ಸೋಮವಾರ, ನವೆಂಬರ್ 18, 2019
23 °C

ಕಟ್ಟಡ ಕುಸಿತ: ಸಾವಿನ ಸಂಖ್ಯೆ 49ಕ್ಕೆ

Published:
Updated:
ಕಟ್ಟಡ ಕುಸಿತ: ಸಾವಿನ ಸಂಖ್ಯೆ 49ಕ್ಕೆ

ಠಾಣೆ (ಪಿಟಿಐ): ಇಲ್ಲಿ ಗುರುವಾರ ಸಂಜೆ ಸಂಭವಿಸಿದ ಕಟ್ಟಡ ಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 49ಕ್ಕೆ ಏರಿದೆ. ಬದುಕುಳಿದವರಿಗಾಗಿ ಹಾಗೂ ಅವಶೇಷಗಳಡಿ ಸಿಲುಕಿರುವ ಮೃತದೇಹಗಳಿಗಾಗಿ ರಕ್ಷಣಾ ಸಿಬ್ಬಂದಿ ಅತ್ಯಾಧುನಿಕ ಸಾಧನ ಗಳೊಂದಿಗೆ ಹುಡುಕಾಟ ನಡೆಸಿದ್ದಾರೆ.ಮೃತಪಟ್ಟವರಲ್ಲಿ 9 ಮಹಿಳೆಯರು ಹಾಗೂ 11 ಮಕ್ಕಳು ಸೇರಿದ್ದಾರೆ. ಗಾಯಗೊಂಡ 60 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆಲವು ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಏಳು ಮಹಡಿಯ ಕಟ್ಟಡವನ್ನು ಜಿಲ್ಲೆಯ ದೈಘರ್‌ನ ಶಿಲ್‌ಫಟಾ ಎಂಬಲ್ಲಿ ಕೇವಲ ಎರಡು ತಿಂಗಳಲ್ಲಿ ನಿರ್ಮಿಸಲಾಗಿತ್ತು. ಇದಕ್ಕೆ ಯಾವುದೇ ಸೂಕ್ತ ಪರವಾನಗಿ ಪಡೆದಿರಲಿಲ್ಲ ಎಂದು ಮೂಲಗಳು ತಿಳಿಸಿವೆ.ರಕ್ಷಣೆಗೆ ಸೆನ್ಸರ್, ಕ್ಯಾಮೆರಾ ಬಳಕೆ: ರಕ್ಷಣಾ ಕಾರ್ಯಾಚರಣೆ ಮೂಲಕ 59 ಜನರನ್ನು ಜೀವಂತವಾಗಿ ಕಟ್ಟಡದಿಂದ ಹೊರ ತೆಗೆಯಲಾಗಿದೆ. ಆದರೆ ಇನ್ನೂ ಹಲವರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಕಮಾಂಡರ್ ಅಲೋಕ್ ಅವಸ್ಥಿ  ತಿಳಿಸಿದ್ದಾರೆ.ಕ್ರೇನ್‌ಗಳನ್ನು ಬಳಸಿ ಒಂದೊಂದೇ ಮಹಡಿಗಳನ್ನು ತೆರವುಗೊಳಿಸಲಾಗುತ್ತಿದೆ. ಬದುಕುಳಿದವರ ಶೋಧನೆಗಾಗಿ ಅತ್ಯಂತ ಸೂಕ್ಷ್ಮ ಸೆನ್ಸರ್‌ಗಳನ್ನು ಬಳಸಲಾಗುತ್ತಿದೆ. ಇದರಿಂದ 70 ಮೀಟರ್ ಆಳದಲ್ಲಿ ಬದುಕಿದ್ದವರನ್ನೂ ಪತ್ತೆ ಹಚ್ಚಬಹುದು ಎಂದು ಅವರು ಹೇಳಿದ್ದಾರೆ.`ಹಮಾರೆ ಸಬ್ ಚಲೇ ಗಯೆ':  ಘಟನೆಯಲ್ಲಿ 37 ವರ್ಷದ ಇಮ್ರಾನ್ ಸಿದ್ದಿಕಿ ಎನ್ನುವವರು ಬದುಕುಳಿದಿದ್ದಾರೆ. ಆದರೆ 8 ತಿಂಗಳ ಗರ್ಭಿಣಿ ಪತ್ನಿ ಸೇರಿದಂತೆ ಕುಟುಂಬದ 13 ಮಂದಿಯನ್ನು ಕಳೆದುಕೊಂಡಿದ್ದಾರೆ. ದೆಹಲಿ ಮೂಲದ ಸ್ದ್ದಿದಿಕಿ ಒಳ್ಳೆಯ ಕೆಲಸವನ್ನು ಹುಡುಕಿಕೊಂಡು ಕೆಲವು ದಿನಗಳ ಹಿಂದೆ ಮುಂಬೈಗೆ ಬಂದಿದ್ದ. ಆದರೆ ಆತನ ಕನಸು ಮತ್ತು ಬದುಕು  ಈ ದುರಂತದಿಂದ ನುಚ್ಚು ನೂರಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸ್ಥಳೀಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಪ್ರತಿಕ್ರಿಯಿಸಿ (+)