ಬುಧವಾರ, ಅಕ್ಟೋಬರ್ 16, 2019
21 °C

ಕಟ್ಟಡ ಕಾರ್ಮಿಕರ ಬೃಹತ್ ಪ್ರತಿಭಟನೆ

Published:
Updated:

ದಾವಣಗೆರೆ: ಕಟ್ಟಡ ಕಾರ್ಮಿಕರಿಗೆ ವಿವಿಧ ಸೇವಾ ಸೌಲಭ್ಯ, ಭದ್ರತೆ ಒದಗಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ಒದಗಿಸಲು ಸೆಸ್ ಪಡೆಯುವ ಮೂಲಕ ಸರ್ಕಾರ ರೂ. 1,065 ಕೋಟಿ ಸಂಗ್ರಹಿಸಿದೆ. ಆದರೆ, ಏನಾದರೂ ಸಮಸ್ಯೆ ಉಂಟಾದಾಗ ಈ ಕಾರ್ಮಿಕರಿಗೆ ಕಡಿಮೆ ಮೊತ್ತದ ಪರಿಹಾರ ನೀಡಲಾಗುತ್ತಿದೆ. ಕಾರ್ಮಿಕ ಸಂಘಟನೆ ವ್ಯಾಪ್ತಿಗೆ ಬಾರದ ಕೆಲವು ಸರ್ಕಾರೇತರ ಸಂಘಟನೆಗಳು ಕಾರ್ಮಿಕರಿಗೆ ಕಾರ್ಡ್ ಕೊಡಿಸುವ ನೆಪದಲ್ಲಿ ಹಣ ವಸೂಲಿ ಮಾಡುತ್ತಿವೆ. ಆದ್ದರಿಂದ ಯೂನಿಯನ್ ಕಾಯ್ದೆ ಪ್ರಕಾರವೇ ಹಣ ಪಡೆದು ಸೇವೆ ಒದಗಿಸಬೇಕು ಎಂದು ಒತ್ತಾಯಿಸಿದರು.ಪ್ರಮುಖ ಬೇಡಿಕೆಗಳು: ಕಟ್ಟಡ ಕಾರ್ಮಿಕರಿಗೆ ವಿಮಾ ಸೌಲಭ್ಯ ಒದಗಿಸಬೇಕು. ಅವರಿಗೆ ಮನೆ ನಿರ್ಮಿಸಿ ಕೊಡಬೇಕು. ಕಾರ್ಮಿಕ ಮೃತಪಟ್ಟಲ್ಲಿ ಅವಲಂಬಿತರಿಗೆ  ಕನಿಷ್ಠ ರೂ.3 ಲಕ್ಷ, ಸಹಜ ಸಾವು ಆದಲ್ಲಿ  ರೂ 2 ಲಕ್ಷ ಧನ ಸಹಾಯ ನೀಡಬೇಕು. ಪಿಂಚಣಿ ಕೊಡಬೇಕು. ಉಚಿತ ಶಿಕ್ಷಣ ಒದಗಿಸಬೇಕು. ರೂ. 30 ಸಾವಿರ ಹೆರಿಗೆ ಭತ್ಯೆ ನೀಡಬೇಕು. ಸರ್ಕಾರಿ ಶಾಲೆ ಮುಚ್ಚಬಾರದು ಎಂದು ಆಗ್ರಹಿಸಿದರು.ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಸಂಖ್ಯೆಯಲ್ಲಿ ಮೆರವಣಿಗೆ ಮೂಲಕ ಸಾಗಿ ಬಂದ ಕಾರ್ಮಿಕರು ಕಚೇರಿ ಮುಂದೆ ಸಭೆ ಸೇರಿ ನಂತರ ಮನವಿ ಸಲ್ಲಿಸಿದರು. ಕಾರ್ಮಿಕ ಮುಖಂಡರಾದ ಹೊಸಳ್ಳಿ ಮಲ್ಲೇಶ್, ಭಜನೆ ಹನುಮಂತಪ್ಪ, ಪಿ.ಕೆ. ಲಿಂಗರಾಜ್, ಎಚ್.ಜಿ. ಉಮೇಶ್, ಶಿವಾನಂದ ಶಾಮನೂರು ಇತರರು ನೇತೃತ್ವ ವಹಿಸಿದ್ದರು.

Post Comments (+)