ಶುಕ್ರವಾರ, ಮೇ 27, 2022
28 °C

ಕಟ್ಟಡ ತೆರವು: ತಾರತಮ್ಯ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಹರ: ನಗರಸಭೆ ಜಾಗದಲ್ಲಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಲ್ಲಿ ನಗರಸಭೆ ಅನುಸರಿಸುತ್ತಿರುವ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ತಾಲ್ಲೂಕು ಕರವೇ, ಇಂದಿರಾನಗರ-ವಿದ್ಯಾನಗರ ನಾಗರಿಕ ಹಿತರಕ್ಷಣಾ ವೇದಿಕೆ, ಆಂಜನೇಯ ದೇವಸ್ಥಾನ ಸಮಿತಿ ಹಾಗೂ ಗ್ರಾಮದೇವತೆ ಸೇವಾ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಮಂಗಳವಾರ ನಗರಸಭೆ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.ತಾಲ್ಲೂಕು ಕರವೇ ಘಟಕದ ಅಧ್ಯಕ್ಷ ನಾಗರಾಜ ಮೆಹರ್ವಾಡೆ ಮಾತನಾಡಿ, ಇಂದಿರಾನಗರದ ನಗರಸಭೆ ಪಾರ್ಕಿನಲ್ಲಿ ಹಲವಾರು ಅನಧಿಕೃತ ಕಟ್ಟಡಗಳು ಇವೆ. ನಗರಸಭೆ ಪಾರ್ಕ್ ಜಾಗವನ್ನು ಇತರೆ ಕಾಮಗಾರಿಗಳಿಗೆ ಬಳಸಿಕೊಳ್ಳಬಾರದು ಎಂಬ ಕಾನೂನು ಇದೆ. ಆದರೂ, ಇದೇ ಪಾರ್ಕಿನಲ್ಲಿ ನಗರಸಭೆಯ ಯುಐಡಿಎಸ್‌ಎಸ್‌ಎಂಟಿ ಯೋಜನೆ ಅಡಿಯಲ್ಲಿ 10 ಮಳಿಗೆ, ಖಾಸಗಿ ಶಾಲೆ, ಉರ್ದುಶಾಲೆ ಹಾಗೂ ಮದ್ರಸಾ ನಿರ್ಮಾಣಗೊಂಡಿವೆ. ಈ ಮಳಿಗೆಗಳು ಸಾರ್ವಜನಿಕ ಉಪಯೋಗಕ್ಕೆ ಬಾರದ, ಶಿಥಿಲ ಸ್ಥಿತಿಯಲ್ಲಿವೆ ಎಂದು ದೂರಿದರು.ಎಂಜಿನಿಯರ್ ಗುರುನಾಥ್ ಮಾತನಾಡಿ, ಇಂದಿರಾನಗರ ನಗರಸಭೆ ಪಾರ್ಕ್‌ನಲ್ಲಿರುವ ಅನಧಿಕೃತ ಕಟ್ಟಡಗಳ ಕುರಿತು ವಿವರ ದಾಖಲೆಗಳನ್ನು ನೀಡುವಂತೆ ಮಾಹಿತಿ ಹಕ್ಕಿನ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದೆವು. ‘ದೂಡಾ’ದಿಂದ ಅಧಿಕೃತಗೊಂಡ ನೀಲನಕ್ಷೆಯಲ್ಲಿ ಪಾರ್ಕಿಗಾಗಿ ನಿವೇಶನ ಮೀಸಲಿಡಲಾಗಿದೆ. ನಾವು ಸಲ್ಲಿಸಿದ ಅರ್ಜಿಗೆ ನಗರಸಭೆ ಅಧಿಕಾರಿಗಳು ಸೂಕ್ತ ಮಾಹಿತಿ ಮತ್ತು ದಾಖಲಾತಿಗಳನ್ನು ನೀಡದೇ ಕಾಡುತ್ತಿದ್ದಾರೆ. ಕಾನೂನಿನ ಪ್ರಕಾರ ಪಾರ್ಕಿನಲ್ಲಿರುವ ಎಲ್ಲಾ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿದರೆ, ಸ್ಥಳೀಯ ನಿವಾಸಿಗಳೆಲ್ಲರೂ ಬೆಂಬಲ ನೀಡುತ್ತಾರೆ. ತೆರವು ಕಾರ್ಯದಲ್ಲಿ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸಿದರೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿ ಮನವಿ ಪತ್ರ ಸಲ್ಲಿಸಿದರು.ಪೌರಾಯುಕ್ತ ಎಂ.ಕೆ. ನಲವಡಿ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶದಂತೆ ತೆರವು ಕಾರ್ಯವನ್ನು ನಡೆಸುತ್ತಿದ್ದೇವೆ. ಇಂದಿರಾನಗರದ ಪಾರ್ಕಿನಲ್ಲಿ ಇತರೆ ಅನಧಿಕೃತ ಕಟ್ಟಡಗಳ ಬಗ್ಗೆ ಮಾಹಿತಿ ದೊರೆತಿದೆ. ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಅವರ ಆದೇಶದಂತೆ ಮುಂದಿನ ಕ್ರಮ ಜರುಗಿಸುವುದಾಗಿ ತಿಳಿಸಿದರು.ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷ ಬೆಳ್ಳೂಡಿ ರಾಮಚಂದ್ರಪ್ಪ, ಜಿ. ಶೇಖರ್‌ಗೌಡ್ರ, ಎನ್.ಇ. ಸುರೇಶ್, ಪರಸಪ್ಪ, ಯಡೆಹಳ್ಳಿ ಮಂಜುನಾಥ, ತಿಮ್ಮಣ್ಣ ಎಸ್. ಅಂಗಡಿ, ಕೆ. ಕೃಷ್ಣ, ಮಾಲತೇಶ್ ಸುಣಗಾರ್, ಹನುಮಂತಪ್ಪ ಹಳ್ಳಳ್ಳಿ, ಜಿ. ನಾಗರಾಜ, ಬೀರಪ್ಪ ಮಟ್ಟೇರ್, ಸಿ. ನಾಗರಾಜ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.