂಪನ್ಮೂಲದ ಕೊರತೆ ಸಾಕಷ್ಟಿದೆ ಎನ್ನುವುದು ಅವರ ವಿವರಣೆ.ಕರ್ನಾಟಕ ರಿಯಲ್ ಎಸ್ಟೇಟ್

ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್  ಉದ್ಯಮದ ಪ್ರಗತಿ ಗತಿ ಸುಸ್ಥಿರವಾಗಿದೆ. ಮನೆಗಳ ಖರೀದಿಗೆ ವಿಶಾಲ ಶ್ರೇಣಿಯ ಆಯ್ಕೆಗಳು ಇರುವುದು ಇಲ್ಲಿನ ಮಾರುಕಟ್ಟೆಯ ಪ್ರಗತಿಗೆ ಸಹಕಾರಿಯಾಗಿದೆ. ರಾಜ್ಯದ ಒಟ್ಟಾರೆ ಆಂತರಿಕ ಉತ್ಪಾದನೆ ಪ್ರಮಾಣಕ್ಕೆ (ಜಿಡಿಪಿಗೆ) ನಿರ್ಮಾಣ ಕ್ಷೇತ್ರದ ಕೊಡುಗೆ ಶೇ 6.9ರಷ್ಟಿದೆ. ಕಳೆದ 12 ವರ್ಷಗಳಿಂದ ಬೆಂಗಳೂರು ಈ  ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಬೆಂಗಳೂರಿನ ತಂಪು ವಾತಾವರಣ ಕೂಡ ಇದಕ್ಕೆ ಸಹಕಾರಿಯಾಗಿದೆ. ಹಾಗಾಗಿ ಬೆಂಗಳೂರು, ಏಷ್ಯಾದಲ್ಲಿಯೇ ಅತಿ ಹೆಚ್ಚು ಬೇಡಿಕೆ ಇರುವ `ವಸತಿ ನಗರ' ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಉದ್ಯಮ (ಐ.ಟಿ) ವಲಯ ರಿಯಲ್ ಎಸ್ಟೇಟ್ ಪ್ರಗತಿಗೆ ಮಹತ್ತರ ಕೊಡುಗೆ ನೀಡಿದೆ ಎನ್ನುವುದು ಗಮನಾರ್ಹ. ದೇಶದ ಒಟ್ಟಾರೆ ಐ.ಟಿ ಕ್ಷೇತ್ರದ ರಫ್ತಿನಲ್ಲಿ ರಾಜ್ಯದ ಕೊಡುಗೆ ಶೇ 33ರಷ್ಟಿದೆ. ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪೂರಕವಾಗಿ ಮೂಲಸೌಕರ್ಯ ಅಭಿವೃದ್ಧಿಯೂ ಆಗುತ್ತಿರುವುದರಿಂದ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಸೇರಿದಂತೆ ಬಹುರಾಷ್ಟ್ರೀಯ ಕಂಪೆನಿಗಳು ಇಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಿವೆ. ವೃತ್ತಿಪರತೆ, ಪಾರದರ್ಶಕತೆ  ಜತೆಗೆ ವಿಶ್ವದರ್ಜೆ ಗುಣಮಟ್ಟ ಇಲ್ಲಿನ ನಿರ್ಮಾಣ ಕ್ಷೇತ್ರದ ಮೇಲುಗೈಗೆ ಕಾರಣವಾಗಿದೆ.ವಿಲಾಸಿ ಅಪಾರ್ಟ್‌ಮೆಂಟ್‌ಗಳು, ವಿಲ್ಲಾಗಳು, ಕಚೇರಿ ಕಟ್ಟಡಗಳಿಗೆ ಬೇಡಿಕೆ ಹೆಚ್ಚಿದೆ. ಮೆಟ್ರೋ ರೈಲು ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಲಭ ಸಂಪರ್ಕ ಇರುವುದು ಉದ್ಯಮ ಪ್ರಗತಿಗೆ ಸಹಕಾರಿಯಾಗಿವೆ. `ಎನ್‌ಆರ್‌ಐ'ಗಳು ತಮ್ಮ ರಜಾ ಕಾಲವನ್ನು ಬೆಂಗಳೂರಿನಲ್ಲಿ ಕಳೆಯಲು ವಿಲಾಸಿ ಗೃಹಗಳು, ವಿಲ್ಲಾಗಳನ್ನು ಖರೀದಿಸುವ ಪ್ರವೃತ್ತಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ ಎನ್ನುತ್ತಾರೆ `ಮಂತ್ರಿ   ಡೆವಲಪರ್ಸ್'ನ ಆರ್.ಪಿ.ರಂಗನಾಥ್.`ಹೂಡಿಕೆಗಾಗಿ ಮನೆ ಖರೀದಿ'

ಹೆಚ್ಚುವರಿಯಾದ ಹಣವನ್ನು ಹೂಡಿಕೆ ಮಾಡುವ ಉದ್ದೇಶಕ್ಕಾಗಿಯೂ ಮನೆಗಳನ್ನು ಖರೀದಿಸುವ ಪ್ರವೃತ್ತಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ಬೆಂಗಳೂರಿನ ಯಲಹಂಕ, ವೈಟ್‌ಫೀಲ್ಡ್‌ನಲ್ಲಿ ಇಂತಹ ಅಪಾರ್ಟ್ ಮೆಂಟ್‌ಗಳನ್ನು ಕಾಣಬಹುದು.ಇಲ್ಲಿರುವ ಅಪಾರ್ಟ್‌ಮೆಂಟ್‌ಗಳಲ್ಲಿನ 800ರಿಂದ 1 ಸಾವಿರದಷ್ಟು ಮನೆಗಳಲ್ಲಿ ಜನವಸತಿಯೇ ಇಲ್ಲ. ಅಂದರೆ, ಇವುಗಳು ಮಾರಾಟವಾಗದೆ ಖಾಲಿ ಉಳಿದವುಗಳಲ್ಲ. ಮಾಲೀಕ ಬೇರಾವುದೋ ಊರಿನಲ್ಲಿ ಇರುತ್ತಾನೆ. ಎರಡು ಮನೆ ಇರಲಿ ಎಂಬ ಕಾರಣಕ್ಕೆ ಅಥವಾ ಆದಾಯ ತೆರಿಗೆಯಿಂದ ವಿನಾಯಿತಿ ಲಭಿಸುತ್ತದೆ ಎಂಬ ಕಾರಣಕ್ಕೋ ಈ ಮನೆಗಳನ್ನು ಖರೀದಿಸಿರುತ್ತಾರೆ ಎನ್ನುತ್ತಾರೆ `ಬೆಂಗಳೂರು ಬಿಲ್ಡರ್ಸ್ ಅಸೋಸಿಯೇಷನ್' ಅಧ್ಯಕ್ಷ ಜೆ.ಆರ್.ಶ್ರೀನಿವಾಸ್.

 

ಹೊರ ರಾಜ್ಯದವರ ಶ್ರಮ

ರಾಜ್ಯದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೊರ ರಾಜ್ಯಗಳ ಕೆಲಸಗಾರರ ಪಾಲು ಹೆಚ್ಚು. ಮರಗೆಲಸ, ಮಾರ್ಬಲ್, ಪ್ಲಾಸ್ಟರಿಂಗ್, ಸ್ಯಾನಿಟರಿ ಮುಂತಾದ ಕೆಲಸಗಳಲ್ಲಿ ಬಿಹಾರ, ಆಂಧ್ರಪ್ರದೇಶ, ಉತ್ತರಪ್ರದೇಶದ ಕಾರ್ಮಿಕರ ಪಾಲು ಹೆಚ್ಚಿದೆ. ಸ್ಥಳೀಯ ಮಾನವ ಸಂಪನ್ಮೂಲದ ಕೊರತೆ ಎನ್ನುವುದಕ್ಕಿಂತ ನಮ್ಮವರಿಗಿಂತ ಹೊರಗಿನವರು ಶ್ರಮ ಜೀವಿಗಳು ಮತ್ತು ಹೇಳಿದ ಕೆಲಸವನ್ನು ಬೇಗ ಮುಗಿಸಿಕೊಡುತ್ತಾರೆ, ಕೆಲಸದ ಮಧ್ಯೆ ತಕರಾರು ಮಾಡುವುದಿಲ್ಲ ಎನ್ನುವ ಅಭಿಪ್ರಾಯ ಅನೇಕ ರಿಯಲ್ ಎಸ್ಟೇಟ್ ಉದ್ಯಮಿಗಳದ್ದು.ಬಿಹಾರಿಗಳು ಮತ್ತು ಉತ್ತರ ಪ್ರದೇಶದವರು ಗುಂಪು ಗುಂಪಾಗಿ ಕೆಲಸಕ್ಕೆ ಬರುತ್ತಾರೆ. ಬೆಳಿಗ್ಗೆ 6 ಗಂಟೆಗೇ ಕೆಲಸ ಆರಂಭಿಸುತ್ತಾರೆ. ದಿನದಲ್ಲಿ 12 ಗಂಟೆ ಕೆಲಸ ಮಾಡುತ್ತಾರೆ. ಪ್ರತಿ ಕೆಲಸಕ್ಕೂ ಒಬ್ಬೊಬ್ಬರು ಬಹಳ ಅನುಭವ ಪಡೆದವರಾಗಿರುತ್ತಾರೆ. ಒಬ್ಬರು ಗಾರೆ ಕೆಲಸ ಮಾಡಿದರೆ ಮತ್ತೊಬ್ಬ ಪ್ಲಾಸ್ಟರಿಂಗ್ ಕೆಲಸ ಮಾಡುತ್ತಾನೆ. ಇನ್ನೊಬ್ಬ ಮಾರ್ಬಲ್ ಕೆಲಸ ಮಾಡುತ್ತಾನೆ. ಒಬ್ಬನು ಜತೆಗಾರರೆಲ್ಲರಿಗೂ ಅಡುಗೆ ಮಾಡುತ್ತಾನೆ.ಇದರಿಂದ ಒಟ್ಟಿಗೆ ಎಲ್ಲಾ ಕೆಲಸ ಮುಗಿಯುತ್ತದೆ. ಸ್ಥಳೀಯರು ಹೆಚ್ಚು ಶ್ರಮಪಟ್ಟು ದುಡಿಯುವುದಿಲ್ಲ. ಸ್ಥಳೀಯ ಕಾರ್ಮಿಕರನ್ನು ನೆಚ್ಚಿಕೊಂಡರೆ ಒಂದು ಮನೆ ಕಟ್ಟಲು ಒಂದು ವರ್ಷವೇ ಆಗುತ್ತದೆ. ಬಿಹಾರಿಗಳು ಕೆಲವೇ ವಾರಗಳಲ್ಲಿ ಮುಗಿಸಿಕೊಡುತ್ತಾರೆ ಎನ್ನುವುದು `ಶಿಲ್ಪಾ ಡೆವಲಪರ್ಸ್' ವ್ಯವಸ್ಥಾಪಕ ರಾಜೇಂದ್ರ ಅವರ ಅನುಭವದ ನುಡಿ.`ಸದ್ಯ ರಾಜ್ಯದಲ್ಲಿ ಯಾವ ರಿಯಲ್ ಎಸ್ಟೇಟ್ ಕಂಪೆನಿಯೂ ನಷ್ಟದಲ್ಲಿಲ್ಲ. ಅಥವಾ ನಿರ್ಮಾಣವಾದ ಯಾವುದೇ ಕಟ್ಟಡ ಮಾರಾಟವಾಗದೆ ಹಾಗೇ ಖಾಲಿ ಉಳಿದಿಲ್ಲ. ಪತ್ರಿಕೆಗಳಲ್ಲಿ ಬರುತ್ತಿರುವ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಜಾಹೀರಾತುಗಳೇ ಇದಕ್ಕೆ ಉತ್ತಮ ಉದಾಹರಣೆ. ಪ್ರತಿ ವರ್ಷ ಎಷ್ಟು ಕಟ್ಟಡಗಳು ನಿರ್ಮಾಣವಾಗುತ್ತವೆ ಮತ್ತು ಎಷ್ಟು ಮಾರಾಟವಾಗುತ್ತವೆ ಎನ್ನುವುದನ್ನು ನಿಖರವಾಗಿ ಹೇಳುವುದು ಕಷ್ಟ.ಆದರೆ, ಕಳೆದ ಐದು ವರ್ಷಗಳಲ್ಲಿ ಮನೆಗಳ ನಿರ್ಮಾಣ ಮತ್ತು ಮಾರಾಟ ಎರಡು ಪಟ್ಟು ಹೆಚ್ಚಿದೆ. ಗುತ್ತಿಗೆದಾರರು ಉಪ ಗುತ್ತಿಗೆದಾರರ ಸಂಖ್ಯೆಯೂ ಹೆಚ್ಚಿದೆ. ಸುಮಾರು 10 ಲಕ್ಷಕ್ಕಿಂತಲೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ಲಭಿಸಿದೆ. ಎನ್ನುತ್ತಾರೆ ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ(ಎಫ್‌ಕೆಸಿಸಿಐ) ಮಾಜಿ ಅಧ್ಯಕ್ಷ ಜೆ.ಆರ್.ಬಂಗೇರಾ.ಹೊಸ ತಲೆಮಾರಿನವರ ವರಮಾನ ಮತ್ತು ಖರೀದಿ ಸಾಮರ್ಥ್ಯ ಹೆಚ್ಚಿರುವುದೇ ರಿಯಲ್ ಎಸ್ಟೇಟ್ ಬೆಳವಣಿಗೆಗೆ ಮುಖ್ಯ ಕಾರಣ. ಅದರಲ್ಲೂ ಬೆಂಗಳೂರಿನಲ್ಲಿ ಪ್ರತಿಯೊಬ್ಬರ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತಹ ಮನೆಗಳಿವೆ. ಇಲ್ಲಿ ರೂ. 20 ಲಕ್ಷದ ಮನೆಗಳಿಂದ ಹಿಡಿದು 5 ಕೋಟಿ ಮೌಲ್ಯದವರೆಗಿನ ಮನೆಗಳು ಖರೀದಿಗೆ ಲಭ್ಯ ಇವೆ. ಜಿಮ್, ಸಿಮ್ಮಿಂಗ್‌ಪೂಲ್, ಮಾಲ್ ಮತ್ತು ಮಲ್ಟಿಫ್ಲೆಕ್ಸ್ ಸೌಲಭ್ಯ ಹೊಂದಿವೆ. ಅಪಾರ್ಟ್‌ಮೆಂಟ್‌ಗಳಲ್ಲಿನ 4 ಬೆಡ್‌ರೂಂ ಮನೆಗಳ ಬೆಲೆ ರೂ. 30 ಲಕ್ಷದಿಂದ ಆರಂಭವಾಗಿ ವಿಶಾಲ ಆಯ್ಕೆಗಳಲ್ಲಿ ಲಭ್ಯ ಇವೆ ಎನ್ನುತ್ತಾರೆ `ವೈಭವ್ ಡೆವಲಪರ್ಸ್'ನ ಜೇಕಬ್ ಮಾಥ್ಯೂ.ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ವಲಯ ರಿಯಲ್ ಎಸ್ಟೇಟ್ ಪ್ರಗತಿಗೆ ಮಹತ್ತರ  ಕೊಡುಗೆ ನೀಡಿದೆ. ಬೆಂಗಳೂರಿನ ಈಶಾನ್ಯ ಭಾಗದಲ್ಲಿ ವಿಲಾಸಿ ಅಪಾರ್ಟ್‌ಮೆಂಟ್‌ಗಳು ಮತ್ತು ವಿಲ್ಲಾಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ದೇವನಹಳ್ಳಿಯಲ್ಲಿ ನೂತನ ವಿಮಾನ ನಿಲ್ದಾಣ ಆರಂಭವಾದ ನಂತರ ಕಳೆದ ಎರಡು ಮೂರು ವರ್ಷಗಳಲ್ಲಿ ದೊಡ್ಡಬಳ್ಳಾಪುರ ರಸ್ತೆಯಲ್ಲಿ ಮತ್ತು ದೇವನಹಳ್ಳಿವರೆಗೂ ಮನೆಗಳಿಗೆ ಬೇಡಿಕೆ ಹೆಚ್ಚಿದೆ.ಬೆಂಗಳೂರು ಹೊರತುಪಡಿಸಿದರೆ ಮೈಸೂರು, ಧಾರವಾಡ, ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಶಿವಮೊಗ್ಗದಂತಹ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿಯೂ ಗೃಹ ಬೇಡಿಕೆ ಹೆಚ್ಚುತ್ತಿದೆ. ಇದಕ್ಕೆ ಮುಖ್ಯ ಕಾರಣ ಉದ್ಯಮಗಳ ವಿಕೇಂದ್ರೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿ.ಸ್ಥಳೀಯವಾಗಿಯೇ ಉತ್ತಮ ಸೌಲಭ್ಯ ಲಭಿಸುತ್ತಿರುವುದರಿಂದ ನಗರಗಳಿಂದ ಅನೇಕರು ತಮ್ಮ ಸ್ವಂತ ಊರುಗಳಿಗೆ ಮರಳಿದ್ದು, ಅಲ್ಲಿಯೇ ಮನೆ ಕಟ್ಟಿಕೊಳ್ಳುತ್ತಿದ್ದಾರೆ. ನಿರ್ಮಾಣಗೊಂಡ ಮನೆಗಳನ್ನೂ ಖರೀದಿಸುತ್ತಿದ್ದಾರೆ. ನಗರಗಳಿಂದ ನಗರಗಳಿಗೆ ಇರುವ ಅಂತರವೂ ಇತ್ತೀಚಿನ ದಿನಗಳಲ್ಲಿ ಕಡಿಮೆ ಆಗುತ್ತಿದ್ದು, ಉಪ ನಗರಗಳ(ಸಬ್ ಅರ್ಬನ್) ವಲಯವೇ ಸೃಷ್ಟಿಯಾಗುತ್ತಿವೆ ಎನ್ನುತ್ತಾರೆ ಮಾನಂದಿ ಬಿಲ್ಡರ್ಸ್‌ನ ಸುರೇಶ್.ಸರ್ಕಾರದ ಪಾತ್ರ

ಕಳೆದ ವರ್ಷದ ರಾಜ್ಯದ ಮುಂಗಡಪತ್ರದಲ್ಲಿ ವಸತಿ ವಲಯದ ಅಭಿವೃದ್ಧಿಗಾಗಿ ಒಟ್ಟು ರೂ. 1439 ಕೋಟಿ ಮೊತ್ತದ ಅನುದಾನ ಮೀಸಲಿಡಲಾಗಿದೆ. ವಸತಿ ಯೋಜನೆಗಳಡಿಯಲ್ಲಿ ನೀಡುವ ಸಬ್ಸಿಡಿ ನೆರವನ್ನು ರೂ. 50 ಸಾವಿರದಿಂದ ರೂ. 75ಸಾವಿರಕ್ಕೆ ಹೆಚ್ಚಿಸಲಾಗಿದೆ. ಕರ್ನಾಟಕ ಗೃಹ ಮಂಡಳಿಯ ಜಂಟಿ ಉದ್ಯಮ ಪಾಲುದಾರಿಕೆಯಲ್ಲಿ  ಸೂಕ್ತ ಬದಲಾವಣೆಗಳನ್ನು ತರಲು ಸರ್ಕಾರ  ಪ್ರಯತ್ನಿಸುತ್ತಿದೆ. ಇದರಿಂದ ಅಗ್ಗದ ವಾಸಯೋಗ್ಯ ಮನೆಗಳನ್ನು ನಿರ್ಮಿಸಲು ಮತ್ತು ಈ ವಲಯದಲ್ಲಿ ಬಂಡವಾಳ ಹೂಡಲು ಖಾಸಗಿ ಹೂಡಿಕೆದಾರರಿಗೆ ಅವಕಾಶ ಲಭಿಸುತ್ತದೆ.ಕೌಶಲ ಅಭಿವೃದ್ಧಿ

ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ 4.5 ಲಕ್ಷ ನಿರುದ್ಯೋಗಿ ಯುವಕರಿಗೆ ಕೌಶಲ ಆಧಾರಿತ ತರಬೇತಿ ನೀಡುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಜರ್ಮನ್ ಸರ್ಕಾರಿ ಸಂಸ್ಥೆಯಾದ ಜಿಐಝಡ್-ಐಎಸ್‌ನ ತಾಂತ್ರಿಕ ನೆರವಿನೊಂದಿಗೆ ಮತ್ತು ಕೇಂದ್ರ ಸರ್ಕಾರದ ರೂ. 84 ಕೋಟಿ ಅನುದಾನದೊಂದಿಗೆ ಉನ್ನತ ತಂತ್ರಜ್ಞಾನ ಬಹುವಿಧ ಕೌಶಲ ಅಭಿವೃದ್ಧಿ ಕೇಂದ್ರಗಳು ಬೆಂಗಳೂರು ಮತ್ತು ಗುಲ್ಬರ್ಗಾದಲ್ಲಿ 2012-13ರ ಅಂತ್ಯದ ವೇಳೆಗೆ ಸ್ಥಾಪನೆಯಾಗಲಿವೆ.ಸಿಮೆಂಟ್-ಮರಳು ತುಟ್ಟಿ

ನಿರ್ಮಾಣ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಆಗಿರುವ ಪ್ರಗತಿಯನ್ನು ಗಮನಿಸಿದರೆ ಊಹೆಗೆ ನಿಲುಕದಷ್ಟು ಬದಲಾವಣೆಗಳಾಗಿವೆ. ಮುಖ್ಯವಾಗಿ ನಿರ್ಮಾಣ ವೆಚ್ಚ ಹೆಚ್ಚಿದೆ. ಸಿಮೆಂಟು, ಮರಳು, ಜಲ್ಲಿ, ಇಟ್ಟಿಗೆ, ಮರದ ಬೆಲೆ ಎರಡೂವರೆ ಪಟ್ಟು ಹೆಚ್ಚಿದೆ.

ಮೂರು ವರ್ಷಗಳ ಹಿಂದೆ ಒಂದು ಟನ್ ಉಕ್ಕಿನ ಬೆಲೆ ರೂ18 ಸಾವಿರದಿಂದ ರೂ19 ಸಾವಿರದಷ್ಟಿತ್ತು. ಈಗ ಅದು ರೂ. 50 ಸಾವಿರಕ್ಕೆ ಏರಿದೆ. ಸಿಮೆಂಟ್ ಚೀಲಕ್ಕೆ ರೂ. 150ರಷ್ಟಿದ್ದ ಬೆಲೆ ಈಗರೂ300ರಿಂದ ರೂ 350ಕ್ಕೆ ಹೆಚ್ಚಿದೆ. ಮರಳಿನ ಬೆಲೆಯೂ ಮುಗಿಲು ಮುಟ್ಟಿದೆ. ಬೆಂಗಳೂರಿನಲ್ಲಿ ಒಂದು ಲೋಡ್ ಮರಳಿಗೆರೂ40 ಸಾವಿರವಿದೆ. ಜಲ್ಲಿಕಲ್ಲಿಗಿಂತಲೂ ಮರಳೇ ಬಹಳ ತುಟ್ಟಿಯಾಗಿದೆ.ಒಂದೆಡೆ ಕಟ್ಟಡಗಳ ನಿರ್ಮಾಣ ಪ್ರಮಾಣ ಹೆಚ್ಚುತ್ತಿದ್ದರೆ ಇನ್ನೊಂದೆಡೆ ಸರ್ಕಾರ ಕೂಡ ಹೊಸದಾಗಿ ಹಲವು ನಿರ್ಬಂಧಗಳನ್ನು ವಿಧಿಸಿದೆ. ಕಲ್ಲು ಗಣಿಗಾರಿಕೆ ಮೇಲೆ ಸರ್ಕಾರ ನಿರ್ಬಂಧ ಹೇರಿದೆ. ಇದರಿಂದ ಜಲ್ಲಿ ಉತ್ಪಾದನೆ ತಗ್ಗಿದೆ. ಮರದ ಬದಲಿಗೆ ಸಿಮೆಂಟ್, ಕಿಟಕಿ, ಬಾಗಿಲುಗಳನ್ನು ಬಳಸಬಹುದು. ಆದರೆ, ಜಲ್ಲಿಗೆ ಪಯಾರ್ಯವಾಗಿ ಏನು ಬಳಸಬೇಕು.ಪ್ರತಿ ಚದರ ಅಡಿಗೆ ರೂ. 15 ಇದ್ದ ಚಪ್ಪಟೆ ಟೈಲ್ಸ್ ಬೆಲೆ (ಬಾತ್‌ರೂಂನಲ್ಲಿ ಬಳಸುವಂತಹುದು) ಈಗ ರೂ 500ಕ್ಕೆ ಏರಿದೆ. ಹೀಗೆ ನಿರ್ಮಾಣದ ಪ್ರತಿಯೊಂದು ಪರಿಕರಕಗಳ ಬೆಲೆಯೂ ಹೆಚ್ಚಿದೆ ಎನ್ನುತ್ತಾ ಕಟ್ಟಡ ಕಟ್ಟುವ ಕಷ್ವ-ಸುಖ ವಿವರಿಸುತ್ತಾರೆ ಸುರೇಶ್.

 

ಗೇಟೇಡ್ ಕಮ್ಯುನಿಟೀಸ್

ಕಳೆದ ಎರಡು ಮೂರು ವರ್ಷಗಳಲ್ಲಿ  ಮೆಟ್ರೊ ನಗರಗಳಲ್ಲಿ ಈ ಸಂಪ್ರದಾಯ ಜನಪ್ರಿಯಗೊಂಡಿದೆ. ಗೇಟೇಡ್ ಕಮ್ಯುನಿಟೀಸ್ ಅಂದರೆ ಸಂಪೂರ್ಣ ಕೌಪಾಂಡ್‌ನಿಂದ ಆವೃತ್ತವಾದ ಸ್ಥಳದಲ್ಲಿ ವಾಸವಿರುವ ಪುಟ್ಟ ಜನ ಸಮುದಾಯ. 10 ರಿಂದ 20 ಮನೆಗಳಿರುವ ಇಂತಹ ಅಪಾರ್ಟ್‌ವೆುಂಟ್‌ಗಳಿಗೆ ಒಂದೇ ಪ್ರವೇಶದ್ವಾರ ಇರುತ್ತದೆ. ಸದಸ್ಯರನ್ನು ಹೊರತುಪಡಿಸಿ ಪ್ರತಿಯೊಬ್ಬರ ಪ್ರವೇಶದ ಮೇಲೂ ನಿಗಾ ವಹಿಸಲಾಗುತ್ತದೆ.ಗಂಡ-ಹೆಂಡತಿ ಕೆಲಸಕ್ಕೆ ಹೋಗುವ  ವಿಭಕ್ತ ಕುಟುಂಬಗಳು ಇಂತಹ ಸಮುದಾಯವನ್ನು ಹೆಚ್ಚು ಇಷ್ಟಪಡುತ್ತವೆ. ಇಂತಹ ಸಮುದಾಯದ ಪ್ರಯೋಜನವೆಂದರೆ ಇಲ್ಲಿ ಕೆಲಸಗಾರರು ಸುಲಭವಾಗಿ ಸಿಗುತ್ತಾರೆ. ಉದಾಹರಣೆಗೆ, ಮನೆಗೆಲಸದಾಕೆ ಇಂಥ ಅಪಾರ್ಟ್‌ಮೆಂಟ್‌ಗಳಲ್ಲಿ ಹತ್ತಾರು ಮನೆಗಳ ಕೆಲಸಗಳನ್ನೂ ಮಾಡಿಕೊಟ್ಟು ಹೋಗುತ್ತಾಳೆ. ಆಕೆಗೂ ಒಂದೇ ಕಡೆ ಕೆಲಸ ಸಿಕ್ಕಂತಾಗುತ್ತದೆ ಮತ್ತು ಮನೆ ಮಾಲೀಕರಿಗೂ ಮನೆಗೆಲಸದಾಕೆ ವಿಚಾರದಲ್ಲಿ ವಿಶ್ವಾಸ-ಖಾತರಿ ಇರುತ್ತದೆ. ಬೆಂಗಳೂರಿನಂತಹ ಮೆಟ್ರೊ ನಗರಗಳಲ್ಲಿ ಮುಖ್ಯವಾಗಿ ಭದ್ರತೆ ದೃಷ್ಟಿಯಿಂದ ಗೇಟೇಡ್ ಕಮ್ಯುನಿಟೀಸ್ ಜನಪ್ರಿಯಗೊಳ್ಳುತ್ತಿವೆ ಎನ್ನುತ್ತಾರೆ ಮಾನಂದಿ ರಿಯಲ್ ಎಸ್ಟೇಟ್‌ನ ಮಾನಂದಿ ಸುರೇಶ್.

                                

`ಆರ್ಥಿಕ ಸಾಮರ್ಥ್ಯ ಕಾರಣ'

`ಬೆಂಗಳೂರಿನಲ್ಲಿ ವಿಲಾಸಿ ಅಪಾರ್ಟ್‌ಮೆಂಟ್‌ಗಳಿಗೆ ಬೇಡಿಕೆ ಹೆಚ್ಚಿದೆ. ಜನರ ಜೀವನಶೈಲಿ ಮತ್ತು ಆರ್ಥಿಕ ಸಾಮರ್ಥ್ಯ ಹೆಚ್ಚಿರುವುದು ಇದಕ್ಕೆ ಮುಖ್ಯ ಕಾರಣ'

-ಜಾಕ್‌ಬಾಸ್ಟಿನ್ ಪುರವಂಕರ ಪ್ರಾಜೆಕ್ಟ್ಸ್`ಹುಟ್ಟೂರಿನಲ್ಲೂ ಹೂಡಿಕೆ'


ಎರಡು ಮತ್ತು ಮೂರನೆಯ ಹಂತದ ನಗರಗಳಲ್ಲಿ ಉತ್ತಮ ಮೂಲಸೌಕರ್ಯ ವ್ಯವಸ್ಥೆ ಅಭಿವೃದ್ಧಿಯಾಗುತ್ತಿರುವು ದರಿಂದ ನಗರಗಳಲ್ಲಿ ಕೆಲಸ ಮಾಡು ತ್ತಿರುವ ಅನೇಕರು ಸ್ವಂತ ಊರುಗಳಿಗೆ ಮರಳುವ ಮನಸ್ಸು ಮಾಡುತ್ತಿದ್ದಾರೆ. ಇದರಿಂದ ಈ ಎರಡು-ಮೂರನೇ ಹಂತದ ನಗರಗಳಲ್ಲಿಯೂ ನಿರ್ಮಾಣ ಕ್ಷೇತ್ರದ ಚಟುವಟಿಕೆ ಚುರುಕುಗೊಂಡಿದೆ. ನಗರಗಳ ನಡುವಿನ ಅಂತರವೂ ಕಡಿಮೆ ಆಗುತ್ತಿದೆ.

-ಸುರೇಶ್, ಮಾನಂದಿ  ಬಿಲ್ಡರ್ಸ್`ಆಸ್ತಿ ಮೌಲ್ಯ ಶೇ 10 ಏರಿಕೆ'


ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಗೃಹ ಖರೀದಿ ಹೆಚ್ಚು. ಇದಕ್ಕೆ ಮುಖ್ಯ ಕಾರಣ ಆಸ್ತಿ ಮೌಲ್ಯದಲ್ಲಿನ ಸ್ಥಿರತೆ ಮತ್ತು ದರ ವೈವಿಧ್ಯ. ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಆಸ್ತಿ ಮೌಲ್ಯ ಶೇ 10ರಷ್ಟು ಮಾತ್ರ ಏರಿಕೆ ಕಂಡಿದೆ.

-ಸಂಜಯ್ ರಾಜ್, ಗೋಲ್ಡ್‌ನ್ ಗೇಟ್ ಪ್ರಾಪರ್ಟೀಸ್

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry